12ನೇ ತರಗತಿ ಫೇಲ್, ₹2,500 ಸಂಬಳದ ನೌಕರಿ; 40ನೇ ವಯಸ್ಸಿನಲ್ಲಿ ಉದ್ಯಮ ಆರಂಭಿಸಿ ₹300 ಕೋಟಿ ಕಂಪನಿಯ ಒಡೆಯ!

Published : Jul 10, 2026, 04:17 PM IST
Ashwini Kumar Success Story

ಸಾರಾಂಶ

ಯುವಕನಾಗಿದ್ದಾಗಲೇ ಶಿಕ್ಷಣ, ಉದ್ಯೋಗದಲ್ಲಿ ಸೋಲು, ಅನಾರೋಗ್ಯ ಮತ್ತು ವೈಯಕ್ತಿಕ ನಷ್ಟಗಳನ್ನು ಮೆಟ್ಟಿನಿಂತು ಯಶಸ್ಸು ಕಂಡ ವ್ಯಕ್ತಿ. ಲಕ್ಷಾಂತರ ರೂಪಾಯಿ ಸಂಬಳದ ಹುದ್ದೆಯನ್ನು ತ್ಯಜಿಸಿ, 40ನೇ ವಯಸ್ಸಿನಲ್ಲಿ ಸ್ವಂತ ಉದ್ಯಮ ಆರಂಭಿಸಿ ಅನೇಕರಿಗೆ ಸ್ಫೂರ್ತಿದಾಯಕವಾದ ಕಥೆ ಇಲ್ಲಿದೆ.

ಯಶಸ್ಸು ಎಂಬುದು ಎಲ್ಲರಿಗೂ ಸುಲಭವಾಗಿ ದಕ್ಕುವ ಹಾದಿಯಲ್ಲ. ಸೋಲು, ಅವಮಾನ, ಅನಾರೋಗ್ಯ ಮತ್ತು ವೈಯಕ್ತಿಕ ನಷ್ಟಗಳನ್ನು ಮೆಟ್ಟಿ ನಿಂತಾಗ ಮಾತ್ರ ಒಬ್ಬ ವ್ಯಕ್ತಿ ಶಿಖರಕ್ಕೇರಲು ಸಾಧ್ಯ. ಇದಕ್ಕೆ ಜೀವಂತ ಉದಾಹರಣೆ ಉದ್ಯಮಿ ಅಶ್ವಿನಿ ಕುಮಾರ್.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ವಿನಿ ಕುಮಾರ್ ಅವರ ವೀಡಿಯೊವೊಂದು ಸಖತ್ ವೈರಲ್ ಆಗಿದೆ. 40ನೇ ವಯಸ್ಸಿನಲ್ಲಿ ತಮಗೆ ಸಿಗುತ್ತಿದ್ದ ಲಕ್ಷಾಂತರ ರೂಪಾಯಿ ಸಂಬಳದ 'ವೈಸ್ ಪ್ರೆಸಿಡೆಂಟ್' (VP) ಹುದ್ದೆಯನ್ನು ತ್ಯಜಿಸಿ, ಸ್ವಂತ ಉದ್ಯಮ ಆರಂಭಿಸಿದ ಇವರ ಕಥೆ ಕೇಳಿದರೆ ಯಾರೂ ಅಚ್ಚರಿಪಡಲೇಬೇಕು.

ಬಾಡಿಗೆ ಮನೆ ಮತ್ತು ₹2,500 ಸಂಬಳದ ಜೀವನ

ಪಂಜಾಬ್‌ನ ಹೋಶಿಯಾರ್‌ಪುರದ ಒಂದು ಸಣ್ಣ ಬಾಡಿಗೆ ಮನೆಯಲ್ಲಿ ಬೆಳೆದ ಅಶ್ವಿನಿ ಕುಮಾರ್ ಅವರ ಬಾಲ್ಯ ಸುಲಭವಾಗಿರಲಿಲ್ಲ. ತಂದೆಯೊಬ್ಬರೇ ದುಡಿಯುವ ಸದಸ್ಯರಾಗಿದ್ದರಿಂದ ಆರ್ಥಿಕ ಸಂಕಷ್ಟ ಇತ್ತು. 18ನೇ ವಯಸ್ಸಿನಲ್ಲಿ 12ನೇ ತರಗತಿಯಲ್ಲಿ ಅನುತ್ತೀರ್ಣರಾದಾಗ ಇಡೀ ಸಮಾಜ ಅವರನ್ನು 'ಅಪ್ರಯೋಜಕ' ಎಂದು ಹಣೆಪಟ್ಟಿ ಹಚ್ಚಿತು. ಆದರೆ ಕುಮಾರ್ ಎದೆಗುಂದಲಿಲ್ಲ. 20ನೇ ವಯಸ್ಸಿನಲ್ಲಿ ಕೇವಲ 2,500 ರೂಪಾಯಿ ಸಂಬಳಕ್ಕೆ ಮೊದಲ ಕೆಲಸಕ್ಕೆ ಸೇರಿದರು.

ಯಶಸ್ಸಿನ ಶಿಖರ ಮತ್ತು ದಿಢೀರ್ ಕುಸಿತ

ತಮ್ಮ 21ನೇ ವಯಸ್ಸಿನಲ್ಲಿಯೇ ಸಾಹಸಕ್ಕೆ ಕೈಹಾಕಿದ ಅಶ್ವಿನಿ, ಮೊದಲ ಸ್ಟಾರ್ಟಪ್ ಆರಂಭಿಸಿದರು. ಎರಡೇ ವರ್ಷಗಳಲ್ಲಿ ಆ ಕಂಪನಿ 2 ಕೋಟಿ ರೂಪಾಯಿ ವಹಿವಾಟು ನಡೆಸುವಂತೆ ಮಾಡಿದರು. ಆದರೆ ವಿಧಿಯಾಟ ಬೇರೆಯೇ ಇತ್ತು. 23ನೇ ವಯಸ್ಸಿನಲ್ಲಿ ಕ್ಷಯರೋಗಕ್ಕೆ (Tuberculosis) ತುತ್ತಾದ ಇವರು, ಆರು ತಿಂಗಳು ಹಾಸಿಗೆ ಹಿಡಿದರು. ಈ ಅವಧಿಯಲ್ಲಿ ಬೆವರು ಸುರಿಸಿ ಕಟ್ಟಿದ ಕಂಪನಿ ಸಂಪೂರ್ಣವಾಗಿ ಮುಳುಗಿಹೋಯಿತು. ಕೈಯಲ್ಲಿ ಹಣವಿಲ್ಲದೆ ಮತ್ತೆ ಶೂನ್ಯಕ್ಕೆ ಬಂದರು.

ಜೀವನವನ್ನೇ ಬದಲಿಸಿದ ಪತ್ನಿಯ ಅಗಲಿಕೆ

ಅಶ್ವಿನಿ ಕುಮಾರ್ ಅವರ ಜೀವನದ ಅತ್ಯಂತ ಕಠಿಣ ಘಟ್ಟ ಎದುರಾಗಿದ್ದು ಅವರ 27ನೇ ವಯಸ್ಸಿನಲ್ಲಿ. ಅಷ್ಟೂ ದಿನ ನೆರಳಿನಂತೆ ಜೊತೆಗಿದ್ದ ಪತ್ನಿ ಹರದೀಪ್ ಕೌರ್ ನಿಧನರಾದರು. ಸಾವಿನ ಮುನ್ನ ಅವರು ಅಶ್ವಿನಿಗೆ ನೀಡಿದ ಸಂದೇಶ ಒಂದೇ; 'ಯಾವುದೇ ಕಾರಣಕ್ಕೂ ಸೋಲೊಪ್ಪಬೇಡ, ಜೀವನವನ್ನು ಮತ್ತೆ ಕಟ್ಟು' ಪತ್ನಿಯ ಈ ಮಾತುಗಳೇ ಅಶ್ವಿನಿಗೆ ಶಕ್ತಿಯಾದವು.

ಕಾರ್ಪೊರೇಟ್ ಜಗತ್ತಿನ ಸುಲ್ತಾನ

ಪತ್ನಿಯ ಅಗಲಿಕೆಯ ನಂತರ ಕಾರ್ಪೊರೇಟ್ ಲೋಕಕ್ಕೆ ಮರಳಿದ ಇವರು, ತಮ್ಮ ಪರಿಶ್ರಮದಿಂದಲೇ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ವೈಸ್ ಪ್ರೆಸಿಡೆಂಟ್ ಆಗಿ ಬೆಳೆದರು. 2 ಕೋಟಿ ವಹಿವಾಟು ನಡೆಸುತ್ತಿದ್ದ ಕಂಪನಿಯನ್ನು 100 ಕೋಟಿ ದಾಟುವಂತೆ ಮಾಡಿದರು. ತಮ್ಮ ವೃತ್ತಿಜೀವನದಲ್ಲಿ ಒಟ್ಟು 1,500 ಕೋಟಿ ರೂಪಾಯಿಗೂ ಅಧಿಕ ಆದಾಯವನ್ನು ವಿವಿಧ ಕಂಪನಿಗಳಿಗೆ ತಂದುಕೊಟ್ಟರು.

40ನೇ ವಯಸ್ಸಿನಲ್ಲಿ ಹೊಸ ಸಾಹಸ

2020ರ ಕೊರೊನಾ ಕಾಲದಲ್ಲಿ ಅಶ್ವಿನ್ ಅವರಿಗೆ ಮತ್ತೊಮ್ಮೆ ಸಂಕಷ್ಟ ಎದುರಾಯಿತು. ಎರಡು ಬಾರಿ ಕೋವಿಡ್ ಸೋಂಕು ಮತ್ತು ಭೀಕರ ರಸ್ತೆ ಅಪಘಾತದಿಂದ ತಿಂಗಳುಗಟ್ಟಲೆ ಆಸ್ಪತ್ರೆ ಸೇರಬೇಕಾಯಿತು. ಆದರೆ ಗುಣಮುಖರಾದ ನಂತರ ಅವರು ಮಾಡಿದ ಸಾಧನೆ ಅದ್ಭುತ. ಚೇತರಿಕೆಯ ಅವಧಿಯಲ್ಲೇ ಬಿಸಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ PhD ಪೂರ್ಣಗೊಳಿಸಿದರು. 2024ರಲ್ಲಿ ತಮ್ಮ 40ನೇ ವಯಸ್ಸಿನಲ್ಲಿ ಆರಾಮದಾಯಕ ಜೀವನ ಬಿಟ್ಟು, ₹300 ಕೋಟಿ ವಹಿವಾಟಿನ ಕಂಪನಿಯ ನಾಯಕತ್ವದ ನಂತರ ಈಗ ಸ್ವಂತ ಉದ್ಯಮಕ್ಕೆ ನಾಂದಿ ಹಾಡಿದ್ದಾರೆ.

ಸೋಲು ಎನ್ನುವುದು ಅಂತ್ಯವಲ್ಲ, ಅದು ಹೊಸ ಆರಂಭದ ಮುನ್ನುಡಿ ಎಂಬುದಕ್ಕೆ ಅಶ್ವಿನಿ ಕುಮಾರ್ ಅವರ ಜೀವನವೇ ಸಾಕ್ಷಿ. ಇಂದು ಅವರು ಸಾವಿರಾರು ಯುವ ಉದ್ಯಮಿಗಳಿಗೆ ಪ್ರೇರಣೆಯಾಗಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

LPG; ಎಲ್‌ಪಿಜಿ ಗ್ರಾಹಕರೇ ಎಚ್ಚರ! ಗ್ಯಾಸ್ ಬುಕ್ ಮಾಡುವ ಮುನ್ನ ಈ '8' ನಿಯಮ ತಿಳಿಯಿರಿ! ಇಲ್ಲದಿದ್ದರೆ ಸಿಗಲ್ಲ ಸಿಲಿಂಡರ್!
ಎಐ ಹೂಡಿಕೆಗೆ ಲಾಭ ತರಲು ಕಾಗ್ನಿಜೆಂಟ್ ಮೆಗಾ ಪ್ಲಾನ್, 15000 ತಜ್ಞರನ್ನು ಸಜ್ಜುಗೊಳಿಸುತ್ತಿದೆ ಕಂಪನಿ