Quick Commerce ಮಾರುಕಟ್ಟೆ ವಶಕ್ಕೆ Amazon ಮಾಸ್ಟರ್ ಪ್ಲಾನ್!; ₹300 ಆರ್ಡರ್‌ಗೆ ₹100 ಭಾರಿ ಕ್ಯಾಶ್‌ಬ್ಯಾಕ್ ಆಫರ್!

Published : Jun 30, 2026, 03:31 PM IST
Amazon

ಸಾರಾಂಶ

ಭಾರತದ ಕ್ವಿಕ್ ಕಾಮರ್ಸ್ ಮಾರುಕಟ್ಟೆಗೆ ಅಮೆಜಾನ್ 'ನೌ' ಭರ್ಜರಿ ಪ್ರವೇಶ ನೀಡಿದ್ದು, ಭಾರಿ ಆಫರ್‌ಗಳ ಮೂಲಕ ಹೊಸ ಬೆಲೆ ಸಮರಕ್ಕೆ ನಾಂದಿ ಹಾಡಿದೆ. ಇದರಿಂದಾಗಿ ಸ್ವಿಗ್ಗಿ, ಬ್ಲಿಂಕಿಟ್‌ನಂತಹ ಸಂಸ್ಥೆಗಳು ತೀವ್ರ ಸ್ಪರ್ಧೆ ಎದುರಿಸುತ್ತಿದ್ದು, ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ.

ಬೆಂಗಳೂರು/ಮುಂಬೈ(ಜೂ.30): ಭಾರತದ ಕ್ವಿಕ್ ಕಾಮರ್ಸ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಬ್ಲಿಂಕಿಟ್ (Blinkit), ಸ್ವಿಗ್ಗಿ ಇನ್‌ಸ್ಟಾಮಾರ್ಟ್ (Swiggy Instamart), ಜೆಪ್ಟೋ (Zepto), ಫ್ಲಿಪ್‌ಕಾರ್ಟ್ ಮಿನಿಟ್ಸ್ (Flipkart Minutes), ಟಾಟಾದ ಬಿಗ್‌ಬಾಸ್ಕೆಟ್ (BigBasket) ಮತ್ತು ಆಕ್ಸೆಲ್ ಬೆಂಬಲಿತ ಫಸ್ಟ್‌ಕ್ಲಬ್ (FirstClub) ಸಂಸ್ಥೆಗಳಿಗೆ ಟಕ್ಕರ್ ನೀಡಲು ಇ-ಕಾಮರ್ಸ್ ದೈತ್ಯ ಅಮೆಜಾನ್ (Amazon) ಈಗ ನಿರ್ಣಾಯಕ ಹಂತದ ಹೋರಾಟಕ್ಕೆ ಇಳಿದಿದೆ. ಮಾರುಕಟ್ಟೆಯ ಪಾಲನ್ನು ತನ್ನದಾಗಿಸಿಕೊಳ್ಳಲು ಅಮೆಜಾನ್ ಗ್ರಾಹಕರಿಗೆ ಭಾರಿ ಆಫರ್‌ಗಳನ್ನು ನೀಡುತ್ತಿದೆ.

ಗ್ರಾಹಕರನ್ನು ತನ್ನತ್ತ ಸೆಳೆಯಲು 'ಅಮೆಜಾನ್ ನೌ' (Amazon Now) ವೇದಿಕೆಯು ಸದ್ಯ ಗ್ರಾಹಕರಿಗೆ ಭರಪೂರ ಕೊಡುಗೆಗಳನ್ನು ನೀಡಲು ಆರಂಭಿಸಿದೆ. ₹1499 ಕ್ಕಿಂತ ಹೆಚ್ಚಿನ ಆರ್ಡರ್‌ಗಳ ಮೇಲೆ ₹200 ವರೆಗೆ ಕ್ಯಾಶ್‌ಬ್ಯಾಕ್. ₹399 ಕ್ಕಿಂತ ಹೆಚ್ಚಿನ ಆರ್ಡರ್‌ಗಳ ಮೇಲೆ ₹50 ವರೆಗೆ ಕ್ಯಾಶ್‌ಬ್ಯಾಕ್ (ಇದು ಕೆಲವು ಕಡೆ ಬದಲಾಗಬಹುದು). ಇದರೊಂದಿಗೆ ಫ್ರೀ ಡೆಲಿವರಿ ಮತ್ತು ಫ್ಲ್ಯಾಟ್‌ಫಾರ್ಮ್‌ ಶುಲ್ಕ ಇಲ್ಲದೆ ಆರ್ಡರ್‌ ಮಾಡುವ ಅವಕಾಶ ನೀಡಲಾಗಿದೆ. ಹೊಸ ಗ್ರಾಹಕರನ್ನು ಸೆಳೆಯಲು ಆರಂಭಿಕ ಕೆಲವು ಆರ್ಡರ್‌ಗಳಲ್ಲಿ ₹300 ಕ್ಕಿಂತ ಹೆಚ್ಚಿನ ಖರೀದಿಗೆ ₹100 ನಷ್ಟು ನೇರ ಕ್ಯಾಶ್‌ಬ್ಯಾಕ್ ಕೂಡ ನೀಡಲಾಗುತ್ತಿದೆ.

ಮಾರುಕಟ್ಟೆ ತಜ್ಞರ ಪ್ರಕಾರ, ಇದು ಕೇವಲ ಹೊಸ ಬೆಲೆ ಸಮರ ಸೃಷ್ಟಿ ಮಾಡುವುದಷ್ಟೇ ಅಲ್ಲ, ಮಾರುಕಟ್ಟೆ ವಿಸ್ತರಣೆಗಾಗಿ ಅಮೆಜಾನ್ ಎಷ್ಟೇ ಹಣ ಖರ್ಚು ಮಾಡಲು ಸಿದ್ಧವಿದೆ ಎಂಬುದರ ಮುನ್ಸೂಚನೆಯಾಗಿದೆ. ಅಮೆಜಾನ್‌ನ ಈ ಭಾರಿ ಹೂಡಿಕೆಯಿಂದಾಗಿ ಇತರ ಕಂಪನಿಗಳು ಕೂಡ ಅನಿವಾರ್ಯವಾಗಿ ಗ್ರಾಹಕರನ್ನು ಉಳಿಸಿಕೊಳ್ಳಲು ಹೆಚ್ಚಿನ ಹಣ ವ್ಯಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಷೇರು ಮಾರುಕಟ್ಟೆಯಲ್ಲಿ ₹1.25 ಲಕ್ಷ ಕೋಟಿ ನಷ್ಟ!

ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನ ಈ ಭಾರಿ ಹೂಡಿಕೆಗಳ ಭೀತಿಯಿಂದಾಗಿ, ಇತ್ತೀಚಿನ ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಪ್ರಮುಖ ಕ್ವಿಕ್ ಕಾಮರ್ಸ್ ಸಂಸ್ಥೆಗಳಾದ ಜೊಮಾಟೊ (Eternal/Blinkit) ಮತ್ತು ಸ್ವಿಗ್ಗಿ ಸಂಸ್ಥೆಗಳು ತಮ್ಮ ಗರಿಷ್ಠ ಮಟ್ಟದಿಂದ ಬರೋಬ್ಬರಿ 15 ಬಿಲಿಯನ್ ಡಾಲರ್ (ಸುಮಾರು ₹1.25 ಲಕ್ಷ ಕೋಟಿಗಿಂತ ಹೆಚ್ಚು) ಮಾರುಕಟ್ಟೆ ಮೌಲ್ಯವನ್ನು (Market Value) ಕಳೆದುಕೊಂಡಿವೆ. ದೀರ್ಘಾವಧಿಯ ಈ ಸ್ಪರ್ಧೆಯು ಈ ಕಂಪನಿಗಳ ಲಾಭದಾಯಕತೆಯ (Profitability) ಗುರಿಯನ್ನು ಮತ್ತಷ್ಟು ದೂರ ತಳ್ಳಬಹುದು ಎಂಬ ಆತಂಕ ಹೂಡಿಕೆದಾರರಲ್ಲಿ ಮೂಡಿದೆ.

'ಅಮೆಜಾನ್ ನೌ' ವಿಸ್ತರಣೆಯ ಮಾಸ್ಟರ್ ಪ್ಲಾನ್

ಅಮೆಜಾನ್ ಕಳೆದ ಕೆಲವು ವರ್ಷಗಳಿಂದ ಬೇರೆ ಬೇರೆ ಡೆಲಿವರಿ ಮಾದರಿಗಳನ್ನು ಪರೀಕ್ಷಿಸುತ್ತಿದ್ದು, ಈಗ 'ಅಮೆಜಾನ್ ನೌ' ಅನ್ನು ಬೃಹತ್ ಮಟ್ಟದಲ್ಲಿ ವಿಸ್ತರಿಸಲು ಮುಂದಾಗಿದೆ. ಇತ್ತೀಚೆಗೆ ಕಂಪನಿಯು ಅಮೆಜಾನ್ ನೌ ಸೇವೆಯನ್ನು ಭಾರತದ 300 ಕ್ಕೂ ಹೆಚ್ಚು ನಗರಗಳಿಗೆ ವಿಸ್ತರಿಸುವುದಾಗಿ ಘೋಷಿಸಿದೆ. ಅಮೆಜಾನ್ ಸಿಇಒ ಆಂಡಿ ಜಸ್ಸಿ (Andy Jassy) ಅವರು 2030ರ ವೇಳೆಗೆ ಭಾರತದಲ್ಲಿ ಹೆಚ್ಚುವರಿಯಾಗಿ $13 ಬಿಲಿಯನ್ ಹೂಡಿಕೆ ಮಾಡುವುದಾಗಿ ತಿಳಿಸಿದ್ದಾರೆ. ಇದರೊಂದಿಗೆ ಅಮೆಜಾನ್‌ನ ಒಟ್ಟು ಬದ್ಧ ಹೂಡಿಕೆ ಮೊತ್ತ $48 ಬಿಲಿಯನ್‌ಗೆ ಏರಲಿದೆ. ಇದರಲ್ಲಿ ಹೆಚ್ಚಿನ ಪಾಲು AWS (Cloud) ಮತ್ತು AI ವ್ಯವಹಾರಗಳಿಗೆ ಮುಡಿಪಾಗಿದ್ದರೂ, ಇದು ಕಂಪನಿಯ ಒಟ್ಟಾರೆ ಆರ್ಥಿಕ ಬಲವನ್ನು ಹೆಚ್ಚಿಸಲಿದೆ.

ಈ ಹಿಂದೆ ಅಮೆಜಾನ್ ನೌ ಮೂಲಸೌಕರ್ಯ ಮತ್ತು 'ಡಾರ್ಕ್ ಸ್ಟೋರ್ಸ್' (ಮೈಕ್ರೋ-ಫುಲ್‌ಫಿಲ್‌ಮೆಂಟ್ ನೆಟ್‌ವರ್ಕ್) ವಿಸ್ತರಣೆಗಾಗಿ ₹2,800 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿತ್ತು. ಪ್ರಸ್ತುತ ಅಮೆಜಾನ್‌ನ ಕ್ವಿಕ್ ಕಾಮರ್ಸ್ ವ್ಯವಹಾರವು **ಪ್ರತಿ ತ್ರೈಮಾಸಿಕದಲ್ಲಿ ದುಪ್ಪಟ್ಟಾಗುತ್ತಿದೆ (Doubling every quarter) ಎಂದು ಜಸ್ಸಿ ತಿಳಿಸಿದ್ದಾರೆ.

ಕೋಲಾಹಲ ಸೃಷ್ಟಿಸುತ್ತಿರುವ ಫ್ಲಿಪ್‌ಕಾರ್ಟ್ ‘ಮಿನಿಟ್ಸ್’

ಅಮೆಜಾನ್ ಮಾತ್ರವಲ್ಲದೆ ವಾಲ್‌ಮಾರ್ಟ್ ಒಡೆತನದ ಫ್ಲಿಪ್‌ಕಾರ್ಟ್ ಕೂಡ ತನ್ನ 'ಮಿನಿಟ್ಸ್' (Minutes) ಸೇವೆಯನ್ನು ವೇಗವಾಗಿ ವಿಸ್ತರಿಸುತ್ತಿದೆ. ಇದು ಈಗಾಗಲೇ 1,000 ಡಾರ್ಕ್ ಸ್ಟೋರ್‌ಗಳನ್ನು ದಾಟಿದ್ದು, 2026ರ ಅಂತ್ಯದ ವೇಳೆಗೆ 1,500 ಡಾರ್ಕ್ ಸ್ಟೋರ್‌ಗಳನ್ನು ಹೊಂದುವ ಗುರಿ ಇಟ್ಟುಕೊಂಡಿದೆ. ವಿಶೇಷವೆಂದರೆ, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಎರಡೂ ಕಂಪನಿಗಳು ಮೆಟ್ರೋ ನಗರಗಳ ಜೊತೆಗೆ ಭಾರತದ ಟೈಯರ್-2 ಮತ್ತು ಟೈಯರ್-3 (ಸಣ್ಣ ನಗರಗಳು) ನಗರಗಳ ಮೇಲೆ ಹೆಚ್ಚಿನ ಗಮನ ಹರಿಸುತ್ತಿವೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಡ್ಲಿ ಮಾರಿ ತಿಂಗಳಿಗೆ ₹50,000 ಲಾಭ ಮಾಡ್ಬೋದು, ಈ ಬಿಸಿನೆಸ್ ಐಡಿಯಾ ತಿಳ್ಕೊಳ್ಳಿ
ಮಾರ್ಕ್ ಜುಕರ್‌ಬರ್ಗ್ ಕನಸು! WhatsApp ಬಳಕೆ ಮಾಡೋರು 79 ರೂಪಾಯಿ ಕೊಡ್ಬೇಕು; ಯಾಕೆ?