
ನವದೆಹಲಿ: ಭಾರತದ ಆಮದಿನ ಮೇಲೆ ಹೆಚ್ಚುವರಿ ತೆರಿಗೆ ಹೇರಿರುವ ಅಮೆರಿಕ ಸರ್ಕಾರದ ಕ್ರಮದಿಂದ ದೇಶೀ ಉದ್ಯಮಗಳನ್ನು ಪಾರು ಮಾಡುವ ನಿಟ್ಟಿನಲ್ಲಿ 45000 ಕೋಟಿ ರು. ಮೊತ್ತದ ಎರಡು ಬೃಹತ್ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
25060 ಕೋಟಿ ರು. ಮೊತ್ತದ ರಫ್ತು ಉತ್ತೇಜನ ಯೋಜನೆಯ ಮೂಲಕ ಭಾರತದ ಕಿರು, ಸಣ್ಣ ಮತ್ತು ಮಧ್ಯಮ ವಲಯದ ಉದ್ಯಮಗಳು ಜಾಗತಿಕ ಕಂಪನಿಗಳ ಜೊತೆ ಸ್ಪರ್ಧೆ ಮಾಡಲು ಅನುವು ಮಾಡಿಕೊಡಲಾಗುವುದು. ಇದು ಮೊದಲ ಸಲದ ರಫ್ತುದಾರರು ಮತ್ತು ಕಾರ್ಮಿಕ ಕೇಂದ್ರಿತ ಉದ್ಯಮಗಳನ್ನು ಆಧರಿಸಿ ರೂಪಿಸಿದ ಯೋಜನೆಯಾಗಿದೆ. ಈ ಯೋಜನೆ ಮುಂದಿನ 6 ವರ್ಷಗಳ ಅವಧಿಯಲ್ಲಿ ಜಾರಿಯಾಗಲಿದೆ.
ಈ ಯೋಜನೆಯಡಿ, ಇತ್ತೀಚಿಗೆ ಅಮೆರಿಕ ಹೇರಿದ ಹೆಚ್ಚಿನ ತೆರಿಗೆಯಿಂದ ತೊಂದರೆಗೆ ಒಳಗಾದ ಉದ್ಯಮ ವಲಯಗಳಿಗೆ ಆದ್ಯತೆ ನೀಡಲಾಗುವುದು. ಮುಖ್ಯವಾಗಿ ಜವಳಿ, ಚರ್ಮೋದ್ಯಮ, ಆಭರಣ, ಎಂಜಿನಿಯರಿಂಗ್ ಉತ್ಪನ್ನ, ಸಮುದ್ರ ಉತ್ಪನ್ನಗಳು ಸೇರಿವೆ. ಈ ಯೋಜನೆಯಡಿ ಅಗ್ಗದ ದರದಲ್ಲಿ ಸಾಲ, ಸಾಲಕ್ಕೆ ಖಾತರಿ, ಹೊಸ ಮಾರುಕಟ್ಟೆ ಹುಡುಕಲು ನೆರವು ನೀಡಲಾಗುವುದು.
ಇನ್ನು 20000 ಕೋಟಿ ರು. ಮೊತ್ತದ ಎರಡನೇ ಯೋಜನೆ ರಫ್ತುದಾರರಿಗೆ ಸಾಲದ ಮೇಲೆ ಗ್ಯಾರಂಟಿ ನೀಡುವ ಯೋಜನೆಯಾಗಿದೆ. ಅಂದರೆ ಇಷ್ಟು ಮೊತ್ತದ ರಫ್ತಿಗೆ ಕೇಂದ್ರ ಸರ್ಕಾರ ಖಾತರಿ ನೀಡಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.