ಆಧಾರ್‌ ಲಿಂಕ್‌ ಆಗಿಲ್ವಾ, ಪಿಂಚಣಿ ಸಿಗಲ್ಲ!

By Web DeskFirst Published Jul 30, 2019, 8:12 AM IST
Highlights

 ಆಧಾರ್‌ ಸಂಖ್ಯೆಯನ್ನು ಜು.31ರೊಳಗೆ ಲಿಂಕ್‌ ಮಾಡದಿದ್ದರೆ ಆ.1ರಿಂದ ಪಿಂಚಣಿ ಸ್ಥಗಿತಗೊಳಿಸುವುದಾಗಿ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯ ಹೇಳಿದೆ.

ಎನ್‌.ಎಲ್‌.ಶಿವಮಾದು

ಬೆಂಗಳೂರು [ಜು.30]:  ಪಿಂಚಣಿದಾರರು ತಮ್ಮ ಆಧಾರ್‌ ಸಂಖ್ಯೆಯನ್ನು ಜು.31ರೊಳಗೆ ಲಿಂಕ್‌ ಮಾಡದಿದ್ದರೆ ಆ.1ರಿಂದ ಪಿಂಚಣಿ ಸ್ಥಗಿತಗೊಳಿಸುವುದಾಗಿ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯ ಎಚ್ಚರಿಕೆ ನೀಡಿದೆ.

ರಾಜ್ಯ ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವ ಅಸಹಾಯಕ ವೃದ್ಧರು, ವಿಧವೆಯರು, ಅಂಗವಿಕಲರು, ಅವಿವಾಹಿತ ಮಹಿಳೆಯರು ಹಾಗೂ ಅಂಗತ್ವ ಅಲ್ಪಸಂಖ್ಯಾತರಿಗೆ ಆರ್ಥಿಕ ಭದ್ರತೆಯಡಿ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ ಮೂಲಕ ಮಾಸಾಶನ ನೀಡುತ್ತಿದೆ. ಫಲಾನುಭವಿಗಳ ಸಂಪೂರ್ಣ ಮಾಹಿತಿಯನ್ನು ನಾಡಕಚೇರಿಯಲ್ಲಿ ಸಲ್ಲಿಸುವಂತೆ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಸೂಚನೆ ನೀಡಲಾಗುತ್ತಿದೆ. ಹೀಗಿದ್ದರೂ ದಾಖಲಾತಿಗಳನ್ನು ಸಲ್ಲಿಸಿಲ್ಲ, ಆದ್ದರಿಂದ ಆಗಸ್ಟ್‌ನಿಂದ ಪಿಂಚಣಿ ತಡೆಹಿಡಿಯುವುದಾಗಿ ಸೂಚನೆ ನೀಡಿದೆ.

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಯೋಜನೆಗಳಾದ ವೃದ್ಧಾಪ್ಯ ವೇತನ, ವಿಧವಾ, ಅಂಗವಿಕಲ, ಸಂಧ್ಯಾ ಸುರಕ್ಷಾ, ಮನಸ್ವಿನಿ ಮತ್ತು ಮೈತ್ರಿ ಯೋಜನೆಗಳಡಿ ಒಟ್ಟಾರೆ 3.82 ಲಕ್ಷ ಫಲಾನುಭವಿಗಳಿದ್ದು, ಈ ಪೈಕಿ 1.38 ಲಕ್ಷ ಫಲಾನುಭವಿಗಳು ಮಾತ್ರ ಆಧಾರ್‌ ಲಿಂಕ್‌ ಮಾಡಿದ್ದಾರೆ. ಉಳಿದ 2.44 ಲಕ್ಷ ಫಲಾನುಭವಿಗಳು ಅಪ್‌ಡೇಟ್‌ ಮಾಡಿಲ್ಲ. ಹೀಗಾಗಿ, ದಾಖಲೆಗಳನ್ನು ಅಪ್‌ಡೇಟ್‌ ಮಾಡುವವರೆಗೂ ಪಿಂಚಣಿಯನ್ನು ತಡೆಹಿಡಿಯುವುದಾಗಿ ಸೂಚನೆ ನೀಡಿದೆ.

ವೃದ್ಧಾಪ್ಯ ವೇತನದಲ್ಲಿ 1.75 ಲಕ್ಷದಲ್ಲಿ 67,168, ವಿಧವಾ ವೇತನ- 1.25 ಲಕ್ಷದ ಪೈಕಿ 44,706 ಹಾಗೂ 48,811 ಅಂಗವಿಕಲರಲ್ಲಿ ಕೇವಲ 12,988 ಮಂದಿ ಅಷ್ಟೇ ಆಧಾರ್‌ ಲಿಂಕ್‌ ಮಾಡಿದ್ದಾರೆ. ಒಟ್ಟಾರೆ ಶೇ.36ರಷ್ಟುಮಂದಿ ಮಾತ್ರ ಮಾಹಿತಿ ಅಪ್‌ಲೋಡ್‌ ಮಾಡಿದ್ದಾರೆ.

ಜನಪರ ಕಾಳಜಿ ಯೋಜನೆಗಳಡಿ ಈಗಾಗಲೇ ಪಿಂಚಣಿ ಪಡೆಯುತ್ತಿರುವ ಫಲಾನುಭಗಳು ಪಿಂಚಣಿ ಆದೇಶ ಪತ್ರ, ಪೋಸ್ಟಲ್‌ ಮನಿ ಆರ್ಡರ್‌ ಚೀಟಿಯೊಂದಿಗೆ ಪಿಪಿಒಐಡಿ ಸಂಖ್ಯೆ, ಆಧಾರ್‌ ಸಂಖ್ಯೆ ಮತ್ತು ಬ್ಯಾಂಕ್‌ ಖಾತೆ ಅಥವಾ ಅಂಚೆ ಕಚೇರಿ ಉಳಿತಾಯ ಖಾತೆ ಸಂಖ್ಯೆಯನ್ನು ತಾಲೂಕಿನ ತಹಸೀಲ್ದಾರ್‌ ಕಚೇರಿ ಅಥವಾ ನಾಡ ಕಚೇರಿಯಲ್ಲಿ ಮಾಹಿತಿ ಸಲ್ಲಿಸುವಂತೆ ಸಾಕಷ್ಟುಬಾರಿ ಸಲಹೆ, ಸೂಚನೆ ಮತ್ತು ಅಭಿಯಾನಗಳ ಮೂಲಕ ಜಾಗೃತಿ ಮೂಡಿಸಲಾಗಿದೆ. ಹೀಗಿದ್ದರೂ ಇಲ್ಲಿಯವರೆಗೂ ಕೇವಲ ಶೇ.36ರಷ್ಟುಫಲಾನುಭವಿಗಳು ಮಾತ್ರ ಮಾಹಿತಿ ಸಲ್ಲಿಸಿದ್ದು, ಉಳಿದ ಶೇ.64ರಷ್ಟುಫಲಾನುಭವಿಗಳು ಮಾಹಿತಿ ನೀಡಿಲ್ಲ. ಹೀಗಾಗಿ, ಜು.31ರೊಳಗೆ ಸಲ್ಲಿಕೆಯಾಗದಿದ್ದರೆ ಆಗಸ್ಟ್‌ನಿಂದ ಪಿಂಚಣಿ ದೊರೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.

ಕಳೆದ ಮೂರು ವರ್ಷಗಳಿಂದ ಆಧಾರ್‌ ಸಂಖ್ಯೆಯನ್ನು ಸಂಗ್ರಹಿಸುವ ಕೆಲಸ ಮಾಡಲಾಗುತ್ತಿದೆ. ಈ ಹಿಂದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿಎಂಎಸ್‌ ತಂತ್ರಾಂಶವಿತ್ತು. ಇದೀಗ ಅದನ್ನು ಖಜಾನೆ-2 ತಂತ್ರಾಂಶದಲ್ಲಿ ಮಾಹಿತಿ ಸಲ್ಲಿಸಬೇಕಿದೆ. ಹೆಚ್ಚಿನ ಫಲಾನುಭವಿಗಳು ಆಸಕ್ತಿ ತೋರದಿರುವುದರಿಂದ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

 ಗ್ರಾಹಕರಿಗೆ ಹಲವು ಸಮಸ್ಯೆ

ನಗರ ಪ್ರದೇಶವಾಗಿರುವುದರಿಂದ ಸರ್ಕಾರ ಅಭಿಯಾನ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವ ವೇಳೆಯಲ್ಲಿ ಹೆಚ್ಚಿನ ಫಲಾನುಭವಿಗಳು ಕೆಲಸ ಕಾರ್ಯಗಳಿಗೆ ಹೋಗಿರುತ್ತಾರೆ. ಹೀಗಾಗಿ, ಸರಿಯಾದ ಮಾಹಿತಿ ತಲುಪಿಲ್ಲ. ಹೆಚ್ಚಿನ ಜನ ಒಂದು ಬಡಾವಣೆಯಿಂದ ಮತ್ತೊಂದು ಬಡಾವಣೆಗೆ ವಲಸೆ ಹೋಗಿರುವುದರಿಂದಲೂ ಮಾಹಿತಿ ತಲುಪದಿರುವ ಸಾಧ್ಯತೆಗಳಿವೆ. ಮೊಬೈಲ್‌ ಸಂಖ್ಯೆಗೆ ಸಂದೇಶ ಕಳುಹಿಸಲಾಗಿದೆ. ಕೆಲವರು ಅನಕ್ಷರಸ್ಥರಾಗಿರುವುದರಿಂದ ಓದಲು ಬಾರದೆ ಮಾಹಿತಿ ತಲುಪದಿರುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ಈಗಾಗಲೇ ಸಾಕಷ್ಟುಬಾರಿ ಆಧಾರ್‌ ಸಂಖ್ಯೆ ಲಿಂಕ್‌ ಮಾಡುವಂತೆ ಜಾಗೃತಿ ಅಭಿಯಾನ ಮೂಡಿಸಲಾಗಿದೆ. ಆದರೂ ಫಲಾನುಭವಿಗಳು ಎಚ್ಚೆತ್ತಕೊಂಡಿಲ್ಲ. ಅಂತಿಮವಾಗಿ ಪಿಂಚಣಿ ತಡೆಹಿಡಿಯಲು ನಿರ್ಧರಿಸಲಾಗಿದೆ. ಮಾಹಿತಿ ಸಲ್ಲಿಸಿದ ಬಳಿಕ ಎಂದಿನಂತೆ ಪಿಂಚಣಿ ದೊರೆಯಲಿದೆ.

-ಶ್ರೀರೂಪಾ, ಹೆಚ್ಚುವರಿ ಜಿಲ್ಲಾಧಿಕಾರಿ, ಬೆಂ.ನಗರ ಜಿಲ್ಲೆ.

click me!