
ನವದೆಹಲಿ (ನ.5): ಒಂದೇ ಬಾರಿಗೆ ಇತ್ಯರ್ಥ (ಒನ್-ಟೈಮ್ ಸೆಟಲ್ಮೆಂಟ್ ) ಯೋಜನೆಯಡಿ ಸಾಲ ಮರುಪಾವತಿ ಹಕ್ಕಿನ ಆಧಾರದಲ್ಲಿ ಸಾಲಗಾರನು ಅವಧಿ ವಿಸ್ತರಣೆಗೆ ಕ್ಲೈಮ್ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ಪೀಠ ಮಾರ್ಚ್ ನಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀಡಿದ ತೀರ್ಪನ್ನು ರದ್ದುಗೊಳಿಸಿದೆ. ಒಟಿಎಸ್ ಮಂಜೂರಾತಿ ಪತ್ರದ ಅನ್ವಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ (ಎಸ್ ಬಿಐ) ಬಡ್ಡಿಯನ್ನೊಳಗೊಂಡಂತೆ ಬ್ಯಾಲೆನ್ಸ್ ಮೊತ್ತವನ್ನು ಪಾವತಿಸಲು ಸಾಲಗಾರನಿಗೆ ಹೆಚ್ಚುವರಿ ಆರು ವಾರಗಳ ಕಾಲಾವಕಾಶವನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀಡಿತ್ತು. ಒಟಿಎಸ್ ಯೋಜನೆಯಡಿ ಪಾವತಿಯನ್ನು ಮರು ನಿಗದಿಪಡಿಸುವುದು ಮತ್ತು ಅವಧಿ ವಿಸ್ತರಿಸುವುದು ಸಂವಿಧಾನದ ಅನುಚ್ಛೇದ 226 ರಡಿಯಲ್ಲಿ ಅಧಿಕಾರ ಚಲಾಯಿಸುವಾಗ ಅನುಮತಿಸಿರುವ 'ಒಪ್ಪಂದವನ್ನು ಮತ್ತೆ ಬರೆಯುವುದಕ್ಕೆ' ಸಮನಾಗಿರುತ್ತದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಭಾರತೀಯ ಒಪ್ಪಂದ ಕಾಯ್ದೆ ಸೆಕ್ಷನ್ 62ರಡಿ ಪರಸ್ಪರ ಒಪ್ಪಿಗೆಯಿಂದ ಮಾತ್ರ ಪಾವತಿಯನ್ನು ಮರು ನಿಗದಿಪಡಿಸಲು ಅವಕಾಶವಿದೆ ಎಂದು ಅದು ಹೇಳಿದೆ.
'ಮಂಜೂರಾದ ಒಟಿಎಸ್ (OTS) ಯೋಜನೆ ಅನ್ವಯ ಸಾಲಗಾರ (Borrower) ತಾನು ಪಾವತಿ (Payment) ಮಾಡದಿದ್ದರೂ ಹಕ್ಕಿನ ವಿಷಯವಾಗಿ ಅದನ್ನು ಮತ್ತಷ್ಟು ವಿಸ್ತರಿಸಬೇಕು ಎಂದು ಹಕ್ಕಿನ ಆಧಾರದಲ್ಲಿ ಕ್ಲೇಮ್ ಮಾಡಲು ಸಾಧ್ಯವಿಲ್ಲ. ಯಾವುದೇ ನಕಾರಾತ್ಮಕ ತಾರತಮ್ಯವನ್ನು ಪ್ರತಿಪಾದಿಸಲು ಸಾಧ್ಯವಿಲ್ಲ' ಎಂದು ಪೀಠ ಹೇಳಿದೆ. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಎಸ್ ಬಿಐ (SBI) ಸುಪ್ರೀಂ ಕೋರ್ಟ್ ಗೆ (Supreme court) ಮೇಲ್ಮನವಿ ಸಲ್ಲಿಸಿತ್ತು.
ರಿಲಯನ್ಸ್ ಸ್ವತಂತ್ರ ನಿರ್ದೇಶಕರಾಗಿ ಕನ್ನಡಿಗ ಕೆ.ವಿ.ಕಾಮತ್ ನೇಮಕ
ಮಂಜೂರಾದ ಒಟಿಎಸ್ (OTS) ಅಡಿಯಲ್ಲಿ ಸಾಲಗಾರನು ಡಿಸೆಂಬರ್ 21, 2017 ರೊಳಗೆ ಮೊತ್ತದ ಶೇ. 25 ರಷ್ಟು ಹಣವನ್ನು ಠೇವಣಿ (Deposit) ಮಾಡಬೇಕು ಮತ್ತು ಬಡ್ಡಿಯೊಂದಿಗೆ (Interest) ಬಾಕಿ ಮೊತ್ತವನ್ನು ಪತ್ರದ ದಿನಾಂಕದಿಂದ ಆರು ತಿಂಗಳೊಳಗೆ ಠೇವಣಿ ಮಾಡಬೇಕೆಂದು ಬ್ಯಾಂಕ್ (Bank) ಹೇಳಿದೆ. 2.52 ಕೋಟಿ ರೂ. ಬಾಕಿ ಮೊತ್ತವನ್ನು ಮರುಪಾವತಿಸಲು ಸಾಲಗಾರ ಎಂಟರಿಂದ ಒಂಭತ್ತು ತಿಂಗಳ ಕಾಲಾವಕಾಶವನ್ನು ವಿಸ್ತರಿಸುವಂತೆ ಮನವಿ ಮಾಡಿದ್ದು, ಬ್ಯಾಂಕ್ (Bank) ನಿರಾಕರಿಸಿ ಮೇ 21, 2018ರೊಳಗೆ ಪಾವತಿ ಮಾಡುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಸಾಲಗಾರ ಹೈಕೋರ್ಟ್ (High court) ಮೆಟ್ಟಿಲೇರಿದ್ದ. ಬಾಕಿ ಮೊತ್ತವನ್ನು ಪಾವತಿಸಲು ಎಂಟರಿಂದ ಒಂಭತ್ತು ತಿಂಗಳು ಕಾಲಾವಕಾಶ ನೀಡುವಂತೆ ಕೋರಿದ್ದ.
ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಬ್ಯಾಂಕ್ ಒಟಿಎಸ್ (OTS) ಆಫರ್ ಅನ್ನು ಸಾಲಗಾರನಿಗೆ ನೀಡಿರೋದು ಹಾಗೂ ಆತ ಒಪ್ಪಿಕೊಂಡಿರೋದನ್ನು ಸುಪ್ರೀಂ ಕೋರ್ಟ್ (Supreme Court) ಗಮನಿಸಿದೆ. ಆದರೆ, ಸಾಲಗಾರ (Borrower) ಒಟಿಎಸ್ (OTS) ಯೋಜನೆಯಡಿ ಬಾಕಿಯಿರುವ ಮೊತ್ತವನ್ನು ಪಾವತಿ ಮಾಡಿಲ್ಲ. ಮಂಜೂರಾತಿ ಪತ್ರದಲ್ಲಿ ಮರುಪಾವತಿಗೆ (Repayment) ತಿಳಿಸಿರುವ ದಿನಾಂಕದಂದು ಅಥವಾ ಅದಕ್ಕೂ ಮೊದಲು ಕೂಡ ಬಾಕಿ ಪಾವತಿ ಮಾಡಿಲ್ಲ ಎಂದು ಕೋರ್ಟ್ ಹೇಳಿದೆ. ಹೀಗಾಗಿ ಅವಧಿ ವಿಸ್ತರಣೆ ಮಾಡುವಂತೆ ಸಾಲಗಾರ ಕೋರುವಂತಿಲ್ಲ ಎಂದು ಸುಪ್ರೀಂ ಹೇಳಿದೆ.
ಎಸ್ ಬಿಐ ಎಟಿಎಂ ಫ್ರಾಂಚೈಸಿ: ಒಮ್ಮೆ 5ಲಕ್ಷ ರೂ. ಹೂಡಿಕೆ ಮಾಡಿದ್ರೆ ಸಾಕು, ತಿಂಗಳಿಗೆ 70 ಸಾವಿರ ರೂ. ಆದಾಯ!
ಮೇಲ್ಮನವಿ ಅನುಮತಿಸುವಾಗ ಪೀಠವು ಆರ್ಟಿಕಲ್ 226 ರ ಅಡಿಯಲ್ಲಿ ಅಧಿಕಾರ ಚಲಾಯಿಸಿ ಒಟಿಎಸ್ (OTS) ಯೋಜನೆಯಡಿಯಲ್ಲಿ ಬಾಕಿ ಪಾವತಿ (Payment) ಮಾಡಲು ಸಾಲಗಾರನಿಗೆ (Borrower) ಹೆಚ್ಚಿನ ಸಮಯವನ್ನು ನೀಡುವಂತೆ ಹೈಕೋರ್ಟ್ (High court) ನೀಡಿದ ತೀರ್ಪು ಸಮರ್ಥನೀಯವಲ್ಲ ಮತ್ತು ಅದನ್ನು ರದ್ದುಗೊಳಿಸಿದೆ ಎಂದು ಸುಪ್ರೀಂ ಕೋರ್ಟ್ (Supreme Court) ತಿಳಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.