ವಿಶ್ವದ ಮುಂಚೂಣಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ತಯಾರಿಕಾ ಕಂಪನಿ ಹಾನ್‌ಹಾಯ್ ಟೆಕ್ನಾಲಜಿ ಗ್ರೂಪ್ (ಫಾಕ್ಸ್‌ಕಾನ್) ರಾಜ್ಯದಲ್ಲಿ ಆ್ಯಪಲ್ ಐಫೋನ್ ಉತ್ಪಾದನಾ ಘಟಕ ಸ್ಥಾಪಿಸುವ ಸಂಬಂಧ ಬೃಹತ್ ಹೂಡಿಕೆ ಮಾಡಲು ಮುಂದೆ ಬಂದಿದೆ.
ಬೆಂಗಳೂರು (ಮಾ.04): ವಿಶ್ವದ ಮುಂಚೂಣಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ತಯಾರಿಕಾ ಕಂಪನಿ ಹಾನ್‌ಹಾಯ್ ಟೆಕ್ನಾಲಜಿ ಗ್ರೂಪ್ (ಫಾಕ್ಸ್‌ಕಾನ್) ರಾಜ್ಯದಲ್ಲಿ ಆ್ಯಪಲ್ ಐಫೋನ್ ಉತ್ಪಾದನಾ ಘಟಕ ಸ್ಥಾಪಿಸುವ ಸಂಬಂಧ ಬೃಹತ್ ಹೂಡಿಕೆ ಮಾಡಲು ಮುಂದೆ ಬಂದಿದೆ. ಈ ಸಂಬಂಧ ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಹೂಡಿಕೆಯಿಂದ ರಾಜ್ಯದಲ್ಲಿ ಒಂದು ಲಕ್ಷ ಉದ್ಯೋಗ ಸೃಜನೆಯಾಗುವ ನಿರೀಕ್ಷೆ ಇದ್ದು, ಉದ್ಯಮ ಸ್ಥಾಪನೆಗಾಗಿ ಬೆಂಗಳೂರು ವಿಮಾನ ನಿಲ್ದಾಣದ ಸಮೀಪವಿರುವ ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ತಾಲೂಕುಗಳಲ್ಲಿ 300 ಎಕರೆ ಭೂಮಿ ಗುರುತಿಸಲಾಗಿದೆ.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ರಾಜ್ಯ ಸರ್ಕಾರವು ಫಾಕ್ಸ್‌ಕಾನ್‌ಗೆ ಎಲ್ಲ ರೀತಿಯ ಸಹಕಾರ, ಬೆಂಬಲ ನೀಡಲಿದೆ. ಅತ್ಯಾಧುನಿಕ ತಂತ್ರಜ್ಞಾನಗಳ ಪರಿಣತಿಗೆ ಹೆಸರಾದ ಕಂಪನಿ ಫಾಕ್ಸ್‌ಕಾನ್ ರಾಜ್ಯದಲ್ಲಿ ಹೂಡಿಕೆ ಮಾಡುತ್ತಿರುವುದು ಸಂತಸ ತಂದಿದೆ. ಕರ್ನಾಟಕದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿವೆ. ಐಟಿಐಗಳನ್ನು ಇತ್ತೀಚೆಗಷ್ಟೇ ಉನ್ನತೀಕರಿಸಿದ್ದು, ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನಗಳ ಕುರಿತು ತರಬೇತಿ ನೀಡಲಾಗುತ್ತಿದೆ. ಅಂತೆಯೇ ಜಿಟಿಟಿಸಿ, ಪಾಲಿಟೆಕ್ನಿಕ್‌ಗಳು ಹಾಗೂ ಎಂಜಿನಿಯರಿಂಗ್ ಕಾಲೇಜುಗಳು ಅತ್ಯುತ್ತಮ ತಾಂತ್ರಿಕ ಶಿಕ್ಷಣವನ್ನು ನೀಡುವ ಮೂಲಕ ಕೌಶಲ್ಯಯುತ ಮಾನವ ಸಂಪನ್ಮೂಲ ಸೃಜಿಸಲಾಗುತ್ತಿದೆ ಎಂದರು.
ರಾಜ್ಯ ಸರ್ಕಾರಿ ನೌಕರರ ವೇತನ 17% ಏರಿಕೆ: ಮುಷ್ಕರಕ್ಕೆ ಮಣಿದ ಸಿಎಂ ಬೊಮ್ಮಾಯಿ ಸರ್ಕಾರ
ಬೆಂಗಳೂರಿನಲ್ಲಿ ಸುಮಾರು 400 ಸರ್ಕಾರಿ, ಖಾಸಗಿ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಗಳಿವೆ. ಇದು ಜಗತ್ತಿನಲ್ಲಿಯೇ ಅತಿ ಹೆಚ್ಚು. ಅಂತೆಯೇ ರಾಜ್ಯವು ಅತ್ಯುತ್ತಮ ಸೆಮಿ-ಕಂಡಕ್ಟರ್ ನೀತಿಯನ್ನು ಹೊಂದಿದ್ದು, ಈ ವಲಯದಲ್ಲಿಯೂ ಹೂಡಿಕೆ ಮಾಡುವ ಕುರಿತು ಪರಿಶೀಲಿಸುವಂತೆ ಸಲಹೆ ನೀಡಿದರು. ಇದಲ್ಲದೆ ತಾಂತ್ರಿಕ ತರಬೇತಿ ನೀಡುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಕೈಜೋಡಿಸುವಂತೆ ಸಲಹೆ ನೀಡಿದರು. ಬಳಿಕ ಫಾಕ್ಸ್‌ಕಾನ್ ಅಧ್ಯಕ್ಷ ಯಂಗ್ ಲಿಯು ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಹೂಡಿಕೆ ಬಗ್ಗೆ ಕೆಲ ಕಾಲ ಚರ್ಚಿಸಿದರು. ರಾಜ್ಯದಲ್ಲಿ ಸೆಮಿಕಂಡಕ್ಟರ್ ವಲಯದಲ್ಲಿ ಹೂಡಿಕೆ ಮಾಡುವ ಬಗ್ಗೆ ಪರಿಶೀಲಿಸುವುದಾಗಿ ಹೇಳಿದರು.
ಫಾಕ್ಸ್‌ಕಾನ್ ಕಂಪನಿಯು ವಿಶ್ವದ ಅತಿ ದೊಡ್ಡ ಎಲೆಕ್ಟ್ರಾನಿಕ್ಸ್ ತಯಾರಿಕಾ ಕಂಪನಿಯಾಗಿದೆ. 2022ರಲ್ಲಿ 6 ಟ್ರಿಲಿಯನ್ ಡಾಲರ್ ವಹಿವಾಟು ನಡೆಸಿದೆ. ಜಗತ್ತಿನ ಫಾರ್ಚೂನ್ 500 ಕಂಪನಿಗಳಲ್ಲಿ 20ನೇ ಸ್ಥಾನದಲ್ಲಿದೆ. ವಿಶ್ವದ 24 ದೇಶಗಳಲ್ಲಿ 173 ಕ್ಯಾಂಪಸ್‌ಗಳನ್ನು ಹೊಂದಿರುವ ಕಂಪನಿಯು ಮುಖ್ಯವಾಗಿ ಸ್ಮಾರ್ಟ್‌ಫೋನ್, ಟಿವಿ, ಗೇಮ್ ಕನ್ಸೋಲ್ಸ್, ಕ್ಲೌಡ್ ಮತ್ತು ನೆಟ್‌ವರ್ಕಿಂಗ್ ಉತ್ಪನ್ನಗಳು, ಕಂಪ್ಯೂಟಿಂಗ್ ಉತ್ಪನ್ನಗಳು ಮತ್ತು ಇತರ ಬಿಡಿ ಭಾಗಗಳ ಉತ್ಪಾದನೆಯಲ್ಲಿ ತೊಡಗಿದೆ.
ಸರ್ಕಾರ ನಡೆಸುವ ಬಗ್ಗೆ ಸಿದ್ದು ಕಡೆ ಬೊಮ್ಮಾಯಿ ಪಾಠ ಕೇಳಲಿ: ಜಮೀರ್ ಅಹ್ಮದ್
ಈ ವೇಳೆ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಐಟಿ-ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣರೆಡ್ಡಿ, ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐಎಸ್‌ಎನ್ ಪ್ರಸಾದ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎಸ್ ಸೆಲ್ವಕುಮಾರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆಯುಕ್ತರಾದ ಗುಂಜನ್ ಕೃಷ್ಣ ಮತ್ತಿತರರಿದ್ದರು.