ಕರ್ನಾಟಕ ಜಾಗತಿಕ ಉತ್ಪಾದನಾ ಕೇಂದ್ರವಾಗಿಸುವ ಗುರಿ: ಸಿಎಂ ಬೊಮ್ಮಾಯಿ

By Kannadaprabha News  |  First Published Aug 24, 2022, 11:00 PM IST

ಆಧುನಿಕ ತಂತ್ರಜ್ಞಾನವನ್ನು ಅಳವಡಿಸುವ ಮೂಲಕ ಸುಸ್ಥಿರ ವಿದ್ಯುತ್‌ ಭವಿಷ್ಯವನ್ನು ಸಾಧ್ಯವಾಗಿಸಲು ಸರ್ಕಾರವು ಗ್ರಾಹಕ, ಸಂಸ್ಥೆ ಹಾಗೂ ಪಾಲುದಾರರೊಂದಿಗೆ ನಿಕಟವಾಗಿ ಕಾರ‍್ಯನಿರ್ವಹಿಸಲು ಬದ್ಧವಾಗಿದೆ: ಸಿಎಂ


ದೊಡ್ಡಬಳ್ಳಾಪುರ(ಆ.24):  ಜಾಗತಿಕ ಉತ್ಪಾದನಾ ಕೇಂದ್ರವಾಗಿ ರಾಜ್ಯವನ್ನು ಅಭಿವೃದ್ಧಿಪಡಿಸಲು ಸರ್ಕಾರ ಸ್ಪಷ್ಟಗುರಿ ಹೊಂದಿದ್ದು, ದೀರ್ಘಾವಧಿ ಬದ್ಧತೆಯ ಕೈಗಾರಿಕಾ ಪಾಲುದಾರಿಕೆಗೆ ವಿಶ್ವಮಟ್ಟದ ಕಂಪನಿಗಳೊಂದಿಗೆ ಹಲವು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ದೊಡ್ಡಬಳ್ಳಾಪುರದ ತಮ್ಮಶೆಟ್ಟಿಹಳ್ಳಿಯಲ್ಲಿ ಹಿಟಾಚಿ ಎನರ್ಜಿ ಇಂಡಿಯಾ ಆಯೋಜಿಸಿದ್ದ ಪವರ್‌ ಕ್ವಾಲಿಟಿ ಪ್ರಾಡಕ್ಟ್ಸ್‌ ಫ್ಯಾಕ್ಟರಿಯ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಆಧುನಿಕ ತಂತ್ರಜ್ಞಾನವನ್ನು ಅಳವಡಿಸುವ ಮೂಲಕ ಸುಸ್ಥಿರ ವಿದ್ಯುತ್‌ ಭವಿಷ್ಯವನ್ನು ಸಾಧ್ಯವಾಗಿಸಲು ಸರ್ಕಾರವು ಗ್ರಾಹಕ, ಸಂಸ್ಥೆ ಹಾಗೂ ಪಾಲುದಾರರೊಂದಿಗೆ ನಿಕಟವಾಗಿ ಕಾರ‍್ಯನಿರ್ವಹಿಸಲು ಬದ್ಧವಾಗಿದೆ. ರಾಜ್ಯವು ತನ್ನ ಕೈಗಾರಿಕಾ ಬೆಳವಣಿಗೆಯ ಮಹತ್ವಾಕಾಂಕ್ಷೆಯನ್ನು ವಿವಿಧ ಹಂತಗಳಲ್ಲಿ ಉತ್ತೇಜಿಸುತ್ತಿದೆ ಎಂದರು.

Latest Videos

undefined

ಸ್ಟಾರ್ಟ್‌ಅಪ್‌ಗಳಿಗೆ ಸಾಲ ನೀಡಲು ಎಸ್‌ಬಿಐ ಪ್ರತ್ಯೇಕ ಬ್ಯಾಂಕ್‌ ಖಾಖೆ

ಉದ್ಯೋಗ ಸೃಷ್ಟಿಗೆ ಆದ್ಯತೆ:

ಪೂರೈಕೆದಾರ ಹಾಗೂ ಉದ್ಯಮಸ್ನೇಹಿ ಪರಿಸರ ಒದಗಿಸುವ ಜತೆಗೆ ನೇರ ಮತ್ತು ಪರೋಕ್ಷ ಉದ್ಯೋಗಗಳ ಸೃಷ್ಟಿಗೆ ಒತ್ತು ನೀಡಲಾಗಿದ್ದು, ಶುದ್ಧ ಇಂಧನವನ್ನು ಗ್ರಾಹಕರಿಗೆ ಕೈಗೆಟುಕುವಂತೆ ಮಾಡಲು ಉದ್ಯೋಗ-ವಾಣಿಜ್ಯ ಅವಕಾಶಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ವಿದ್ಯುತ್‌ ಉಪಕರಣಗಳ ಉತ್ಪಾದನೆಯು ಇಂಧನ ತೀವ್ರ ಪ್ರಕ್ರಿಯೆಯಾದ್ದು, ಸುಸ್ಥಿರತೆಯ ಗುರಿಗಳ ಆಧಾರದಲ್ಲಿ ವಿದ್ಯುತ್‌ ಬಳಕೆ ಕಡಿಮೆ ಮಾಡುವ ಉದ್ದೇಶದೊಂದಿಗೆ ನವೀನ ಪ್ರಕ್ರಿಯೆಗಳ ಅಳವಡಿಕೆಗೆ ಆದ್ಯತೆ ನೀಡಲಾಗುತ್ತಿದೆ ಎಂದರು.

ವಿದ್ಯುತ್‌ ವಿನಿಮಯದಿಂದ ಪ್ರಗತಿ: 

ಇಂದು ದೇಶದಲ್ಲಿ ಒನ್‌ ನೇಷನ್‌ ಒನ್‌ ಗ್ರಿಡ್‌ ಪರಿಕಲ್ಪನೆಯಲ್ಲಿ ರಾಜ್ಯ ರಾಜ್ಯಗಳ ನಡುವೆ ವಿದ್ಯುತ್‌ ವಿನಿಮಯ ಪ್ರಕ್ರಿಯೆ ಸರಳೀಕೃತಗೊಂಡಿದ್ದು, ವಿದ್ಯುತ್‌ ಕೊರತೆ ತಪ್ಪಿದೆ. ಇಂದು ವಿದ್ಯುತ್‌ ಶೇಖರಣೆ ಬಹುದೊಡ್ಡ ಸವಾಲಾಗಿದ್ದು, ಗುಣಮಟ್ಟದ ವಿದ್ಯುತ್‌ ಪೂರೈಕೆಗೆ ಸರ್ಕಾರ ಒತ್ತು ನೀಡಿದೆ. ಹಸಿರು ಇಂಧನ ಹೆಚ್ಚಿನ ಆದ್ಯತೆಯ ಕ್ಷೇತ್ರವಾಗಿದೆ. ತಾಂತ್ರಿಕ ಶಕ್ತಿಗಳು ಬೆಸೆದುಕೊಂಡರೆ ಹೊಸಯುಗದ ಅನೇಕ ಸವಾಲುಗಳಿಗೆ ಸ್ಪೂರ್ತಿಯುತವಾದ ಉತ್ತರ ನೀಡುವುದರ ಜತೆಗೆ ಸಾಧನೆಯ ಹಾದಿಯಲ್ಲಿ ಮುನ್ನಡೆಯಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

2030ಕ್ಕೆ ಕರ್ನಾಟಕ ನಂಬರ್‌ ಒನ್‌: 

2030ಕ್ಕೆ ವಿದ್ಯುತ್‌ ಸ್ವಾವಲಂಬನೆ ಕ್ಷೇತ್ರದಲ್ಲಿ ಕರ್ನಾಟಕ ನಂಬರ್‌ ಒನ್‌ ಸ್ಥಾನಕ್ಕೇರಲಿದೆ. ಈಗಾಗಲೇ ದೇಶದ ಒಟ್ಟು ವಿದ್ಯುತ್‌ ಉತ್ಪಾದನೆಯಲ್ಲಿ ರಾಜ್ಯ ಮಹತ್ವದ ಸ್ಥಾನ ಹೊಂದಿದೆ. ಪ್ರಧಾನಿ ಅವರ 5 ಟ್ರಿಲಿಯನ್‌ ಆರ್ಥಿಕತೆ ಪರಿಕಲ್ಪನೆಗೆ ಕರ್ನಾಟಕ 1 ಟ್ರಿಲಿಯನ್‌ ಕೊಡುಗೆ ನೀಡುವ ಮಹತ್ತರ ಗುರಿಯನ್ನು ಹೊಂದಲಾಗಿದೆ ಎಂದರು.

ಬ್ರಿಟನ್‌ ಪ್ರಧಾನಿ ಬೊರಿಸ್‌ ಜಾನ್ಸನ್‌, ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಭೇಟಿ!

ಸ್ಟಾರ್ಟ್‌ಅಪ್‌ ಕೇಂದ್ರವಾಗಿ ಕರ್ನಾಟಕ: 

ಮಧ್ಯಮ ಮತ್ತು ಬೃ ಹತ್‌ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಮಾತನಾಡಿ, ಉದ್ಯಮ ಸ್ನೇಹಿ ವಾತಾವರಣ ಹಾಗೂ ಕೈಗಾರಿಕಾ ನೀತಿಗಳು ಸ್ಟಾರ್ಟ್‌ಅಪ್‌ಗಳಿಗೆ ಮುಕ್ತ ವೇದಿಕೆಯನ್ನು ಒದಗಿಸಿಕೊಟ್ಟಿದ್ದರಿಂದಲೇ ಇಂದು ಕರ್ನಾಟಕ ಸ್ಟಾರ್ಟ್‌ಅಪ್‌ ಹಬ್‌ ಆಗಿ ಬೆಳೆದಿದೆ. ಇದು ಯುವ ಜನಾಂಗಕ್ಕೆ ಅನುಕೂಲವಾಗಿದ್ದು, ಹೆಚ್ಚಿನ ಹೂಡಿಕೆ ಆಕರ್ಷಿಸಲು ನೆರವಾಗಲಿದೆ. ಈ ಮೂಲಕ ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗಳು ಮತ್ತಷ್ಟು ಗರಿಗೆದರಲಿದೆ. ಈ ಭಾಗದ ಜನರಿಗೆ ಉದ್ಯೋಗ ಒದಗಿಸುವುದರ ಜೊತೆಗೆ ಆರ್ಥಿಕ ಚಟುವಟಿಕೆಗಳು ಗರಿಗೆದರುವಂತೆ ಮಾಡುತ್ತದೆ. ನವಂಬರ್‌ 2ರಿಂದ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯಲಿದೆ ಎಂದರು.

ಬಂಡವಾಳ ಆಕರ್ಷಣೆಯಲ್ಲಿ ಮುಂಚೂಣಿ: 

ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌ ಮಾತನಾಡಿ, ರಾಜ್ಯ ಬಂಡವಾಳ ಆಕರ್ಷಣೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದ್ದು, ನಮ್ಮ ಸರ್ಕಾರದ ಉದ್ಯಮ ಸ್ನೇಹಿ ನೀತಿಗಳಿಂದಾಗಿ ಅನೇಕ ಜಾಗತಿಕ ಉದ್ಯಮಗಳು ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡುತ್ತಿವೆ. ದೊಡ್ಡಬಳ್ಳಾಪುರದಲ್ಲಿ ತಲೆ ಎತ್ತಿರುವ ಹಿಟಾಚಿ ಕಂಪೆನಿಯವರ ಹೊಸ ಕಾರ್ಖಾನೆಯಿಂದ ಅನೇಕ ಯುವಕರಿಗೆ ಉದ್ಯೋಗವಕಾಶ ದೊರೆಯಲಿದೆ ಎಂದರು.
ಹಿಟಾಚಿ ಎನರ್ಜಿಯ ಜಾಗತಿಕ ಮುಖ್ಯ ಕಾರ‍್ಯನಿರ್ವಹಣಾಧಿಕಾರಿ ಕ್ಲಾಡಿಯೊ ಫಾಚಿನ್‌, ಹಿಟಾಚಿ ಎನರ್ಜಿ ಇಂಡಿಯಾದ ಮುಖ್ಯ ಕಾರ‍್ಯನಿರ್ವಹಣಾಧಿಕಾರಿ ಎನ್‌.ವೇಣು, ಕೈಗಾರಿಕಾ ಇಲಾಖೆ ಅಪರ ಕಾರ‍್ಯದರ್ಶಿ ಡಾ.ರಮಣರೆಡ್ಡಿ ಮತ್ತಿತರರು ಭಾಗವಹಿಸಿದ್ದರು.

click me!