
ನವದೆಹಲಿ (ಏ.8): ಈ ಸುದ್ದಿಯನ್ನು ಓದಿದ ಬಳಿಕ ಖಂಡಿತಾ ಹೀಗೂ ಆಗುತ್ತಾ ಅನ್ನೋದು ಗ್ಯಾರಂಟಿ. ಇನ್ವೆಸ್ಟ್ ಮಾಡ್ತೀನಿ ಅಂದ್ರೆ ಭಾರತದಲ್ಲಿ ಬ್ಯುಸಿನೆಸ್ ಐಡಿಯಾಗಳಿಗೆ ಕೊರತೆಯೇ ಇರೋದಿಲ್ಲ ಅನ್ನೋದಕ್ಕೂ ಇದು ಸಾಕ್ಷಿ. ಭಿಕ್ಷುಕರು, ಬೆಗ್ಗರ್ಸ್ ಎಂದು ಎನ್ನುವ ತಾತ್ಸಾರವೇ ಒಂದು ಕಂಪನಿ ಆರಂಭಕ್ಕೆ ಕಾರಣವಾಗಿದೆ. ಭಿಕ್ಷುಕರಿಗೆ ಭಿಕ್ಷೆ ನೀಡುವ ಬದಲು ಅವರ ಮೇಲೆ ಹೂಡಿಕೆ ಮಾಡಿ ಬಂದ ಲಾಭದಲ್ಲಿ ಬೆಗ್ಗರ್ಸ್ ಕಾರ್ಪೋರೇಷನ್ ಎನ್ನುವ ನೋಂದಾಯಿತ ಕಂಪನಿಯನ್ನು ಒಬ್ಬರು ಕಟ್ಟಿದ್ದಾರೆ. ಒಡಿಶಾದ ಸಾಮಾಜಿಕ ಕಾರ್ಯಕರ್ಷ ಚಂದನ್ ಮಿಶ್ರಾ ಈ ಸಾಹಸಿ. ಒಂದಲ್ಲಾ ಒಂದು ಸಮಯದಲ್ಲಿ ನಾವು ಕೆಲವರ ಒಂದುಹೊತ್ತಿನ ಊಟಕ್ಕಾಗಲು ಎಂದು ಭಿಕ್ಷೆಯನ್ನು ನೀಡುತ್ತೇವೆ. ಕೆಲವು ದಾನವನ್ನೂ ಮಾಡುತ್ತಾರೆ. ಮಾರ್ಕೆಟ್‌ಗಳು ರಸ್ತೆ ಬದಿಯಲ್ಲಿ ಭಿಕ್ಷುಕರಿಗೆ ಭಿಕ್ಷೆ ಹಾಕುವವರನ್ನೂ ಸಾಮಾನ್ಯವಾಗಿ ನೋಡುತ್ತೇವೆ. ಆದರೆ, ಭಿಕ್ಷುಕರ ಬದುಕು ಬದಲಾಗಿದ್ದನ್ನು ನೋಡಿದ್ದೀರಾ? ಆದರೆ, ಚಂದ್ರ ಮಿಶ್ರಾ ಎಂದಿಗೂ ಭಿಕ್ಷೆಯನ್ನು ನೀಡಲಿಲ್ಲ. ಅದರ ಬದಲು ಭಿಕ್ಷುಕರ ಮೇಲೆ ಹೂಡಿಕೆ ಮಾಡಿ ದೊಡ್ಡ ಲಾಭದಾಯಕ ಕಂಪನಿ ಕಟ್ಟಿದ್ದಾರೆ. ಅವರ ಆಕರ್ಷಕ ಚಿಂತನೆಯಿಂದ ಹುಟ್ಟಿದ ಕಂಪನಿಯ ಹೆಸರು ಬೆಗ್ಗರ್ಸ್ ಕಾರ್ಪೋರೇಷನ್. ಈ ಕಂಪನಿಯ ಘೋಷವಾಕ್ಯ, ಡೋಂಟ್ ಡೊನೇಟ್, ಇನ್ವೆಸ್ಟ್ (ಹೂಡಿಕೆ ಮಾಡಿ, ದಾನ ಮಾಡಬೇಡಿ). ಇವರ ಪ್ರಯತ್ನದ ಫಲವಾಗಿ 14 ಭಿಕ್ಷುಕರ ಕುಟುಂಬಗಳು ಇಂದು ಬದಲಾಗಿದೆ.
ಇನ್ನೂ ಅಚ್ಚರಿಯೇನೆಂದರೆ, ಕಂಪನಿ ಕಟ್ಟಿದ ಆರೇ ತಿಂಗಳಲ್ಲಿ ಹೂಡಿಕೆದಾರರಿಗೆ ಅವರ ಹಣಕ್ಕೆ ಶೇ. 16.5ರ ರಿಟರ್ನ್‌ನೊಂದಿಗೆ ಹಣವನ್ನು ವಾಪಾಸ್ ಮಾಡಿದ್ದಾರೆ. ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಅವರು ಹೇಳಿದ್ದು ಒಂದೇ ಮಾತು, ನನ್ನ ಕಂಪನಿಗೆ ದಾನ ಅಗತ್ಯವಿಲ್ಲ, ಸಾಧ್ಯವಾದರೇ ಹೂಡಿಕೆ ಮಾಡಿ ಎನ್ನುತ್ತಾರೆ.
ವಾರಣಾಸಿಯಲ್ಲಿ ಹೊಳೆದ ಐಡಿಯಾ: ಗುಜರಾತ್‌ನಲ್ಲಿದ್ದಾಗ ತಮಗೆ ಮೊದಲ ಬಾರಿಗೆ ಭಿಕ್ಷುಕರ ಜೀವನವನ್ನು ಉತ್ತಮ ಮಾಡುವ ಕುರಿತಾಗಿ ಐಡಿಯಾ ಬಂದಿತ್ತು ಎಂದು ಚಂದ್ರ ಮಿಶ್ರಾ ಹೇಳಿದ್ದಾರೆ. ದೇವಸ್ಥಾನದ ಎದುರುಗಡೆ ಕುಳಿತು ಭಿಕ್ಷೆ ಬೇಡುವವರನ್ನು ನೋಡಿದಾಗ ನನಗೆ ಈ ಐಡಿಯಾ ಹೊಳೆಯಿತು. ಅವರಿಗೆ ವಿಶೇಷವಾದ ತರಬೇತಿ ನೀಡುವ ಮೂಲಕ ಉದ್ಯೋಗವನ್ನು ನೀಡುವುದಾಗಿ ನಿರ್ಧಾರ ಮಾಡಿದ್ದರು. ಸಾಕಷ್ಟು ರಾಜ್ಯಗಳ ಉದ್ಯೋಗ ನೀತಿಗಳನ್ನು ಪರಿಶೀಲನೆ ಮಾಡಿದ ಬಳಿಕ 2020ರ ಡಿಸೆಂಬರ್ 21 ರಂದು ಅವರು ವಾರಾಣಸಿಗೆ ಬಂದಿದ್ದರು. ಪೂರ್ಣ ಪ್ರಮಾಣದ ಸಿದ್ಧತೆಯೊಂದಿಗೆ ಅವರು ಮೊದಲ ಬಾರಿಗೆ ಅಲ್ಲಿಗೆ ಬಂದಿದ್ದರು. ಅದಾಗಲೇ, ವಾರಣಾಸಿಯ ಸ್ಥಳೀಯ ಎನ್‌ಜಿಒ ಜನಮಿತ್ರ ನ್ಯಾಸ್ ಅನ್ನು ಸಂಪರ್ಕಿಸಿದ್ದರು ಮತ್ತು ಭಿಕ್ಷುಕರಿಗೆ ಉದ್ಯೋಗ ನೀಡುವಲ್ಲಿ ಕೆಲಸ ಮಾಡಲು ಎದುರು ನೋಡುತ್ತಿರುವುದಾಗಿ ತಿಳಿಸಿದರು.
ಮಿಶ್ರಾ ಅವರ ಕೆಲಸದ ಬಗ್ಗೆ ಗೊತ್ತಿದ್ದ ಎನ್‌ಜಿಓ ಸಹಾಯ ಮಾಡಲು ಒಪ್ಪಿಕೊಂಡಿತು. ವಾರಣಾಸಿಯ ಘಾಟ್‌ಗಳ ಸಮೀಕ್ಷೆಯ ನಂತರ, ಭಿಕ್ಷುಕರ ಕೊರತೆ ಆಗಲಿಕ್ಕಿಲ್ಲ ಎನ್ನುವುದನ್ನು ಅವರು ಅರ್ಥ ಮಾಡಿಕೊಂಡರು. ಅವರ ಜೊತೆಯೇ ಇದ್ದು, ಅವರ ಜೀವನವನ್ನು ಹತ್ತಿರದಿಂದ ತಿಳಿದುಕೊಳ್ಳಲು ಆರಂಭಿಸಿದ್ದರು. ಅಚ್ಚರಿ ಎಂದರೆ, ಯಾರೊಬ್ಬರೂ ಕೂಡ ಅವರೊಂದಿಗೆ ಕೆಲಸ ಮಾಡಲು ಒಪ್ಪಿರಲಿಲ್ಲ. 2021ರಲ್ಲಿ 2ನೇ ಬಾರಿಗೆ ಕೋವಿಡ್ ಲಾಕ್‌ಡೌನ್ ಆದಾಗ, ಸಾಕಷ್ಟು ಭಿಕ್ಷುಕರು ಸಹಾಯ ಕೇಳಿ ಇವರ ಬಂದಿ ಬಂದಿದ್ದರು. ಇದರ ಬೆನ್ನಲ್ಲಿಯೇ 2021ರ ಆಗಸ್ಟ್‌ನಲ್ಲಿ ಬೆಗ್ಗರ್ಸ್ ಕಾರ್ಪೋರೇಷನ್ ಕಂಪನಿ ಆರಂಭವಾಯಿತು.
ಬ್ಯಾಗ್‌ಗಳ ಕಂಪನಿ: ವಾರಾಣಾಸಿಯ ಘಾಟ್‌ನಲ್ಲಿ ತನ್ನ ಮಗುವಿನೊಂದಿಗೆ ಭಿಕ್ಷೆ ಬೇಡುತ್ತಿದ್ದ ಹೆಂಗಸು, ಮಿಶ್ರಾ ಅವರ ಅಭಿಯಾನದ ಮೊದಲ ವ್ಯಕ್ತಿಯಾಗಿದ್ದರು. ಗಂಡ ಆಕೆಯನ್ನು ಮನೆಯಿಂದ ಹೊರಹಾಕಿದ್ದ. ಆಕೆಗೆ ಬೇರಲ್ಲೂ ಉಳಿಯಲು ಸ್ಥಳವಿರಲಿಲ್ಲ. ಈಕೆಗೆ ಬ್ಯಾಗ್‌ಗಳನ್ನು ಮಾಡುವ ಕೆಲಸವನ್ನು ಹೇಳಿಕೊಟ್ಟ ಮಿಶ್ರಾ, ಆಕೆಗೆ ತಮ್ಮದೇ ಕಂಪನಿಯಲ್ಲಿ ಅದರ ಕೆಲಸ ನೀಡಿದರು. ಮಹಿಳೆ ತಯಾರಿಸಿದ ಬ್ಯಾಗ್‌ಗಳನ್ನು ವಿವಿಧ ಕಾರ್ಯಕ್ರಮಗಳಿದ್ದಲ್ಲಿಗೆ ಮಿಶ್ರಾ ತಗೆದುಕೊಂಡು ಹೋದರು. ಸಕಾರಾತ್ಮಕ ಪ್ರತಿಕ್ರಿಯೆ ಸಿಗಲು ಆರಂಭವಾಯಿತು. ಇದ ಬೆನ್ನಲ್ಲಿಯೇ ಇನ್ನೂ ಕೆಲವು ಭಿಕ್ಷುಕರು ಬೆಗ್ಗರ್ಸ್ ಕಾರ್ಪೋರೇಷನ್ ಸೇರಿದರು. ಮಿಶ್ರಾ ಅವರ ಅಭಿಯಾನಕ್ಕೆ ಸಮಾಜದ ಗಣ್ಯರಿಂದಲೂ ಮೆಚ್ಚುಗೆ ವ್ಯಕ್ತವಾಯಿತು.
ಕಂಪನಿಯ ಪಾಲುದಾರರಾದ ಬದರಿನಾಥ್ ಮಿಶ್ರಾ ಮತ್ತು ದೇವೇಂದ್ರ ಥಾಪಾ ಅವರೊಂದಿಗೆ ಮಿಶ್ರಾ ಅವರು ಆಗಸ್ಟ್ 2022 ರಲ್ಲಿ ಬೆಗ್ಗರ್ಸ್ ಕಾರ್ಪೋರೇಷನ್ ಅನ್ನು ಲಾಭದಾಯಕ ಕಂಪನಿ ಎಂದು ಘೋಷಣೆ ಮಾಡಿ ನೋಂದಣಿ ಮಾಡಿಕೊಂಸಿದ್ದಾರೆ. ಇಂದು ಅವರು 14 ಭಿಕ್ಷುಕ ಕುಟುಂಬಗಳನ್ನು ಉದ್ಯಮಿಗಳನ್ನಾಗಿ ಮಾಡಿದ್ದಾರೆ. ಒಂದು ಡಜನ್ ಕುಟುಂಬಗಳು ಅವರೊಂದಿಗೆ ಚೀಲಗಳನ್ನು ತಯಾರಿಸುವ ಕೆಲಸ ಮಾಡುತ್ತಿದ್ದರೆ, ಎರಡು ಕುಟುಂಬಗಳು ದೇವಾಲಯಗಳ ಬಳಿ ಧಾರ್ಮಿಕ ಆಚರಣೆಗಳಿಗಾಗಿ ಹೂವುಗಳು ಮತ್ತು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ಪ್ರಾರಂಭಿಸಿವೆ.
ಉದ್ಯೋಗ ತೊರೆದು ಬರ್ಗರ್ ಕಂಪನಿ ಪ್ರಾರಂಭಿಸಿದ ಎಂಬಿಎ ಪದವೀಧರೆ;ಐದೇ ವರ್ಷದಲ್ಲಿ 40 ಕೋಟಿ ರೂ. ವಹಿವಾಟು
ಹೂಡಿಕೆ ಬೇಕು, ದಾನವಲ್ಲ: ಭಿಕ್ಷುಕರ ಬದುಕನ್ನು ಬದಲಿಸಲು ಕೇವಲ 10 ರಿಂದ 10,000 ರವರೆಗೆ ಯಾವುದೇ ಮೊತ್ತವನ್ನು ಹೂಡಿಕೆ ಮಾಡಲು ಜನರನ್ನು ಕೇಳಿಕೊಳ್ಳುತ್ತೇನೆ ಎಂದು ಮಿಶ್ರಾ ಹೇಳುತ್ತಾರೆ. ಒಂದೂವರೆ ತಿಂಗಳ ಕಾಲ ನಡೆದ ಈ ಅಭಿಯಾನಕ್ಕೆ ಆರಂಭದಲ್ಲಿ 57 ಮಂದಿ ಹಣ ನೀಡಿದರು. ಛತ್ತೀಸ್‌ಗಢದ ಇಂಜಿನಿಯರ್‌ನಿಂದ ಮೊದಲ ದೇಣಿಗೆ ಬಂದಿತ್ತು. ಈ ಹಣದಿಂದ ಅವರು ಭಿಕ್ಷುಕರಿಗೆ ಕೌಶಲ್ಯ ತರಬೇತಿಯನ್ನು ನೀಡಿದರು ಮತ್ತು ಅವರಿಗೆ ಉದ್ಯೋಗವನ್ನು ಒದಗಿಸಿದರು. ಅವರು ತಮ್ಮ ಕಂಪನಿಯನ್ನು ನೋಂದಾಯಿಸಿದ್ದಲ್ಲದೆ ಮತ್ತು ಇನ್ನೋವೇಟಿವ್ ಸ್ಟಾರ್ಟ್ಅಪ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದರು. ಕಂಪನಿಯು ವಿಸ್ತರಣೆ ಆದಂತೆ, ಬೆಗ್ಗರ್ಸ್ ಕಾರ್ಪೋರೇಷನ್ 100 ನವೀನ ಸ್ಟಾರ್ಟ್‌ಅಪ್‌ಗಳಲ್ಲಿ ಸ್ಥಾನ ಪಡೆದಿದೆ. ಟಾಪ್ 16 ಮೈಂಡ್‌ಫುಲ್ ಸ್ಟಾರ್ಟ್‌ಅಪ್‌ಗಳಲ್ಲಿ ಸೇರಿದ್ದು ಅವರ ಕೆಲಸಕ್ಕೆ ಇನ್ನಷ್ಟು ಉತ್ತೇಜನ ನೀಡುವಂತೆ ಮಾಡಿತು. ನಮ್ಮ ಆರಂಭಿಕ ಹೂಡಿಕೆದಾರರಿಗೆ 16.5% ಆರ್‌ಓಐ (ಹೂಡಿಕೆಯ ಮೇಲಿನ ಆದಾಯ) ನೊಂದಿಗೆ ಆರು ತಿಂಗಳಲ್ಲಿ ಅವರಿಗೆ ಹಣವನ್ನು ವಾಪಾಸ್ ಮಾಡಿದ್ದೇವೆ. ಇದು ಸಾಧ್ಯವಾಗುತ್ತದೆ ಎಂದು ನಾನು ಭಾವಿಸಿರಲಿಲ್ಲ. ಈಗ ಕಂಪನಿಗೆ ದಾನಕ್ಕಿಂತ ಹೆಚ್ಚಾಗಿ ಹೂಡಿಕೆ ಬೇಕಾಗಿದೆ. ಲಾಭ ಬಂದಾಗ ಅದನ್ನು ಹೂಡಿಕೆದಾರರಿಗೆ ಅವರು ಕೊಟ್ಟ ಮೊತ್ತದ ಜೊತೆಗೆ ವಾಪಾಸ್ ನೀಡಲಿದ್ದೇವೆ ಎಂದು ಮಿಶ್ರಾ ಹೇಳಿದ್ದಾರೆ.
ಯೂಟ್ಯೂಬ್ ಮೂಲಕವೇ ಕೋಟ್ಯಧೀಶೆಯಾದ ಪ್ರಾಜಕ್ತಾ ಕೋಲಿ; ಈಕೆ ತಿಂಗಳ ಆದಾಯ ಕೇಳಿದ್ರೆ ಶಾಕ್ ಆಗ್ತೀರಾ!
ಪ್ರತಿ ಭಿಕ್ಷುಕನಿಗೆ 1.5 ಲಕ್ಷ ಖರ್ಚು: ತಮ್ಮ ಮಾದರಿಯಲ್ಲಿ ಅವರು ಪ್ರತಿ ಭಿಕ್ಷುಕನಿಗೆ 1.5 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಇದರಲ್ಲಿ 50 ಸಾವಿರ ರೂಪಾಯಿಯನ್ನು ಮೂರು ತಿಂಗಳ ಕೌಶಲ ತರಬೇತಿಗಾಗಿ ನೀಡಿದ್ದರೆ, ಉಳಿದ ಹಣವನ್ನು ವ್ಯಕ್ತಿಯ ಬ್ಯುಸಿನೆಸ್‌ಗಾಗಿ ಮೂಲಸೌಕರ್ಯ ಅಭಿವೃದ್ಧಿ ಮಾಡಲು ಬಳಸಿಕೊಂಡಿದ್ದಾರೆ. ಬೆಗ್ಗರ್ಸ್ ಕಾರ್ಪೋರೇಷನ್ ಜೊತೆಗೆ ಸ್ಕೂಲ್ ಆಫ್ ಲೈಫ್ ಕೂಡ ಆರಂಭಿಸಿದ್ದಾರೆ. ಇದು ವಿಶೇಷವಾಗಿ ವಾರಣಾಸಿಯ ಘಾಟ್‌ಗಳಲ್ಲಿ ಶಿವ-ಹನುಮಂತನ ರೂಪದಲ್ಲಿ ಭಿಕ್ಷೆ ಬೇಡುವ ಮಕ್ಕಳನ್ನೇ ಗುರಿಯಾಗಿಸಿಕೊಂಡಿದೆ. ಗುರುಗ್ರಾಮ್‌ನಲ್ಲಿ ಚೈಓಂ ಎಂಬ ಟೀ ಕಂಪನಿಯನ್ನು ನಡೆಸುತ್ತಿರುವ ಪಾಯಲ್ ಅಗರ್ವಾಲ್ ಅವರೊಂದಿಗೆ ವ್ಯಾಪಾರ ಒಪ್ಪಂದವನ್ನೂ ಮಾಡಿಕೊಂಡಿದ್ದಾರೆ ಎಂದು ಮಿಶ್ರಾ ಹೇಳುತ್ತಾರೆ. 5 ಲಕ್ಷ ಹೂಡಿಕೆ ಮಾಡಿ ಭಿಕ್ಷುಕರು ಕೆಲಸ ಮಾಡುವ ಟೀ ಕೆಫೆಯನ್ನು ಪ್ರಾರಂಭಿಸುವುದು ಒಪ್ಪಂದವಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.