Byjus suspended deal with Messi ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿ ದಿವಾಳಿಯಾಗುವ ಅಪಾಯ ಎದುರಿಸುತ್ತಿರುವ ಬೈಜೂಸ್, ಇದೇ ಕಾರಣಕ್ಕಾಗಿ ಫುಟ್‌ಬಾಲ್ ದಿಗ್ಗಜ ಲಿಯೋನೆಮ್ ಮೆಸ್ಸಿ ಜೊತೆಗಿನ ಜಾಗತಿಕ ರಾಯಭಾರಿ ಒಪ್ಪಂದವನ್ನು ರದ್ದು ಮಾಡಿದೆ.
ನವದೆಹಲಿ (ಜ.5): ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಆನ್‌ಲೈನ್ ಎಜುಕೇಷನ್ ತಾಣ ಬೈಜೂಸ್ ಕಂಪನಿಯ ಸಮಸ್ಯೆಗಳು ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ನಗದು ಕೊರತೆಯಿಂದಾಗಿ, ಬೈಜೂಸ್ ಈಗ ತನ್ನ ಜಾಗತಿಕ ಬ್ರಾಂಡ್ ರಾಯಭಾರಿಯೊಂದಿಗೆ ಮೂರು ವರ್ಷಗಳ ಒಪ್ಪಂದವನ್ನು ಹಠಾತ್ ಆಗಿ ರದ್ದು ಮಾಡಿದೆ. ಕಂಪನಿಯು 2022 ರಲ್ಲಿ 'ಎಲ್ಲರಿಗೂ ಶಿಕ್ಷಣ'ದ ಬ್ರ್ಯಾಂಡ್ ಅಂಬಾಸಿಡರ್ ಆಗಿ ವಿಶ್ವಕಪ್ ವಿಜೇತ ತಂಡದ ನಾಯಕ ಅರ್ಜೆಂಟೀನಾ ತಂಡದ ಸೂಪರ್‌ಸ್ಟಾರ್ ಪ್ಲೇಯರ್ ಮೆಸ್ಸಿ ಅವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಬೈಜೂಸ್, ಕತಾರ್‌ನಲ್ಲಿ ನಡೆದ FIFA ವಿಶ್ವಕಪ್ 2022 ರ ಅಧಿಕೃತ ಪ್ರಾಯೋಜಕ ಸಂಸ್ಥೆಯೂ ಆಗಿತ್ತು. ಮಾಧ್ಯಮ ವರದಿಗಳ ಪ್ರಕಾರ, ಬೈಜೂಸ್ ಕಂಪನಿಯು ಗಂಭೀರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಒಪ್ಪಂದವನ್ನು ರದ್ದು ಮಾಡುವ ನಿರ್ಧಾರ ಜೊತೆಗೆ ಕೆಲವು ಕಾನೂನು ಬಿಕ್ಕಟ್ಟು ಎದುರಿಸಲು ಸಜ್ಜಾಗಿದೆ. ಒಪ್ಪಂದವನ್ನು ಅಕಾಲಿಕವಾಗಿ ಕೊನೆಗೊಳಿಸಬಹುದೇ ಅಥವಾ ಬೇರೆ ಯಾವುದೇ ಕ್ರಮವನ್ನು ಅಳವಡಿಸಿಕೊಳ್ಳಬಹುದೇ ಎಂದು ಕಂಪನಿಯು ಈಗ ಕಾನೂನು ತಜ್ಞರ ಅಭಿಪ್ರಾಯವನ್ನು ತೆಗೆದುಕೊಳ್ಳುತ್ತಿದೆ.
ನವೆಂಬರ್ 2022ರಲ್ಲಿ ಮಾಡಿಕೊಂಡ ಒಪ್ಪಂದ: ಬೈಜುಸ್ ಮತ್ತು ಮೆಸ್ಸಿ ನಡುವಿನ ಒಪ್ಪಂದವನ್ನು ನವೆಂಬರ್ 2022 ರಲ್ಲಿ ಮಾಡಿಕೊಳ್ಳಲಾಗಿತ್ತು. ಒಪ್ಪಂದದ ಆರಂಭಿಕ ವರ್ಷಕ್ಕೆ ಬೈಜೂಸ್ ಈಗಾಗಲೇ ಮೆಸ್ಸಿ ಅವರಿಗೆ ಪಾವತಿ ಮಾಡಿದೆ. ಬೈಜೂಸ್ ತನ್ನ ಮೊದಲ ಜಾಗತಿಕ ಬ್ರಾಂಡ್ ಅಂಬಾಸಿಡರ್ ಆಗಿ ಮೆಸ್ಸಿಯನ್ನು 'ಎಲ್ಲರಿಗೂ ಶಿಕ್ಷಣ' ಎನ್ನುವ ಥೀಮ್‌ನ ಅಡಿಯಲ್ಲಿ ರಾಯಭಾರಿ ಮಾಡಿಕೊಂಡಿತ್ತು. ಫ್ರೆಂಚ್ ಲೀಗ್ 1 ರಲ್ಲಿ ಪ್ಯಾರಿಸ್ ಸೇಂಟ್-ಜರ್ಮೈನ್ ಆಟಗಾರ ಮತ್ತು ಅರ್ಜೆಂಟೀನಾ ತಂಡದ ನಾಯಕ ಮೆಸ್ಸಿ, ಬೈಜುಸ್ ಜೊತೆಗಿನ ಒಪ್ಪಂದದ ಸಮಯದಲ್ಲಿ ಸಮಾನ ಶಿಕ್ಷಣದ ಕುರಿತಾಗಿ ಮಾತನಾಡಿದ್ದರು. ಒಪ್ಪಂದಕ್ಕೆ ಸಹಿ ಹಾಕುವ ಸಮಯದಲ್ಲಿ BYJU'S ಕಂಪನಿಯು ವಿಶ್ವದ ಅತ್ಯಂತ ಜನಪ್ರಿಯ ಆಟಗಾರರ ಜೊತೆಗಿನ ಒಡನಾಟವು ಬೈಜೂಸ್ ಬೆಳೆಯುತ್ತಿರುವ ಜಾಗತಿಕ ಪ್ರಭಾವದ ಪ್ರತಿಬಿಂಬವಾಗಿದೆ ಎಂದು ಹೇಳಿದ್ದರು.
ಉದ್ಯೋಗಿಗಳಿಗೆ ಸ್ಯಾಲರಿ ನೀಡಲು ಸ್ವಂತ ಮನೆಯನ್ನೇ ಅಡವಿಟ್ಟ ಬೈಜುಸ್ ಸಂಸ್ಥಾಪಕ!
ಬೈಜೂಸ್‌ಗೆ ಸೇರಿದ ನಂತರ ಮಾತನಾಡಿದ್ದ ಮೆಸ್ಸಿ, ನಾನು ಬೈಜೂಸ್ ಜೊತೆ ಪಾಲುದಾರನಾಗಲು ಆಯ್ಕೆ ಮಾಡಿಕೊಂಡಿದ್ದೇನೆ. ಏಕೆಂದರೆ ಕಲಿಕೆಯ ಕಡೆಗೆ ಎಲ್ಲರನ್ನೂ ಆಕರ್ಷಿಸುವ ಅವರ ಉದ್ದೇಶವು ನನ್ನ ಮೌಲ್ಯಗಳೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ ಎಂದಿದ್ದರು. ಉತ್ತಮ ಗುಣಮಟ್ಟದ ಶಿಕ್ಷಣವು ಜೀವನವನ್ನು ಬದಲಾಯಿಸುತ್ತದೆ ಮತ್ತು BYJU'S ಪ್ರಪಂಚದಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳ ವೃತ್ತಿ ಮಾರ್ಗಗಳನ್ನು ಮಾರ್ಪಡಿಸಿದೆ. ಯುವ ಉನ್ನತ ಸ್ಥಾನವನ್ನು ತಲುಪಲು ನನ್ನ ಪಾಲುದಾರಿಕೆ ಸ್ಫೂರ್ತಿ ನೀಡಬೇಕೆಂದು ಭಾವಿಸುತ್ತೇನೆ ಎಂದಿದ್ದರು.
9,000 ಕೋಟಿ ರೂ ದಂಡ ಪಾವತಿಗೆ ಇಡಿ ನೋಟಿಸ್ ವರದಿ, ಸ್ಪಷ್ಟನೆ ನೀಡಿದ ಕಂಪನಿ!