ಬಯೋಕಾನ್‌ ಸಾಮ್ರಾಜ್ಯಕ್ಕೆ ಹೊಸ ಬಾಸ್‌: ಸೊಸೆಯ ಕೈಗೆ ಕಂಪನಿ ಚುಕ್ಕಾಣಿ ನೀಡಿದ ಕಿರಣ್ ಮಜುಂದಾರ್ ಶಾ!

Published : May 05, 2026, 03:33 PM IST
Claire Mazumdar

ಸಾರಾಂಶ

ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್-ಶಾ ಅವರು ತಮ್ಮ ಉತ್ತರಾಧಿಕಾರಿಯಾಗಿ ಸೋದರನ ಮಗಳು ಕ್ಲೇರ್ ಮಜುಂದಾರ್ ಅವರನ್ನು ಆಯ್ಕೆ ಮಾಡಿದ್ದಾರೆ. ಯಶಸ್ವಿ ಉದ್ಯಮಿಯಾಗಿರುವ ಕ್ಲೇರ್, ಎಐ ಮತ್ತು ಅಡ್ವಾನ್ಸ್ಡ್ ಬಯೋಟೆಕ್ ತಂತ್ರಜ್ಞಾನದ ಮೂಲಕ ಬಯೋಕಾನ್‌ನ ಮುಂದಿನ ಹಂತವನ್ನು ಮುನ್ನಡೆಸಲಿದ್ದಾರೆ.

ಬೆಂಗಳೂರು (ಮೇ.5): ದೇಶದ ಅತಿದೊಡ್ಡ ಬಯೋಫಾರ್ಮಾಸ್ಯುಟಿಕಲ್ ಸಂಸ್ಥೆ 'ಬಯೋಕಾನ್' (Biocon) ಈಗ ಹೊಸ ಪೀಳಿಗೆಯ ನಾಯಕತ್ವಕ್ಕೆ ಸಾಕ್ಷಿಯಾಗುತ್ತಿದೆ. ಸುಮಾರು ನಾಲ್ಕು ದಶಕಗಳ ಕಾಲ ಸಂಸ್ಥೆಯನ್ನು ಜಾಗತಿಕ ಮಟ್ಟದಲ್ಲಿ ಕಟ್ಟಿ ಬೆಳೆಸಿದ ಕಿರಣ್ ಮಜುಂದಾರ್-ಶಾ ಅವರು ತಮ್ಮ ಉತ್ತರಾಧಿಕಾರ ಯೋಜನೆಯನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ತಮ್ಮ ಸೋದರ ಎರಿಕ್‌ ಮಜುಂದಾರ್‌ ಮಗಳಾದ 37 ವರ್ಷದ ಕ್ಲೇರ್ ಮಜುಂದಾರ್ ಅವರನ್ನು ಬಯೋಕಾನ್‌ನ ಮುಂದಿನ ಹಂತದ ಬೆಳವಣಿಗೆಯನ್ನು ಮುನ್ನಡೆಸುವ ನಾಯಕಿಯಾಗಿ ಕಿರಣ್ ಆಯ್ಕೆ ಮಾಡಿದ್ದಾರೆ.

ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಅವರಿಗೆ ಮಕ್ಕಳಿಲ್ಲದ ಕಾರಣ, ತಾವು ಪ್ರೀತಿಯಿಂದ ಬೆಳೆಸಿದ ಸಂಸ್ಥೆಯನ್ನು ಸುರಕ್ಷಿತ ಮತ್ತು ಸಮರ್ಥ ಕೈಗಳಿಗೆ ಒಪ್ಪಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇತ್ತೀಚೆಗೆ 'ಫಾರ್ಚೂನ್ ಇಂಡಿಯಾ'ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಅವರು, "ಕ್ಲೇರ್ ಮಜುಂದಾರ್ ಈಗಾಗಲೇ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಕಂಪನಿಯ ಮುಂದಿನ ಹಂತದ ಸವಾಲುಗಳನ್ನು ಎದುರಿಸಲು ಅವರೇ ಅತ್ಯಂತ ಸೂಕ್ತ ವ್ಯಕ್ತಿ," ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಯಾರು ಈ ಹೊಸ ವಾರಸುದಾರೆ ಕ್ಲೇರ್?

ಕ್ಲೇರ್ ಮಜುಂದಾರ್ ಅವರು ಬಯೋಫಾರ್ಮಾ ಕ್ಷೇತ್ರದಲ್ಲಿ ಕೇವಲ ಉತ್ತರಾಧಿಕಾರಿಯಷ್ಟೇ ಅಲ್ಲ, ಒಬ್ಬ ಯಶಸ್ವಿ ಉದ್ಯಮಿಯೂ ಹೌದು. ಬಯೋಕಾನ್‌ನಿಂದ ಪ್ರವರ್ತಿತಗೊಂಡ 'ಬಿಕಾರಾ ಥೆರಪಿಟಿಕ್ಸ್' (Bicara Therapeutics) ಸಂಸ್ಥೆಯ ಸಂಸ್ಥಾಪಕಿ ಮತ್ತು ಸಿಇಒ ಆಗಿರುವ ಕ್ಲೇರ್, ತಮ್ಮ ಕಂಪನಿಯನ್ನು 2024ರಲ್ಲಿ ನಾಸ್ಡಾಕ್‌ನಲ್ಲಿ ಲಿಸ್ಟಿಂಗ್‌ ಮಾಡಿಸಿದ್ದಾರೆ. ಪ್ರಸ್ತುತ ಬಿಕಾರಾ ಸಂಸ್ಥೆಯು 1.6 ಬಿಲಿಯನ್ ಡಾಲರ್‌ಗೂ ಅಧಿಕ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಶೈಕ್ಷಣಿಕವಾಗಿ ಎಂಐಟಿ ಮತ್ತು ಸ್ಟ್ಯಾನ್‌ಫೋರ್ಡ್‌ನಂತಹ ಜಗತ್ಪ್ರಸಿದ್ಧ ಸಂಸ್ಥೆಗಳಲ್ಲಿ ಪದವಿ ಪಡೆದಿರುವ ಇವರು, ಕ್ಯಾನ್ಸರ್ ಬಯೋಲಜಿಯಲ್ಲಿ ಪಿಎಚ್‌ಡಿ ಪದವಿ ಹೊಂದಿದ್ದಾರೆ.

ಎಐ ಮತ್ತು ಅಡ್ವಾನ್ಸ್ಡ್ ಬಯೋಟೆಕ್ ಮೇಲೆ ಕಣ್ಣು

ಬಯೋಕಾನ್‌ನ ಭವಿಷ್ಯದ ಯಶಸ್ಸಿಗಾಗಿ ಕಿರಣ್ ಮಜುಂದಾರ್ ಅವರು ಕೇವಲ ಕ್ಲೇರ್ ಅವರನ್ನಷ್ಟೇ ಅಲ್ಲದೆ, ಒಂದು ಬಲಿಷ್ಠವಾದ 'ಫ್ಯಾಮಿಲಿ ಎಕೋಸಿಸ್ಟಮ್' ಅನ್ನು ಸಿದ್ಧಪಡಿಸಿದ್ದಾರೆ. ಕ್ಲೇರ್ ಅವರ ಸಹೋದರ ಎರಿಕ್ ಮಜುಂದಾರ್ ಕ್ಯಾಲ್ಟೆಕ್‌ನಲ್ಲಿ ಪ್ರೊಫೆಸರ್ ಆಗಿದ್ದು, ಕೃತಕ ಬುದ್ಧಿಮತ್ತೆ (AI) ತಜ್ಞರಾಗಿದ್ದಾರೆ. ಹಾಗೆಯೇ ಕ್ಲೇರ್ ಅವರ ಪತಿ ಥಾಮಸ್ ರಾಬರ್ಟ್ಸ್ ಅವರು ಖ್ಯಾತ ಕ್ಯಾನ್ಸರ್ ತಜ್ಞರಾಗಿದ್ದಾರೆ. ಈ ತಜ್ಞರ ತಂಡದ ಬೆಂಬಲದೊಂದಿಗೆ ಬಯೋಕಾನ್ ಇನ್ನು ಮುಂದೆ ಸಂಶೋಧನೆ ಮತ್ತು ಅಭಿವೃದ್ಧಿ (R&D) ಕ್ಷೇತ್ರದಲ್ಲಿ ಎಐ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳಲು ಸಜ್ಜಾಗಿದೆ.

ಸಂಸ್ಥೆಯಲ್ಲಿ ರಚನಾತ್ಮಕ ಬದಲಾವಣೆ

ಉತ್ತರಾಧಿಕಾರ ಬದಲಾವಣೆಯ ಬೆನ್ನಲ್ಲೇ ಬಯೋಕಾನ್‌ನಲ್ಲಿ ಹಲವು ಆಂತರಿಕ ಬದಲಾವಣೆಗಳೂ ನಡೆಯುತ್ತಿವೆ. ಕಂಪನಿಯು ತನ್ನ ಸಾಲವನ್ನು ಕಡಿಮೆ ಮಾಡುವ ಉದ್ದೇಶದಿಂದ ಜೆನೆರಿಕ್ಸ್ ಮತ್ತು ಬಯೋಲಾಜಿಕ್ಸ್ ವ್ಯವಹಾರಗಳನ್ನು ವಿಲೀನಗೊಳಿಸಿದೆ. ಇದರೊಂದಿಗೆ ಗ್ರೂಪ್ ಕಂಪನಿಗಳಲ್ಲೂ ಹೊಸ ನಾಯಕತ್ವ ಉದಯಿಸಿದೆ. ಶ್ರೀಹಾಸ್ ತಾಂಬೆ ಅವರು ಬಯೋಕಾನ್ ಬಯೋಲಾಜಿಕ್ಸ್‌ನ ಎಂಡಿಯಾಗಿ ಅಧಿಕಾರ ವಹಿಸಿಕೊಂಡರೆ, ಸಿದ್ಧಾರ್ಥ್ ಮಿತ್ತಲ್ ಅವರು ಜುಲೈ 1ರಿಂದ ಸಿಂಜಿನ್ ಇಂಟರ್ನ್ಯಾಷನಲ್ ಸಂಸ್ಥೆಯನ್ನು ಮುನ್ನಡೆಸಲಿದ್ದಾರೆ.

ಒಟ್ಟಾರೆಯಾಗಿ, ಬಯೋಸಿಮಿಲರ್ಸ್ ಕ್ಷೇತ್ರದಲ್ಲಿ ಜಾಗತಿಕ ನಾಯಕಿಯಾಗಿರುವ ಬಯೋಕಾನ್, ಇನ್ನು ಮುಂದೆ ಎಐ ಆಧಾರಿತ ಸಂಶೋಧನೆ ಮತ್ತು ಸ್ವಂತ ಸಂಶೋಧನೆಯ ಒರಿಜಿನಲ್ ಬಯೋಲಾಜಿಕ್ ಔಷಧಗಳ ತಯಾರಿಕೆಗೆ ಹೆಚ್ಚಿನ ಒತ್ತು ನೀಡಲಿದೆ. ಆ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುವ ಗುರಿ ಹೊಂದಿದೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ತಿಂಗಳಿಗೆ ₹10,000 ಸಂಬಳದಲ್ಲಿ ₹50 ಲಕ್ಷದ ಮನೆ ಖರೀದಿಸಬಹುದೇ? ಇಲ್ಲಿದೆ ಸೂಪರ್ ಪ್ಲ್ಯಾನ್
ರಾಜ್ಯದಲ್ಲಿ ಮದ್ಯದ ಹೊಳೆ: 13 ವರ್ಷದ ದಾಖಲೆ ಉಡೀಸ್‌ ಮಾಡಿದ ಏಪ್ರಿಲ್; ಎಷ್ಟು ಆದಾಯ?