ಹಿಂಡನ್‌ಬರ್ಗ್‌ ವಿರುದ್ಧ ಅದಾನಿ ಕಾನೂನು ಸಮರ: ಅಮೆರಿಕದ ದುಬಾರಿ ಕಾನೂನು ಸಂಸ್ಥೆ ‘ವಾಚ್‌ಟೆಲ್‌’ ನೇಮಕ

By Kannadaprabha News  |  First Published Feb 11, 2023, 10:03 AM IST

100 ಪುಟ ಬಳಸಿ 100 ಬಿಲಿಯನ್‌ ಡಾಲರ್‌ ಕರಗಿಸಿರುವ ಹಿಂಡನ್‌ಬರ್ಗ್‌ ರೀಸರ್ಚ್‌ ವಿರುದ್ಧದ ತನಿಖೆಗೆ ಅಮೆರಿಕದ ದುಬಾರಿ ಕಾನೂನು ಸಂಸ್ಥೆ ‘ವಾಚ್‌ಟೆಲ್‌’ ಅನ್ನು ಅದಾನಿ ನೇಮಿಸಿದ್ದಾರೆ. ಈ ಮೂಲಕ ಹಿಂಡನ್‌ಬರ್ಗ್‌ ವಿರುದ್ಧ ಕಾನೂನು ಸಮರ ನಡೆಸುತ್ತಿದ್ದಾರೆ. 


ನವದೆಹಲಿ (ಫೆಬ್ರವರಿ 11, 2023): 100 ಪುಟಗಳ ವರದಿಯಲ್ಲಿ ವಂಚನೆ ಆರೋಪ ಮಾಡಿ ಕೆಲವೇ ದಿನಗಳಲ್ಲಿ ತನಗೆ 100 ಬಿಲಿಯನ್‌ ಡಾಲರ್‌ (8.2 ಲಕ್ಷ ಕೋಟಿ ರು.) ನಷ್ಟ ಉಂಟು ಮಾಡಿದ ಅಮೆರಿಕದ ಶಾರ್ಚ್‌ ಸೆಲ್ಲರ್‌ ಹಿಂಡನ್‌ಬರ್ಗ್‌ ರೀಸರ್ಚ್‌ ಸಂಸ್ಥೆಯ ವಿರುದ್ಧ ಅದಾನಿ ಸಮೂಹ ಕಂಪನಿ ಬೃಹತ್‌ ಕಾನೂನು ಸಮರ ಆರಂಭಿಸಿದೆ. ಹಿಂಡನ್‌ಬರ್ಗ್‌ಗೆ ತಕ್ಕ ಪಾಠ ಕಲಿಸಲು ಅಮೆರಿಕದ ಅತ್ಯಂತ ದುಬಾರಿ ಹಾಗೂ ಪ್ರಬಲ ಕಾನೂನು ಸಂಸ್ಥೆಯಾದ ನ್ಯೂಯಾರ್ಕ್‌ನ ‘ವಾಚ್‌ಟೆಲ್‌, ಲಿಪ್ಟನ್‌, ರೋಸೆನ್‌, ಕಾಟ್ಜ್‌’ ಕಂಪನಿಯನ್ನು ನೇಮಕ ಮಾಡಿಕೊಂಡಿದೆ.

ಈಗಾಗಲೇ ಅಮೆರಿಕದ ಕಾನೂನು ಸಲಹಾ ಕಂಪನಿಯ ಬಳಿ ಹಿಂಡನ್‌ಬರ್ಗ್‌ ವಿರುದ್ಧ ಪರಿಹಾರಕ್ಕೆ ಅದಾನಿ ಮೊರೆ ಇಟ್ಟಿದೆ. ವಾಚ್‌ಟೆಲ್‌ನಂತಹ ದುಬಾರಿ ಕಂಪನಿಯನ್ನು ಕಾನೂನು ಸಮರಕ್ಕೆ ಅದಾನಿ ನೇಮಿಸಿಕೊಂಡಿರುವುದನ್ನು ಗಮನಿಸಿದರೆ ಹಿಂಡನ್‌ಬರ್ಗ್‌ ಮಾಡಿದ ಪರಿಣಾಮ ಎದ್ದು ಕಾಣುತ್ತದೆ ಎಂದು ವರದಿಗಳು ತಿಳಿಸಿವೆ. ಅಮೆರಿಕದ ದೊಡ್ಡ ದೊಡ್ಡ ಕಂಪನಿಗಳಿಗೆ ಬಹುಬೇಡಿಕೆಯ ಕಾನೂನು ಸಂಸ್ಥೆ ವಾಚ್‌ಟೆಲ್‌ ಆಗಿದೆ. ದಶಕಗಳಿಂದ ಇದು ಕಾನೂನು ಸೇವೆ ಒದಗಿಸುತ್ತಿದೆ.

Tap to resize

Latest Videos

ಇದನ್ನು ಓದಿ: ಅದಾನಿ ಕಂಪನೀಲಿ ವಿದೇಶಿ ಹೂಡಿಕೆ ಬಗ್ಗೆ ಸೆಬಿ ತನಿಖೆ; ಹೂಡಿಕೆದಾರರ ಹಿತ ಕಾಯಲು ತಜ್ಞರ ಸಮಿತಿ ರಚಿಸಿ ಎಂದ ಸುಪ್ರೀಂ

‘ಹಿಂಡನ್‌ಬರ್ಗ್‌ ನಿಷೇಧಕ್ಕೆ ಒಳಗಾಗಿಲ್ಲ’:
ಅದಾನಿ ಸಮೂಹದ ಮಾರುಕಟ್ಟೆ ಬಂಡವಾಳವನ್ನೇ ತನ್ನ ಒಂದೇ ಒಂದು ವರದಿ ಮೂಲಕ ಕರಗಿಸಿದ ಅಮೆರಿಕದ ಹಿಂಡನ್‌ಬರ್ಗ್‌ ಸಂಸ್ಥೆ ಎಂದೂ ನಿಷೇಧಕ್ಕೆ ಒಳಗಾಗಿಲ್ಲ. ಅದರ ಖಾತೆಯನ್ನು ಎಂದೂ ಮುಟ್ಟುಗೋಲು ಹಾಕಿಕೊಳ್ಳಲಾಗಿಲ್ಲ. ಯಾವುದೇ ತನಿಖೆಯೂ ಸಂಸ್ಥೆಯ ವಿರುದ್ಧ ನಡೆದಿಲ್ಲ ಎಂದು ಅದರ ಸಂಸ್ಥಾಪಕ ನಾಥನ್‌ ಆ್ಯಂಡರ್‌ಸನ್‌ ತಿಳಿಸಿದ್ದಾರೆ.
ಅದಾನಿ ಕಂಪನಿಯ ವಿರುದ್ಧ ಪ್ರತಿಕೂಲ ವರದಿ ಪ್ರಕಟವಾದ ಬಳಿಕ ‘ಹಿಂಡನ್‌ಬರ್ಗ್‌ ಮೂರು ಕ್ರಿಮಿನಲ್‌ ವಿಚಾರಣೆ ಎದುರಿಸಿದೆ, ಅಮೆರಿಕದ ಕೈಗಾರಿಕಾ ಹಣಕಾಸು ನಿಯಂತ್ರಣ ಪ್ರಾಧಿಕಾರ (ಫಿನ್ರಾ) ನಿಷೇಧ ಹೇರಿತ್ತು. ಅದರ ಬ್ಯಾಂಕ್‌ ಖಾತೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ನ್ಯೂಯಾರ್ಕ್ ಷೇರುಪೇಟೆಯಲ್ಲಿ ನೋಂದಾಯಿತವಾಗಿರುವ ಕಂಪನಿಗಳ ವಿರುದ್ಧ ಯಾವುದೇ ವರದಿ ಪ್ರಕಟಿಸದಂತೆ ಅದಕ್ಕೆ ನಿಷೇಧ ಹೇರಲಾಗಿತ್ತು’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಹರದಾಡುತ್ತಿದ್ದವು. ಈ ಹಿನ್ನೆಲೆಯಲ್ಲಿ ಅವೆಲ್ಲಾ ಸುಳ್ಳು ಎಂದು ನಾಥನ್‌ ಆ್ಯಂಡರ್‌ಸನ್‌ ಸ್ಪಷ್ಟನೆ ನೀಡಿದ್ದಾರೆ.

ಅದಾನಿ ಸಮೂಹದ 4 ಕಂಪನಿಗಳ ರೇಟಿಂಗ್‌ ಕಡಿತಗೊಳಿಸಿದ ಮೂಡೀಸ್‌
ಸ್ಥಿರವಾಗಿದ್ದ ಅದಾನಿ ಸಮೂಹ ಸಂಸ್ಥೆಗಳ 4 ಕಂಪನಿಗಳ ರೇಟಿಂಗ್‌ ಅನ್ನು ಮೂಡೀಸ್‌ ಇನ್ವೆಸ್ಟರ್‌ ಸರ್ವೀಸ್‌ ಸಂಸ್ಥೆ ಶುಕ್ರವಾರ ಕಡಿತಗೊಳಿಸಿದೆ. ಅಮೆರಿಕ ಮೂಲಕ ಹಿಂಡನ್‌ಬರ್ಗ್ ವರದಿಯಿಂದಾಗಿ ಅದಾನಿ ಸಮೂಹದ ಷೇರುಮೌಲ್ಯ ಭಾರಿ ಕುಸಿತ ಕಂಡಿತ್ತು. ಇದರ ಬೆನ್ನಲ್ಲೇ ಮೂಡೀಸ್‌ ಸಹ ರೇಟಿಂಗ್‌ ಕಡಿತಗೊಳಿಸಿದೆ. ಅದಾನಿ ಗ್ರೀನ್‌ ಎನರ್ಜಿ ಲಿಮಿಟೆಡ್‌, ಅದಾನಿ ಗ್ರೀನ್‌ ಎನರ್ಜಿ ರಿಸ್ಟ್ರಿಕ್ಟೆಟ್‌ ಗ್ರೂಪ್‌, ಅದಾನಿ ಟ್ರಾನ್ಸ್‌ಮಿಶನ್‌ ಸ್ಟೆಪ್‌ ಒನ್‌ ಲಿಮಿಟೆಡ್‌ ಮತ್ತು ಅದಾನಿ ಎಲೆಕ್ಟ್ರಿಸಿಟಿ ಮುಂಬೈ ಲಿಮಿಟೆಡ್‌ ಕಂಪನಿಗಳ ರೇಟಿಂಗ್‌ಗಳನ್ನು ಸ್ಥಿರದಿಂದ ನೆಗೆಟಿವ್‌ಗೆ ಇಳಿಕೆ ಮಾಡಿದೆ. ಈ ಇಳಿಕೆಯು ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್‌ ಷೇರುಗಳ ಮೌಲ್ಯದ ಇಳಿಕೆಯನ್ನು ಆಧರಿಸಿದೆ ಎಂದು ಮೂಡೀಸ್‌ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: ಮುಳುಗಿಯೇ ಬಿಡುತ್ತಾ ಅದಾನಿ ಸಾಮ್ರಾಜ್ಯ..? ಅದಾನಿ ಷೇರಿನಲ್ಲಿರೋ ಎಲ್ಐಸಿ ಹಣ ಎಷ್ಟು ಸೇಫ್?

click me!