ರಾಜ್ಯ ಸರ್ಕಾರಿ ನೌಕರರ ವೇತನ 17% ಏರಿಕೆ: ಮುಷ್ಕರಕ್ಕೆ ಮಣಿದ ಸಿಎಂ ಬೊಮ್ಮಾಯಿ ಸರ್ಕಾರ

ರಾಜ್ಯ ಸರ್ಕಾರಿ ನೌಕರರ ಹೋರಾಟಕ್ಕೆ ಕೊನೆಗೂ ಮಣಿದಿರುವ ರಾಜ್ಯ ಸರ್ಕಾರವು 7ನೇ ವೇತನ ಆಯೋಗದ ಮಧ್ಯಂತರ ಪರಿಹಾರವಾಗಿ ಸರ್ಕಾರಿ ನೌಕರರ ಮೂಲ ವೇತನಕ್ಕೆ ಶೇ.17ರಷ್ಟುವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. 

Karnataka Government Announces 17 Percent Salary Hike For State Employees Says Cm Basavaraj Bommai gvd

ಬೆಂಗಳೂರು (ಮಾ.02): ರಾಜ್ಯ ಸರ್ಕಾರಿ ನೌಕರರ ಹೋರಾಟಕ್ಕೆ ಕೊನೆಗೂ ಮಣಿದಿರುವ ರಾಜ್ಯ ಸರ್ಕಾರವು 7ನೇ ವೇತನ ಆಯೋಗದ ಮಧ್ಯಂತರ ಪರಿಹಾರವಾಗಿ ಸರ್ಕಾರಿ ನೌಕರರ ಮೂಲ ವೇತನಕ್ಕೆ ಶೇ.17ರಷ್ಟು ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಜತೆಗೆ ನೂತನ ಪಿಂಚಣಿ ಪದ್ಧತಿ (ಎನ್‌ಪಿಎಸ್‌) ರದ್ದತಿ ಬಗ್ಗೆ ಅಧ್ಯಯನ ನಡೆಸಲು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಅಧ್ಯಯನ ಸಮಿತಿ ರಚನೆ ಮಾಡಿದೆ. ಪರಿಣಾಮ- ಏಳನೇ ವೇತನ ಆಯೋಗ ಜಾರಿ, ನೂತನ ಪಿಂಚಣಿ ವ್ಯವಸ್ಥೆ ರದ್ದತಿಗೆ ಆಗ್ರಹಿಸಿ ಬುಧವಾರದಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದ ಕರ್ನಾಟಕ ರಾಜ್ಯ ನೌಕರರ ಸಂಘವು ಮೊದಲ ದಿನವೇ ಮುಷ್ಕರವನ್ನು ಹಿಂಪಡೆದಿದೆ.

ನೌಕರರ ಸಂಘ ವಿಧಿಸಿದ್ದ ಗಡುವಿನ ಒಳಗಾಗಿ ಸರ್ಕಾರ ಬೇಡಿಕೆ ಈಡೇರಿಸಿಲ್ಲ ಎಂದು ಬುಧವಾರದಿಂದ ನೌಕರರು ಕರ್ತವ್ಯ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದರು. ಸಂಘದ ಪದಾಧಿಕಾರಿಗಳ ಮನವೊಲಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಮಂಗಳವಾರ ತಡರಾತ್ರಿವರೆಗೆ ಸರಣಿ ಸಭೆಗಳನ್ನು ನಡೆಸಲಾಗಿತ್ತು. ಆದರೆ, ಬುಧವಾರ ಬೆಳಗ್ಗೆಯೂ ಪಟ್ಟು ಸಡಿಲಿಸದ ರಾಜ್ಯ ಸರ್ಕಾರಿ ನೌಕರರು ಮುಷ್ಕರಕ್ಕೆ ಚಾಲನೆಯನ್ನೂ ನೀಡಿದ್ದರು. ಇದರ ನಡುವೆ ಬುಧವಾರ ಬೆಳಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಘದ ಪದಾಧಿಕಾರಿಗಳು ಹಾಗೂ ಹಣಕಾಸು ಇಲಾಖೆ ಜತೆಗೆ ಪ್ರತ್ಯೇಕ ಸಭೆ ನಡೆಸಿ ಮಧ್ಯಂತರ ಪರಿಹಾರವಾಗಿ ಶೇ.17ರಷ್ಟುವೇತನ ಹೆಚ್ಚಳ ಮಾಡಲು ಒಪ್ಪಿಗೆ ನೀಡಿತು.

ಮೋದಿ, ಶಾ ಬಂದಾಗಲೆಲ್ಲಾ ರಾಜ್ಯದಲ್ಲಿ ಅಭಿವೃದ್ಧಿ ಯೋಜನೆ ಉದ್ಘಾಟನೆ: ಸಿಎಂ ಬೊಮ್ಮಾಯಿ

ಜತೆಗೆ ಎನ್‌ಪಿಎಸ್‌ ರದ್ದುಗೊಳಿಸಿ ಹಳೆಯ ಪಿಂಚಣಿ ವ್ಯವಸ್ಥೆ ಜಾರಿ ಮಾಡುವ ಬಗ್ಗೆ ಈಗಾಗಲೇ ಹಳೆ ಪಿಂಚಣಿ ಜಾರಿಗೊಳಿಸಿರುವ ಐದು ರಾಜ್ಯಗಳಲ್ಲಿ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸರ್ಕಾರದ ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಅಧ್ಯಯನ ಸಮಿತಿ ರಚಿಸುವುದಾಗಿ ಬಸವರಾಜ ಬೊಮ್ಮಾಯಿ ಘೋಷಿಸಿದರು. ಇದಕ್ಕೆ ನೌಕರರ ಸಂಘದ ಪದಾಧಿಕಾರಿಗಳೂ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಸರ್ಕಾರಿ ಆದೇಶವನ್ನೂ ಹೊರಡಿಸಲಾಯಿತು.

ಶೇ.17ರಷ್ಟು ವೇತನ ಹೆಚ್ಚಳ-ಸಿಎಂ: ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಧ್ಯಂತರ ಪರಿಹಾರವಾಗಿ ಶೇ.17ರಷ್ಟುವೇತನ ಹೆಚ್ಚಳಕ್ಕೆ ತೀರ್ಮಾನಿಸಲಾಗಿದೆ. ಇನ್ನು ಎನ್‌ಪಿಎಸ್‌ ಕುರಿತು ಇತರೆ ರಾಜ್ಯಗಳಲ್ಲಿ ಯಾವ ರೀತಿ ಇದೆ. ಅದರ ಆರ್ಥಿಕ ಪರಿಣಾಮವೇನು ಎಂಬುದರ ಕುರಿತು ಅಧ್ಯಯನ ಕೈಗೊಂಡು ವರದಿ ನೀಡಲು ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡುತ್ತಿದ್ದೇವೆ. ಹೀಗಾಗಿ ನೌಕರರು ಮುಷ್ಕರ ಕೈಬಿಡಬೇಕು ಎಂದು ಹೇಳಿದರು.

ವೇತನ, ನಿವೃತ್ತಿ ವೇತನ ಹೆಚ್ಚಿಸಿ ಸರ್ಕಾರ ಆದೇಶ: ವೇತನ ಏರಿಕೆ ಘೋಷಣೆ ಬೆನ್ನಲ್ಲೇ ಸರ್ಕಾರ ಆದೇಶ ಹೊರಡಿಸಿದ್ದು, ಆದೇಶದಲ್ಲಿ, 7ನೇ ರಾಜ್ಯ ವೇತನ ಆಯೋಗದ ಅಂತಿಮ ವರದಿ ಕಾಯ್ದಿರಿಸಿ ರಾಜ್ಯ ಸರ್ಕಾರಿ ನೌಕರರಿಗೆ, ಸ್ಥಳೀಯ ಸಂಸ್ಥೆಗಳ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹಾಗೂ ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗಳಿಗೆ ಏ.1 ರಿಂದ ಜಾರಿಗೆ ಬರುವಂತೆ ಮೂಲ ವೇತನದ ಶೇ.17 ರಷ್ಟು ಮಧ್ಯಂತರ ಪರಿಹಾರ ಮಂಜೂರು ಮಾಡುವುದಾಗಿ ತಿಳಿಸಿದೆ.

ಜತೆಗೆ ರಾಜ್ಯ ಸರ್ಕಾರದ ನಿವೃತ್ತಿ ವೇತನದಾರರು, ಕುಟುಂಬ ನಿವೃತ್ತಿ ವೇತನದಾರರಿಗೂ ಶೇ.17 ರಷ್ಟುಮಧ್ಯಂತರ ಪರಿಹಾರ ಮಂಜೂರು ಮಾಡಲಾಗುವುದು. ಸ್ಥಳೀಯ ಸಂಸ್ಥೆಗಳ (ನಗರ ಸ್ಥಳೀಯ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯ) ನೌಕರರಿಗೆ ವೇತನ ಹೆಚ್ಚಳದಿಂದ ಉಂಟಾಗುವ ವೆಚ್ಚವನ್ನು ಸಂಸ್ಥೆಗಳೇ ಭರಿಸಬೇಕು. ಇದು ವಿಶಿಷ್ಟಸಂಭಾವನೆಯಾಗಿದ್ದು ನಿವೃತ್ತಿ ಸೌಲಭ್ಯ ಅಥವಾ ತುಟ್ಟಿಭತ್ಯೆಯನ್ನು ನಿರ್ಧರಿಸುವಾಗ ಅಥವಾ ಬೇರೆ ಯಾವುದೇ ಉದ್ದೇಶಗಳಿಗೆ ಇದನ್ನು ಪರಿಗಣಿಸುವಂತಿಲ್ಲ ಸ್ಪಷ್ಟಪಡಿಸಲಾಗಿದೆ.

ಸಮಾಧಾನ ತಂದಿದೆ: ಬಳಿಕ ಮಾತನಾಡಿದ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಕ್ಷರಿ, ಸರ್ಕಾರದ ಕ್ರಮದ ಬಗ್ಗೆ ಸಂತೃಪ್ತಿ ಇಲ್ಲದಿದ್ದರೂ ಸಮಾಧಾನ ಇದೆ. ಶೇ.17ರಷ್ಟು ವೇತನ ಹೆಚ್ಚಳದ ಜತೆಗೆ ರಾಜ್ಯ ಸರ್ಕಾರಿ ನೌಕರರಿಗೆ ಉಚಿತ ಆರೋಗ್ಯ ವ್ಯವಸ್ಥೆ ಜಾರಿಗೆ ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ. ಇದರಿಂದ 40 ಲಕ್ಷ ಕುಟುಂಬಗಳಿಗೆ ಲಾಭ ಆಗಲಿದೆ. ಸದ್ಯದ ಸರ್ಕಾರದ ಇತಿಮಿತಿ ಗಮನಿಸಿ ನಾವು ಈ ತೀರ್ಮಾನವನ್ನು ಒಪ್ಪಿದ್ದೇವೆ. ಆದ್ದರಿಂದ ತಕ್ಷಣದಿಂದ ಮುಷ್ಕರ ಹಿಂಪಡೆಯುತ್ತಿದ್ದೇವೆ ಎಂದು ಪ್ರಕಟಿಸಿದರು.

ಕರ್ತವ್ಯಕ್ಕೆ ಗೈರು: ರಾಜ್ಯ ಸರ್ಕಾರದ ಆದೇಶ ಬೆಳಗ್ಗೆ 11.30 ಗಂಟೆ ವೇಳೆ ಪ್ರಕಟವಾದರೂ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಷಡಕ್ಷರಿ ಅವರು ಮಧ್ಯಾಹ್ನ 12 ಗಂಟೆಗೆ ಮುಷ್ಕರ ಹಿಂಪಡೆದು ಇಂದಿನಿಂದಲೇ (ಬುಧವಾರ) ಕರ್ತವ್ಯಕ್ಕೆ ಮರಳುತ್ತಿರುವುದಾಗಿ ಘೋಷಿಸಿದರು. ಇದೇ ವೇಳೆ ದೂರದ ಊರುಗಳಿಂದ ಸೇವೆಗೆ ಬರಬೇಕಿರುವವರು ಹೊರತುಪಡಿಸಿ ಉಳಿದೆಲ್ಲರೂ ಸೇವೆಗೆ ಹಾಜರಾಗಬೇಕು. ದೂರದ ಊರಿನಿಂದ ಬರುವವರಿಗೆ ರಜೆ ಮಂಜೂರು ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಸರ್ಕಾರವೂ ಪೂರಕವಾಗಿ ಸ್ಪಂದಿಸಿದೆ ಎಂದರು. ಇದನ್ನೇ ನೆಪ ಮಾಡಿಕೊಂಡ ಮುಷ್ಕರ ನಿರತ ಬಹುತೇಕ ವೈದ್ಯರು ಕರ್ತವ್ಯಕ್ಕೆ ವಾಪಸಾಗಲಿಲ್ಲ. ಪರಿಣಾಮ ಬುಧವಾರ ಎಲ್ಲಾ ಇಲಾಖೆಗಳಲ್ಲೂ ಸೇವೆಗಳಲ್ಲಿ ವ್ಯತ್ಯಯ ಉಂಟಾಯಿತು. ಸರ್ಕಾರಿ ಆಸ್ಪತ್ರೆಗಳ ಹೊರ ರೋಗಿ ಸೇವೆ ಮಾತ್ರ ಮಧ್ಯಾಹ್ನದ ಬಳಿಕ ಪುನರ್‌ಆರಂಭ ಆಯಿತು.

ಕಾಂಗ್ರೆಸ್ಸಿಗರು ಅಧಿಕಾರಕ್ಕೆ ಬರೋ ಪ್ರಶ್ನೆಯೇ ಇಲ್ಲ: ಸಿಎಂ ಬೊಮ್ಮಾಯಿ

ಮುಷ್ಕರ ವಾಪಸ್‌ಗೆ ಅಪಸ್ವರ: ಬುಧವಾರದಿಂದ ಹೂಡಿದ್ದ ಅನಿರ್ದಿಷ್ಟಾವಧಿ ಮುಷ್ಕರ ಹಿಂಪಡೆಯುತ್ತಿರುವುದಾಗಿ ಘೋಷಿಸಿದ ಷಡಕ್ಷರಿ ನಿರ್ಧಾರಕ್ಕೆ ಇತರೆ ಸಂಘಗಳು ಆಕ್ಷೇಪ ವ್ಯಕ್ತಪಡಿಸಿವೆ. ಬೇರೆ ನೌಕರರ ಸಂಘಗಳ ಜತೆ ಚರ್ಚಿಸದೆ ಏಕಾಏಕಿ ಮುಷ್ಕರ ಹಿಂಪಡೆದಿದ್ದಾರೆ. ಇದು ಏಕಪಕ್ಷೀಯ ನಿರ್ಧಾರವಾಗಿದ್ದು ನೌಕರರಿಗೆ ಅನ್ಯಾಯವಾಗಿದೆ ಎಂದು ಸಚಿವಾಲಯ ನೌಕರರ ಸಂಘ ಹಾಗೂ ಹಳೆ ಕರ್ನಾಟಕ ರಾಜ್ಯ ಎನ್‌ಪಿಎಸ್‌ ನೌಕರರ ಸಂಘಗಳು ಕಿಡಿ ಕಾರಿವೆ. 2022ರ ಜುಲೈ ತಿಂಗಳಿಂದಲೇ ಏಳನೇ ವೇತನ ಆಯೋಗದ ಸೌಲಭ್ಯಗಳು ನೌಕರರಿಗೆ ದೊರೆಯಬೇಕಿತ್ತು. ಮಧ್ಯಂತರ ಪರಿಹಾರ ಕನಿಷ್ಠ ಶೇ.25 ರಷ್ಟಾದರೂ ಸಿಗಬೇಕಿತ್ತು. ಒಪಿಎಸ್‌ ಜಾರಿ ಬಗ್ಗೆಯೂ ಸ್ಪಷ್ಟಭರವಸೆ ನೀಡಿಲ್ಲ. ಹೀಗಿದ್ದರೂ ಪೂರ್ವ ನಿಯೋಜಿತ ನಾಟಕದಂತೆ ಷಡಕ್ಷರಿ ಮುಷ್ಕರ ಹಿಂಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೆ ನಾವು ಹೋರಾಟ ನಡೆಸುತ್ತೇವೆ ಎಂದಿದ್ದಾರೆ.

ವೇತನ ಎಷ್ಟುಏರಿಕೆ?
ಮೊದಲು (ತುಟ್ಟಿಭತ್ಯೆ ಸೇರಿ) ಹೆಚ್ಚಳದ ಬಳಿಕ

22270 ರು. 25160 ರು.
39759 ರು. 44919 ರು.
53579 ರು. 60532 ರು.
65697 ರು. 74223 ರು.
133751 ರು. 151108 ರು.
197286 ರು. 222888 ರು.

Latest Videos
Follow Us:
Download App:
  • android
  • ios