
ಬೆಂಗಳೂರು(ಸೆ.19): ಜಾಗತಿಕ ಮಟ್ಟದ 50 ದೊಡ್ಡ ಬ್ಯಾಂಕ್‌ಗಳ ಪಟ್ಟಿಯಲ್ಲಿ ಭಾರತದ ಒಂದೇ ಒಂದೂ ಬ್ಯಾಂಕ್ ಇಲ್ಲ. ದೇಶದ ಅತಿ ದೊಡ್ಡ ಬ್ಯಾಂಕ್ ಎನಿಸಿಕೊಂಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಕೂಡಾ, ಜಗತ್ತಿನ 100 ದೊಡ್ಡ ಬ್ಯಾಂಕುಗಳಲ್ಲಿ 62ನೇ ಸ್ಥಾನದಲ್ಲಿ ಇದೆ. (ಸಹವರ್ತಿ ಬ್ಯಾಂಕ್‌ಗಳ ವಿಲೀನದ ನಂತರ ಇದು ೪೫ಕ್ಕೆ ಏರಿದೆ).
ವಿದೇಶಿ ಬ್ಯಾಂಕುಗಳಿಗೆ ಹೋಲಿಸಿದರೆ ನಮ್ಮ ಬ್ಯಾಂಕುಗಳ ಷೇರು ಬಂಡವಾಳ ತೀರಾ ಕಡಿಮೆ. ಅಂತೆಯೇ, ವಿದೇಶಿ ಬ್ಯಾಂಕುಗಳು ನಮ್ಮ ಬ್ಯಾಂಕ್‌ಗಳೊಂದಿಗೆ ದೊಡ್ಡ ಮೊತ್ತದ ವ್ಯವಹಾರ ಮಾಡಲು ಹಿಂದೇಟು ಹಾಕುತ್ತವೆ. ಸಾರ್ವಜನಿಕ ಬ್ಯಾಂಕಿಂಗ್ ವಲಯದಲ್ಲಿ ಒಂದು ಪ್ರದೇಶದಲ್ಲಿ ಹಲವು ಬ್ಯಾಂಕುಗಳಿದ್ದು, ತಮ್ಮೊಳಗೇ ಪೈಪೋಟಿಗಿಳಿದು, ಯಾವೊಂದು ಬ್ಯಾಂಕೂ ಸದೃಢವಾಗಿ ಬೆಳೆಯದ ಸ್ಥಿತಿ ಸದ್ಯಕ್ಕಿದೆ.
ಹಾಗಾಗಿ ಈಗಾಗಲೇ ಹಲವು ಸಾರ್ವಜನಿಕ ವಲಯದ ಬ್ಯಾಂಕುಗಳು ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿ ರೋಗಗ್ರಸ್ತವಾಗಿವೆ. ಇದೇ ವೇಳೆ ಅನೇಕ ಬ್ಯಾಂಕ್‌ಗಳು ‘ಅನುತ್ಪಾದಕ ಆಸ್ತಿ’ (ಎನ್‌ಪಿಎ) ಹೆಚ್ಚಿದ್ದರಿಂದ ದುರ್ಬಲಗೊಳ್ಳುತ್ತಿವೆ. ಇದು ದೀರ್ಘಾವಧಿಯಲ್ಲಿ ಇನ್ನಷ್ಟು ಅಪಾಯ ತಂದೊಡ್ಡಲಿದೆ.
ಹಾಗಾಗಿ ಹಣಕಾಸು ಮಾರುಕಟ್ಟೆಯಲ್ಲಿ ದುರ್ಬಲ ಬ್ಯಾಂಕುಗಳನ್ನು, ಬಲಿಷ್ಠ ಬ್ಯಾಂಕುಗಳೊಂದಿಗೆ ವಿಲೀನ ಮಾಡುವ ಮೂಲಕ ಬ್ಯಾಂಕಿಂಗ್ ವಲಯವನ್ನು ಸದೃಢಗೊಳಿಸುವುದು, ಅಡಮಾನ ಸಾಲ ಪ್ರಕ್ರಿಯೆಯಲ್ಲಿನ ಲೋಪಗಳನ್ನು ಸರಿಪಡಿಸುವುದು, ಅನುತ್ಪಾದಕ ಆಸ್ತಿ ಮತ್ತು ವಸೂಲಿಯಾಗದ ಸಾಲದ ಹೊರೆಯನ್ನು ಕಡಿಮೆ ಮಾಡಲು, ಬ್ಯಾಂಕುಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಲು, ಅವುಗಳ
ನಿರ್ವಹಣಾ ವೆಚ್ಚವನ್ನು ತಗ್ಗಿಸಲು ಹಾಗೂ ಬ್ಯಾಂಕುಗಳ ಷೇರು ಬಂಡವಾಳವನ್ನು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಬ್ಯಾಂಕ್ ವಿಲೀನ ಪ್ರಕ್ರಿಯೆಗೆ ಮಹತ್ವ ನೀಡುತ್ತಿದೆ.
ಏಕೀಕರಣದಿಂದ ಗ್ರಾಹಕರಿಗೆ ನಷ್ಟವೋ, ಲಾಭವೋ?:
ಷೇರುಗಳು, ವಿಮಾ ಯೋಜನೆಗಳು ಸೇರಿದಂತೆ ವಿವಿಧ ಗ್ರಾಹಕ ಉತ್ಪನ್ನಗಳು, ಸಾಲ, ಠೇವಣಿ ಮುಂತಾದ ಬ್ಯಾಂಕಿಂಗ್ ಮತ್ತು ಬ್ಯಾಂಕೇತರ ವ್ಯವಹಾರಗಳಲ್ಲಿ ಗ್ರಾಹಕರಿಗೆ ಅನನುಕೂಲ ವಾಗುಂತಹ ಯಾವುದೇ ಬದಲಾವಣೆ ಆಗುವುದಿಲ್ಲ. ಆದರೆ, ಈ ವಿಲೀನ ಪ್ರಕ್ರಿಯೆಯಿಂದಾಗಿ ಕೆಲವು ವಾರಗಳ ಕಾಲ ಗ್ರಾಹಕರ ಸಾಲ ಮಂಜೂರಾತಿಯಂತಹ ಆಡಳಿತಾತ್ಮಕ ಪ್ರಕ್ರಿಯೆಗಳು ವಿಳಂಬವಾಗಲಿವೆ.
ಅಲ್ಲದೆ, ಒಂದೇ ಬೀದಿ, ರಸ್ತೆ, ಕಟ್ಟಡ ಸಂಕೀರ್ಣಗಳಲ್ಲಿ ವಿಲೀನವಾಗುವ ಬ್ಯಾಂಕ್ ಕಚೇರಿಗಳೂ ಇದ್ದು, ಇತರ ಸಹವರ್ತಿ ಬ್ಯಾಂಕುಗಳ ಕಚೇರಿಗಳೂ ಇದ್ದರೆ, ಅಂತಹ ಕಡೆ ಕೆಲವು ಶಾಖೆಗಳನ್ನು, ಕಚೇರಿಗಳನ್ನು ಮುಚ್ಚುವುದರಿಂದ ಗ್ರಾಹಕರಿಗೆ ಕೆಲಮಟ್ಟಿಗೆ ಅನಾನುಕೂಲವಾಗಲಿದೆ. ಆದರೆ, ಅದಕ್ಕಾಗಿ ಗ್ರಾಹಕರು ಅಲೆದಾಡಬೇಕಾದ ಪ್ರಮೇಯವಿರುವುದಿಲ್ಲ. ತಾನೇತಾನಾಗಿ ಅವರ ಖಾತೆಗಳು ಸಮೀಪದ ಮತ್ತೊಂದು ಶಾಖೆಯಲ್ಲಿ ವಿಲೀನವಾಗುತ್ತವೆ. ಹಾಗಾಗಿ ಒಂದರ್ಥದಲ್ಲಿ ಬ್ಯಾಂಕುಗಳ ವಿಲೀನ ಪ್ರಕ್ರಿಯೆಯಿಂದಗ್ರಾಹಕರಿಗೆ ನಷ್ಟವೂ ಇಲ್ಲ, ಲಾಭವೂ ಇಲ್ಲ ಎನ್ನಬಹುದು.
ಎಸ್‌ಬಿಐ ವಿಲೀನದಿಂದ ಬದಲಾಗಿದ್ದು ಏನು?:
ವಿಶ್ವದ ಟಾಪ್ 50 ಬ್ಯಾಂಕ್‌ಗಳ ಪಟ್ಟಿಯಲ್ಲಿ ಭಾರತದ ಯಾವೊಂದು ಬ್ಯಾಂಕ್ ಸ್ಥಾನ ಪಡೆದಿಲ್ಲ. ಈ ಪಟ್ಟಿಯಲ್ಲಿ ಸ್ಥಾನ ಪಡೆಯಲು ಎಸ್‌ಬಿಐ ಮುಂದಾಗುತ್ತಿದೆ ಹಾಗೂ ಸಾರ್ವಜನಿಕ ವಲಯದ ಬ್ಯಾಂಕುಗಳ ನಡುವಿನ ಅನಾರೋಗ್ಯಕರ ಸ್ಪರ್ಧೆಯನ್ನು ಕಡಿಮೆ ಮಾಡಲು ಬ್ಯಾಂಕಿಂಗ್ ವ್ಯವಸ್ಥೆಯ ಬಿಕ್ಕಟ್ಟು ನಿವಾರಣೆಗೆ ಕೇಂದ್ರದ ಒಪ್ಪಿಗೆಯ ಮೇರೆಗೆ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ನಡೆದಿದೆ.
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು(ಎಸ್‌ಬಿಎಂ), ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಹಾಗೂ ಜೈಪುರ (ಎಸ್‌ಬಿಜೆ), ಸ್ಟೇಟ್ ಬ್ಯಾಂಕ್ ಆಫ್ ತಿರುವಾಂಕೂರ್ (ಎಸ್‌ಬಿಟಿ), ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲಾ (ಎಸ್‌ಬಿಪಿ), ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ (ಎಸ್‌ಬಿಎಚ್)ಹಾಗೂ ಭಾರತೀಯ ಮಹಿಳಾ ಬ್ಯಾಂಕ್ (ಬಿಬಿಎಂ)ಗಳು ಎಸ್‌ಬಿಐ ಜೊತೆ 2017 ಏಪ್ರಿಲ್ 1ರಂದು ವಿಲೀನವಾಗಿವೆ.
ಸದ್ಯ ಎಸ್‌ಬಿಐ 23,899 ಶಾಖೆಗಳು ಮತ್ತು 2,71,765 ಉದ್ಯೋಗಿಗಳನ್ನು ಒಳಗೊಂಡಿದೆ. 26 ಲಕ್ಷ ಕೋಟಿಗೂ ಅಧಿಕ ಠೇವಣಿ ಹೊಂದಿದೆ. ವಿಶ್ವದ ಅಗ್ರಗಣ್ಯ ಬ್ಯಾಂಕ್‌ಗಳ ಪಟ್ಟಿಯಲ್ಲಿ 45ನೇ ಸ್ಥಾನ ಪಡೆದಿದೆ. 2015ರ ವೇಳೆಗೆ ಅದು 62ನೇ ಸ್ಥಾನದಲ್ಲಿತ್ತು. 37 ಕೋಟಿ ಗ್ರಾಹಕರು ಹಾಗೂ 59, 000 ಎಟಿಎಂಗಳನ್ನು ಹೊಂದಿದೆ.
ಸರ್ಕಾರದ ಉದ್ದೇಶದಂತೆ ಅತಿದೊಡ್ಡ ಬ್ಯಾಂಕ್ ಸೃಷ್ಟಿಯಾಗಿದೆ ನಿಜ. ಆದರೆ ಎಸ್‌ಬಿಐ ಶಾಖೆಗಳಲ್ಲಿ ಜನರು ಕಾಲಿಡಲು ಸಾಧ್ಯವಾಗದಷ್ಟು ನೂಕುನುಗ್ಗಲಿದೆ. ಗ್ರಾಹಕರಿಗೆ ಸಮಸ್ಯೆ ಯಾಗುತ್ತಿದೆ. ಅದನ್ನು ಪರಿಹರಿಸಿಕೊಂಡು ವಿಲೀನ ಪ್ರಕ್ರಿಯೆ ಕೈಗೆತ್ತಿಕೊಳ್ಳುವುದು ಸೂಕ್ತ ಎಂಬುದು ಜನರ ಅಭಿಪ್ರಾಯವಾಗಿದೆ. ಬ್ಯಾಂಕ್ ನೌಕರರ ಉದ್ಯೋಗ ಭದ್ರತೆಗೆ ತೊಂದರೆ ಇಲ್ಲ ಎಂದು ಸರ್ಕಾರ ಹೇಳಿದ್ದರೂ, ಪರ್ಯಾಯ ಸ್ಥಳಕ್ಕೆ ನಿಯೋಜನೆ ಮಾಡುವುದರಿಂದ ಹಲವು ಉದ್ಯೋಗಿಗಳಿಗೆ ತೊಡಕಾಗಿತ್ತು.
ವಿಲೀನದಿಂದ ಆಗುವ ಅನುಕೂಲ ಏನು?:
ಹೆಚ್ಚು ಬಂಡವಾಳ ಹೂಡಿಕೆಯಾಗುವುದರಿಂದ ಹೆಚ್ಚು ಸಾಲ ವಿತರಣೆಗೆ ಸಹಾಯವಾಗುತ್ತದೆ. ಸಾರ್ವಜನಿಕ ವಲಯದ ಬ್ಯಾಂಕುಗಳ ಸೇವೆ ಮತ್ತಷ್ಟು ತ್ವರಿತವಾಗಲಿದೆ. ಸರ್ಕಾರದ ಮರು ಬಂಡವಾಳ ಪೂರೈಕೆಯ ಅಗತ್ಯತೆ ತಗ್ಗುತ್ತದೆ. ತಾಂತ್ರಿಕವಾಗಿಯೂ ಸುಧಾರಣೆ ಸಾಧ್ಯವಾಗುತ್ತದೆ. ಗ್ರಾಹಕರಿಗೆ ಬ್ಯಾಂಕ್ ಸವಲತ್ತುಗಳು ಸುಲಭವಾಗಿ ಸಿಗಲಿವೆ. ಬ್ಯಾಂಕುಗಳು ಮತ್ತು ಬ್ಯಾಂಕುಗಳ ನಡುವಿನ ವ್ಯವಹಾರ ಕಡಿಮೆಯಾಗಿ ಶೀಘ್ರ ಸೇವೆ ಲಭ್ಯವಾಗುತ್ತದೆ.
ವಿಲೀನದಿಂದ ಆಗುವ ಅನನುಕೂಲಗಳು ಏನು?:
ಸಣ್ಣ ಬ್ಯಾಂಕುಗಳು ತಮ್ಮ ಸ್ಥಳೀಯ ಲಕ್ಷಣಗಳನ್ನು ಕಳೆದುಕೊಳ್ಳುತ್ತವೆ. ಆರ್ಥಿಕ ಬಿಕ್ಕಟ್ಟು ಸಂಭವಿಸಬಹುದು. ಉದ್ಯೋಗಿಗಳಗೆ ಅಭದ್ರತೆ ಕಾಡಲಿದೆ. ಉದ್ಯೋಗ ಬಡ್ತಿಯಲ್ಲಿ, ಜ್ಯೇಷ್ಠತೆ ನಿಟ್ಟಿನಲ್ಲಿ ಸಮಸ್ಯೆಗಳು ಎದುರಾಗಬಹುದು. ಸಾರ್ವಜನಿಕ ವಲಯದ ಬ್ಯಾಂಕುಗಳ ಸಶಕ್ತತೆಯನ್ನು ಕುಗ್ಗಿಸಿ, ಖಾಸಗಿ ಬ್ಯಾಂಕು ಗಳ ಬೆಳವಣಿಗೆಗೆ ಉತ್ತೇಜನ ನೀಡುತ್ತದೆ. ವಿಲೀನವಾದ ಬ್ಯಾಂಕ್‌ಗಳ ಸಿಬ್ಬಂದಿಯನ್ನು 2ನೇ ದರ್ಜೆಯವರನ್ನಾಗಿ ನಡೆಸಿಕೊಳ್ಳುವ ಭಯ ಕೂಡ ಇದೆ. ಬ್ಯಾಂಕುಗಳಲ್ಲಿ ಉದ್ಯೋಗ ನೀಡಿಕೆಯ ಅವಕಾಶವೇ ಕಡಿಮೆಯಾಗಬಹುದು.
21 ಸರ್ಕಾರಿ ಬ್ಯಾಂಕು, 6ಕ್ಕಿಳಿಸಲು ಚಿಂತನೆ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈಗಾಗಲೇ ತನ್ನ ಸಹವರ್ತಿ ಬ್ಯಾಂಕು ಗಳೊಂದಿಗೆ ವಿಲೀನವಾಗಿದೆ. ಸದ್ಯ ಬ್ಯಾಂಕ್ ಆಫ್ ಬರೋಡಾ, ವಿಜಯಾ ಬ್ಯಾಂಕ್ ಹಾಗೂ ದೇನಾ ಬ್ಯಾಂಕ್‌ಗಳ ವಿಲೀನಕ್ಕೆ ಸರ್ಕಾರ ಹಸಿರು ನಿಶಾನೆ ತೋರಿದೆ. ಇದಿಷ್ಟೇ ಅಲ್ಲದೆ 21 ಸಾರ್ವಜನಿಕ ವಲಯದ ಬ್ಯಾಂಕುಗಳನ್ನು 6 ಪ್ರಮುಖ ಬ್ಯಾಂಕ್‌ಗಳೊಂದಿಗೆ ವಿಲೀನಗೊಳಿಸಲು ಕೇಂದ್ರ ಸರ್ಕಾರ ಚಿಂತಿಸುತ್ತಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ:
1. ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್
2. ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲಾ
3. ಸ್ಟೇಟ್ ಬ್ಯಾಂಕ್ ಆಫ್ ತಿರುವಾಂಕೂರು
4. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು
5. ಸ್ಟೇಟ್ ಬ್ಯಾಂಕ್ ಆಫ್ ಬಿಕನೇರ್ - ಜೈಪುರ
ಪಂಜಾಬ್ ನ್ಯಾಷನಲ್ ಬ್ಯಾಂಕ್:
1. ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್
2. ಅಲಹಾಬಾದ್ ಬ್ಯಾಂಕ್
3. ಕಾರ್ಪೋರೇಷನ್ ಬ್ಯಾಂಕ್
4. ಇಂಡಿಯನ್ ಬ್ಯಾಂಕ್
ಕೆನರಾ ಬ್ಯಾಂಕ್:
1. ಸಿಂಡಿಕೇಟ್ ಬ್ಯಾಂಕ್
2. ಇಂಡಿಯನ್ ಓವರ್‌ಸೀಸ್ ಬ್ಯಾಂಕ್
3. ಯುಕೋ ಬ್ಯಾಂಕ್
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ:
1. ಐಡಿಬಿಐ ಬ್ಯಾಂಕ್
2. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
3. ಬ್ಯಾಂಕ್ ಆಫ್ ಇಂಡಿಯಾ
4. ಆಂಧ್ರ ಬ್ಯಾಂಕ್
5. ಬ್ಯಾಂಕ್ ಆಫ್ ಮಹಾರಾಷ್ಟ್ರ
6. ಬ್ಯಾಂಕ್ ಆಫ್ ಬರೋಡ
7. ವಿಜಯಾ ಬ್ಯಾಂಕ್
8. ದೇನಾ ಬ್ಯಾಂಕ್
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.