ಇ-ರುಪಿ ಅಂದ್ರೆ ಏನು? ಇದ್ರ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ

By Suvarna News  |  First Published Aug 4, 2021, 12:03 PM IST

ಡಿಜಿಟಲ್‌ ಪಾವತಿ ಹಾದಿಯಲ್ಲಿ ಭಾರತ ಮತ್ತೊಂದು ಹೆಜ್ಜೆಯನ್ನಿಟ್ಟಿದೆ.ಇ-ರುಪಿ ಎಂಬ ಡಿಜಿಟಲ್‌ ವೋಚರ್ ವ್ಯವಸ್ಥೆಗೆ ಚಾಲನೆ ಸಿಕ್ಕಿದೆ. ಇ-ರುಪಿ ಉದ್ದೇಶ,ಪ್ರಯೋಜನ,ಲಭ್ಯತೆ ಕುರಿತ ಮಾಹಿತಿ ಇಲ್ಲಿದೆ.


ಡಿಜಿಟಲ್‌ ಕರೆನ್ಸಿ ಹೊಂದುವ ನಿಟ್ಟಿನಲ್ಲಿ ಭಾರತ ಮೊದಲ ಹೆಜ್ಜೆಯಿಟ್ಟಿದೆ. ಇ-ವೋಚರ್‌ ಆಧಾರಿತ ಡಿಜಿಟಲ್‌ ಪಾವತಿ ವ್ಯವಸ್ಥೆ ʼಇ-ರುಪಿʼ ಗೆ ಪ್ರಧಾನಿ ನರೇಂದ್ರ ಮೋದಿ ಆಗಸ್ಟ್‌ 2 ರಂದು ಚಾಲನೆ ನೀಡಿದ್ದಾರೆ. ಭಾರತದ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ), ಹಣಕಾಸು ಸೇವೆಗಳ ಇಲಾಖೆ, ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಹಭಾಗಿತ್ವದಲ್ಲಿ ಈ ವ್ಯವಸ್ಥೆಯನ್ನುಅಭಿವೃದ್ಧಿಪಡಿಸಲಾಗಿದೆ.

ಗೃಹ ಸಾಲದ EMI ಮೊತ್ತ ತಗ್ಗಿಸೋದು ಹೇಗೆ?

Tap to resize

Latest Videos

undefined

ಇ-ರುಪಿ ಹೇಗೆ ಕಾರ್ಯನಿರ್ವಹಿಸುತ್ತದೆ?
ಇ-ರುಪಿ ನಗದುರಹಿತ ಹಾಗೂ ಸಂಪರ್ಕರಹಿತ ಡಿಜಿಟಲ್‌ ಪಾವತಿ ವ್ಯವಸ್ಥೆಯಾಗಿದೆ. ಇದು ಇ-ವೋಚರ್‌ ರೂಪದಲ್ಲಿದ್ದು, ಇದನ್ನು ಫಲಾನುಭವಿಗಳ ಮೊಬೈಲ್ಗೆ ಎಸ್‌ಎಂಎಸ್‌ ಅಥವಾ ಕ್ಯುಆರ್‌ ಕೋಡ್‌ ಮಾದರಿಯಲ್ಲಿ ಕಳುಹಿಸಬಹುದು. ಇದು ಪ್ರೀಪೇಯ್ಡ್ ಇ-ಗಿಫ್ಟ್‌ ವೋಚರ್‌ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಅಂದ್ರೆ ಹೇಗೆ ಇ-ಗಿಫ್ಟ್‌ ವೋಚರ್ ಬಳಸಿ ನಿರ್ದಿಷ್ಟ ಸ್ವೀಕೃತಿ ಕೇಂದ್ರಗಳಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಬಹುದೋ ಹಾಗೆಯೇ ಇ-ರುಪಿ ಕೂಡ. ನಗದು, ಕ್ರೆಡಿಟ್ ಅಥವಾ ಡೆಬಿಟ್‌ ಕಾರ್ಡ್ , ಮೊಬೈಲ್‌ ಆಪ್, ಇ—ಬ್ಯಾಂಕಿಂಗ್ ಇವು ಯಾವುದರ ಅಗತ್ಯವಿಲ್ಲದೆ ಇ-ರುಪಿ ಬಳಸಿ ಪಾವತಿ ಮಾಡಬಹುದು.  ಇದು ನಿರ್ದಿಷ್ಟ ವ್ಯಕ್ತಿ ಹಾಗೂ ಉದ್ದೇಶ ಕೇಂದ್ರೀಕೃತ  ವೋಚರ್ ಪಾವತಿ ವ್ಯವಸ್ಥೆಯಾಗಿದೆ. ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ಸೇವದಾತರು ಹಾಗೂ ಫಲಾನುಭವಿಗಳ ನಡುವೆ ನೇರ ಸಂಪರ್ಕ ಕಲ್ಪಿಸಲು ನೆರವು ನೀಡುತ್ತದೆ. ವಿಶೇಷವಾಗಿ ಇ-ರುಪಿ ಮೂಲಕ ಸರ್ಕಾರದ ಸಹಾಯಧನ ನೇರವಾಗಿ ಫಲಾನುಭವಿಗಳಿಗೆ ತಲುಪಿಸಲಿದೆ. ಸರ್ಕಾರ ಯಾವುದೇ ಯೋಜನೆ ಸಹಾಯಧನವನ್ನು ಪ್ರಸಕ್ತವಿರುವಂತೆ ಫಲಾನುಭವಿ ಬ್ಯಾಂಕ್‌ ಖಾತೆಗೆ ಜಮಾ ಮಾಡೋ ಬದಲು ಆತನ ಮೊಬೈಲ್‌ಗೆ ನೇರವಾಗಿ ಇ-ವೋಚರ್ ಎಸ್‌ಎಂಎಸ್‌ ಕಳುಹಿಸಲಿದೆ.

ಇ-ವೋಚರ್‌ ಪಡೆಯೋದು ಹೇಗೆ?
ಸರ್ಕಾರಿ ಇಲಾಖೆ ಅಥವಾ ಖಾಸಗಿ ಸಂಸ್ಥೆ ಇ- ರುಪಿ ಸೌಲಭ್ಯ ಹೊಂದಿರೋ ಸಾರ್ವಜನಿಕ ಅಥವಾ ಖಾಸಗಿ ಬ್ಯಾಂಕ್‌ ಮುಖಾಂತರ ನಿರ್ದಿಷ್ಟ ವ್ಯಕ್ತಿ ಹೆಸರಿನಲ್ಲಿ ಇ-ವೋಚರ್‌ ಸೃಷ್ಟಿಸಬಹುದು. ಈ ಸಮಯದಲ್ಲಿ ವ್ಯಕ್ತಿಯ ಮಾಹಿತಿ ಹಾಗೂ ಪಾವತಿ ಉದ್ದೇಶವನ್ನು ಬ್ಯಾಂಕ್‌ಗೆ ನೀಡೋದು ಅಗತ್ಯ. ನಂತರ ಆ ವ್ಯಕ್ತಿಯ ಮೊಬೈಲ್‌ ಸಂಖ್ಯೆಗೆ ಇ-ವೋಚರ್‌ ಮಾಹಿತಿಯನ್ನು ಬ್ಯಾಂಕ್‌ ಕಳುಹಿಸುತ್ತದೆ.

ಈ ದಾಖಲೆಗಳಿದ್ರೆ ಸಾಕು, ಅಂಚೆ ಕಚೇರಿಲೂ ಸಿಗುತ್ತೆ ಪಾಸ್‌ಪೋರ್ಟ್!

ಎಲ್ಲಿ ಬಳಕೆಯಾಗುತ್ತದೆ?
ಕೇಂದ್ರ ಸರ್ಕಾರ ನೀಡಿರೋ ಮಾಹಿತಿ ಅನ್ವಯ ಸರ್ಕಾರದ ಕೆಲವು ಯೋಜನೆಗಳಲ್ಲಿ ಇದನ್ನು ಬಳಸಲಾಗುತ್ತದೆ. ತಾಯಿ ಹಾಗೂ ಮಗುವಿನ ಕಲ್ಯಾಣ ಯೋಜನೆಗಳಡಿಯಲ್ಲಿ ಔಷಧ ಹಾಗೂ ಪೌಷ್ಟಿಕಾಂಶಗಳ ಪೂರೈಕೆ ಸೇವೆಗಳಿಗೆ, ಕ್ಷಯ ನಿರ್ಮೂಲನಾ ಕಾರ್ಯಕ್ರಮಗಳು, ಆಯುಷ್ಮಾನ್‌ ಭಾರತ್‌ ಪ್ರಧಾನ ಮಂತ್ರಿ ಜನ್‌ ಆರೋಗ್ಯ ಯೋಜನೆ, ರಸಗೊಬ್ಬರ ಸಬ್ಸಿಡಿ ಮುಂತಾದ ಯೋಜನೆಗಳಲ್ಲಿ ಇ-ರುಪಿ ಬಳಕೆಯಾಗಲಿದೆ. ಖಾಸಗಿ ಸಂಸ್ಥೆಗಳು ಉದ್ಯೋಗಿಗಳ ಕಲ್ಯಾಣ ಹಾಗೂ ಸಿಎಸ್‌ಆರ್‌ ಕಾರ್ಯಕ್ರಮಗಳಲ್ಲಿ ಇ-ರುಪಿ ಬಳಕೆ ಮಾಡಬಹುದೆಂದು ಸರ್ಕಾರ ಸಲಹೆ ನೀಡಿದೆ. 

ಇತರ ಆನ್‌ಲೈನ್‌ ಪೇಮೆಂಟ್‌ಗಿಂತ ಭಿನ್ನ ಹೇಗೆ?
ಇ-ರುಪಿ ಪಾವತಿ ವಿಧಾನ ಯಾವುದೇ ಆಪ್‌ ಅಥವಾ ಮೊಬೈಲ್‌ ಬ್ಯಾಂಕಿಂಗ್‌ಗೆ ಸಂಬಂಧಿಸಿಲ್ಲ. ಹೀಗಾಗಿ ಯಾರು ಬೇಕಾದ್ರೂ ಯಾವುದೇ ಮೊಬೈಲ್‌ನಿಂದ ಇ- ವೋಚರ್‌ ಪಡೆಯಬಹುದು. ಸಂಬಂಧಿಸಿದವರಿಗೆ ಎಸ್‌ಎಂಎಸ್‌ ವೋಚರ್‌ ಮೂಲಕ ಪಾವತಿ ಮಾಡಬಹುದು. ಪ್ರೇಪೇಯ್ಡ್‌ ಆಗಿರೋ ಕಾರಣ ಇ- ವೋಚರ್‌ನಿಂದ ಸಂಬಂಧಪಟ್ಟವರಿಗೆ ಸಮಯಕ್ಕೆ ಸರಿಯಾಗಿ ಪಾವತಿ ಮಾಡಲು ಸಾಧ್ಯವಾಗುತ್ತದೆ. ಅಲ್ಲದೆ, ವ್ಯವಹಾರಕ್ಕೆ ಮಧ್ಯವರ್ತಿಗಳ ಅವಶ್ಯಕತೆಯೂ ಇರೋದಿಲ್ಲ. 

ಇ-ರುಪಿ ದೊರೆಯೋ ಬ್ಯಾಂಕ್‌ಗಳು
ಸದ್ಯ ದೇಶದ 11 ಸಾರ್ವಜನಿಕ ಹಾಗೂ ಖಾಸಗಿ ಬ್ಯಾಂಕ್‌ಗಳಲ್ಲಿ ಇ-ವೋಚರ್‌ ಸೇವೆ ಲಭ್ಯವಿದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಐಸಿಐಸಿಐ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಎಕ್ಸಿಸ್‌ ಬ್ಯಾಂಕ್‌ ಹಾಗೂ ಬ್ಯಾಂಕ್‌ ಆಫ್‌ ಬರೋಡಾದಲ್ಲಿ ಇ-ರುಪಿ ಕೂಪನ್ಗಳ ವಿತರಣೆ ಹಾಗೂ ಸ್ವೀಕೃತಿ (ರಿಡೀಮ್) ಎರಡೂ ಸೌಲಭ್ಯಗಳು ಲಭ್ಯವಿವೆ. ಕೆನರಾ ಬ್ಯಾಂಕ್‌, ಇನ್‌ಸ್ಯುಸ್‌ ಇಂಡ್‌ ಬ್ಯಾಂಕ್‌, ಇಂಡಿಯನ್‌ ಬ್ಯಾಂಕ್‌, ಕೋಟಕ್‌ ಮಹೀಂದ್ರ ಬ್ಯಾಂಕ್‌ ಹಾಗೂ ಯುನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಇ-ರುಪಿ ವಿತರಣೆ ಸೌಲಭ್ಯವಷ್ಟೇ ಇದ್ದು,ರಿಡೀಮ್ ಸೌಲಭ್ಯವಿಲ್ಲ. 

ಸಾಲ ಮರುಪಾವತಿಸಲು ಸಾಧ್ಯವಾಗಿಲ್ಲವೆ? 

ವಿದೇಶಗಳಲ್ಲಿ ಇಂಥ ವ್ಯವಸ್ಥೆಯಿದೆಯಾ?
ಯುಎಸ್ನಲ್ಲಿ ಸ್ಕೂಲ್ ಹಾಗೂ ಎಜುಕೇಷನಲ್‌ ವೋಚರ್‌ ವ್ಯವಸ್ಥೆಯಿದೆ. ವಿದ್ಯಾಭ್ಯಾಸಕ್ಕೆ  ಸಬ್ಸಿಡಿ ನೀಡಲು ಇದನ್ನು ಬಳಸಲಾಗುತ್ತದೆ. ಈ ವೋಚರ್‌ಗಳನ್ನು ಸರ್ಕಾರ ವಿದ್ಯಾರ್ಥಿಗಳ ಪಾಲಕರಿಗೆ ನೇರವಾಗಿ ನೀಡುತ್ತದೆ. ಕೊಲಂಬಿಯಾ, ಚಿಲ್ಲಿ, ಸ್ವೀಡನ್‌, ಹಾಂಗ್‌ಕಾಂಗ್‌ ಮುಂತಾದ ರಾಷ್ಟ್ರಗಳಲ್ಲಿ ಕೂಡ ಸ್ಕೂಲ್‌ ವೋಚರ್‌ ವ್ಯವಸ್ಥೆ ಪ್ರಚಲಿತದಲ್ಲಿದೆ. 
 

click me!