ಮೂರು ವರ್ಷದಲ್ಲಿಆರ್ಥಿಕ ವಂಚನೆಗೆ ಶಿಕಾರಿಯಾದ ಭಾರತೀಯರು ಶೇ.42;ಹಣ ಹಿಂದೆ ಸಿಕ್ಕಿದ್ದು ಶೇ.17 ಮಂದಿಗೆ ಮಾತ್ರ

By Suvarna NewsFirst Published Aug 4, 2022, 3:27 PM IST
Highlights

*ಲೋಕಲ್ ಸರ್ಕಲ್ಸ್ ನಡೆಸಿದ ಸಮೀಕ್ಷೆಯಲ್ಲಿ ಮಾಹಿತಿ ಬಹಿರಂಗ
*ಕೇವಲ ಶೇ.17ರಷ್ಟು ಮಂದಿ ಮಾತ್ರ ತಮ್ಮ ಹಣ ಹಿಂಪಡೆಯುವಲ್ಲಿ ಯಶಸ್ವಿ
*ಶೇ.74 ಮಂದಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ

ನವದೆಹಲಿ (ಜು.4): ಕೋವಿಡ್ -19 ಬಳಿಕ ಡಿಜಿಟಲ್ ಪಾವತಿ ಬಳಕೆ ಹೆಚ್ಚಿದೆ. ಹೆಚ್ಚೆಚ್ಚು ಜನರು ಡಿಜಿಟಲ್ ಪಾವತಿ ಅಪ್ಲಿಕೇಷನ್ ಗಳನ್ನು ಬಳಸುತ್ತಿದ್ದಾರೆ. ಪರಿಣಾಮ ಹಣಕಾಸು ವಂಚನೆ ಪ್ರಕರಣಗಳು ಕೂಡ ಹೆಚ್ಚಿವೆ. ಕಳೆದ ಮೂರು ವರ್ಷಗಳಲ್ಲಿ ಭಾರತದಲ್ಲಿ ಶೇ. 42ರಷ್ಟು ಜನರು ಹಣಕಾಸು ವಂಚನೆಯ ಶಿಕಾರಿಯಾಗಿದ್ದಾರೆ ಎಂದು ಲೋಕಲ್ ಸರ್ಕಲ್ಸ್ ನಡೆಸಿದ ಸಮೀಕ್ಷೆ ತಿಳಿಸಿದೆ. ಈ ಸಮೀಕ್ಷೆಯಲ್ಲಿ ಶೇ. 42ರಷ್ಟು ಮಂದಿ ತಾವು ಅಥವಾ ತಮ್ಮ ಕುಟುಂಬದ ಸದಸ್ಯರು ಹಣಕಾಸು ವಂಚನೆಗೊಳಗಾಗಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ. ಶೇ. 29 ರಷ್ಟು ಜನರು ತಮ್ಮ ಎಟಿಎಂ ಅಥವಾ ಡೆಬಿಟ್ ಕಾರ್ಡ್ ಪಿನ್ ಮಾಹಿತಿಗಳನ್ನು ಕುಟುಂಬದ ಸದಸ್ಯರ ಜೊತೆ ಹಂಚಿಕೊಂಡರೆ, ಶೇ.4ರಷ್ಟು ಮಂದಿ ತಮ್ಮ ಕಚೇರಿ ಸಿಬ್ಬಂದಿ ಜೊತೆಗೆ ಹಂಚಿಕೊಂಡಿರುತ್ತಾರೆ ಎಂದು ಈ ಸಮೀಕ್ಷೆ ತಿಳಿಸಿದೆ. ಇನ್ನು ಶೇ. 33ರಷ್ಟು ಜನರು ತಮ್ಮ ಬ್ಯಾಂಕ್ ಖಾತೆ, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಹಾಗೂ ಎಟಿಎಂ ಪಾಸ್ ವಾರ್ಡ್ ಗಳು, ಆಧಾರ್ ಹಾಗೂ ಪ್ಯಾನ್ ಸಂಖ್ಯೆಗಳನ್ನು ಇ-ಮೇಲ್ ಅಥವಾ ಕಂಪ್ಯೂಟರ್ ನಲ್ಲಿ ಸಂಗ್ರಹಿಸಿಡುತ್ತಾರೆ. ಇನ್ನು ಶೇ.11ರಷ್ಟು ಜನರು ಈ ಮಾಹಿತಿಗಳನ್ನು ಮೊಬೈಲ್ ಕಂಟ್ಯಾಕ್ಟ್ ಲಿಸ್ಟ್ ನಲ್ಲಿ ಸೇವ್ ಮಾಡಿಡುತ್ತಾರೆ. 

ಬ್ಯಾಂಕ್ ಖಾತೆ ವಂಚನೆ, ಇ-ಕಾಮರ್ಸ್ ಆಪರೇಟರ್ ಗಳಲ್ಲಿನ ವಂಚನೆ, ಕ್ರೆಡಿಟ್ (Credit)  ಹಾಗೂ ಡೆಬಿಟ್ ಕಾರ್ಡ್ (debit card) ವಂಚನೆ ಮುಂತಾದ ಪ್ರಕರಣಗಳು ಕಳೆದ ಮೂರು ವರ್ಷಗಳಲ್ಲಿ ಹೆಚ್ಚಿವೆ. ಈ ಸಮೀಕ್ಷೆಯನ್ನು 2021ರ ಅಕ್ಟೋಬರ್ ನಲ್ಲಿ ನಡೆಸಲಾಗಿದ್ದು, ದೇಶದ 301 ಜಿಲ್ಲೆಗಳ ನಾಗರಿಕರಿಂದ ಸರಿಸುಮಾರು 32,000 ಪ್ರತಿಕ್ರಿಯೆಗಳು ಬಂದಿವೆ. ಪ್ರತಿಕ್ರಿಯಿಸಿದವರಲ್ಲಿ ಸುಮಾರು ಶೇ. 43ರಷ್ಟು ಜನರು ಟೈರ್-1, ಶೇ.30 ರಷ್ಟು ಮಂದಿ  ಟೈರ್-2 ಹಾಗೂ ಶೇ. 27ರಷ್ಟು ಜನರು ಟೈರ್ -3, 4 ಹಾಗೂ ಗ್ರಾಮೀಣ ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ. 

NPS ಖಾತೆದಾರರೇ ಗಮನಿಸಿ,ಇನ್ಮುಂದೆ ಟೈರ್-II ಖಾತೆಗೆ ಕ್ರೆಡಿಟ್ ಕಾರ್ಡ್ ಪಾವತಿ ಅವಕಾಶವಿಲ್ಲ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ದತ್ತಾಂಶಗಳ ಪ್ರಕಾರ 2021-22ನೇ ಸಾಲಿನಲ್ಲಿ ದೇಶದಲ್ಲಿ  60,414 ಕೋಟಿ ರೂ. ವಂಚನೆ (Fraud)  ನಡೆದಿದೆ. ಇದರಲ್ಲಿ ವರದಿಯಾಗದ ಅನೇಕ ವಂಚನೆ ಪ್ರಕರಣಗಳು ಸೇರಿಲ್ಲ. ಇನ್ನು ಮೈಕ್ರೋಸಾಫ್ಟ್  2021ರ ಗ್ಲೋಬಲ್ ಟೆಕ್ ಸಪೋರ್ಟ್ ಸ್ಕ್ಯಾಮ್ ರಿಸರ್ಚ್ ರಿಪೋರ್ಟ್ ಪ್ರಕಾರ ಭಾರತದ ಗ್ರಾಹಕರು  2021ರಲ್ಲಿ ಶೇ.69ರಷ್ಟು ಅಧಿಕ ಪ್ರಮಾಣದ ಆನ್ ಲೈನ್ ವಂಚನೆ ಪ್ರಕರಣಗಳಿಗೆ ತುತ್ತಾಗಿದ್ದಾರೆ.

ಲೋಕಲ್ ಸರ್ಕಲ್ಸ್ ಸಮೀಕ್ಷೆಯೊಂದರಲ್ಲಿ ಒಂದು ಪ್ರಶ್ನೆಯಿತ್ತು-'ನೀವು ಅಥವಾ ನಿಮ್ಮ ಕುಟುಂಬದ ಯಾರಾದ್ರೂ ಕಳೆದ ಮೂರು ವರ್ಷಗಳಲ್ಲಿ ಹಣಕಾಸು ವಂಚನೆಗೆ ತುತ್ತಾಗಿದ್ದೀರಾ? ಎಂದು. ಈ ಪ್ರಶ್ನೆಗೆ ಶೇ.54 ಮಂದಿ ಇಲ್ಲ ಎಂದು ಉತ್ತರಿಸಿದ್ದರೆ, ಶೇ. 4ರಷ್ಟು ಜನರು 'ಹೌದು, ಅನೇಕ ಮಂದಿ' ಎಂದಿದ್ದಾರೆ. ಇನ್ನು ಶೇ.38 ಜನರು 'ಹೌದು, ನಮ್ಮ ಕುಟುಂಬದಲ್ಲಿ ಒಬ್ಬರು' ಎಂದು ಪ್ರತಿಕ್ರಿಯಿಸಿದ್ದಾರೆ. ಶೇ.4ರಷ್ಟು ಮಂದಿ ಉತ್ತರಿಸಿಲ್ಲ. ಸರಾಸರಿ ಲೆಕ್ಕದಲ್ಲಿ ನೋಡಿದ್ರೆ ಭಾರತದಲ್ಲಿ ಶೇ.42 ರಷ್ಟು  ಮಂದಿ ತಾವು ಅಥವಾ ತಮ್ಮ ಕುಟುಂಬದಲ್ಲಿ ಒಬ್ಬರು ಕಳೆದ ಮೂರು ವರ್ಷಗಳಲ್ಲಿ ಆರ್ಥಿಕ ವಂಚನೆಗೆ ಒಳಗಾಗಿರುವ ಮಾಹಿತಿ ನೀಡಿದ್ದಾರೆ. ಇನ್ನು ಶೇ.29ರಷ್ಟು ಮಂದಿ ಬ್ಯಾಂಕ್ ಖಾತೆ ವಂಚನೆಗೊಳಗಾಗಿದ್ರೆ, ಶೇ.24ರಷ್ಟು ಜನರು ಇ-ಕಾಮರ್ಸ್ ತಾಣಗಳಿಂದ ವಂಚನೆ ಅನುಭವಿಸಿದ್ದಾರೆ. ಶೇ.21ರಷ್ಟು ಜನರು ಇತರ ವಂಚನೆಗಳಿಗೆ ಒಳಗಾಗಿದ್ದಾರೆ. ಶೇ. 18ರಷ್ಟು ಜನರು ಕ್ರೆಡಿಟ್/ ಡೆಬಿಟ್ ಕಾರ್ಡ್ ವಂಚನೆಗೆ, ಶೇ.12ರಷ್ಟು ಜನರು ಮೊಬೈಲ್ ಅಪ್ಲಿಕೇಷನ್ ಗಳ ಮೂಲಕ ವಂಚನೆ ಅನುಭವಿಸಿದ್ದರೆ, ಶೇ.8ರಷ್ಟು ಮಂದಿ ಎಟಿಎಂ ಕಾರ್ಡ್ ವಂಚನೆಗೊಳಗಾಗಿದ್ದಾರೆ. ಶೇ.6ರಷ್ಟು ಜನರು ವಿಮಾ ವಂಚನೆಗೆ ಶಿಕಾರಿಯಾಗಿದ್ದಾರೆ.

Fortune Global 500 ಪಟ್ಟಿ: ಭಾರತದ ಅಗ್ರ ಶ್ರೇಯಾಂಕ ಸಂಸ್ಥೆ ಎನಿಸಿಕೊಂಡ ಎಲ್‌ಐಸಿ

ಇನ್ನು ಕಳೆದ ಮೂರು ವರ್ಷಗಳಲ್ಲಿ ಹಣಕಾಸು ವಂಚನೆಗೊಳಗಾದ ಕುಟುಂಬಗಳಲ್ಲಿ ಕೇವಲ ಶೇ.17ರಷ್ಟು ಮಂದಿ ಮಾತ್ರ ತಮ್ಮ ಹಣ ಹಿಂಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಶೇ.74 ಮಂದಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ. 

click me!