ಮ್ಯಾನೇಜರನ್ನೇ ಬ್ಯುಸಿನೆಸ್ ಪಾರ್ಟನರ್ ಮಾಡಿಕೊಂಡ ದೀಪಿಕಾ ಪಡುಕೋಣೆ; ಹಾಗಾದ್ರೆ ಯಾರು ಈ ಜಿಗರ್ ಶಾ?

By Suvarna NewsFirst Published Apr 2, 2023, 5:16 PM IST
Highlights

ಅನೇಕ ಬಾಲಿವುಡ್ ನಟಿಯರು ನಟನೆಯ ಜೊತೆಗೆ ಉದ್ಯಮ ರಂಗದಲ್ಲೂ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿರೋದು ಗೊತ್ತಿರುವ ವಿಚಾರವೇ. ಈ ಪಟ್ಟಿಯಲ್ಲಿ ಕನ್ನಡತಿ ದೀಪಿಕಾ ಪಡುಕೋಣೆ ಕೂಡ ಸೇರಿದ್ದಾರೆ. 82°E ಎಂಬ ಸ್ಕಿನ್ ಕೇರ್ ಕಂಪನಿಯ ಒಡತಿಯಾಗಿರುವ ದೀಪಿಕಾ ಪಡುಕೋಣೆ, ಈ ಉದ್ಯಮಕ್ಕೆ ತಮ್ಮ ಮ್ಯಾನೇಜರ್ ಜಿಗರ್ ಶಾ ಅವರನ್ನೇ ಸಹಪಾಲುದಾರರನ್ನಾಗಿ ಮಾಡಿಕೊಂಡಿರೋದು ವಿಶೇಷ. 

Business Desk:ಬಾಲಿವುಡ್ ನ ಅನೇಕ ಸೆಲೆಬ್ರಿಟಿಗಳು ಉದ್ಯಮ ರಂಗದಲ್ಲೂ ತಮ್ಮ ಛಾಪು ಮೂಡಿಸುತ್ತಿರೋದು ಹೊಸ ವಿಚಾರವೇನಲ್ಲ. ನಟಿ ಆಲಿಯಾ ಭಟ್ ಮಕ್ಕಳ ಬಟ್ಟೆಯ ಬ್ರ್ಯಾಂಡ್ ವೊಂದರ ಸಹಸಂಸ್ಥಾಪಕಿಯಾಗಿದ್ದು,  ಪ್ರಾರಂಭಗೊಂಡ ಕೆಲವೇ ವರ್ಷಗಳಲ್ಲಿ ಈ ಸಂಸ್ಥೆಯ ಮೌಲ್ಯ 150 ಕೋಟಿ ರೂ.  ತಲುಪಿದೆ. ಇನ್ನು ಕರ್ನಾಟಕ ಮೂಲದ ಬಾಲಿವುಡ್ ಬೆಡಗಿ ಅತೀಹೆಚ್ಚು ಸಂಭಾವನೆ ಪಡೆಯುತ್ತಿರುವ ಭಾರತದ ನಟಿ ಎಂದು ಖ್ಯಾತಿ ಗಳಿಸಿರುವ ದೀಪಿಕಾ ಪಡುಕೋಣೆ ಕೂಡ ಉದ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ದೀಪಿಕಾ ಅವರು ತಮ್ಮ ಮ್ಯಾನೇಜರ್ ಜಿಗರ್ ಶಾ ಅವರನ್ನೇ ಉದ್ಯಮ ಪಾಲುದಾರರನ್ನಾಗಿ ಮಾಡಿಕೊಂಡಿದ್ದಾರೆ. ಜಿಗರ್ ಶಾ ಅವರೊಂದಿಗೆ ಸೇರಿ ಕೆಲವೇ ವರ್ಷಗಳ ಹಿಂದೆ ದೀಪಿಕಾ ಲೈಫ್ ಸ್ಟೈಲ್ ಉದ್ಯಮ ಪ್ರಾರಂಭಿಸಿದ್ದರು. ಇನ್ನು ದೀಪಿಕಾ ಪಡುಕೋಣೆ ಎಪಿಗಮಿಯಾ, ಫುರ್ಲೆನ್ಕೊ, ಬ್ಲೂ ಸ್ಮಾರ್ಟ್, ಬೆಲ್ಲಟ್ರಿಕ್ಸ್, ಅಟೋಂಬರ್ಗ್ ಟೆಕ್ನಾಲಜೀಸ್ ಮುಂತಾದ ಕಂಪನಿಗಳಲ್ಲಿ ಹೂಡಿಕೆ ಕೂಡ ಮಾಡಿದ್ದಾರೆ. ಹಾಗಾದ್ರೆ ದೀಪಿಕಾ ಪಡುಕೋಣೆ ಉದ್ಯಮ ಪ್ರಾರಂಭಿಸಿದ್ದು ಹೇಗೆ? ಯಾವೆಲ್ಲ ಉತ್ಪನ್ನಗಳನ್ನು ಅವರ ಸಂಸ್ಥೆ ಪರಿಚಯಿಸಿದೆ? ಇಲ್ಲಿದೆ ಮಾಹಿತಿ.

ದೀಪಿಕಾ ಪಡುಕೋಣೆ ಹಾಗೂ ಜಿಗರ್ ಶಾ ಉದ್ಯಮ ಪ್ರಾರಂಭಿಸುವ ಮುನ್ನ ಆ ಕುರಿತು ಸಾಕಷ್ಟು ಅಧ್ಯಯನ ನಡೆಸಿದ್ದರು. ಪ್ರಾರಂಭದಲ್ಲಿ ಅವರು ಯಾವುದಾದರೂ ಒಂದು ಬ್ರ್ಯಾಂಡ್ ನಲ್ಲಿ ಅಥವಾ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಯೋಜನೆ ಹೊಂದಿದ್ದರು. ಆದರೆ, ನಿಧಾನವಾಗಿ ಅವರು ತಮ್ಮದೇ ಸ್ವಂತ ಬ್ರ್ಯಾಂಡ್ ಪ್ರಾರಂಭಿಸುವ ನಿರ್ಧಾರ ಕೈಗೊಂಡರು. 82°E ಎಂಬ ಕಂಪನಿ ಪ್ರಾರಂಭಿಸಿದರು. ಇದು ತ್ವಚೆಯ ಆರೈಕೆಗೆ ಸಂಬಂಧಿಸಿದ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಅಂದ ಹಾಗೆ ಈ ಸಂಸ್ಥೆಗೆ 82°E ಎಂಬ ಹೆಸರಿಡಲು ಏನು ಕಾರಣ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಭಾರತದ ರೇಖಾಂಶದಿಂದ ಸ್ಫೂರ್ತಿ ಪಡೆದು ಈ ಹೆಸರು ಇಡಲಾಗಿದೆ. 

Latest Videos

2030ಕ್ಕೆ 165 ಲಕ್ಷ ಕೋಟಿ ರೂ. ರಫ್ತಿನ ಬೃಹತ್‌ ಗುರಿ: ಕೇಂದ್ರದಿಂದ ಹೊಸ ವಿದೇಶಿ ವ್ಯಾಪಾರ ನೀತಿ ಅನಾವರಣ

ಇನ್ನು ದೀಪಿಕಾ ಪಡುಕೋಣೆ ಹೂಡಿಕೆ ಮಾಡಿ ಸುಮ್ಮನೆ ಕುಳಿತಿಲ್ಲ. ಬದಲಿಗೆ ಈ ಸಂಸ್ಥೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಕ್ರಿಯರಾಗಿದ್ದು, ಅನೇಕ ಯೋಜನೆಗಳನ್ನು ಕೂಡ ಹಾಕಿಕೊಂಡಿದ್ದಾರೆ. ಬ್ರ್ಯಾಂಡ್ ಅನ್ನು ಸೃಜನಾತ್ಮಕವಾಗಿ ರೂಪಿಸುವ ಯೋಜನೆಯಲ್ಲಿ ಕೂಡ ತೊಡಗಿದ್ದಾರೆ. ಈ ಬಗ್ಗೆ ಸ್ವತಃ ದೀಪಿಕಾ ಪಡುಕೋಣೆ ಅವರೇ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಕಂಪನಿಯ ಉತ್ಪನ್ನಗಳಿಗೆ ಸಂಬಂಧಿಸಿ ವಿನೂತನ ಯೋಜನೆಗಳನ್ನು ರೂಪಿಸಲು ತಂಡಕ್ಕೆ ನೆರವು ನೀಡುವುದು ಹಾಗೂ ಉತ್ಪನ್ನದ ಉತ್ಪಾದನೆ ಕುರಿತು ಸಂಶೋಧನೆ ಹಾಗೂ ಅಭಿವೃದ್ಧಿ ತಂಡದ ಜೊತೆಗೆ ಚರ್ಚೆ ನಡೆಸುವ ಕೆಲಸವನ್ನು ದೀಪಿಕಾ ಮಾಡುತ್ತಾರೆ. ಇನ್ನು ಉತ್ಪನ್ನಗಳ ಪ್ಯಾಕೇಜಿಂಗ್ ನಲ್ಲಿ ಕೂಡ ಅವರು ನೆರವು ನೀಡುತ್ತಾರೆ. ಜಿಗರ್ ಶಾ ಅವರು ಸಂಸ್ಥೆಯ ಉದ್ಯಮದ ನಿರ್ವಹಣೆ ನೋಡಿಕೊಳ್ಳುತ್ತಾರೆ. ಹಾಗೆಯೇ ಉತ್ಪಾದನೆ ಹಾಗೂ ಮಾನವ ಸಂಪನ್ಮೂಲದ ಮೇಲ್ವಿಚಾರಣೆ ಕೂಡ ನಡೆಸುತ್ತಾರೆ.

ದೀಪಿಕಾ ಪಡುಕೋಣೆ ಅವರ ಕಂಪನಿ ಎರಡು ಹಿರೋ ಉತ್ಪನ್ನಗಳನ್ನು ಉತ್ಪಾದಿಸುತ್ತದೆ. ಪಟ್ ಚೌಲಿ ಗ್ಲೋ (Patchouli Glow) ಎಂಬ ತೈಲ ಮಾದರಿಯ ಲಿಕ್ವಿಡ್ ಸನ್ ಸ್ಕ್ರೀನ್ ಹಾಗೂ ಅಶ್ವಗಂಧ ಬೌನ್ಸ್ ಎಂಬ ಹೈಡ್ರೇಷನ್ ಕ್ರೀಮ್. ವೆಬ್ ಸೈಟ್ ಮೂಲಕ ಈ ಉತ್ಪನ್ನಗಳನ್ನು ಕಂಪನಿ ಮಾರಾಟ ಮಾಡುತ್ತಿದೆ. ಇನ್ನು ಈ ಉತ್ಪನ್ನಗಳ ಮಾರಾಟಕ್ಕೆ ಕಂಪನಿ ಇನ್ನೊಂದು ತಂತ್ರ ಪಾಲಿಸುತ್ತದೆ. ಅದೇನಪ್ಪ ಅಂದ್ರೆ ಅವರು ಈ ಉತ್ಪನ್ನಗಳನ್ನು ನಿಗದಿತ ಮಿತಿಯಲ್ಲಿ ಮಾರಾಟ ಮಾಡುತ್ತಾರೆ. ಈ ಮೂಲಕ ಉತ್ಪನ್ನಕ್ಕೆ ಬೇಡಿಕೆ ಹೆಚ್ಚಿಸಲು ಪ್ರಯತ್ನಿಸುತ್ತಾರೆ. ಏಕೆಂದರೆ ಈ ಉತ್ಪನ್ನಗಳ ಬೆಲೆ ಹೆಚ್ಚಿರುವ ಕಾರಣ ಈ ತಂತ್ರ ಬಳಸಲಾಗುತ್ತದೆ. 

ಅಮ್ಮ ಹೇಳಿದ ಮಕ್ಕಳ ಆಹಾರ ತಯಾರಿಸಿ ಕೋಟ್ಯಾಧಿಪತಿಯಾದ ಮಧುರೈ ವೈದ್ಯೆ

ಜಿಗರ್ ಶಾ ಪ್ರಕಾರ ದೀಪಿಕಾ ಪಡುಕೋಣೆ 500ರೂ. ಉತ್ಪನ್ನ ಬಳಸುತ್ತಾರೆ ಅಂದರೆ ಜನರಿಗೆ ನಂಬಲು ಕಷ್ಟವಾಗುತ್ತದೆ. ಹೀಗಾಗಿಯೇ ಈ ಕಂಪನಿಯ ಉತ್ಪನ್ನಗಳ ಆರಂಭಿಕ ಬೆಲೆಯೇ 1200ರೂ. ಕಳೆದ ವರ್ಷ ಕಂಪನಿ ಏಂಜೆಲ್ ಹೂಡಿಕೆದಾರರಿಂದ 60 ಕೋಟಿ ರೂ. ಹೂಡಿಕೆ ಪಡೆಯುವಲ್ಲಿ ಯಶಸ್ವಿಯಾಗಿತ್ತು. ದೀಪಿಕಾ ಪಡುಕೋಣೆ ಅವರ ಬ್ರ್ಯಾಂಡ್ ಹಿಂದಿನ ಮುಖ್ಯ ಯೋಜನೆ ಭಾರತೀಯ ಉತ್ಪನ್ನಗಳನ್ನು ವೈಜ್ಞಾನಿಕ ಘಟಕಗಳ ಜೊತೆಗೆ ಮಿಶ್ರಣಗೊಳಿಸೋದು. 

ಜಿಗರ್ ಶಾ ವೆಂಚರ್ ಕ್ಯಾಪಿಟಲಿಸ್ಟ್ ಕೂಡ ಆಗಿದ್ದು, ದೀಪಿಕಾ ಪಡುಕೋಣೆ ಅವರ ಕೆಎ ಎಂಟರ್ ಪ್ರೈಸರ್ಸ್ ನಲ್ಲಿ 2020ರಿಂದ ಫಂಡ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದೀಪಿಕಾ ಪಡುಕೋಣೆ ಅವರ ಎಲ್ಲ ಹಣಕಾಸಿನ ವ್ಯವಹಾರಗಳನ್ನು ಶಾ ನಿರ್ವಹಿಸುತ್ತಾರೆ. ಸಂದರ್ಶನವೊಂದರಲ್ಲಿ ಶಾ, ಕಂಪನಿ ಬಗ್ಗೆ ಮಾತನಾಡುತ್ತ ದೀಪಿಕಾ ಪಡುಕೋಣೆ ಅವರು ಈ ಕಂಪನಿಯ ಹೃದಯ ಹಾಗೂ ನಾನು ತಲೆ ಎಂದು ಹೇಳಿದ್ದಾರೆ. ದೀಪಿಕಾ ಪಡುಕೋಣೆ ಅವರ ಸ್ಕಿನ್ ಕೇರ್ ಉತ್ಪನ್ನಗಳ ಲ್ಯಾಬ್ ಬೆಂಗಳೂರಿನಲ್ಲಿದೆ. 

click me!