
ನವದೆಹಲಿ: ಬಾಬಾ ರಾಮದೇವ್ ಅವರ ಪತಂಜಲಿ ಫುಡ್ ಲಿಮಿಟೆಡ್ ಕಂಪನಿ ಮೂರನೇ ತ್ರೈಮಾಸಿಕದಲ್ಲಿ ಬಂಪರ್ ಲಾಭವನನ್ನು ತನ್ನದಾಗಿಸಿಕೊಂಡಿದೆ. ಕಂಪನಿಯು ಮಾರುಕಟ್ಟೆಯಲ್ಲಿನ ತಂತ್ರಗಳನ್ನು ಬದಲಿಸಿಕೊಂಡಿದ್ದು, ಜಾಹೀರಾತಿನಿಂದಾಗಿ ಡಿಸೆಂಬರ್ ತ್ರೈಮಾಸಿಕದಲ್ಲಿ ಶೇ.71ರಷ್ಟು ನಿವ್ವಳ ಲಾಭವನ್ನು ತನ್ನದಾಗಿಸಿಕೊಂಡಿದೆ. ಷೇರು ಮಾರುಕಟ್ಟೆಗೆ ಪತಂಜಲಿ ಫುಡ್ ಲಿಮಿಟೆಡ್ ಕಂಪನಿ ನೀಡಿರುವ ಮಾಹಿತಿ ಪ್ರಕಾರ, ಡಿಸೆಂಬರ್ ಅಂತ್ಯದ ವೇಳೆಗೆ ಕಂಪನಿಯ ನಿವ್ವಳ ಲಾಭ ಶೇ.71.29ಕ್ಕೆ ಏರಿಕೆ ಕಂಡಿದ್ದು, ಇದು 370.93 ಕೋಟಿ ರೂಪಾಯಿ ಆಗಿದೆ. ಕಂಪನಿ ಹಿಂದಿನ ಆರ್ಥಿಕ ವರ್ಷ ಇದೇ ತ್ರೈಮಾಸಿಕದಲ್ಲಿ 216.54 ಕೋಟಿ ರೂಪಾಯಿ ಲಾಭ ಗಳಿಸಿತ್ತು.
ಸದ್ಯ ಚಾಲ್ತಿಯಲ್ಲಿರುವ ಆರ್ಥಿಕ ವರ್ಷ ಅಕ್ಟೋಬರ್-ಡಿಸೆಂಬರ್ ವೇಳೆಯಲ್ಲಿ ಕಂಪನಿಯ ಒಟ್ಟು ಗಳಿಕೆ 9,103.13 ಕೋಟಿ ರೂಪಾಯಿ ಆಗಿದೆ. ಹಿಂದಿನ ಆರ್ಥಿಕ ವರ್ಷದ ಇದೇ ಸಮಯದಲ್ಲಿ ಕಂಪನಿಯ ಆದಾಯ 7,910.70 ಕೋಟಿ ರೂ.ಗಳಾಗಿತ್ತು. ಈ ಅವಧಿಯಲ್ಲಿ ಕಂಪನಿಯ ವೆಚ್ಚ 8,652.53 ಕೋಟಿ ರೂ.ಗಳಿಗೆ ಏರಿಕೆಯಾಗಿತ್ತು. ಆದರೆ ಕಳೆದ ಹಣಕಾಸು ವರ್ಷದಲ್ಲಿ ಕಂಪನಿಯ ವೆಚ್ಚ 7,651.51 ಕೋಟಿ ರೂ.ಗಳಾಗಿತ್ತು. ಕಳೆದ ತ್ರೈಮಾಸಿಕದಲ್ಲಿ ಕಂಪನಿಯ ವೆಚ್ಚ ಶೇ.13ರಷ್ಟು ಏರಿಕೆಯಾಗಿದೆ.
ಯಾವ ಉತ್ಪನ್ನದಿಂದ ಹೆಚ್ಚು ಆದಾಯ?
ಖಾದ್ಯ ತೈಲ ಉತ್ಪನ್ನ ಮಾರಾಟದಿಂದಲೇ ಹೆಚ್ಚು ಆದಾಯ ಬಂದಿದೆ ಎಂದು ಪತಂಜಲಿ ಫುಡ್ ಲಿಮಿಟೆಡ್ ಕಂಪನಿ ಹೇಳಿಕೆ ನೀಡಿದೆ. ಡಿಸೆಂಬರ್ ತ್ರೈಮಾಸಿಕದಲ್ಲಿ ಒಟ್ಟು ಗಳಿಕೆಯಲ್ಲಿ ಖಾದ್ಯ ತೈಲದ ಆದಾಯ 6,717 ಕೋಟಿ ರೂಪಾಯಿ ಆಗಿದೆ. ಹಿಂದಿನ ಆರ್ಥಿಕ ವರ್ಷದ ಇದೇ ತ್ರೈಮಾಸಿಕದಲ್ಲಿ 5,483 ಕೋಟಿ ರೂ.ಗಳಷ್ಟು ಖಾದ್ಯ ತೈಲ ಮಾರಾಟವಾಗಿತ್ತು. ಖಾದ್ಯತೈಲ ಮಾರಾಟದಲ್ಲಿ ಶೇ.23ರಷ್ಟು ಏರಿಕೆ ಕಂಡಿದೆ. ಆದ್ರೆ ಇನ್ನುಳಿದ ಆಹಾರ ಸಾಮಾಗ್ರಿಗಳ ಮಾರಾಟದಲ್ಲಿ ಶೇ.18.4ರಷ್ಟು ಕುಸಿತ ಕಂಡಿದೆ. 2,499 ಕೋಟಿ ರೂ.ಗಳಿಂದ 2,038 ಕೋಟಿ ರೂ.ಗಳಿಗೆ ಇಳಿಕೆಯಾಗಿದೆ.
ಇದನ್ನೂ ಓದಿ: ಇನ್‌ಸ್ಟಾಗ್ರಾಂನಲ್ಲಿ 10 ಸಾವಿರ ವ್ಯೂವ್ ಬಂದ್ರೆ ಎಷ್ಟು ಸಿಗುತ್ತೆ ಹಣ?
ಜಾಹೀರಾತಿಗಾಗಿ ಹೆಚ್ಚು ಹಣ ಖರ್ಚು
ಈ ಬಾರಿ ಪತಂಜಲಿ ಫುಡ್ ಲಿಮಿಟೆಡ್ ಕಂಪನಿ ತನ್ನ ಮಾರುಕಟ್ಟೆ ತಂತ್ರಗಳಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿಕೊಂಡಿತ್ತು. ಗ್ರಾಹಕರ ವಿಶ್ವಾಸ ಪಡೆದುಕೊಳ್ಳಲು ಎಲ್ಲಾ ವರ್ಗದ ಜನತೆಗೆ ತಮ್ಮ ಉತ್ಪನ್ನಗಳನ್ನು ತಲುಪಿಸುವ ನಿಟ್ಟಿನಲ್ಲಿ ಪ್ರಚಾರಕ್ಕಾಗಿ ಹೆಚ್ಚೆಚ್ಚು ಹಣ ಖರ್ಚು ಮಾಡಿತ್ತು. ಕಳೆದ ತ್ರೈಮಾಸಿಕದ ಒಟ್ಟು ವೆಚ್ಚದಲ್ಲಿ ಶೇ.2.5ರಷ್ಟು ಹಣವನ್ನು ಪ್ರಚಾರ ಮತ್ತು ಜಾಹೀರಾತಿಗಾಗಿ ವಿನಿಯೋಗಿಸಿದೆ. ಇದು ಕಳೆದ 10 ತ್ರೈಮಾಸಿಕಗಳಲ್ಲಿ ಖರ್ಚು ಮಾಡಿದ ಹಣಕ್ಕಿಂತ ಅಧಿಕವಾಗಿದೆ. ಶಿಲ್ಪಾ ಶೆಟ್ಟಿ, ಶಾಹಿದ್ ಕಪೂರ್, ಮಹೇಂದ್ರ ಸಿಂಗ್ ಧೋನಿ ಮತ್ತು ಬೋಜ್‌ಪುರಿ ಕಲಾವಿದರಿಂದ ತನ್ನ ಉತ್ಪನ್ನಗಳ ಜಾಹೀರಾತು ನಡೆಸುತ್ತಿದೆ.
5 ವರ್ಷದಲ್ಲಿ ಶೇ.78ರಷ್ಟು ಲಾಭ
ಈ ತ್ರೈಮಾಸಿಕದಲ್ಲಿ ಪತಂಜಲಿ ಫುಡ್ ಲಿಮಿಟೆಡ್ ಕಂಪನಿ ತನ್ನ ಹೂಡಿಕೆದಾರರಿಗೆ ಬಂಪರ್ ಲಾಭವನ್ನು ನೀಡಿದೆ. ಈ ಕಂಪನಿಯ ಹೂಡಿಕೆದಾರರು ಕಳೆದ ಒಂದು ವರ್ಷದಲ್ಲಿ ಶೇ.19ರಷ್ಟು ಲಾಭವನ್ನು ಪಡೆದುಕೊಂಡಿದ್ದಾರೆ. 5 ವರ್ಷಗಳಲ್ಲಿ, ಪತಂಜಲಿ ತನ್ನ ಹೂಡಿಕೆದಾರರಿಗೆ 78 ಪ್ರತಿಶತದಷ್ಟು ಉತ್ತಮ ಆದಾಯವನ್ನು ನೀಡಿದೆ. ಕಂಪನಿಯ ಷೇರುಗಳ ಬೆಲೆ ಪ್ರಸ್ತುತ ಪ್ರತಿ ಷೇರಿಗೆ 1,854 ರೂ. ಈ ಕಂಪನಿಯ ಷೇರುಗಳು ಭವಿಷ್ಯದಲ್ಲಿಯೂ ಏರಿಕೆಯಾಗುವ ಎಲ್ಲಾ ಸಾಧ್ಯತೆಗಳಿವೆ ಎಂದು ಮಾರುಕಟ್ಟೆ ವಿಶ್ಲೇಷಕರು ನಂಬಿದ್ದಾರೆ.
ಇದನ್ನೂ ಓದಿ: ಮಗಳ ಮದುವೆಗೆ ಚಿನ್ನ ಖರೀದಿಸುತ್ತಿದ್ದೀರಾ? ಮೊದಲು ಇಂದಿನ ದರ ತಿಳಿದುಕೊಳ್ಳಿ!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.