ಪಿಪಿಎಫ್, ಎಸ್ ಎಸ್ ವೈ ಹಾಗೂ ಇತರ ಸಣ್ಣ ಉಳಿತಾಯ ಯೋಜನೆಗಳಿಗೆ ಇನ್ಮುಂದೆ ಆಧಾರ್ ಹಾಗೂ ಪ್ಯಾನ್ ಕಡ್ಡಾಯಗೊಳಿಸಲಾಗಿದೆ. ಈ ಸಂಬಂಧ ಹಣಕಾಸು ಸಚಿವಾಲಯ ಸುತ್ತೋಲೆ ಹೊರಡಿಸಿದೆ. ಇದಕ್ಕೂ ಮುನ್ನ ಆಧಾರ್ ಕಾರ್ಡ್ ಸಲ್ಲಿಕೆ ಮಾಡದೆಯೂ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಅವಕಾಶವಿತ್ತು.
ನವದೆಹಲಿ (ಏ.2): ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಸುಕನ್ಯಾ ಸಮೃದ್ಧಿ ಯೋಜನೆ (ಎಸ್ ಎಸ್ ವೈ), ಅಂಚೆ ಕಚೇರಿ ಉಳಿತಾಯ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್ ಸಿಎಸ್ ಎಸ್) ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳಲ್ಲಿ ಇನ್ಮುಂದೆ ಹೂಡಿಕೆ ಮಾಡಲು ಆಧಾರ್ ಹಾಗೂ ಪ್ಯಾನ್ ಕಡ್ಡಾಯ. ಈ ಕುರಿತು 2023ರ ಮಾರ್ಚ್ 31ರಂದು ಹಣಕಾಸು ಸಚಿವಾಲಯ ಸುತ್ತೋಲೆ ಹೊರಡಿಸಿತ್ತು. ಈ ಬದಲಾವಣೆಗಳನ್ನು ಸಣ್ಣ ಉಳಿತಾಯ ಯೋಜನೆಗಳ ಕೆವೈಸಿ ಭಾಗವಾಗಿ ಪರಿಗಣಿಸಲಾಗುತ್ತದೆ. ಕೇಂದ್ರ ಸರ್ಕಾರ ಈ ಸುತ್ತೋಲೆ ಹೊರಡಿಸುವ ಮುನ್ನ ಆಧಾರ್ ಕಾರ್ಡ್ ಸಲ್ಲಿಕೆ ಮಾಡದೆಯೂ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಅವಕಾಶವಿತ್ತು. ಆದರೆ, ಇನ್ನು ಮುಂದೆ ಸರ್ಕಾರದ ಬೆಂಬಲಿತ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಕನಿಷ್ಠ ಆಧಾರ್ ನೋಂದಣಿ ಸಂಖ್ಯೆಯನ್ನಾದರೂ ಸಲ್ಲಿಕೆ ಮಾಡೋದು ಅಗತ್ಯ. ಅಲ್ಲದೆ, ಈ ಅಧಿಸೂಚನೆಯಲ್ಲಿ ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಹೂಡಿಕೆಗೆ ಪ್ಯಾನ್ ಕಾರ್ಡ್ ಮಾಹಿತಿ ನೀಡುವುದು ಕಡ್ಡಾಯ ಎಂದು ತಿಳಿಸಲಾಗಿದೆ. ಹೀಗಾಗಿ ಇನ್ನು ಮುಂದೆ ನೀವು ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸಿದರೆ ಅಥವಾ ಈಗಾಗಲೇ ಹೂಡಿಕೆ ಮಾಡಿದ್ದರೆ ಕೂಡ ಆಧಾರ್ ಹಾಗೂ ಪ್ಯಾನ್ ಸಂಖ್ಯೆ ಸಲ್ಲಿಕೆ ಮಾಡೋದು ಕಡ್ಡಾಯ.
ಸಣ್ಣ ಉಳಿತಾಯ ಯೋಜನೆ ಹೊಸ ನಿಯಮ
ಕೇಂದ್ರ ಹಣಕಾಸು ಸಚಿವಾಲಯದ ಅಧಿಸೂಚನೆ ಅನ್ವಯ ಪಿಪಿಎಫ್, ಎಸ್ ಎಸ್ ವೈ, ಎನ್ ಎಸ್ ಸಿ, ಎಸ್ ಸಿಎಸ್ ಎಸ್ ಸೇರಿದಂತೆ ಯಾವುದೇ ಸಣ್ಣ ಉಳಿತಾಯ ಯೋಜನೆ ಖಾತೆ ತೆರೆಯುವಾಗ ಆಧಾರ್ ಸಂಖ್ಯೆ ಸಲ್ಲಿಕೆ ಮಾಡದಿದ್ರೆ ಅಂಥವರು 2023ರ ಸೆಪ್ಟೆಂಬರ್ 30ರೊಳಗೆ ಆಧಾರ್ ಸಂಖ್ಯೆ ಸಲ್ಲಿಕೆ ಮಾಡಬೇಕು. ಒಂದು ವೇಳೆ ಆಧಾರ್ ಸಂಖ್ಯೆ ಇಲ್ಲದೆ ನೀವು ಯಾವುದೇ ಸಣ್ಣ ಉಳಿತಾಯ ಯೋಜನೆ ಖಾತೆ ತೆರೆಯಲು ಬಯಸಿದ್ರೆ ಖಾತೆ ತೆರೆದ ಆರು ತಿಂಗಳೊಳಗೆ ಆಧಾರ್ ಸಂಖ್ಯೆ ಸಲ್ಲಿಕೆ ಮಾಡಬೇಕು ಎಂದು ಅಧಿಸೂಚನೆಯಲ್ಲಿ ಸೂಚಿಸಲಾಗಿದೆ. ಆಧಾರ್ ಸಂಖ್ಯೆ ಇಲ್ಲದ ಸಂದರ್ಭದಲ್ಲಿಆಧಾರ್ ನೋಂದಣಿ ಸಂಖ್ಯೆಯನ್ನು ಕೂಡ ನೀಡಬಹುದಾಗಿದೆ. ಒಂದು ವೇಳೆ ಸಣ್ಣ ಉಳಿತಾಯ ಖಾತೆ ತೆರೆದು ಆರು ತಿಂಗಳು ಕಳೆದ ಬಳಿಕವೂ ಆಧಾರ್ ಸಂಖ್ಯೆ ಸಲ್ಲಿಕೆ ಮಾಡದಿದ್ರೆ ಅಂಥವರ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಇನ್ನು ಈಗಾಗಲೇ ಸಣ್ಣ ಉಳಿತಾಯ ಯೋಜನೆಗಳಲ್ಲಿ ಖಾತೆ ಹೊಂದಿದ್ದು, ಆಧಾರ್ ಸಂಖ್ಯೆ ಒದಗಿಸಲು ವಿಫಲರಾಗಿರೋರ ಖಾತೆಯನ್ನು 2023ರ ಅಕ್ಟೋಬರ್ 1ರಿಂದ ಫ್ರೀಜ್ ಮಾಡಲಾಗುತ್ತದೆ.
ಸಣ್ಣ ಉಳಿತಾಯ ಖಾತೆದಾರರಿಗೆ ಗುಡ್ ನ್ಯೂಸ್: ಬಡ್ಡಿ ದರದಲ್ಲಿ ಭಾರಿ ಹೆಚ್ಚಳ
ಅಧಿಸೂಚನೆಯಲ್ಲಿ ಏನಿದೆ?
ಸಣ್ಣ ಉಳಿತಾಯ ಯೋಜನೆಗಳ ಖಾತೆ ತೆರೆಯುವಾಗ ಪ್ಯಾನ್ ಸೇರ್ಪಡೆಗೊಳಿಸೋದು ಅಗತ್ಯ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಖಾತೆ ತೆರೆಯುವ ಸಮಯದಲ್ಲಿ ಪ್ಯಾನ್ ಸಲ್ಲಿಕೆ ಮಾಡದಿದ್ರೆ, ಈ ಕೆಳಗಿನ ಸಂದರ್ಭಗಳಲ್ಲಿ ಖಾತೆ ತೆರೆದ ಎರಡು ತಿಂಗಳೊಳಗೆ ಸಲ್ಲಿಕೆ ಮಾಡಬೇಕು.
*ಖಾತೆಯಲ್ಲಿರುವ ಬ್ಯಾಲೆನ್ಸ್ ಯಾವುದೇ ಸಮಯದಲ್ಲಿ 50 ಸಾವಿರ ರೂ. ಮೀರಿದರೆ.
*ಅಥವಾ ಯಾವುದೇ ಹಣಕಾಸು ವರ್ಷದಲ್ಲಿ ಖಾತೆಯಲ್ಲಿರುವ ಎಲ್ಲ ಕ್ರೆಡಿಟ್ ಗಳ ಒಟ್ಟು ಮೊತ್ತ ಒಂದು ಲಕ್ಷ ರೂ. ಮೀರಿದರೆ
*ಒಂದು ತಿಂಗಳ ಅವಧಿಯಲ್ಲಿ ಖಾತೆಯಲ್ಲಿನ ಎಲ್ಲ ವಿತ್ ಡ್ರಾ ಹಾಗೂ ವರ್ಗಾವಣೆಗಳು 10 ಸಾವಿರ ರೂ. ಮೀರಿದರೆ
ನೀವು ಪಿಂಚಣಿ ಪಡಯುತ್ತಿದ್ದೀರಾ? ಹಾಗಾದ್ರೆ ನೀವು ಕೂಡ ಐಟಿಆರ್ ಸಲ್ಲಿಕೆ ಮಾಡ್ಬೇಕು, ಹೇಗೆ? ಇಲ್ಲಿದೆ ಮಾಹಿತಿ
'ಒಂದು ವೇಳೆ ಠೇವಣಿದಾರ ಕಾಯಂ ಖಾತೆ ಸಂಖ್ಯೆಯನ್ನು (ಪ್ಯಾನ್) ಎರಡು ತಿಂಗಳ ನಿರ್ದಿಷ್ಟ ಅವಧಿಯೊಳಗೆ ಸಲ್ಲಿಕೆ ಮಾಡಲು ವಿಫಲನಾದರೆ, ಆತ ಖಾತೆಗಳ ಕಚೇರಿಗೆ ಕಾಯಂ ಖಾತೆ ಸಂಖ್ಯೆಯನ್ನು ಸಲ್ಲಿಕೆ ಮಾಡುವ ತನಕ ಆತನ ಖಾತೆಯ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಲಾಗುವುದು' ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.