
ನವದೆಹಲಿ (ಆ.3): ಈ ವರ್ಷದ ಪ್ರಾರಂಭದಲ್ಲಿ ಅಮೆರಿಕದ ಹಿಂಡನ್‌ಬರ್ಗ್ ರಿಸರ್ಚ್ ವರದಿ ಅದಾನಿ ಗ್ರೂಪ್ ವಿರುದ್ಧ ವಂಚನೆ ಆರೋಪ ಮಾಡಿದ ಬೆನ್ನಲ್ಲೇ ಕಂಪನಿ ಭಾರೀ ನಷ್ಟ ಅನುಭವಿಸಿತ್ತು. ಅದಾನಿ ಸಮೂಹ 11.55 ಲಕ್ಷ ಕೋಟಿ ರೂ ನಷ್ಟು ಮೌಲ್ಯ ಕಳೆದುಕೊಂಡಿತ್ತು. ಹಿಂಡೆನ್ ಬರ್ಗ್ ವರದಿಯಿಂದ ಅದಾನಿ ಗ್ರೂಪ್‌ನ ಷೇರುಗಳು ಮಾರುಕಟ್ಟೆಯಲ್ಲಿ ದಯನೀಯ ಸ್ಥಿತಿಗೆ ಬಂದು ತಲುಪಿದ್ದವು. ಅದಾನಿ ಸಮೂಹ ಸಂಸ್ಥೆಗಳ ಮುಖ್ಯಸ್ಥ ಗೌತಮ್ ಅದಾನಿ ಸಂಪತ್ತಿನಲ್ಲಿ ಕೂಡ ಭಾರೀ ಇಳಿಕೆಯಾಗಿತ್ತು. ವಿಶ್ವದ ಸಿರಿವಂತರ ಪಟ್ಟಿಯಲ್ಲಿ ಕೂಡ ಅದಾನಿ ಭಾರೀ ಕುಸಿತ ಕಂಡಿದ್ದರು. ಏಷ್ಯಾ ಹಾಗೂ ಭಾರತದ ನಂ.1 ಶ್ರೀಮಂತ ಉದ್ಯಮಿ ಎಂಬ ಪಟ್ಟ ಕೂಡ ಕೈಜಾರಿ ಹೋಗಿತ್ತು. ಆದರೆ, ಈ ಘಟನೆಯಾದ ಕೆಲವು ತಿಂಗಳ ಬಳಿಕ ಅದಾನಿ ಗ್ರೂಪ್ ಈಗ ಮರಳಿ ಹಳಿಗೆ ಬರುತ್ತಿದೆ. ಒಂದೆಡೆ ಈ ಸಂಸ್ಥೆಯ ಷೇರುಗಳು ಚೇತರಿಕೆ ಕಾಣುತ್ತಿದ್ದರೆ, ಇನ್ನೊಂದೆಡೆ ಉದ್ಯಮವನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಇದರ ಭಾಗವಾಗಿಯೇ ಅದಾನಿ ಗ್ರೂಪ್ ದೊಡ್ಡ ಸಿಮೆಂಟ್ ಕಂಪನಿಯೊಂದನ್ನು ಖರೀದಿಸಿದೆ. ಅದಾನಿ ಸಮೂಹದ ಅಂಬುಜಾ ಸಿಮೆಂಟ್ (ಎಸಿಎಲ್) 5,000 ಕೋಟಿ ರೂ.ಗೆ ಸಾಂಘಿ ಇಂಡ್ ಸ್ಟ್ರೀಸ್ (ಎಸ್ ಐಎಲ್) ಅನ್ನು ಖರೀದಿಸಿದೆ.
ಅಂಬುಜಾ ಸಿಮೆಂಟ್ (ಎಸಿಎಲ್) ಎಸ್ ಐಎಲ್ ನ ಶೇ.56.74 ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲಿದೆ. ಸಾಂಘಿ ಇಂಡ್ ಸ್ಟ್ರೀಸ್ (ಎಸ್ ಐಎಲ್) ಪಶ್ಚಿಮ ಭಾರತದ ಪ್ರಮುಖ ಸಿಮೆಂಟ್ ಕಂಪನಿಯಾಗಿದೆ. ಹಿಂಡೆನ್ ಬರ್ಗ್ ವರದಿ ವಂಚನೆ ಆರೋಪ ಮಾಡಿದ ಬಳಿಕ ಅದಾನಿ ಸಮೂಹ ನಡೆಸುತ್ತಿರುವ ಮೊದಲ ಅತೀದೊಡ್ಡ ಖರೀದಿ ಇದಾಗಿದೆ. ಎಸ್ಐಎಲ್ ಸ್ವಾಧೀನದಿಂದ ಅಂಬುಜಾ ಸಿಮೆಂಟ್ ಮಾರುಕಟ್ಟೆ ಇನ್ನಷ್ಟು ವಿಸ್ತಾರಗೊಳ್ಳಲಿದೆ ಎಂದು ಹೇಳಲಾಗಿದೆ.
ಸಾಂಘಿ ಇಂಡ್ ಸ್ಟ್ರೀಸ್ ಸ್ವಾಧೀನಪಡಿಸಿಕೊಂಡ ವಿಚಾರವನ್ನು ಬಹಿರಂಗಗೊಳಿಸಿದ ಬಳಿಕ, ಈ ಬಗ್ಗೆ ಮಾತನಾಡಿದ ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ, 'ಅಂಬುಜಾ ಸಿಮೆಂಟ್ ಬೆಳವಣಿಗೆಯ ಹಾದಿಯನ್ನು ಇನ್ನಷ್ಟು ವಿಸ್ತರಿಸುವಲ್ಲಿ ಈ ಸ್ವಾಧೀನ ಪ್ರಕ್ರಿಯೆ ಲ್ಯಾಂಡ್ ಮಾರ್ಕ್ ಆಗಲಿದೆ' ಎಂದು ತಿಳಿಸಿದ್ದಾರೆ. ಈ ಸ್ವಾಧೀನದಿಂದ ಅದಾನಿ ಗ್ರೂಪ್ 2028ರೊಳಗೆ 40 MTPA ಸಿಮೆಂಟ್ ಉತ್ಪಾದಿಸುವ ಸಾಮರ್ಥ್ಯ ಗಳಿಸುವ ಗುರಿ ತಲುಪುವ ಹಾದಿ ಸುಲಭವಾಗಲಿದೆ' ಎಂದು ಹೇಳಿದ್ದಾರೆ.
ಉದ್ಯಮ ವಿಸ್ತರಣೆಯತ್ತ ಅದಾನಿ ಚಿತ್ತ; ನೈಸರ್ಗಿಕ ಅನಿಲ ಪೂರೈಕೆ ಕ್ಷೇತ್ರದಲ್ಲಿ 20 ಸಾವಿರ ಕೋಟಿ ರೂ. ಹೂಡಿಕೆ
ಗುಜರಾತ್ ಕಛ್ ಜಿಲ್ಲೆಯ ಸಾಂಘಿಪುರಂನಲ್ಲಿರುವ ಎಸ್ ಐಎಲ್ ಸಮಗ್ರುತ್ಪಾದನಾ ಘಟಕ ಭಾರತದ ಏಕಸ್ಥಳದಲ್ಲಿ ಉತ್ಪಾದನೆಯಾಗುವ ಅತೀದೊಡ್ಡ ಘಟಕವಾಗಿದೆ. 2,700 ಹೆಕ್ಟೇರ್ ಪ್ರದೇಶದಲ್ಲಿ ಈ ಘಟಕವಿದೆ. ಎಸ್ ಐಎಲ್ ಗುಜರಾತ್ ನವ್ಲಖಿ ಬಂದರು ಹಾಗೂ ಮಹಾರಾಷ್ಟ್ರದ ಧರ್ಮತರ್ ಬಂದರಿನಲ್ಲಿ ಬೃಹತ್ ಸಿಮೆಂಟ್ ಟರ್ಮಿನಲ್ ಹೊಂದಿದೆ. ಬಹುತೇಕ ಸಿಮೆಂಟ್ ಸಮುದ್ರ ಮಾರ್ಗದ ಮೂಲಕವೇ ಸಾಗಣೆ ಮಾಡಲಾಗುತ್ತದೆ. ಇದು ಪರಿಸರಸ್ನೇಹಿಯಾಗಿರುವ ಜೊತೆಗೆ ಸಾಗಣೆ ವೆಚ್ಚ ಕೂಡ ಕಡಿಮೆ. ಎಸ್ ಐಎಲ್ 850 ಡಿಲರ್ ಗಳ ನೆಟ್ ವರ್ಕ್ ಹೊಂದಿದೆ. ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಮಾರುಕಟ್ಟೆ ಹೊಂದಿದೆ.
IRCTCಯನ್ನೂ ಅದಾನಿ ಸ್ವಾಧೀನಪಡಿಸಿಕೊಳ್ತಾರೆ ಎಂದ ಕಾಂಗ್ರೆಸ್: ರೈಲ್ವೆ ಬುಕಿಂಗ್ ಪ್ಲಾಟ್‌ಫಾರ್ಮ್ ತಿರುಗೇಟು
ಅಂಬುಜಾ ಸಿಮೆಂಟ್ ಎಸ್ ಐಎಲ್ ಅನ್ನು ಸ್ವಾಧೀನಪಡಿಸಿಕೊಂಡಿದೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಅಂಬುಜಾ ಸಿಮೆಂಟ್ ಷೇರುಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಎನ್ ಎಸ್ ಇಯಲ್ಲಿ ಅಂಬುಜಾ ಸಿಮೆಂಟ್ ಒಂದು ಷೇರಿನ ಬೆಲೆ 468.50ರೂ. ತಲುಪಿದೆ. ಮುಂದಿನ ಎರಡು ವರ್ಷಗಳಲ್ಲಿ ಸಾಂಘಿಪುರಂನಲ್ಲಿ ಎಸಿಎಲ್ ಸಿಮೆಂಟ್ ಉತ್ಪಾದನಾ ಸಾಮರ್ಥ್ಯ 15 MTPA ಏರಿಕೆಯಾಗಲಿದೆ. ಇನ್ನು ಎಸಿಎಲ್ ಸಾಂಘಿಪುರಂನಲ್ಲಿ ದೊಡ್ಡ ಹಡಗುಗಳನ್ನು ನಿರ್ವಹಣೆ ಮಾಡಲು ಬಂದರಿನ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಕೂಡ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.