ನ.19ರಂದು ಬ್ಯಾಂಕ್ ನೌಕರರ ಮುಷ್ಕರ; ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ ಸಾಧ್ಯತೆ!

By Suvarna NewsFirst Published Nov 9, 2022, 11:59 AM IST
Highlights

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ ನವೆಂಬರ್ 19ರಂದು ಮುಷ್ಕರಕ್ಕೆ ಕರೆ ನೀಡಿದೆ. ಹೀಗಾಗಿ ಅಂದು ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. 

ನವದೆಹಲಿ (ನ.9):  ಮುಂದಿನ ವಾರ ದೇಶಾದ್ಯಂತ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ.  ಏಕೆಂದ್ರೆ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘದ  (ಎಐಬಿಇಎ) ಸದಸ್ಯರು ನವೆಂಬರ್ 19ರಂದು ಮುಷ್ಕರಕ್ಕೆ ಕರೆ ನೀಡಿದ್ದಾರೆ. 'ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘದ  (ಎಐಬಿಇಎ)  ಪ್ರಧಾನ ಕಾರ್ಯದರ್ಶಿ ಭಾರತೀಯ ಬ್ಯಾಂಕುಗಳಿಗೆ ಮುಷ್ಕರ ನಡೆಸುವ ಸಂಬಂಧ ನೋಟಿಸ್ ನೀಡಿದ್ದಾರೆ. ಸದಸ್ಯರು ತಮ್ಮ ಬೇಡಿಕೆಗಳಿಗೆ ಬೆಂಬಲವಾಗಿ ನವೆಂಬರ್ 19ರಂದು ಮುಷ್ಕರ ನಡೆಸಲು ಮುಂದಾಗಿದ್ದಾರೆ ಎಂದು ಸಂಘಟನೆ ಮಾಹಿತಿ ನೀಡಿದೆ' ಎಂದು  ಸೋಮವಾರ (ನ.7) ಷೇರು ಮಾರುಕಟ್ಟೆಗೆ ಸಲ್ಲಿಸಿದ ದಾಖಲೆಯಲ್ಲಿ  ಬ್ಯಾಂಕ್ ಆಫ್ ಬರೋಡಾ ತಿಳಿಸಿದೆ. ಬ್ಯಾಂಕ್ ಗಳ ಶಾಖೆಗಳು ಹಾಗೂ ಕಚೇರಿಗಳಲ್ಲಿನ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ಬ್ಯಾಂಕ್ ಅಗತ್ಯ ಕ್ರಮ ಕೈಗೊಳ್ಳುತ್ತಿದೆಯಾದರೂ, ಸಿಬ್ಬಂದಿ ಮುಷ್ಕರ ನಡೆಸೋದ್ರಿಂದ ಬ್ಯಾಂಕ್ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಹೀಗಾಗಿ ಬ್ಯಾಂಕ್ ಶಾಖೆಗಳು ಹಾಗೂ ಕಚೇರಿಗಳ ಕಾರ್ಯನಿರ್ವಹಣೆಗೆ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ ಎಂದು ಬ್ಯಾಂಕ್ ಮುನ್ನೆಚ್ಚರಿಕೆ ನೀಡಿದೆ.

ನವೆಂಬರ್ 19 ಮೂರನೇ ಶನಿವಾರವಾಗಿರುವ ಕಾರಣ ಆ ದಿನ ಬ್ಯಾಂಕುಗಳಿಗೆ ರಜೆಯಿರೋದಿಲ್ಲ. ಎರಡನೇ ಮತ್ತು ನಾಲ್ಕನೇ ಶನಿವಾರ ಮಾತ್ರ ಬ್ಯಾಂಕುಗಳಿಗೆ ರಜೆಯಿರುತ್ತದೆ. ಒಂದು ಮತ್ತು ಮೂರನೇ ಶನಿವಾರ ಬ್ಯಾಂಕು ಎಂದಿನಂತೆ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಕೆಲವರು ಶನಿವಾರ ತಮಗೆ ರಜೆಯಿದೆ ಎಂಬ ಕಾರಣಕ್ಕೆ ನ.1ರಂದು ಬ್ಯಾಂಕಿಗೆ ಹೋಗುವ ಕೆಲಸವಿಟ್ಟುಕೊಂಡಿದ್ರೆ ಮುಂದೂಡೋದು ಒಳಿತು. ಇಲ್ಲವೇ ನ.18ರೊಳಗೆ  ಪೂರ್ಣಗೊಳಿಸುವುದು ಉತ್ತಮ. 

ಬಿಬಿಎ ಡ್ರಾಪ್ ಔಟ್ ಆದ್ರೂ ಚಹಾ ಮಾರಿ ಕೋಟ್ಯಧಿಪತಿಯಾದ ಭಾರತೀಯ ವಿದ್ಯಾರ್ಥಿ!

ಎಟಿಎಂ ಸೇವೆಯಲ್ಲೂ ವ್ಯತ್ಯಯ ಸಾಧ್ಯತೆ
ಇನ್ನು ನಿರಂತರ ಎರಡು ದಿನ ಬ್ಯಾಂಕಿಗೆ (Bank) ರಜೆಯಿರುವ (Holiday) ಕಾರಣ ಈ ಅವಧಿಯಲ್ಲಿ ಬ್ಯಾಂಕುಗಳ ಎಟಿಎಂನಲ್ಲಿ (ATM) ಹಣದ ಕೊರತೆ ಉಂಟಾಗುವ ಸಾಧ್ಯತೆಯೂ ಇದೆ. ಇದ್ರಿಂದ ಎಟಿಎಂ ಬಳಕೆದಾರರು ನಗದು (Cash) ಸಿಗದೆ ತೊಂದರೆ ಅನುಭವಿಸಬೇಕಾದ ಸಾಧ್ಯತೆಯೂ ಇದೆ. 

ಈ ವಾರ ಮೂರು ದಿನ ಬ್ಯಾಂಕ್ ರಜೆ
ನವೆಂಬರ್ 11,12 ಹಾಗೂ 13ರಂದು ಬ್ಯಾಂಕಿಗೆ ರಜೆಯಿರುತ್ತದೆ. ನ.11ರಂದು ಕನಕದಾಸ ಜಯಂತಿ ಪ್ರಯುಕ್ತ ಬ್ಯಾಂಕಿಗೆ ರಜೆ. ಇನ್ನು ನ.12ರಂದು ಎರಡನೇ ಶನಿವಾರ ಹಾಗೂ ನ.13 ಭಾನುವಾರವಾದ ಕಾರಣ ಬ್ಯಾಂಕುಗಳು ಕಾರ್ಯನಿರ್ವಹಿಸೋದಿಲ್ಲ. ಹೀಗಾಗಿ ಈ ವಾರಾಂತ್ಯದಲ್ಲಿ ಬ್ಯಾಂಕಿಗೆ ಹೋಗುವ ಕೆಲಸವೇನಾದ್ರೂ ಇದ್ರೆ ಮುಂದೂಡಿ. ಹಾಗೆಯೇ ತುರ್ತಾಗಿ ಏನಾದ್ರೂ ಬ್ಯಾಂಕ್ ಕೆಲಸ ಪೂರ್ಣಗೊಳಿಸೋದಿದ್ರೆ ಶುಕ್ರವಾರಕ್ಕಿಂತ ಮೊದಲೇ ಮಾಡಿ ಮುಗಿಸಿ.

ಚುನಾವಣಾ ಬಾಂಡ್ ಗಳೇ ರಾಜಕೀಯ ಪಕ್ಷಗಳ ತಿಜೋರಿ; 2018ರಿಂದ ಇಲ್ಲಿಯ ತನಕ 10,791ಕೋಟಿ ರೂ. ಸಂಗ್ರಹ

ಇತರ ತಿಂಗಳುಗಳಿಗೆ ಹೋಲಿಸಿದ್ರೆ ನವೆಂಬರ್ ನಲ್ಲಿ ಬ್ಯಾಂಕ್ ರಜೆಗಳು ಕಡಿಮೇನೆ. ವಾರದ ರಜೆಗಳನ್ನು ಹೊರತುಪಡಿಸಿದ್ರೆ ಕೇವಲ ನಾಲ್ಕು ದಿನಗಳು ಮಾತ್ರ ಬ್ಯಾಂಕಿಗೆ ರಜೆಯಿದೆ. ಅಂದರೆ ವಾರದ ರಜೆಗಳನ್ನು ಸೇರಿಸಿದ್ರೆ ಮಾತ್ರ ಒಟ್ಟು 10 ದಿನಗಳ ಕಾಲ ಬ್ಯಾಂಕುಗಳು ಕಾರ್ಯನಿರ್ವಹಿಸೋದಿಲ್ಲ.ಬ್ಯಾಂಕುಗಳಿಗೆ ರಜೆಯಿರುವ ದಿನ ಆನ್ ಲೈನ್ ವಹಿವಾಟಿಗೆ (Online transaction) ಹಾಗೂ ಎಟಿಎಂ (ATM) ವ್ಯವಹಾರಗಳಿಗೆ ಸಾಮಾನ್ಯವಾಗಿ ಯಾವುದೇ ತೊಂದರೆಯಾಗೋದಿಲ್ಲ. ಆದರೆ, ಬ್ಯಾಂಕಿಗೆ (Bank) ಹೋಗಿಯೇ ಮಾಡಬೇಕಾದ ಯಾವುದಾದ್ರೂ ಕೆಲಸವಿದ್ರೆ ಮಾತ್ರ ಮುಂದೂಡುವುದು ಉತ್ತಮ. ಬ್ಯಾಂಕ್ ಗಳ ರಜೆಗೆ ಸಂಬಂಧಿಸಿ ಆರ್ ಬಿಐ (RBI) ಪ್ರತಿ ತಿಂಗಳ ಪ್ರಾರಂಭದಲ್ಲಿ ರಜಾಪಟ್ಟಿ ಬಿಡುಗಡೆ ಮಾಡುತ್ತದೆ. ಆದರೆ, ಆರ್ ಬಿಐ ರಜಾಪಟ್ಟಿಯಲ್ಲಿರುವ ಎಲ್ಲ ರಜೆಗಳು ಎಲ್ಲ ರಾಜ್ಯಗಳಿಗೂ ಅನ್ವಯಿಸೋದಿಲ್ಲ. ಆಯಾ ಪ್ರಾದೇಶಿಕ ಆಚರಣೆ ಹಾಗೂ ಹಬ್ಬಗಳಿಗೆ ಅನುಗುಣವಾಗಿ ರಜೆಗಳನ್ನು ನೀಡಲಾಗುತ್ತದೆ.
 

click me!