2000 ರೂ. ನೋಟು ಬದಲಾವಣೆಗೆ ಬ್ಯಾಂಕ್‌ಗಳಲ್ಲಿ ಐಡಿ ಕಾರ್ಡ್‌, ಗುರುತು ಚೀಟಿ ಕಡ್ಡಾಯ: ಕೆಲವೆಡೆ ನೋಟು ಬದಲಾವಣೆಗೆ ಅವಕಾಶವಿಲ್ಲ

Published : May 24, 2023, 02:32 PM IST
2000 ರೂ. ನೋಟು ಬದಲಾವಣೆಗೆ ಬ್ಯಾಂಕ್‌ಗಳಲ್ಲಿ ಐಡಿ ಕಾರ್ಡ್‌, ಗುರುತು ಚೀಟಿ ಕಡ್ಡಾಯ: ಕೆಲವೆಡೆ ನೋಟು ಬದಲಾವಣೆಗೆ ಅವಕಾಶವಿಲ್ಲ

ಸಾರಾಂಶ

ಈ ಹಿಂದೆ ಅಪನಗದೀಕರಣದ ವೇಳೆ ನೋಟು ಬದಲಾವಣೆಗೆ ಬ್ಯಾಂಕ್‌ಗಳಲ್ಲಿ ಕಂಡುಬಂದಿದ್ದ ಜನದಟ್ಟಣೆ ಮಂಗಳವಾರ ಕಂಡುಬರಲಿಲ್ಲ. ನೋಟು ಬದಲಾವಣೆ ಮತ್ತು ಜಮೆಗೆ ಇನ್ನೂ 4 ತಿಂಗಳು ಅಂದರೆ ಸೆಪ್ಟೆಂಬರ್‌ 30ರವರೆಗೂ ಸಮಯ ಇರುವ ಕಾರಣ ಗ್ರಾಹಕರು ನಿರಾಳರಾಗಿದ್ದಾರೆ.

ನವದೆಹಲಿ (ಮೇ 24, 2023): ಚಲಾವಣೆಯಿಂದ ಹಿಂದಕ್ಕೆ ಪಡೆಯಲಾದ 2000 ರೂ. ಮುಖಬೆಲೆಯ ನೋಟುಗಳ ಬದಲಾವಣೆ ಮತ್ತು ಜಮೆ ಪ್ರಕ್ರಿಯೆಗೆ ಮಂಗಳವಾರ ದೇಶಾದ್ಯಂತ ಚಾಲನೆ ಸಿಕ್ಕಿದ್ದು, ಮೊದಲ ದಿನ ಹಲವು ರಾಜ್ಯಗಳಲ್ಲಿ ಭಾರಿ ಗೊಂದಲ ಕಂಡುಬಂದಿದೆ. ಅದರಲ್ಲೂ ವಿಶೇಷವಾಗಿ ಖಾತೆ ಹೊಂದಿಲ್ಲದ ಗ್ರಾಹಕರಿಗೆ ನೋಟು ಬದಲಾವಣೆಗೆ ಮಾಹಿತಿ ಫಾರ್ಮ್‌ ಮತ್ತು ಗುರುತಿನ ಚೀಟಿ ಕಡ್ಡಾಯಗೊಳಿಸಿದ್ದ ಕಾರಣ ಗ್ರಾಹಕರು ಗೊಂದಲಕ್ಕೆ ಗುರಿಯಾದರು. ಇನ್ನು ಕೆಲವು ಬ್ಯಾಂಕ್‌ಗಳಲ್ಲಿ, ನೋಟು ಬದಲಾವಣೆ ಇಲ್ಲ, ಕೇವಲ ಹಣ ಜಮೆ ಮಾಡಿಕೊಳ್ಳಲಾಗುವುದು ಎಂದು ಸಿಬ್ಬಂದಿ ಹೇಳಿದ ಕಾರಣ ಗ್ರಾಹಕರು ಕಳವಳಗೊಂಡ ಘಟನೆಯೂ ನಡೆದಿದೆ.

ಆದರೆ ಈ ಹಿಂದೆ ಅಪನಗದೀಕರಣದ ವೇಳೆ ನೋಟು ಬದಲಾವಣೆಗೆ ಬ್ಯಾಂಕ್‌ಗಳಲ್ಲಿ ಕಂಡುಬಂದಿದ್ದ ಜನದಟ್ಟಣೆ ಮಂಗಳವಾರ ಕಂಡುಬರಲಿಲ್ಲ. ನೋಟು ಬದಲಾವಣೆ ಮತ್ತು ಜಮೆಗೆ ಇನ್ನೂ 4 ತಿಂಗಳು ಅಂದರೆ ಸೆಪ್ಟೆಂಬರ್‌ 30ರವರೆಗೂ ಸಮಯ ಇರುವ ಕಾರಣ ಗ್ರಾಹಕರು ನಿರಾಳರಾಗಿದ್ದು, ಆತಂಕದಿಂದ ಬ್ಯಾಂಕ್‌ಗೆ ದೌಡಾಯಿಸುವ ಧಾವಂತ ಬಹುತೇಕ ಎಲ್ಲೂ ಕಂಡುಬರಲಿಲ್ಲ.

ನಿಮ್ಮ ಬಳಿ 2000 ರೂ. ನೋಟಿದ್ರೆ ಭಯ ಬೇಡ: ಇಂದಿನಿಂದ 4 ತಿಂಗಳ ಕಾಲ ನೋಟ್‌ ಬದಲಾವಣೆಗೆ ಅವಕಾಶ

ಆದರೆ ಹಲವು ಬ್ಯಾಂಕ್‌ಗಳಲ್ಲಿ ಉದ್ದದ ಸರದಿ ಕಂಡುಬಂತು. ಜೊತೆಗೆ ವಯೋವೃದ್ಧರು ಹೆಚ್ಚು ಆತಂಕಿತರಾಗಿದ್ದು ಕಂಡುಬಂತು. ನೋಟು ಬದಲಾವಣೆ ವಿಷಯದಲ್ಲಿ ಆರ್‌ಬಿಐ ಅಥವಾ ಬ್ಯಾಂಕ್‌ಗಳು ಏಕರೂಪದ ನೀತಿ ಪಾಲನೆ ಮಾಡದೇ ಇರುವುದಕ್ಕೆ ಗ್ರಾಹಕರು ಹಿಡಿಶಾಪ ಹಾಕಿದ ಘಟನೆಗಳು ಹಲವೆಡೆ ಕಂಡುಬಂತು.

ಗುರುತು ಚೀಟಿ, ಫಾರ್ಮ್‌ ಗೊಂದಲ:
ಸರ್ಕಾರಿ ವಲಯದಲ್ಲಿ ಅತಿದೊಡ್ಡ ಬ್ಯಾಂಕ್‌ ಆದ ಎಸ್‌ಬಿಐ, ನೋಟು ಬದಲಾವಣೆಗೆ ಯಾವುದೇ ಫಾರ್ಮ್‌ ತುಂಬುವ ಅಥವಾ ಗುರುತಿನ ಚೀಟಿ ನೀಡಬೇಕಾದ ಅಗತ್ಯವಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿತ್ತು. ಇನ್ನು ಆ್ಯಕ್ಸಿಸ್‌, ಸ್ಟಾಂಡರ್ಡ್‌ ಚಾರ್ಟರ್ಡ್‌, ಯಸ್‌ ಬ್ಯಾಂಕ್‌, ಬ್ಯಾಂಕ್‌ ಆಫ್‌ ಇಂಡಿಯಾ ಕೂಡ ತಾವು ಯಾವುದೇ ಗುರುತಿನ ಚೀಟಿ ಕೇಳುತ್ತಿಲ್ಲ ಎಂದಿದ್ದರೆ, ಕೋಟಕ್‌ ಮಹೀಂದ್ರಾ ಬ್ಯಾಂಕ್‌ ತಾನು ಗ್ರಾಹಕರಿಂದ ಫಾರ್ಮ್‌ ತುಂಬಿಸಿಕೊಂಡು, ಗುರುತಿನ ಚೀಟಿ ಪಡೆದ ಬಳಿಕವೇ ನೋಟು ಬದಲಾವಣೆ ಮಾಡುತ್ತಿರುವುದಾಗಿ ಹೇಳಿದೆ.

ಇದನ್ನು ಓದಿ: 2000 ರೂ. ನೋಟು ಬದಲಾಯಿಸಿಕೊಳ್ಳೋಕೆ ಪೆಟ್ರೋಲ್‌ ಬಂಕ್‌ಗೆ ಮುಗಿಬಿದ್ದ ಜನ: ಚೇಂಜ್‌ ಇಲ್ಲ ಎಂದು ಹೇಳಿ ಸುಸ್ತಾದ ಸಿಬ್ಬಂದಿ

ಎಚ್‌ಎಸ್‌ಬಿಸಿ ಮತ್ತು ಫೆಡರಲ್‌ ಬ್ಯಾಂಕ್‌ಗಳು, ಖಾತೆ ಹೊಂದಿಲ್ಲದವರಿಂದ ಗುರುತಿನ ಚೀಟಿ ಪಡೆದುಕೊಳ್ಳುತ್ತಿವೆ. ಬ್ಯಾಂಕ್‌ ಆಫ್‌ ಬರೋಡಾ ಫಾರ್ಮ್‌ ತುಂಬಿಸಿಕೊಳ್ಳುತ್ತಿಲ್ಲ, ಆದರೆ ಖಾತೆ ಹೊಂದಿಲ್ಲದ ಗ್ರಾಹಕರಿಂದ ಗುರುತಿನ ಚೀಟಿ ಪಡೆಯುತ್ತಿರುವುದಾಗಿ ಹೇಳಿದೆ. ಇನ್ನು ಐಸಿಐಸಿಐ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳು ಎಲ್ಲಾ ಗ್ರಾಹಕರಿಂದ ಫಾರ್ಮ್‌ ಭರ್ತಿ ಮಾಡಿಸಿಕೊಳ್ಳುತ್ತಿವೆ, ಇನ್ನು ಖಾತೆ ಹೊಂದಿಲ್ಲದವರಿಂದ ಮಾತ್ರ ಗುರುತಿನ ಚೀಟಿ ಪಡೆಯುತ್ತಿರುವುದಾಗಿ ಹೇಳಿದೆ.

ಇಲ್ಲಿ ನೋಟು ಬದಲಾವಣೆ ಇಲ್ಲ:
ಈ ನಡುವೆ ದೆಹಲಿಯಲ್ಲಿ ಪಿಎನ್‌ಬಿ, ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ, ಬ್ಯಾಂಕ್‌ ಆಫ್‌ ಬರೋಡಾ ಮತ್ತು ಇಂಡಿಯನ್‌ ಬ್ಯಾಂಕ್‌ನ ಕೆಲವು ಶಾಖೆಗಳಲ್ಲಿ ನೋಟು ಬದಲಾವಣೆ ಮಾಡಿಕೊಡಲಿಲ್ಲ, ಬದಲಾಗಿ ಹಣವನ್ನು ಖಾತೆಯಲ್ಲಿ ಜಮೆ ಮಾಡುವಂತೆ ಸೂಚಿಸುತ್ತಿವೆ ಎಂದು ಹಲವು ಗ್ರಾಹಕರು ದೂರಿದ್ದಾರೆ. ಇನ್ನು ಬ್ಯಾಂಕ್‌ಗಳಲ್ಲಿ 50 ಸಾವಿರ ರೂ. ಗಿಂತ ಹೆಚ್ಚಿನ ಹಣ ಜಮೆಗೆ ಆಧಾರ್‌ ನೀಡುವುದು ಕಡ್ಡಾಯವಿರುವ ಕಾರಣ, ಬಹುತೇಕ ಎಲ್ಲಾ ಬ್ಯಾಂಕ್‌ಗಳಲ್ಲಿ ಅದೇ ನಿಯಮ ಪಾಲಿಸಲಾಗಿದೆ.

ಇದನ್ನೂ ಓದಿ: ಕಪ್ಪು ಹಣ ಹೊಂದಿದವ್ರಿಗೆ ರೆಡ್‌ ಕಾರ್ಪೆಟ್‌ ಹಾಸಲಾಗಿದೆ: 2 ಸಾವಿರ ರೂ. ನೋಟು ಹಿಂಪಡೆತಕ್ಕೆ ಚಿದಂಬರಂ ಟೀಕೆ

ಸ್ವೀಕಾರಕ್ಕೆ ನಕಾರ:
ದೆಹಲಿಯ ಹಲವು ಪೆಟ್ರೋಲ್‌ ಬಂಕ್‌ಗಳಲ್ಲಿ 2000 ರೂ .ಗಳ ನೋಟುಗಳನ್ನು ಸ್ವೀಕರಿಸಲು ನಿರಾಕರಿಸಲಾಗಿದೆ. ಜೊತೆಗೆ ಆರ್‌ಬಿಐ ಸೂಚನೆ ಹೊರತಾಗಿಯೂ ಹಲವು ಎಟಿಎಂಗಳಲ್ಲಿ 2000 ರೂ. ಮುಖಬೆಲೆಯ ನೋಟುಗಳು ವಿತರಣೆಯಾಗುತ್ತಿದ್ದವು ಎಂದು ಗ್ರಾಹಕರು ದೂರಿದ್ದಾರೆ.

ಕಳೆದ ಶುಕ್ರವಾರ ದಿಢೀರನೆ ಪ್ರಕಟಣೆಯೊಂದನ್ನು ಹೊರಡಿಸಿದ್ದ ಭಾರತೀಯ ರಿಸರ್ವ್‌ ಬ್ಯಾಂಕ್‌, ತಕ್ಷಣದಿಂದ ಜಾರಿಗೆ ಬರುವಂತೆ 2000 ರೂ. ಮುಖ ಬೆಲೆಯ ನೋಟುಗಳನ್ನು ಚಲಾವಣೆಯಿಂದಕ್ಕೆ ಪಡೆಯುತ್ತಿರುವುದಾಗಿ ಪ್ರಕಟಿಸಿತ್ತು. ಜೊತೆಗೆ ಬ್ಯಾಂಕ್‌ಗಳಿಗೆ 2000 ರೂ. ಮುಖ ಬೆಲೆಯ ನೋಟು ವಿತರಣೆ ಮಾಡಿದಂತೆ ಸೂಚಿಸಿತ್ತು. ಗ್ರಾಹಕರು ಮೇ 23ರಿಂದ ಸೆ.30ರವರೆಗೆ ಒಂದು ಬಾರಿಗೆ ಗರಿಷ್ಠ 10 ನೋಟುಗಳಂತೆ ನೋಟನ್ನು ಇತರೆ ಕರೆನ್ಸಿಗೆ ಬದಲಾಯಿಸಿಕೊಳ್ಳಬಹುದು ಎಂದಿತ್ತು. ಜೊತೆಗೆ ಅಗತ್ಯ ನಿಯಮಗಳನ್ನು ಪಾಲಿಗೆ ಬ್ಯಾಂಕ್‌ ಖಾತೆಯಲ್ಲಿ ಎಷ್ಟು ಬೇಕಾದರೂ ಹಣ ಜಮೆ ಮಾಡಬಹುದು ಎಂದು ಹೇಳಿತ್ತು.

ಇದನ್ನೂ ಓದಿ: 2 ಸಾವಿರ ರೂ. ನೋಟುಗಳನ್ನೇ ಕೊಟ್ಟು 5 ಲಕ್ಷಕ್ಕೂ ಹೆಚ್ಚು ಬೆಲೆಬಾಳೋ ಚಿನ್ನದ ಆಭರಣ ಖರೀದಿಸಿದ ಗ್ರಾಹಕ!

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!