
ನವದೆಹಲಿ (ಮಾ.15): ಹಾಂಗ್ ಕಾಂಗ್ ಹಾಗೂ ಸಿಂಗಾಪುರದಲ್ಲಿರೋರಿಗಿಂತ ಭಾರತದಲ್ಲಿನ ಹಣಕಾಸು (ಫೈನಾನ್ಸ್) ವೃತ್ತಿಪರರಿಗೆ ಈ ಬಾರಿ ಅಧಿಕ ವೇತನ ಹೆಚ್ಚಳದ ಭಾಗ್ಯ ಸಿಗಲಿದೆ ಎಂದು ಬ್ಲೂಮ್ ಬರ್ಗ್ ಇಂಟೆಲಿಜೆನ್ಸಿ ತಿಳಿಸಿದೆ. ಚೀನಾದ ಆರ್ಥಿಕತೆ ತಗ್ಗಿದ್ದರೆ ಇತ್ತ ಕಂಪನಿಗಳು ಉತ್ತಮ ನಿರ್ವಹಣೆ ತೋರುವ ಮೂಲಕ ದೇಶದ ಆರ್ಥಿಕ ಬೆಳವಣಿಗೆಗೆ ಕಾರಣವಾಗುತ್ತಿವೆ. 2024ರಲ್ಲಿ ಭಾರತದಲ್ಲಿನ ವೇತನ ಶೇ.10ರಷ್ಟು ಏರಿಕೆ ಕಾಣುವ ನಿರೀಕ್ಷೆಯಿದೆ ಎಂದು ಆಯಾನ್ ಕನ್ಸಲ್ಟಿಂಗ್ ಸಂಸ್ಥೆ ವಿಶ್ಲೇಷಕ ಸರ್ಹ ಜಾನೆ ಮಹಮ್ಮದ್ ತಿಳಿಸಿದ್ದಾರೆ. ಎಚ್ ಎಸ್ ಬಿಸಿ ಹೋಲ್ಡಿಂಗ್ ಪ್ಲಕ್ ಹಾಗೂ ಜೂಲಿಯಸ್ ಬೇರ್ ಗ್ರೂಪ್ ಲಿಮಿಟೆಡ್ ಕೂಡ ವಿಶ್ವಾದ್ಯಂತ ತಮ್ಮ ವ್ಯವಹಾರವನ್ನು ವಿಸ್ತರಿಸುತ್ತಿದೆ. ಇನ್ನೊಂದೆಡೆ ಮಿಟ್ಸುಬಿಶಿ ಯುಎಫ್ ಜೆ ಫೈನಾನ್ಷಿಯಲ್ ಗ್ರೂಪ್ ಇಂಕ್ ಕೂಡ ತಮ್ಮ ಉದ್ಯಮ ವಿಸ್ತರಿಸುತ್ತಿದೆ. ಹಾಗೆಯೇ ಡಿಬಿಎಸ್ ಗ್ಊಪ್ ಹೋಲ್ಡಿಂಗ್ ಲಿಮಿಟೆಡ್ ಕೂಡ ಪ್ರಗತಿಯ ಪಥದಲ್ಲಿದೆ. ಹೀಗಾಗಿ ಉದ್ಯೋಗಿಗಳಿಗೆ ಹೆಚ್ಚಿನ ವೇತನ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.
ಹೂಡಿಕೆದಾರರು ಸಿಂಗಾಪುರ ಹಾಗೂ ಹಾಂಕಾಂಗ್ ಗಿಂತ ಮುಂಬೈ ಹಾಗೂ ದೇಶದ ಉಚಿತ ಮಾರುಕಟ್ಟೆ ವಲಯ GIFT ಸಿಟಿಯಲ್ಲಿ ಹೆಚ್ಚಿನ ಗಳಿಕೆ ಮಾಡುತ್ತಿದ್ದಾರೆ. ಈ ವಲಯದ ಉದ್ಯೋಗಿಗಳ ಮೂಲ ವೇತನ ಹಾಂಗ್ ಕಾಂಗ್ ಕ್ಕಿಂತ ಶೇ.4.5ರಷ್ಟು ಹಾಗೂ ಸಿಂಗಾಪುರಕ್ಕಿಂತ ಶೇ.7.7ರಷ್ಟು ಹೆಚ್ಚಿದೆ ಎಂದು ಬ್ಲೂಮ್ ಬರ್ಗ್ ಇಂಟೆಲಿಜೆನ್ಸಿ ವಿಶ್ಲೇಷಣೆ ತಿಳಿಸಿದೆ. ಆದರೂ ಖಾಸಗಿ ಬ್ಯಾಂಕ್ ಗಳು ನಾನ್ ಎಕ್ಸಿಕ್ಯುಟಿವ್ ಹುದ್ದೆಗಳಿಗೆ ಪಾವತಿಸುತ್ತಿರುವ ವೇತನ ಶೇ.50-ಶೇ.70ರಷ್ಟು ಕಡಿಮೆಯಿದೆ ಎಂದು ವರದಿ ಹೇಳಿದೆ. ಆದರೆ, ಭಾರತದ ಹಣಕಾಸು ವಲಯ ಬೆಳೆದಂತೆ ಈ ಅಂತರ ತಗ್ಗಲಿದೆ ಎಂದು ಅದು ಅಭಿಪ್ರಾಯಪಟ್ಟಿದೆ.
4 ವರ್ಷ ಅನುಭವಕ್ಕೆ 45 ಲಕ್ಷ ರೂ. ಸಂಬಳ ಕೇಳಿದ ಉದ್ಯೋಗಿ; ಸಾಲ ಮಾಡಬೇಕಾಗುತ್ತೆ ಎಂದ ಎಚ್‌ಆರ್!
''ವೇತನಗಳು ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆಯಿದ್ದು, ಉನ್ನತ ಮಟ್ಟದಲ್ಲಿ ಬೇಡಿಕೆ-ಪೂರೈಕೆ ನಡುವಿನ ಅಂತರ ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ. ಭಾರತದಲ್ಲಿ ಅನುಸರಣೆ, ಅಪಾಯದ ಮೌಲ್ಯಮಾಪನ ಹಾಗೂ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕೌಶಲಗಳಿಗೆ ಬೇಡಿಕೆ ಹೆಚ್ಚುವ ನಿರೀಕ್ಷೆ ಕೂಡ ಇದೆ' ಎಂದು ಸ್ಟ್ಯಾನ್ಟನ್ ಚೇಸ್ ನಿರ್ವಹಣಾ ಪಾಲುದಾರರಾದ ಅಮಿತ್ ಅರ್ಗವಾಲ್ ತಿಳಿಸಿದ್ದಾರೆ. ಉದ್ಯಮಗಳ ಮುಖ್ಯಸ್ಥರಿಗೆ ಬ್ಯಾಂಕ್ ಗಳು ಹೆಚ್ಚಿ ವೇತನ ನೀಡುತ್ತಿವೆ. ಇವರ ವೇತನಗಳು ಹಿರಿಯ ನಾಯಕರಿಗೆ 1 ಮಿಲಿಯನ್ ಡಾಲರ್ ಗಿಂತ ಹೆಚ್ಚಿದೆ ಎಂದು ಅವರು ತಿಳಿಸಿದ್ದಾರೆ.
ಭಾರತದಲ್ಲಿ ಆದಾಯ ತೆರಿಗೆ ದರಗಳು ಹೆಚ್ಚಿದ್ದು, ಸಿಂಗಾಪುರ ಹಾಗೂ ಹಾಂಗ್ ಕಾಂಗ್ ಗೆ ಹೋಲಿಸಿದರೆ ಮೂಲಸೌಕರ್ಯ ಉತ್ತವಾಗಿಲ್ಲ. ಆದರೂ ಭಾರತದಲ್ಲಿ ಜೀವನ ನಿರ್ವಹಣೆ ವೆಚ್ಚ ತಗ್ಗಿರೋದು ಲಾಭದಾಯಕ ಎಂದು ವರದಿ ತಿಳಿಸಿದೆ. ಮುಂಬೈ ಬಾಂದ್ರಾ ವಲಯದಲ್ಲಿ ತಿಂಗಳ ಅಂದಾಜು ಬಾಡಿಗೆ ಚದರ ಅಡಿಗೆ 1.76 ಡಾಲರ್ ಇದೆ. ಹಾಂಗ್ ಕಾಂಗ್ ನಲ್ಲಿ 5.29 ಡಾಲರ್ ಹಾಗೂ ಸಿಂಗಾಪುರದಲ್ಲಿ 5.09 ಡಾಲರ್ ಇದೆ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ.
ಬ್ಯಾಂಕ್ ಉದ್ಯೋಗಿಗಳ ವೇತನ ಹೆಚ್ಚಳ
ಭಾರತೀಯ ಬ್ಯಾಂಕ್‌ಗಳ ಸಂಘ ಮತ್ತು ಬ್ಯಾಂಕ್ ಉದ್ಯೋಗಿಗಳ ಒಕ್ಕೂಟಗಳು ಇತ್ತೀಚೆಗಷ್ಟೇ ಶೇ.17ರಷ್ಟು ವಾರ್ಷಿಕ ವೇತನ ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸಿವೆ. ಈ ಕ್ರಮದಿಂದ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ವಾರ್ಷಿಕವಾಗಿ ಸುಮಾರು 8,284 ಕೋಟಿ ರೂಪಾಯಿಯನ್ನು ಹೆಚ್ಚುವರಿಯಾಗಿ ನೀಡಬೇಕಿರುತ್ತದೆ. 8 ಲಕ್ಷ ಬ್ಯಾಂಕ್ ಉದ್ಯೋಗಿಗಳು ವೇತನ ಹೆಚ್ಚಳದಿಂದ ಪ್ರಯೋಜನ ಪಡೆಯಲಿದ್ದಾರೆ, ಇದು ನವೆಂಬರ್ 2022 ರಿಂದ ಅನ್ಚಯವಾಗುವಂತೆ ಜಾರಿಗೆ ಬರಲಿದೆ. ಇನ್ನು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟವು ತಿಂಗಳ ಎಲ್ಲಾ ಶನಿವಾರ ರಜೆಯಾಗಿ ಘೋಷಿಸಲು ಒಪ್ಪಿಗೆ ನೀಡಿದ್ದು, ಆದರೆ, ಇದಕ್ಕೆ ಸರ್ಕಾರದ ಒಪ್ಪಿಗೆ ಹಾಗೂ ಅಧಿಸೂಚನೆಯ ಅಗತ್ಯವಿದೆ ಎಂದು ತಿಳಿಸಿದೆ. ಪರಿಷ್ಕೃತ ಕೆಲಸದ ಸಮಯವು ಸರ್ಕಾರದ ಅಧಿಸೂಚನೆಯ ನಂತರ ಜಾರಿಗೆ ಬರಲಿದೆ ಎಂದು ತಿಳಿಸಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.