*ಮೈಕ್ರೋಬ್ಲಾಗಿಂಗ್ ತಾಣ ಟ್ವಿಟರ್ ಖರೀದಿಸಿರುವ ಎಲಾನ್ ಮಸ್ಕ್
*5 ವರ್ಷಗಳ ಹಿಂದೆಯೇ ಟ್ವಿಟರ್ ಖರೀದಿಸುವ ಇಂಗಿತ ವ್ಯಕ್ತಪಡಿಸಿದ್ದ ಮಸ್ಕ್
*ಟ್ವಿಟರ್ ಖರೀದಿಸುವಂತೆ ಫಾಲೋವರ್ಸ್ ನೀಡಿದ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ವಿಶ್ವದ ನಂ.1 ಸಿರಿವಂತ
Business desk: ಜಗತ್ತಿನ ಸುಪ್ರಸಿದ್ಧ ಮೈಕ್ರೋಬ್ಲಾಗಿಂಗ್ ತಾಣ ಟ್ವಿಟರ್ (Twitter) ಖರೀದಿಸುವ ಮೂಲಕ ವಿಶ್ವದ ಶ್ರೀಮಂತ ಉದ್ಯಮಿ, ಟೆಸ್ಲಾ ಕಂಪೆನಿಯ ಮುಖ್ಯಸ್ಥ ಎಲಾನ್ ಮಸ್ಕ್ (Elon Musk) ಸದ್ಯ ಸುದ್ದಿಯಲ್ಲಿದ್ದಾರೆ. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲಿರುವ ಎಲಾನ್ ಮಸ್ಕ್ ,ಕೆಲವು ದಿನಗಳ ಹಿಂದೆ ಟ್ವಿಟರ್ ಖರೀದಿಸುವ ಪ್ರಸ್ತಾಪ ಮಾಡಿದ್ದರು. ಈ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ 3.25 ಲಕ್ಷ ಕೋಟಿ ರೂಪಾಯಿಗೆ (44 ಬಿಲಿಯನ್ ಅಮೆರಿಕನ್ ಡಾಲರ್) ಮಸ್ಕ್ ಟ್ವಿಟರ್ ಖರೀದಿಸಿಯೇ ಬಿಟ್ಟಿದ್ದಾರೆ. ಹಾಗಂತ ಈ ಕಂಪೆನಿ ಖರೀದಿಗೆ ಮಸ್ಕ್ ಆಸಕ್ತಿ ತೋರಿಸಿದ್ದು ಇದೇ ಮೊದಲೇನಲ್ಲ. ಮಸ್ಕ್ ತೆಕ್ಕೆಗೆ ಟ್ವಿಟರ್ ಸೇರಿದ ಸುದ್ದಿ ಬೆನ್ನಲ್ಲೇ ದೈತ್ಯ ಮೈಕ್ರೋಬ್ಲಾಗಿಂಗ್ ಸಂಸ್ಥೆ ಖರೀದಿಗೆ ಮಸ್ಕ್ ಈ ಹಿಂದೆಯೇ ಆಸಕ್ತಿ ಹೊಂದಿದ್ದರು ಎಂಬುದಕ್ಕೆ ಸಾಕ್ಷಿಯಾಗಿರುವ ಹಳೆಯ ಟ್ವೀಟ್ ವೊಂದು (tweet) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟ್ವಿಟರ್ ಖರೀದಿ ಯೋಚನೆ ಮಸ್ಕ್ ಮನಸ್ಸಿನಲ್ಲಿ ಈ ಹಿಂದಿನಿಂದಲೂ ಇತ್ತು ಎನ್ನಲಾಗಿದೆ. 2017ರ ಡಿಸೆಂಬರ್ 21ರಂದು ಮಸ್ಕ್ ಹಾಗೇ ಸುಮ್ಮನೆ “I love Twitter” ಎಂದು ಟ್ವೀಟ್ ಮಾಡಿದ್ದರು. ಅದಕ್ಕೆ ಟ್ವಿಟರ್ (Twitter) ಬಳಕೆದಾರರೊಬ್ಬರು ಆ ಸಂಸ್ಥೆಯನ್ನೇ ಖರೀದಿಸುವಂತೆ ಮಸ್ಕ್ ಗೆ ಸಲಹೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಮಸ್ಕ್ 'ಇದಕ್ಕೆ ಎಷ್ಟು? ಎಂದು ಪ್ರಶ್ನಿಸಿದ್ದರು. ಸದ್ಯ ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ (Viral) ಆಗಿದೆ. ಮೂಲ ಟ್ವೀಟ್ ಗೆ 1.74 ಲಕ್ಷಕ್ಕೂ ಅಧಿಕ ಲೈಕ್ಸ್ (Likes) ಬಂದಿದೆ ಹಾಗೂ 35,000ಕ್ಕೂ ಹೆಚ್ಚು ಬಾರಿ ಮರು ಟ್ವೀಟ್ (Retweet) ಆಗಿದೆ.
Twitter ಟ್ವಿಟರ್‌ಗೆ ಎಲಾನ್ ಮಸ್ಕ್ ಮಾಲೀಕ, 3.25 ಲಕ್ಷ ಕೋಟಿ ರೂಗೆ ಸಾಮಾಜಿಕ ಜಾಲತಾಣ ಖರೀದಿ!
ಈ ರೀತಿ ಟ್ವಿಟರ್ (Twitter) ಕುರಿತು ಒಲವು ವ್ಯಕ್ತಪಡಿಸಿದ 5 ವರ್ಷಗಳ ಬಳಿಕ ಖರೀದಿಸುವ (Purchase) ಇಂಗಿತವನ್ನು ಮಸ್ಕ್ ಮರುವ್ಯಕ್ತಪಡಿಸಿದ್ದರು. ಹೊಸ ಸೋಷಿಯಲ್ ಮೀಡಿಯಾ ಕಂಪೆನಿಯೊಂದನ್ನು ಸ್ಥಾಪಿಸಬೇಕಾ? ಎಂದು ಮಾರ್ಚ್ ನಲ್ಲಿ ಮಸ್ಕ್ ತನ್ನ ಟ್ವಿಟರ್ ಫಾಲೋವರ್ಸ್ (Followers) ಅವರನ್ನು ಪ್ರಶ್ನಿಸಿದ್ದರು. ಅದಕ್ಕೆ ಮಸ್ಕ್ ಅವರ ಫಾಲೋವರ್ಸ್, 'ಟ್ವಿಟರ್ ಖರೀದಿಗೆ ಅವಕಾಶವಿರುವಾಗ ಹೊಸದನ್ನು ಪ್ರಾರಂಭಿಸುವ ಅಗತ್ಯವೇನಿದೆ?' ಎಂದು ಪ್ರಶ್ನಿಸಿದ್ದರು.
ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ಮಸ್ಕ್ , ಏಪ್ರಿಲ್ ತಿಂಗಳ ಆರಂಭದಲ್ಲಿ ಟ್ವಿಟರಿನ ಶೇ.9.2 ರಷ್ಟು ಪಾಲುದಾರಿಕೆ ಅಥವಾ 7.35 ಕೋಟಿ ಷೇರು (Shares) ಖರೀದಿಸಿದರು. ಈ ಮೂಲಕ ಟ್ವಿಟರಿನ ಎರಡನೇ ಅತೀದೊಡ್ಡ ಪಾಲುದಾರನೆಂದು ಗುರುತಿಸಿಕೊಂಡರು. ಟ್ವಿಟರ್ ಸಂಸ್ಥಾಪಕ ಹಾಗೂ ಸಿಇಒ (CEO) ಜಾಕ್ ಡೋರ್ಸೆ (Jack Dorsey) ಸಂಸ್ಥೆಯಲ್ಲಿ ಕೇವಲ ಶೇ.2.5 ಪಾಲು ಹೊಂದಿದ್ದರು. ಹೀಗಾಗಿ ಇದರಲ್ಲಿ ಏನೋ ಒಳಮರ್ಮವಿದೆ ಎಂದು ಅರಿತ ಟ್ವಿಟರ್, ನಿರ್ದೇಶಕರ ಮಂಡಳಿಗೆ ಸೇರುವಂತೆ ಮಸ್ಕ್ ಅವರಿಗೆ ಆಹ್ವಾನ ನೀಡಿತು.ಆದ್ರೆ ಇದರ ಜೊತೆಗೆ ಒಂದು ಷರತ್ತು ಕೂಡ ಇತ್ತು. ಅದೇನೆಂದ್ರೆ ಮಂಡಳಿ ಸದಸ್ಯರು ಕಂಪೆನಿಯನ್ನು ಖರೀದಿಸಲು ಅವಕಾಶವಿಲ್ಲ. ಈ ಕಾರಣಕ್ಕೆ ಮಸ್ಕ್ ಟ್ವಿಟರ್ ಆಡಳಿತ ಮಂಡಳಿ ಸೇರಲು ನಿರಾಕರಿಸಿದರು.
Twitter ಖರೀದಿಸಿದ ಮಸ್ಕ್: ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ CEO ಪರಾಗ್ ಅಗರ್ವಾಲ್!
ಇದಾದ ಕೆಲವು ದಿನಗಳ ಬಳಿಕ ಎಲಾನ್ ಮಸ್ಕ್ ಟ್ವಿಟರ್ ಖರೀದಿಗೆ 44 ಬಿಲಿಯನ್ ಅಮೆರಿಕನ್ ಡಾಲರ್ ಆಫರ್ ನೀಡಿದರು. ಇದರ ಬೆನ್ನಲ್ಲೇ ಟ್ವಿಟರ್ ಪಾಲುದಾರರೊಂದಿಗೆ ಮಾತುಕತೆ ಆರಂಭಗೊಂಡಿತ್ತು. ಪ್ರತಿ ಷೇರಿಗೆ 54.20 ಅಮೆರಿಕನ್ ಡಾಲರ್ ಒಪ್ಪದಂವನ್ನು ಟ್ವಿಟರ್ ಘೋಷಿಸಿತು. ಈ ಮೂಲಕ ಮಸ್ಕ್ ತನ್ನ ಕನಸನ್ನು ನನಸಾಗಿಸಿಕೊಂಡರು.