ಆರ್‌ಬಿಐ ಇಂಟರ್‌ಚೇಂಜ್ ಶುಲ್ಕ ಹೆಚ್ಚಳದಿಂದ ಮೇ 1 ರಿಂದ ಎಟಿಎಂನಿಂದ ಹಣ ಹಿಂಪಡೆಯುವುದು ದುಬಾರಿಯಾಗಲಿದೆ. ಉಚಿತ ವಹಿವಾಟು ಮೀರಿದ ಬಳಿಕ ಪ್ರತಿ ಹಣಕಾಸು ವಹಿವಾಟಿಗೆ 2 ರು. ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.
ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಇಂಟರ್‌ಚೇಂಜ್ ಶುಲ್ಕವನ್ನು ಹೆಚ್ಚಿಸಿರುವುದರಿಂದ, ಮೇ 1 ರಿಂದ ಭಾರತದಲ್ಲಿ ಎಟಿಎಂಗಳಿಂದ ಹಣವನ್ನು ಹಿಂಪಡೆಯುವುದು ದುಬಾರಿಯಾಗಲಿದೆ.
ಇದರರ್ಥ ಹಣಕಾಸಿನ ವಹಿವಾಟುಗಳಿಗಾಗಿ ಎಟಿಎಂಗಳನ್ನು ಅವಲಂಬಿಸಿರುವ ಗ್ರಾಹಕರು ತಮ್ಮ ಉಚಿತ ವಹಿವಾಟು ಮಿತಿಯನ್ನು ಮೀರಿದಾಗ ಮೇ 1ರಿಂದ ಪ್ರತಿ ಹಣಕಾಸು ವಹಿವಾಟಿಗೆ ಹೆಚ್ಚುವರಿಯಾಗಿ 2 ರು. ಪಾವತಿಸಬೇಕಾಗುತ್ತದೆ.ಬ್ಯಾಲೆನ್ಸ್ ವಿಚಾರಣೆಯಂತಹ ಹಣಕಾಸಿನೇತರ ವಹಿವಾಟುಗಳಿಗೆ, ಶುಲ್ಕವು 1 ರು. ಹೆಚ್ಚಾಗುತ್ತದೆ. ಪರಿಣಾಮವಾಗಿ, ಎಟಿಎಂನಿಂದ ಹಣವನ್ನು ಹಿಂಪಡೆಯಲು ಪ್ರತಿ ವಹಿವಾಟಿಗೆ 19 ರು. ವೆಚ್ಚವಾಗಲಿದೆ, ಇದು ಹಿಂದಿನ 17 ರು.ಗಿಂತ 2 ರು. ಹೆಚ್ಚು, ಎಟಿಎಂ ಇಂಟರ್ಚೇಂಜ್ ಶುಲ್ಕ ಎಂದರೆ ಎಟಿಎಂ ಸೇವೆಗಳನ್ನು ಒದಗಿಸುವುದಕ್ಕಾಗಿ ಒಂದು ಬ್ಯಾಂಕ್ ಮತ್ತೊಂದು ಬ್ಯಾಂಕ್‌ಗೆ ಪಾವತಿಸುವ ಶುಲ್ಕವಾಗಿದೆ.
₹12 ಲಕ್ಷವರೆಗೆ ಶೂನ್ಯ ತೆರಿಗೆ ಈಗ ಅಧಿಕೃತ! 35 ತಿದ್ದುಪಡಿಗಳೊಂದಿಗೆ ಹಣಕಾಸು ವಿಧೇಯಕ ಅಂಗೀಕಾರ
ನವದೆಹಲಿ: ವಾರ್ಷಿಕ 12 ಲಕ್ಷ ಆದಾಯ ಗಳಿಸುವ ಉದ್ಯೋಗಿಗೆ ಆದಾಯ ತೆರಿಗೆ ವಿನಾಯ್ತಿಯನ್ನು ನೀಡುವುದು ಸೇರಿ ಮಹತ್ವದ ಸುಧಾರಣಾ ಕ್ರಮಗಳಿರುವ ಕೇಂದ್ರ ಹಣಕಾಸು ಮಸೂದೆ-2025 ಮಂಗಳವಾರ 35 ಸರ್ಕಾರಿ ತಿದ್ದುಪಡಿಗಳೊಂದಿಗೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿತು.
ಆನ್‌ಲೈನ್ ಜಾಹೀರಾತುಗಳ ಮೇಲಿನ ಶೇ.6ರಷ್ಟು ಡಿಜಿಟಲ್ ಟ್ಯಾಕ್ಸ್ ರದ್ದು ಮಾಡುವುದೂ ಈ35 ತಿದ್ದುಪಡಿಗಳೊಂದಿಗೆ ಸೇರಿದೆ. ಈ ಮಸೂದೆ ಅಂಗೀಕಾರದೊಂದಿಗೆ ಲೋಕಸಭೆಯಲ್ಲಿ ಬಜೆಟ್‌ಗೆ ಒಪ್ಪಿಗೆ ಪಡೆಯುವ ಪ್ರಕ್ರಿಯೆ ಪೂರ್ಣಗೊಂಡಂತಾಗಿದೆ. ಇನ್ನು ರಾಜ್ಯ ಸಭೆಯಲ್ಲಿ ಈ ವಿಧೇಯಕವನ್ನು ಮಂಡಿಸುವುದು ಬಾಕಿ ಇದೆ. ಅಲ್ಲೂ ಅನುಮೋದನೆ ಸಿಕ್ಕರೆ 2025 -26ರ ಬಜೆಟ್ ಪ್ರಕ್ರಿಯೆಗಳಿಗೆ ಚಾಲನೆ ಸಿಕ್ಕಂತಾಗಲಿದೆ. ಕೇಂದ್ರ ಬಜೆಟ್‌ನಲ್ಲಿ 2025 -26ನೇ ಸಾಲಿನಲ್ಲಿ 50.65 ಲಕ್ಷ ಕೋಟಿ ವೆಚ್ಚವನ್ನು ಅಂದಾಜಿಸಲಾಗಿದೆ. ಇದು ಹಣಕಾಸು ವರ್ಷಕ್ಕಿಂತ ಶೇ.7.4ರಷ್ಟಾಗಿದೆ.
ಮುಂದಿನ ಹಣಕಾಸು ವರ್ಷದಲ್ಲಿ ಒಟ್ಟಾರೆ 11.22 ಲಕ್ಷ ಕೋಟಿ ಬಂಡವಾಳ ವೆಚ್ಚದ ಪ್ರಸ್ತಾಪವಿದೆ. ಒಟ್ಟು 42.70 ಲಕ್ಷ ಕೋಟಿ ತೆರಿಗೆ ಆದಾಯ ಮತ್ತು 14.01 ಲಕ್ಷ ಕೋಟಿ ಸಾಲ ಮಾಡುವ ಉದ್ದೇಶವಿದೆ.
ಮಾನ್ಸೂನ್‌ನಲ್ಲಿ ಐಟಿ ಮಸೂದೆ: 2025ನೇ ಹಣಕಾಸು ವಿಧೇಯಕವು ನಿಷ್ಠಾವಂತ ತೆರಿಗೆದಾರರನ್ನು ಗೌರವಿಸಲು ಭಾರೀ ಪ್ರಮಾಣದಲ್ಲಿ ತೆರಿಗೆ ವಿನಾಯ್ತಿ ನೀಡಿದೆ ಎಂದು ಇದೇ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಇನ್ನು ಹೊಸ ಆದಾಯ ತೆರಿಗೆ ವಿಧೇಯಕದ ಕುರಿತು ಜುಲೈನಲ್ಲಿ ಆರಂಭವಾಗಲಿರುವ ಮಾನ್ಸೂನ್ ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದು ಇದೇ ವೇಳೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಎಟಿಎಂನಲ್ಲೇ ಪಿಎಫ್‌ಹಣ ಹಿಂಪಡೆಯಿರಿ: ಜೂನ್‌ನಿಂದ ಹೊಸ ಸೌಲಭ್ಯ ಜಾರಿ
ನವದೆಹಲಿ: ನೌಕರರ ಭವಿಷ್ಯ ನಿಧಿ (ಇಪಿಎಫ್‌ಒ) ಸಂಘಟನೆಯು ಗ್ರಾಹಕರಿಗೆ ಭವಿಷ್ಯ ನಿಧಿ (ಇಪಿಎಫ್) ಹಣವನ್ನು ಎಟಿಎಂ, ಯುಪಿಐ ಮೂಲಕ ಹಿಂಪಡೆಯುವ ಯೋಜನೆ ಮೇ ಅಂತ್ಯ ಜೂನ್‌ನಿಂದ ಜಾರಿಗೆ ಬರಲಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.
ಈವರೆಗೆ ಪಿಎಫ್ ಹಣ ಪಡೆಯಲು ಚಂದಾದಾರರು ಪಿಎಫ್ ಆಫೀಸಿಗೆ ಎಡತಾಕಬೇಕಿತ್ತು. ಇದನ್ನು ತಪ್ಪಿಸಲು ಎಟಿಎಂ ಮತ್ತು ಯುಪಿಐ ಮೂಲಕ ಪಿಎಫ್ ಹಣ ವಿಥ್ ಡ್ರಾ ಮಾಡುವುದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಅನುಮೋದಿಸಿದೆ.ಈ ಬಗ್ಗೆ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯದರ್ಶಿ ಸುಮಿತ್ರಾ ದಾವ್ರಾ ಮಾಹಿತಿ ನೀಡಿದ್ದು, ‘ಈ ವರ್ಷದ ಮೇ ಅಂತ್ಯ ಅಥವಾ ಜೂನ್ ವೇಳೆಗೆ ಪಿಎಫ್ ಗ್ರಾಹಕರು ಯುಪಿಐ ಮತ್ತು ಎಟಿಎಂ ಮೂಲಕ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ. ಅವರು ತಮ್ಮ ಪಿಎಫ್ ಖಾತೆಯ ಬಾಕಿಯನ್ನು ನೇರವಾಗಿ ಯುಪಿಐನಲ್ಲಿ ನೋಡಬಹುದು. ಸ್ವಯಂ ಚಾಲಿತ ವ್ಯವಸ್ಥೆಯ ಮೂಲಕ ತಕ್ಷಣವೇ 1 ಲಕ್ಷ ರು.ವರೆಗೆ ತಮ್ಮ ಆದ್ಯತೆಯ ಬ್ಯಾಂಕ್ ಖಾತೆ ಮೂಲಕ ಹಿಂಪಡೆಯಲು ಮತ್ತು ವರ್ಗಾವಣೆ ಮಾಡಲು ಸಾಧ್ಯವಾಗುತ್ತದೆ’ ಎಂದಿದ್ದಾರೆ.
ಎಟಿಎಂ, ಯುಪಿಐ ಮೂಲಕ ಪಿಎಫ್ ಹಣವನ್ನು ಅನಾರೋಗ್ಯ, ವಸತಿ, ಶಿಕ್ಷಣ ಮತ್ತು ಮದುವೆ ಕಾರಣಗಳಿಗೆ ಹಿಂಪಡೆಯಬಹುದು.