ಉದ್ಯಮಿ ಸಿ.ಜೆ. ರಾಯ್ ಸಾವು ಬಗ್ಗೆ ಹಲವು ಅನುಮಾನ: ಆ ಒಂದು ರೂಂ ಓಪನ್ ಮಾಡುವಂತೆ ಕೇರಳ ಐಟಿ ಅಧಿಕಾರಿಗಳ ಒತ್ತಾಯ

Published : Jan 30, 2026, 07:31 PM IST
CJ Roy confident group

ಸಾರಾಂಶ

ಉದ್ಯಮಿ ಸಿ.ಜೆ. ರಾಯ್ ಅವರು ಐಟಿ ದಾಳಿಯ ವೇಳೆ ತಮ್ಮ ಕಚೇರಿಯಲ್ಲಿಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಭಾವಿ ರಾಜಕಾರಣಿಗೆ ಸೇರಿದ ಮಹತ್ವದ ದಾಖಲೆಗಳಿದ್ದ ಕೊಠಡಿಯನ್ನು ತೆರೆಯಲು ನಿರಾಕರಿಸಿದ್ದರಿಂದ ಉಂಟಾದ ಒತ್ತಡವೇ ಸಾವಿಗೆ ಕಾರಣವೆಂದು ಶಂಕಿಸಲಾಗಿದೆ. 

ಬೆಂಗಳೂರು: ಉದ್ಯಮಿ ಸಿ.ಜೆ. ರಾಯ್ ಆತ್ಮ*ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಅನುಮಾನಗಳು ವ್ಯಕ್ತವಾಗಿದೆ, ಪ್ರಕರಣ ಗಂಭೀರ ತಿರುವು ಪಡೆದುಕೊಂಡಿದೆ. ಕಳೆದ ಮೂರು ದಿನಗಳಿಂದ ಸಿ.ಜೆ. ರಾಯ್ ಅವರ ಮನೆ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದರು. ಇದರಿಂದ ಬೇಸತ್ತು ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಐಟಿ ಅಧಿಕಾರಿಗಳು ಇಡೀ ಮನೆ ಮತ್ತು ಕಚೇರಿಯನ್ನು ಶೋಧಿಸಿದರೂ, ಒಂದು ಕೊಠಡಿಯನ್ನು ತೆರೆಯಲು ಸಿ.ಜೆ. ರಾಯ್ ಒಪ್ಪಿರಲಿಲ್ಲ ಎನ್ನಲಾಗಿದೆ. ಆ ಕೊಠಡಿಯಲ್ಲಿ ಅತ್ಯಂತ ಮಹತ್ವದ ದಾಖಲೆಗಳು ಇದ್ದ ಕಾರಣ, ಅದನ್ನು ತೆರೆಯಲು ನಿರಾಕರಿಸಿದ್ದಾರೆಯೆಂಬ ಮಾಹಿತಿ ಲಭ್ಯವಾಗಿದೆ. ಆ ದಾಖಲೆಗಳು ಪ್ರಭಾವಿ ರಾಜಕಾರಣಿಯೊಬ್ಬರಿಗೆ ಸಂಬಂಧಿಸಿದ್ದಾಗಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ. ಈ ಮಾಹಿತಿಯನ್ನು ಬಹಿರಂಗಪಡಿಸಲು ಸಿ.ಜೆ. ರಾಯ್ ನಿರಾಕರಿಸಿದ್ದ ಕಾರಣ, ಐಟಿ ಅಧಿಕಾರಿಗಳು ಮತ್ತು ಸಿ.ಜೆ. ರಾಯ್ ನಡುವೆ ಕಳೆದ ಮೂರು ದಿನಗಳಿಂದ ನಿರಂತರ ವಾಗ್ವಾದ ನಡೆದಿತ್ತೆಂದು ಹೇಳಲಾಗುತ್ತಿದೆ. ಈ ಒತ್ತಡ ಮತ್ತು ವಾಗ್ವಾದಗಳೇ ಸಿ.ಜೆ. ರಾಯ್ ಅವರನ್ನು ಆತ್ಮ*ಹತ್ಯೆಯ ನಿರ್ಧಾರಕ್ಕೆ ಯೋಚಿಸಿರಬಹುದೇ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ.

ಕಚೇರಿಯಲ್ಲಿಯೇ ಗುಂಡು ಹಾರಿಸಿಕೊಂಡು ಆತ್ಮ*ಹತ್ಯೆ

ಹೊಸೂರು ರಸ್ತೆಯ ಲ್ಯಾಂಗ್‌ಫರ್ಡ್ ಟೌನ್‌ನಲ್ಲಿರುವ ತಮ್ಮ ಕಚೇರಿಗೆ ಮಧ್ಯಾಹ್ನ ವೇಳೆಗೆ ಆಗಮಿಸಿದ್ದ ಸಿ.ಜೆ. ರಾಯ್, ಐಟಿ ಅಧಿಕಾರಿಗಳೊಂದಿಗೆ ಸುಮಾರು ಒಂದು ಗಂಟೆ ವಿಚಾರಣೆಯನ್ನು ಎದುರಿಸಿದ್ದರು. ಕೆಲ ದಾಖಲೆಗಳನ್ನು ಐಟಿ ಅಧಿಕಾರಿಗಳಿಗೆ ನೀಡಿದ್ದ ಅವರು, ಇನ್ನಷ್ಟು ದಾಖಲೆ ತರಲು ಒಂದು ಕೊಠಡಿಗೆ ತೆರಳಿದ್ದರು. ಆದರೆ ಆ ಕೊಠಡಿಯಲ್ಲಿ ಅವರು ಪಿಸ್ತೂಲ್‌ನಿಂದ ತಮ್ಮ ಎದೆಗೆ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾರೆ.

ತಕ್ಷಣ ಕಚೇರಿ ಸಿಬ್ಬಂದಿ ಅವರನ್ನು ಆಸ್ಪತ್ರೆಗೆ ರವಾನಿಸಿದರೂ, ಆಸ್ಪತ್ರೆಗೆ ತಲುಪುವ ಮುನ್ನವೇ ಸಿ.ಜೆ. ರಾಯ್ ಮೃತಪಟ್ಟಿದ್ದರು. ಅವರ ಪಾರ್ಥಿವ ಶರೀರವನ್ನು ಹೆಚ್‌ಎಸ್‌ಆರ್ ಲೇಔಟ್‌ನ ನಾರಾಯಣ ಆಸ್ಪತ್ರೆಗೆ ತರಲಾಗಿದ್ದು, ಸದ್ಯ ಅಲ್ಲಿಯೇ ಇಡಲಾಗಿದೆ. ಬಳಿಕ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಬೋರಿಂಗ್ ಆಸ್ಪತ್ರೆಗೆ ಸ್ಥಳಾಂತರಿಸುವ ಸಿದ್ಧತೆ ನಡೆಸಲಾಗಿದೆ.

ತನಿಖೆ ಚುರುಕು – ಸಿಸಿಟಿವಿ, ಮೊಬೈಲ್, ಸಾಮಾಜಿಕ ಜಾಲತಾಣಗಳ ಪರಿಶೀಲನೆ

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ. ಸಿ.ಜೆ. ರಾಯ್ ಅವರ ಕಚೇರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಅವರು ಯಾವ ಸಮಯಕ್ಕೆ ಕಚೇರಿಗೆ ಬಂದರು, ಯಾವಾಗ ಕ್ಯಾಬಿನ್‌ಗೆ ತೆರಳಿದರು, ಐಟಿ ಅಧಿಕಾರಿಗಳು ಯಾವಾಗ ಬಂದರು ಮತ್ತು ಯಾವಾಗ ಹೊರಟರು ಎಂಬ ಸಂಪೂರ್ಣ ವಿವರಗಳನ್ನು ಪರಿಶೀಲಿಸಲಾಗುತ್ತಿದೆ.

ಸ್ಥಳಕ್ಕೆ ಕಮಿಷನರ್ ಭೇಟಿ, ಕೇರಳದ ಐಟಿ ಅಧಿಕಾರಿಗಳೆಂದು ಸ್ಪಷ್ಟನೆ

ಘಟನಾ ಸ್ಥಳಕ್ಕೆ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹೇಳಿಕೆ ನೀಡಿದ ಅವರು ಕೇರಳದ ಐಟಿ  ಅಧಿಕಾರಿಗಳು ಎಂದು ಸ್ಪಷ್ಟಪಡಿಸಿದ್ದು, ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಮಾಹಿತಿ ನೀಡಿದರು. ಜೊತೆಗೆ ಅವರ ಕುಟುಂಬ ಸದ್ಯ ವಿದೇಶದಲ್ಲಿದ್ದು, ಇಂದು ರಾತ್ರಿ ಫ್ಲೈಟ್‌ ನಲ್ಲಿ ಬೆಂಗಳೂರಿಗೆ ಬರಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಸಿ.ಜೆ. ರಾಯ್ ಬಳಕೆ ಮಾಡಿದ್ದ ಪಿಸ್ತೂಲ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ, ಅವರ ಕಚೇರಿ ಕೊಠಡಿಯಲ್ಲಿ ಯಾವುದೇ ಡೆತ್ ನೋಟ್ ಇದೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ. ಇದಷ್ಟೇ ಅಲ್ಲದೆ, ಸಿ.ಜೆ. ರಾಯ್ ಅವರ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದು, ಅದರಲ್ಲಿ ಇರುವ ವಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಸಂದೇಶಗಳು ಹಾಗೂ ಕರೆ ವಿವರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ. ಅವರು ಸಾವಿಗೂ ಮುನ್ನ ಯಾರಿಗಾದರೂ ಸಂದೇಶ ಕಳುಹಿಸಿದ್ದಾರೆಯೇ ಎಂಬುದರ ಕುರಿತೂ ತನಿಖೆ ನಡೆಯುತ್ತಿದೆ.

ಡಿಸಿಪಿ ಮಟ್ಟದ ತನಿಖೆ

ಈ ಪ್ರಕರಣದ ತನಿಖೆಯನ್ನು ಖುದ್ದು ಡಿಸಿಪಿ ಅಕ್ಷಯ್ ಅವರು ಮುನ್ನಡೆಸುತ್ತಿದ್ದಾರೆ. ಐಟಿ ಅಧಿಕಾರಿಗಳ ದಾಳಿ, ದಾಖಲೆಗಳ ಒತ್ತಡ, ಹಾಗೂ ಕೊಠಡಿ ತೆರೆಯುವ ವಿಚಾರ ಈ ಸಾವಿಗೆ ನೇರ ಕಾರಣವೇ ಎಂಬುದರ ಬಗ್ಗೆ ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ಉದ್ಯಮಿ ಸಿ.ಜೆ. ರಾಯ್ ಅವರ ಸಾವು ಕೇವಲ ವೈಯಕ್ತಿಕ ನಿರ್ಧಾರವೇ, ಅಥವಾ ವ್ಯವಸ್ಥಾತ್ಮಕ ಒತ್ತಡದ ಫಲವೇ ಎಂಬುದು ತನಿಖೆಯ ನಂತರವೇ ಸ್ಪಷ್ಟವಾಗಬೇಕಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

CJ Roy Death: ಲಾಭ ಮಾಡದೆ, ಮಗಳಿಗೋಸ್ಕರ ತಗೊಂಡ ಜಾಗವನ್ನು ಪುನೀತ್‌ ರಾಜ್‌ಕುಮಾರ್‌ಗೆ ಕೊಟ್ಟಿದ್ದ ಸಿಜೆ ರಾಯ್!
ನಾನಿಲ್ಲ ಅಂದ್ರೆ ಏನ್‌ ಮಾಡ್ತೀಯಾ? 2 ತಿಂಗಳ ಹಿಂದಷ್ಟೇ Dr CJ Roy ಕೇಳಿದ್ದ ಪ್ರಶ್ನೆಗೆ ಪತ್ನಿಯ ಅಚ್ಚರಿ ಉತ್ತರ ಏನು?