ಇನ್ಮುಂದೆ ಹೋಟೆಲ್‌ಗಳಲ್ಲಿ 10 ರೂ ಕಾಫಿ ಹೀರುತ್ತಾ ಕೂತರೆ ಗ್ರಾಹಕರಿಗೆ ಬೀಳಲಿದೆ 1000 ರೂ.ವರೆಗೆ ದಂಡ!

Published : Feb 10, 2026, 03:47 PM IST
bengaluru hotel

ಸಾರಾಂಶ

ಬೆಂಗಳೂರಿನ ಸಣ್ಣ ಹಾಗೂ ಮಧ್ಯಮ ಹೋಟೆಲ್‌ಗಳಲ್ಲಿ ಗ್ರಾಹಕರು ಗಂಟೆಗಟ್ಟಲೆ ಕಾಲಹರಣ ಮಾಡುವುದರಿಂದ ವ್ಯಾಪಾರಕ್ಕೆ ನಷ್ಟವಾಗುತ್ತಿದೆ. ಈ ಸಮಸ್ಯೆಗೆ ಪರಿಹಾರವಾಗಿ,   'ಟೇಬಲ್ ಚಾರ್ಜ್' ಅಥವಾ 500 ರಿಂದ 1000 ರೂ.ವರೆಗೆ ದಂಡ ವಿಧಿಸಲು ಹೋಟೆಲ್ ಮಾಲೀಕರ ಸಂಘ ಚಿಂತನೆ ನಡೆಸಿದೆ.

ಬೆಂಗಳೂರು: ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಸಣ್ಣ ಹಾಗೂ ಮಧ್ಯಮ ವರ್ಗದ ಹೋಟೆಲ್‌ಗಳಲ್ಲಿ ಗ್ರಾಹಕರು ತಾಸುಗಟ್ಟಲೆ ಕೂತು ಕಾಲಹರಣ ಮಾಡುವ ಪ್ರವೃತ್ತಿ ಹೋಟೆಲ್ ಮಾಲೀಕರಿಗೆ ತೀವ್ರ ತೊಂದರೆಯಾಗುತ್ತಿದೆ. ಇದಕ್ಕೆ ಪರಿಹಾರವಾಗಿ, ಹೋಟೆಲ್‌ಗಳಲ್ಲಿ ದೀರ್ಘಕಾಲ ಕೂತರೆ ‘ಟೇಬಲ್ ಚಾರ್ಜ್’ ಅಥವಾ ದಂಡ ವಿಧಿಸುವ ಕುರಿತು ಹೋಟೆಲ್ ಮಾಲೀಕರ ಸಂಘ ಹೊಸ ಚಿಂತನೆ ನಡೆಸಿದೆ.

ಕಾಲಹರಣ ಮಾಡುವಂತವರಿಂದ ಬಿಸಿನೆಸ್‌ ಗೆ ಕುತ್ತು

ಸಾಮಾನ್ಯವಾಗಿ ತಿಂಡಿ ಅಥವಾ ಟೀ ಸೇವನೆಗಾಗಿ ಹೋಟೆಲ್‌ಗೆ ಬರುವ ಹಲವರು, ಒಂದೇ ಟೀ ಅಥವಾ ಕಾಫಿ ಕುಡಿದು ಗಂಟೆಗಟ್ಟಲೆ ಕುಳಿತು ಸಭೆಗಳು, ಭೂ ವ್ಯವಹಾರ, ಮದುವೆ ಮಾತುಕತೆ, ಖಾಸಗಿ ಚರ್ಚೆಗಳು ನಡೆಸುತ್ತಿರುವುದು ಹೋಟೆಲ್ ಮಾಲೀಕರಿಗೆ ದೊಡ್ಡ ತಲೆನೋವಾಗುತ್ತಿದೆ. ಇದರಿಂದ ನಿಜವಾದ ಗ್ರಾಹಕರಿಗೆ ಆಸನ ಸಿಗದ ಸ್ಥಿತಿ ನಿರ್ಮಾಣವಾಗುತ್ತಿದ್ದು, ವ್ಯಾಪಾರಕ್ಕೂ ಹೊಡೆತ ಬೀರುತ್ತಿದೆ ಎಂದು ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಪಾರ್ಕಿಂಗ್ ಚಾರ್ಜ್‌ನಂತೆ ಟೇಬಲ್ ಬಳಕೆಗೆ ಕೂಡ ಶುಲ್ಕ ವಿಧಿಸುವ ಬಗ್ಗೆ ಚಿಂತನೆ ನಡೆದಿದೆ. ಒಂದು ನಿರ್ದಿಷ್ಟ ಸಮಯದವರೆಗೆ ಮಾತ್ರ ಉಚಿತವಾಗಿ ಕುಳಿತುಕೊಳ್ಳಲು ಅವಕಾಶ ನೀಡಬೇಕು, ಅದಕ್ಕಿಂತ ಹೆಚ್ಚು ಸಮಯ ಹೋಟೆಲ್‌ನಲ್ಲಿ ಕಾಲಹರಣ ಮಾಡಿದರೆ ದಂಡ ಅಥವಾ ಟೇಬಲ್ ಚಾರ್ಜ್ ವಿಧಿಸುವ ನಿರ್ಧಾರಕ್ಕೆ ಬರಲಾಗುತ್ತಿದೆ.

500 ರಿಂದ 1000 ರೂ ಶುಲ್ಕಕ್ಕೆ ಚಿಂತನೆ

ಈ ಕುರಿತು ಮಾತನಾಡಿದ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಅವರು, “ಹೋಟೆಲ್‌ಗಳಲ್ಲಿ ಒಂದು ಟೀ ಕುಡಿದು ಗಂಟೆಗಟ್ಟಲೆ ಕುಳಿತು ಸಭೆಗಳು ನಡೆಸುತ್ತಾರೆ. ಇದರಿಂದ ಇತರ ಗ್ರಾಹಕರಿಗೆ ತೊಂದರೆ ಆಗುವುದಲ್ಲದೆ, ನಮ್ಮ ವ್ಯಾಪಾರಕ್ಕೂ ನಷ್ಟವಾಗುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಹೋಟೆಲ್‌ಗಳಲ್ಲಿ ದೀರ್ಘಕಾಲ ಕೂತರೆ ಟೇಬಲ್ ಚಾರ್ಜ್ ವಿಧಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಅಗತ್ಯವಿದ್ದರೆ 500 ರಿಂದ 1,000 ರೂ.ವರೆಗೆ ಶುಲ್ಕ ವಿಧಿಸುವ ಬಗ್ಗೆ ಚರ್ಚೆ ನಡೆದಿದೆ” ಎಂದು ತಿಳಿಸಿದ್ದಾರೆ.

ಇದಲ್ಲದೆ, ಈ ನಿರ್ಧಾರವನ್ನು ಅಧಿಕೃತವಾಗಿ ಜಾರಿಗೆ ತರಲು ಸರ್ಕಾರಕ್ಕೆ ಶೀಘ್ರದಲ್ಲೇ ಪತ್ರ ಬರೆದು ಅನುಮತಿ ಪಡೆಯಲು ಹೋಟೆಲ್ ಮಾಲೀಕರ ಸಂಘ ಸಿದ್ಧತೆ ನಡೆಸುತ್ತಿದೆ. ಸರ್ಕಾರದ ಒಪ್ಪಿಗೆ ದೊರೆತರೆ, ಈ ನಿಯಮವನ್ನು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲೂ ಜಾರಿಗೆ ತರಲು ಯೋಜನೆ ರೂಪಿಸಲಾಗುತ್ತಿದೆ.

ಈ ಹೊಸ ಚಿಂತನೆ ಜಾರಿಯಾದರೆ, ಹೋಟೆಲ್‌ಗಳಲ್ಲಿ ಗಂಟೆಗಟ್ಟಲೆ ಕಾಲಹರಣ ಮಾಡುವ ಪ್ರವೃತ್ತಿಗೆ ಕಡಿವಾಣ ಬೀಳುವ ಸಾಧ್ಯತೆ ಇದ್ದು, ಈ ವಿಷಯ ಸಾರ್ವಜನಿಕ ವಲಯದಲ್ಲಿ ಈಗಾಗಲೇ ಚರ್ಚೆಗೆ ಗ್ರಾಸವಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಚಿನ್ನ, ಬೆಳ್ಳಿ, ಬಿಟ್‌ಕಾಯಿನ್.. ಈ ಮೂರರಲ್ಲಿ ಯಾವುದ್ರಲ್ಲಿ ಹೂಡಿಕೆ ಮಾಡ್ಬೇಕು?
ಕೆಲಸ ಬದಲಾದಾಗ ಎಸ್‌ಐಪಿ ನಿಲ್ಲಿಸಿದರೆ ಆಗುವ ತೊಂದರೆಗಳೇನು!