
ನವದೆಹಲಿ (ಮಾ.9): ಶಾರ್ಕ್ ಟ್ಯಾಂಕ್ ಇಂಡಿಯಾದಲ್ಲಿ ಅತಿ ಹೆಚ್ಚು ಹೂಡಿಕೆ ಮಾಡಿರುವ ಅಮಾನ್ ಗುಪ್ತಾ, ತಾವು ಬೆಂಬಲಿಸಿದ ಸ್ಟಾರ್ಟ್‌ಅಪ್‌ಗಳು ಹೇಗೆ ಹೆಮ್ಮರವಾಗಿ ಬೆಳೆದಿವೆ ಎಂಬುದನ್ನು ಇತ್ತೀಚಿನ ಸಂಚಿಕೆಯಲ್ಲಿ ಮಾಹಿತಿ ನೀಡಿದ್ದಾರೆ. ಸೀಸನ್ 1 ರಿಂದ 4 ರವರೆಗೆ ಅಮಾನ್ ಒಟ್ಟು 177 ಆಫರ್ ನೀಡಿ, 141 ಡೀಲ್‌ಗಳನ್ನು ಲಾಕ್ ಮಾಡಿದ್ದಾರೆ. ಇದಕ್ಕಾಗಿ ಅವರು ಒಟ್ಟು 61.7 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ.
ಅಮಾನ್ ಗುಪ್ತಾ ಅವರ ಹೇಳಿರುವ ಪ್ರಕಾರ, ಶಾರ್ಕ್ ಟ್ಯಾಂಕ್ ಇಂಡಿಯಾದ ನಂಬರ್ ಒನ್ ಹೂಡಿಕೆ ಎಂದರೆ ಅದು ಸ್ನ್ಯಾಕ್ಸ್ ಬ್ರ್ಯಾಂಡ್ 'ಲೆಟ್ಸ್ ಟ್ರೈ'. ಸೀಸನ್ 1 ರಲ್ಲಿ ಅಮಾನ್ ಹೂಡಿಕೆ ಮಾಡಿದಾಗ ಈ ಕಂಪನಿಯ ಮೌಲ್ಯ ಕೇವಲ 3.75 ಕೋಟಿ ರೂ. ಆಗಿತ್ತು. ಆದರೆ ಇಂದು ಇದರ ಮೌಲ್ಯ ಬರೋಬ್ಬರಿ 1,100 ಕೋಟಿ ರೂ. ಗೆ ಏರಿಕೆಯಾಗಿದೆ. ತಿಂಗಳಿಗೆ 12 ಲಕ್ಷ ರೂ. ಆದಾಯ ಗಳಿಸುತ್ತಿದ್ದ ಈ ಕಂಪನಿ ಈಗ ಪ್ರತಿ ತಿಂಗಳು 40 ಕೋಟಿ ರೂ. ವ್ಯವಹಾರ ಮಾಡುತ್ತಿದೆ. ಶೀಘ್ರದಲ್ಲೇ ಇದು 100 ಕೋಟಿ ರೂ. ತಲುಪುವ ಗುರಿ ಹೊಂದಿದೆ ಎಂದು ತಿಳಿಸಿದ್ದಾರೆ.
ಸೀಸನ್ 4 ರ ಹೂಡಿಕೆಯಾದ EM5 ಪರ್ಫ್ಯೂಮ್ ಬ್ರ್ಯಾಂಡ್ ಈಗ ದೊಡ್ಡ ಮಟ್ಟದಲ್ಲಿ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಈ ಕಂಪನಿಗೆ ಸ್ಟಾರ್ ಕ್ರಿಕೆಟಿಗ ಟಿ20 ವಿಶ್ವಕಪ್ ಗೆದ್ದ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಲಾಗಿದೆ. ಈ ಬ್ರ್ಯಾಂಡ್‌ನ ಮಾಸಿಕ ಮಾರಾಟವು 1.7 ಕೋಟಿ ರೂ. ನಿಂದ 4.5 ಕೋಟಿ ರೂ. ಗೆ ಏರಿಕೆಯಾಗಿದೆ. ಅಲ್ಲದೆ ಕಂಪನಿಯ ಫ್ಯಾಕ್ಟರಿಯು 6,000 ಚದರ ಅಡಿಯಿಂದ 30,000 ಚದರ ಅಡಿಗೆ ವಿಸ್ತರಣೆಯಾಗಿದೆ.
ಸಾಲದ ನೋವು ಅನುಭವಿಸುತ್ತಿದ್ದ ಹೇರ್ ಕೇರ್ ಬ್ರ್ಯಾಂಡ್ 'ಮೇಂಟೇನ್' ಅನ್ನು ಅಮಾನ್ ಬದಲಿಸಿದ ರೀತಿ ಅದ್ಭುತ. ಕೇವಲ ಗುಂಗುರು ಕೂದಲಿಗೆ ಸೀಮಿತವಾಗಿದ್ದ ಈ ಬ್ರ್ಯಾಂಡ್ ಅನ್ನು ಅಮಾನ್ ಅವರ ಸಲಹೆಯಂತೆ ದೊಡ್ಡ ವರ್ಗದ ಗ್ರಾಹಕರಿಗೂ ವಿಸ್ತರಿಸಲಾಯಿತು. ತಿಂಗಳಿಗೆ 10 ಲಕ್ಷ ರೂ. ಗಳಿಸುತ್ತಿದ್ದ ಈ ಕಂಪನಿ ಈಗ 1.2 ಕೋಟಿ ರೂ. ಆದಾಯ ಕಾಣುತ್ತಿದೆ. ಗ್ರಾಹಕರ ಸಂಖ್ಯೆ 10 ಸಾವಿರದಿಂದ 4 ಲಕ್ಷಕ್ಕೆ ಏರಿಕೆಯಾಗಿದೆ.
ಪ್ರಸ್ತುತ ನಡೆಯುತ್ತಿರುವ ಸೀಸನ್ 5 ರಲ್ಲೂ ಅಮಾನ್ ಗುಪ್ತಾ ಅವರೇ ಅತಿ ಹೆಚ್ಚು ಹೂಡಿಕೆದಾರರಾಗಿ ಹೊರಹೊಮ್ಮಿದ್ದಾರೆ. ಇದುವರೆಗೆ 129 ಪಿಚ್‌ಗಳ ಪೈಕಿ 23 ಕಂಪನಿಗಳಲ್ಲಿ 24.6 ಕೋಟಿ ರೂ. ಹೂಡಿಕೆ ಮಾಡುವ ಭರವಸೆ ನೀಡಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.