ಭಾರಿ ಸಂಚಲನ ಸೃಷ್ಟಿಸಿದ ಬೈಜುಸ್ ಇದೀಗ ಸಂಕಷ್ಟಕ್ಕೆ ಸಿಲುಕಿ ಹಲವು ದಿನಗಳಾಗಿದೆ. ಮತ್ತೆ ಮೇಲೆತ್ತೆರುವ ರವೀಂದ್ರನ್ ಪ್ರಯತ್ನಗಳೂ ಕೈಗೂಡಿಲ್ಲ. ಇದೀಗ ಸಂಸ್ಥೆಯ ನಾಲ್ಕು ಹೂಡಿಕೆದಾರರು ಸಿಇಒ ರವೀಂದ್ರನ್ ಹೊರಹಾಕಲು ಪಟ್ಟು ಹಿಡಿದಿದ್ದಾರೆ.
ಬೆಂಗಳೂರು(ಫೆ.23) ಆನ್‌ಲೈನ್ ಮೂಲಕ ಶಿಕ್ಷಣದ ಕ್ರಾಂತಿ ಮಾಡಿದ ಬೈಜುಸ್ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಬೈಜೂಸ್ ಕಂಪನಿ ಸಂಸ್ಥಾಪಕ ಹಾಗೂ ಸಿಇಒ ಬೈಜು ರವೀಂದ್ರನ್ ನಡೆಸಿದ ಪ್ರಯತ್ನಗಳೆಲ್ಲಾ ವಿಫಲಗೊಂಡಿದೆ. ಇದೀಗ ಬೈಜುಸ್ ಸಾಮಾನ್ಯ ಸಭೆಯಿಂದ ಗೈರಾಗಿರುವ ರವೀಂದ್ರನ್ ಮೇಲೆ ನಾಲ್ವರು ಹೂಡಿಕೆದಾರರು ಗರಂ ಆಗಿದ್ದಾರೆ. ಸಂಸ್ಥೆ ನಡೆಸಲು ರವೀಂದ್ರನ್ ಅನರ್ಹರಾಗಿದ್ದಾರೆ. ಹೀಗಾಗಿ ತಕ್ಷಣವೇ ರವೀಂದ್ರನ್ ಅವರನ್ನು ಸಂಸ್ಥೆಯಿಂದ ಹೊರಗೆ ಹಾಕಲು ಹೂಡಿಕೆದಾರರು ಪಟ್ಟು ಹಿಡಿದಿದ್ದಾರೆ. ಈ ಕುರಿತು ಬೆಂಗಳೂರಿನ ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್( NCLT)ನಲ್ಲಿ ಸ್ಥಾಪಕರನ್ನು ಹೊರಹಾಕಲು ಕೋರಿ ಮೊಕದ್ದಮೆ ಹೂಡಿದ್ದಾರೆ.
ಬೈಜುಸ್ ಸಂಸ್ಥೆಯ ಸಾಮಾನ್ಯ ಸಭೆ ಇಂದು ಆಯೋಜಿಸಲಾಗಿತ್ತು. ಬೈಜುಸ್ ಹೂಡಿಕೆದಾರರು, ಷೇರುದಾರರು, ಆಡಳಿತ ಮಂಡಳಿ ಪದಾಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆ ಆರಂಭದಲ್ಲೇ ವಿವಾದಗಳು, ಜಟಾಪಟಿ ಜೋರಾಗಿತ್ತು. ಕಾರಣ ಈ ವರ್ಚುವಲ್ ಸಭೆಗೆ 200ಕ್ಕೂ ಹೆಚ್ಚು ಬೈಜುಸ್ ಉದ್ಯೋಗಿಗಳು ಪಾಲ್ಗೊಳ್ಳುವುದಾಗಿ ಪಟ್ಟು ಹಿಡಿದಿದ್ದರು. ಹೀಗಾಗಿ ಸಭೆ ವಿಳಂಬವಾಗಿ ಆರಂಭಗೊಂಡಿತ್ತು.
ಹಣಕಾಸಿನ ಕೊರತೆ, ಲಿಯೋನೆಲ್ ಮೆಸ್ಸಿ ಜೊತೆಗಿನ ಒಪ್ಪಂದ ಕಡಿದುಕೊಂಡ ಬೈಜೂಸ್!
ಈ ಮಹತ್ವದ ಸಭೆಯಿಂದ ಬೈಜು ರವೀಂದ್ರನ್ ಹಾಗೂ ರವೀಂದ್ರ ಕುಟುಂಬಸ್ಥರು ದೂರ ಉಳಿದಿದ್ದರು. ಇದು ಹೂಡಿಕೆದಾರರನ್ನು ಮತ್ತಷ್ಟು ಕೆರಳಿಸಿತ್ತು. ಆದರೆ ಈ ಸಭೆಗೂ ಮುನ್ನ ಹೂಡಿಕೆದಾರರು ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್‌ನಲ್ಲಿ ಮೊಕದ್ದಮೆ ದಾಖಲಿಸಿದ್ದರು. ಬೈಜು ರವೀಂದ್ರನ್ ಕಂಪನಿ ನಡೆಸಲು ಅನರ್ಹರಾಗಿದ್ದಾರೆ. ದುರಾಡಳಿತ, ಬೇಕಾಬಿಟ್ಟಿ ಖರ್ಚು ಮಾಡಿ ಕಂಪನಿಯನ್ನು ಹಳ್ಳ ಹಿಡಿಸಿದ್ದಾರೆ. ಹೀಗಾಗಿ ಹೊಸ ಮಂಡಳಿ ನೇಮಕಕ್ಕೆ ಅವಕಾಶ ಮಾಡಿಕೊಡಬೇಕು ಎಂದು NCLT ಮೊಕದ್ದಮೆ ದಾಖಲಿಸಿದ್ದರು.
ಬೈಜುಸ್ ಮೂಲ ಸಂಸ್ಥೆ ಥಿಂಕ್ ಅಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಹೂಡಿಕೆ ಮಾಡಿರುವ ಹಲವರು ಬೈಜು ರವೀಂದ್ರನ್ ಹಾಗೂ ಅವರ ಕುಟುಂಬವನ್ನು ಸಂಸ್ಥೆಯಿಂದ ಹೊರಹಾಕುವಂತೆ ಹಲವು ಬಾರಿ ಒತ್ತಾಯಿಸಿದ್ದಾರೆ. ಆದರೆ ಈ ಪ್ರಯತ್ನಗಳಿಗೆ ಕಾನೂನು ಹಿನ್ನಡೆ ಎದುರಾಗಿತ್ತು.
ಉದ್ಯೋಗಿಗಳಿಗೆ ಸ್ಯಾಲರಿ ನೀಡಲು ಸ್ವಂತ ಮನೆಯನ್ನೇ ಅಡವಿಟ್ಟ ಬೈಜುಸ್ ಸಂಸ್ಥಾಪಕ!
ಇಂದಿನ ಇಜಿಎಂ ಸಾಮಾನ್ಯ ಸಭೆಯಲ್ಲಿ ಹೂಡಿಕೆದಾರರು ಸೇರಿದಂತೆ ಸುಮಾರು 40 ಮಂದಿ ರವೀಂದ್ರನ್ ಅವರನ್ನು ಕಂಪನಿಯಿಂದ ಹೊರಹಾಕಲು ಮತ ಹಾಕಿದ್ದಾರೆ. ಆದರೆ ಇಜಿಎಂ ಸಭೆಯ ಯಾವುದೇ ನಿರ್ಣಯಗಳನ್ನು ಅಂಗೀಕರಿಸಲು, ಕಾರ್ಯಗತ ಮಾಡಲು ಸಾಧ್ಯವಿಲ್ಲ. ಕಾರಣ ಕರ್ನಾಟಕ ಹೈಕೋರ್ಟ್‌ನಿಂದ ಬೈಜು ರವೀಂದ್ರನ್ ತಡೆಯಾಜ್ಞೆ ಪಡೆದಿರುವ ಕಾರಣ ನಿರ್ಣಯಗಳು ಕಾರ್ಯಗತ ಸಾಧ್ಯವಿಲ್ಲ. ಮಾರ್ಚ್ 13ರ ವರೆಗೆ ಬೈಜು ರವೀಂದ್ರನ್‌ಗೆ ತಡೆಯಾಜ್ಞೆ ನೆರವು ಸಿಗಲಿದೆ.
ಹೈಕೋರ್ಟ್ ತಡೆಯಾಜ್ಞೆಯನ್ನು ಹೂಡಿಕೆದಾರರು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ಮಾರ್ಚ್ 13ರಂದು ವಿಚಾರಣೆಗೆ ಬರಲಿದೆ. ಕೋರ್ಟ್ ಆದೇಶ ಹೂಡಿಕೆದಾರರ ಪರವಾಗಿ ಬಂದರೆ ರವೀಂದ್ರನ್ ಕಂಪನಿಯಿಂದ ಕಿಕೌಟ್ ಆಗಲಿದ್ದಾರೆ. ಆದರೆ ರವೀಂದ್ರನ್ ಪರವಾಗಿ ಬಂದರೆ ಇಜಿಎಂ ನಿರ್ಣಯಗಳು ಹಾಗೇ ಉಳಿಯಲಿದೆ.
ಇಜಿಎಂ ಸಭೆಗೆ ತಡೆ ನೀಡಬೇಕು ಎಂದು ರವೀಂದ್ರ ಕುಟುಂಬ ಹೈಕೋರ್ಟ್ ಮೆಟ್ಟಲೇರಿತ್ತು. ಆದರೆ ಕರ್ನಾಟಕ ಹೈಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿತ್ತು. ಕಾರಣ ಬೈಜುಸ್ ರವೀಂದ್ರನ್ ಕುಟುಂಬಸ್ಥರು ಕಂಪನಿಯಲ್ಲಿ ಶೇಕಡಾ 26.3 ಪಾಲು ಹೊಂದಿದ್ದಾರೆ. ಇನ್ನು ಷೇರುದಾರರು ಶೇಕಡಾ 32ರಷ್ಟು ಪಾಲು ಹೊಂದಿದ್ದಾರೆ.