
ತಮಿಳುನಾಡು ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭವಾದ ಬೆನ್ನಲ್ಲೇ, ರಾಜ್ಯ ರಾಜಕೀಯದಲ್ಲಿ ದೊಡ್ಡ ಬದಲಾವಣೆಯ ಸೂಚನೆಗಳು ಸ್ಪಷ್ಟವಾಗಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷವನ್ನು ಹಿಂದಿಕ್ಕಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆಗಳು ವ್ಯಕ್ತವಾಗುತ್ತಿದ್ದಂತೆಯೇ ಷೇರು ಮಾರುಕಟ್ಟೆಯಲ್ಲೂ ತೀವ್ರ ಬದಲಾವಣೆ ಕಾಣಿಸಿತು.
ಈ ರಾಜಕೀಯ ಬೆಳವಣಿಗೆಯ ನಡುವೆಯೇ, ಸನ್ ಟಿವಿ ನೆಟ್‌ವರ್ಕ್ ಷೇರುಗಳು ಬಿಎಸ್‌ಇಯಲ್ಲಿ ಭಾರೀ ಕುಸಿತ ದಾಖಲಿಸಿವೆ. ದಿನದ ಆರಂಭದಲ್ಲೇ ಸುಮಾರು ಶೇ. 10 ರಷ್ಟು ಕುಸಿದ ಷೇರುಗಳು ₹547.55 ರ ಕನಿಷ್ಠ ಮಟ್ಟಕ್ಕೆ ತಲುಪಿವೆ. ಕ್ಲೋಸಿಂಗ್ ಬೆಲೆ ₹605 ಇದ್ದುದರಿಂದ ಇದು ಗಮನಾರ್ಹ ಇಳಿಕೆಯಾಗಿದ್ದು, ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ಮಧ್ಯಾಹ್ನ ವೇಳೆಗೆ ಸ್ವಲ್ಪ ಚೇತರಿಕೆ ಕಂಡರೂ, ಬೆಳಿಗ್ಗೆ 10:40ರ ವೇಳೆಗೆ ಸನ್ ಟಿವಿ ಷೇರುಗಳು ಇನ್ನೂ ಶೇ. 8ರಷ್ಟು ಕುಸಿತದೊಂದಿಗೆ ₹557.65 ರಲ್ಲಿ ವಹಿವಾಟು ನಡೆಸುತ್ತಿದ್ದವು. ಆಗಸ್ಟ್ 2024 ನಂತರ ಒಂದೇ ದಿನದಲ್ಲಿ ಕಂಡುಬಂದ ದೊಡ್ಡ ಕುಸಿತ ಇದಾಗಿದೆ.
ಸನ್ ಟಿವಿ ನೆಟ್‌ವರ್ಕ್ ಸನ್ ಗ್ರೂಪ್‌ನ ಪ್ರಮುಖ ಅಂಗವಾಗಿದ್ದು, ಇದನ್ನು ಭಾರತೀಯ ಉದ್ಯಮಿ ಕಲಾನಿಧಿ ಮಾರನ್ ಮುನ್ನಡೆಸುತ್ತಿದ್ದಾರೆ. ಮಾರನ್ ಕುಟುಂಬವು ಡಿಎಂಕೆ ಪಕ್ಷದೊಂದಿಗೆ ಹತ್ತಿರದ ಸಂಬಂಧ ಹೊಂದಿದೆ. ಅವರು ಡಿಎಂಕೆ ನಾಯಕ ದಿವಂಗತ ಎಂ. ಕರುಣಾನಿಧಿ ಅವರ ಕುಟುಂಬಕ್ಕೆ ಸಂಬಂಧಿಕರಾಗಿದ್ದು, ಪ್ರಸ್ತುತ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರೊಂದಿಗೆ ಕೂಡ ನಿಕಟ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಡಿಎಂಕೆ ಪಕ್ಷ ಹಿನ್ನಡೆ ಕಾಣುತ್ತಿರುವ ರಾಜಕೀಯ ಬೆಳವಣಿಗೆಗಳು ಮಾರುಕಟ್ಟೆಯಲ್ಲೂ ಸನ್ ಟಿವಿ ಷೇರುಗಳ ಮೇಲೆ ಪರಿಣಾಮ ಬೀರಿದಂತೆ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಆಯೋಗದ ಪ್ರಾಥಮಿಕ ಮಾಹಿತಿಯ ಪ್ರಕಾರ, ಕೊಳತ್ತೂರು ಕ್ಷೇತ್ರದಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಟಿವಿಕೆ ಅಭ್ಯರ್ಥಿ ವಿ.ಎಸ್. ಬಾಬು ವಿರುದ್ಧ ಹಿನ್ನಡೆಯಲ್ಲಿದ್ದಾರೆ. ಹಾಗೆಯೇ ಚೆಪಾಕ್–ತಿರುವಲ್ಲಿಕೇಣಿ ಕ್ಷೇತ್ರದಲ್ಲಿ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಟಿವಿಕೆ ಅಭ್ಯರ್ಥಿ ಡಿ. ಸೆಲ್ವಂ ಎದುರು ಹಿಂದೆ ಉಳಿದ್ದಾರೆ
ಟಿವಿಕೆ ಪಕ್ಷವು 234 ಸದಸ್ಯ ಬಲದ ವಿಧಾನಸಭೆಯಲ್ಲಿ 118 ಸ್ಥಾನಗಳ ಬಹುಮತದ ಗಡಿಯನ್ನು ದಾಟಿದರೆ, ಅದು ತಮಿಳುನಾಡಿನ ರಾಜಕೀಯ ಇತಿಹಾಸದಲ್ಲೇ ಅಪೂರ್ವ ಸಾಧನೆಯಾಗಲಿದೆ. ಕೇವಲ ಎರಡು ವರ್ಷಗಳ ಹಿಂದೆ ಸ್ಥಾಪನೆಯಾದ ಪಕ್ಷವೇ ಅಧಿಕಾರಕ್ಕೆ ಬರಲು ಸಾಧ್ಯವಾಗುವುದು ದೊಡ್ಡ ಮೈಲುಗಲ್ಲಾಗಲಿದೆ.
ಸನ್ ಟಿವಿ ಷೇರುಗಳ ಭವಿಷ್ಯ ಬಗ್ಗೆ ತಜ್ಞರು ಎಚ್ಚರಿಕೆಯ ನಿಲುವು ಹೊಂದಿದ್ದಾರೆ. ಪ್ರಮುಖವಾಗಿ ಜಾಹೀರಾತು ಆದಾಯದ ನಿಧಾನಗತಿ ಹಾಗೂ ಒಟಿಟಿ ವೇದಿಕೆಗಳತ್ತ ಪ್ರೇಕ್ಷಕರ ವಲಸೆ ಕಂಪನಿಯ ವ್ಯವಹಾರಕ್ಕೆ ಸವಾಲಾಗಿಯೇ ಉಳಿದಿದೆ. ವಿಶ್ಲೇಷಕರ ಪ್ರಕಾರ, ಆದಾಯದ ಬೆಳವಣಿಗೆ, ವಿಷಯಗಳ ಹಣೀಕರಣ ಹಾಗೂ ಬಂಡವಾಳ ಹಂಚಿಕೆಯಲ್ಲಿ ಸ್ಪಷ್ಟ ಸುಧಾರಣೆ ಕಾಣಿಸದಿದ್ದರೆ, ಷೇರುಗಳು ಹೆಚ್ಚಿನ ಮೌಲ್ಯಮಾಪನವನ್ನು ಪಡೆಯುವುದು ಕಷ್ಟಕರ. ಲಾಭಾಂಶ ಮತ್ತು ನಗದು ಸಂಗ್ರಹ ಕೆಲವು ಮಟ್ಟಿಗೆ ಬೆಂಬಲ ನೀಡಿದರೂ, ದೀರ್ಘಾವಧಿಯ ಏರಿಕೆಗೆ ಸಾಕಾಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
ಒಟ್ಟಿನಲ್ಲಿ, ತಮಿಳುನಾಡಿನ ಚುನಾವಣಾ ಫಲಿತಾಂಶಗಳು ಕೇವಲ ರಾಜಕೀಯದಲ್ಲಷ್ಟೇ ಅಲ್ಲ, ಆರ್ಥಿಕ ವಲಯದಲ್ಲೂ ಸ್ಪಷ್ಟ ಪರಿಣಾಮ ಬೀರುತ್ತಿರುವುದು ಕಂಡುಬರುತ್ತಿದೆ. ಟಿವಿಕೆ ಪಕ್ಷದ ಮುನ್ನಡೆ ಹಾಗೂ ಡಿಎಂಕೆ ಹಿನ್ನಡೆ ಹಿನ್ನೆಲೆಯಲ್ಲಿ ಸನ್ ಟಿವಿ ಷೇರುಗಳ ಕುಸಿತ ಹೂಡಿಕೆದಾರರಲ್ಲಿ ಎಚ್ಚರಿಕೆ ಮೂಡಿಸಿದ್ದು, ಮುಂದಿನ ಬೆಳವಣಿಗೆಗಳತ್ತ ಎಲ್ಲರ ಕಣ್ಣು ನೆಟ್ಟಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.