ಪೇಟಿಎಂಗೆ ವ್ಯಾಪಾರಿಗಳ ಗುಡ್ ಬೈ;ಬೇರೆ ಪೇಮೆಂಟ್ ಆ್ಯಪ್ ಬಳಸಲಾರಂಭಿಸಿದ ಶೇ.42ರಷ್ಟು ಕಿರಾಣಿ ಅಂಗಡಿಗಳು!

By Suvarna News  |  First Published Feb 8, 2024, 4:58 PM IST

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಿರುದ್ಧ ಆರ್ ಬಿಐ ನಿರ್ಬಂಧಗಳನ್ನು ವಿಧಿಸಿದ ಬೆನ್ನಲ್ಲೇ ಕಿರಾಣಿ ಅಂಗಡಿಗಳು ಇತರ ಪಾವತಿ ಆ್ಯಪ್ ಗಳನ್ನು ಬಳಸಲು ಪ್ರಾರಂಭಿಸಿವೆ ಎಂದು ಸಮೀಕ್ಷೆಯೊಂದು ತಿಳಿಸಿದೆ. 
 


ನವದೆಹಲಿ (ಫೆ.8): ಕಳೆದ ವಾರ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಿರುದ್ಧ ಆರ್ ಬಿಐ ನಿರ್ಬಂಧಗಳನ್ನು ವಿಧಿಸಿದ ಬಳಿಕ ಶೇ.42ರಷ್ಟು ಕಿರಾಣಿ ಅಂಗಡಿಗಳು ಪೇಟಿಎಂನಿಂದ ದೂರ ಸರಿದಿದ್ದು, ಬೇರೆ ಮೊಬೈಲ್ ಆ್ಯಪ್ ಗಳನ್ನು ಬಳಸಲು ಪ್ರಾರಂಭಿಸಿವೆ ಎಂದು ಕಿರಣಾ ಕ್ಲಬ್ ನಡೆಸಿದ ಸಮೀಕ್ಷೆ ತಿಳಿಸಿದೆ. ಈ ಸಮೀಕ್ಷೆಯಲ್ಲಿ 5,000 ಮಂದಿ ಭಾಗವಹಿಸಿದ್ದು, ಸುಮಾರು ಶೇ.20ರಷ್ಟು ಜನರು ಇತರ ಪೇಮೆಂಟ್ ಆಪ್ ಗಳನ್ನು ಬಳಸುವ ಬಯಕೆ ವ್ಯಕ್ತಪಡಿಸಿದ್ದಾರೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಿರುದ್ಧ ಆರ್ ಬಿಐ ಕ್ರಮದ ಬಳಿಕ  ಶೇ.68ರಷ್ಟು ಕಿರಾಣಿ ಅಂಗಡಿಗಳಿಗೆ ಪೇಟಿಎಂ ಮೇಲಿನ ನಂಬಿಕೆ ತಗ್ಗಿದೆ. ಪೇಟಿಎಂ ಮೇಲಿನ ನಿರ್ಬಂಧಗಳಿಂದ ಕಿರಾಣಿ ಅಂಗಡಿಗಳ ಕಾರ್ಯನಿರ್ವಹಣೆಯಲ್ಲಿ ಅಡ್ಡಿಯುಂಟಾಗಿರಬಹುದು. ಆದರೆ, ಅವರು ಹೆಚ್ಚೇನೂ ತಲೆಕೆಡಿಸಿಕೊಂಡಿಲ್ಲ. ಏಕೆಂದ್ರೆ ಅನೇಕ ಪರ್ಯಾಯ ಪಾವತಿ ಆಯ್ಕೆಗಳು ಲಭ್ಯವಿವೆ ಎಂದು ಕಿರಣಾ ಕ್ಲಬ್ ಸಂಸ್ಥಾಪಕ ಹಾಗೂ ಸಿಇಒ ಅನ್ಶೂಲ ಗುಪ್ತಾ ತಿಳಿಸಿದ್ದಾರೆ.  

ಸಮೀಕ್ಷೆ ಪ್ರಕಾರ ಶೇ.50ರಷ್ಟು ರಿಟೇಲರ್ ಗಳು ಇತರ ಪೇಮೆಂಟ್ ಆ್ಯಪ್ ಗಳನ್ನು ಬಳಸಲು ಯೋಜನೆ ರೂಪಿಸಿದ್ದು, ಅವರ ಆಯ್ಕೆ ಫೋನ್ ಪೇ ಆಗಿದೆ. ಇನ್ನು ಶೇ.30ರಷ್ಟು ಮಂದಿ ಗೂಗಲ್ ಪೇ ಕಡೆಗೆ ಒಲವು ತೋರಿದ್ದರೆ, ಶೇ.10ರಷ್ಟು ಮಂದಿ ಭಾರತ್ ಪೇ ಬಳಸಲು ಯೋಚಿಸಿದ್ದಾರೆ. 

Tap to resize

Latest Videos

ಪೇಟಿಯಂ ವ್ಯಾಲೆಟ್‌ ಖರೀದಿಸಲಿದ್ದಾರಾ ಮುಖೇಶ್‌ ಅಂಬಾನಿ? ಜಿಯೋ ಫೈನಾನ್ಸ್‌, HDFC ಬ್ಯಾಂಕ್‌ ರೇಸ್‌ನಲ್ಲಿ

ಭಾರತೀಯ ರಿಸರ್ವ್ ಬ್ಯಾಂಕ್ (RBI) ಜನವರಿ 31 ರಂದು ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ ಹೊಸ ಠೇವಣಿಗಳನ್ನು ಸ್ವೀಕರಿಸುವುದು ಮತ್ತು ಫೆಬ್ರವರಿ 29 ರ ನಂತರ ಕ್ರೆಡಿಟ್ ವಹಿವಾಟುಗಳನ್ನು ಮಾಡುವುದು ಸೇರಿದಂತೆ ಪ್ರಮುಖ ವ್ಯಾಪಾರ ನಿರ್ಬಂಧಗಳನ್ನು ವಿಧಿಸಿತ್ತು. 2024ರ ಫೆಬ್ರವರಿ 29 ರ ನಂತರ ಯಾವುದೇ ಗ್ರಾಹಕ ಖಾತೆಗಳು, ಪ್ರಿಪೇಯ್ಡ್ ಇನ್ಸ್‌ಟ್ರುಮೆಂಟ್‌ಗಳು,  ವ್ಯಾಲೆಟ್‌ಗಳು, ಫಾಸ್ಟ್‌ಟ್ಯಾಗ್‌ಗಳು, ಎನ್‌ಸಿಎಂಸಿ ಕಾರ್ಡ್‌ಗಳು ಇತ್ಯಾದಿಗಳಲ್ಲಿ ಯಾವುದೇ ಬಡ್ಡಿ, ಕ್ಯಾಶ್‌ಬ್ಯಾಕ್ ಅಥವಾ ಮರುಪಾವತಿಗಳನ್ನು ಹೊರತುಪಡಿಸಿ ಯಾವುದೇ ಸಮಯದಲ್ಲಿ ಕ್ರೆಡಿಟ್ ಮಾಡಬಹುದಾದ ಯಾವುದೇ ಹೆಚ್ಚಿನ ಠೇವಣಿ ಅಥವಾ ಕ್ರೆಡಿಟ್ ವಹಿವಾಟುಗಳು ಅಥವಾ ಟಾಪ್ ಅಪ್‌ಗಳನ್ನು ಅನುಮತಿಸಲಾಗುವುದಿಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. 

ಒನ್‌97 ಕಮ್ಯುನಿಕೇಷನ್ಸ್ ಲಿಮಿಟೆಡ್ ಮತ್ತು ಪೇಟಿಎಂ ಪೇಮೆಂಟ್ಸ್ ಸರ್ವಿಸಸ್ ಲಿಮಿಟೆಡ್‌ನ ನೋಡಲ್ ಖಾತೆಗಳನ್ನು ಆದಷ್ಟು ಬೇಗ ಮತ್ತು ಫೆಬ್ರವರಿ 29ರ ಒಳಗಾಗಿ ಕೊನೆಗೊಳಿಸಬೇಕು ಎಂದು ಆರ್ ಬಿಐ ನಿರ್ದೇಶಿಸಿದೆ. ಈಗಿರುವ ಎಲ್ಲಾ ಚಾಲ್ತಿಯಲ್ಲಿರುವ ವಹಿವಾಟುಗಳು ಮತ್ತು ನೋಡಲ್ ಖಾತೆಗಳ ಇತ್ಯರ್ಥವನ್ನು ಮಾರ್ಚ್ 15 ರೊಳಗೆ ಪೂರ್ಣಗೊಳಿಸಲು ಇದು ಆದೇಶಿಸಿದೆ. "ಅನಂತರ ಯಾವುದೇ ವಹಿವಾಟುಗಳನ್ನು ಅನುಮತಿಸಲಾಗುವುದಿಲ್ಲ" ಎಂದು ಆರ್‌ಬಿಐ ಹೇಳಿದೆ.

ಆದರೂ, ಉಳಿತಾಯ  ಬ್ಯಾಂಕ್‌ ಖಾತೆಗಳು, ಚಾಲ್ತಿ ಖಾತೆಗಳು, ಪ್ರಿಪೇಯ್ಡ್ ಇನ್ಸ್‌ಟ್ರುಮೆಂಟ್‌ಗಳು,  ಫಾಸ್ಟ್ಯಾಗ್‌ಗಳು, ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್‌ಗಳು ಇತ್ಯಾದಿಗಳನ್ನು ಒಳಗೊಂಡಂತೆ ಸಾಲದಾತರ ಗ್ರಾಹಕರು  ತಮ್ಮ ಖಾತೆಗಳಿಂದ ಲಭ್ಯವಿರುವ ಬ್ಯಾಲೆನ್ಸ್ ಹಿಂತೆಗೆದುಕೊಳ್ಳಲು ಅಥವಾ ಬಳಸಲು ಯಾವುದೇ ನಿರ್ಬಂಧಗಳಿಲ್ಲದೆ ಅನುಮತಿಸಲಾಗುವುದು ಎಂದು ಆರ್‌ಬಿಐ ಸ್ಪಷ್ಟನೆ ನೀಡಿದೆ. 

1000 ಖಾತೆಗೆ ಒಂದೇ ಪಾನ್: ಪೇಟಿಎಂ ಬ್ಯಾಂಕ್ ಗೋಲ್ಮಾಲ್

ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌, ಷೇರು ಮಾರುಕಟ್ಟೆಯಲ್ಲಿ ಲಿಸ್ಟ್‌ ಆಗಿರುವ One 97 ಕಮ್ಯುನಿಕೇಷನ್ಸ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿದ್ದು, ಇದರಲ್ಲಿ ಶೇ. 49ರಷ್ಟು ಪಾಲನ್ನು ಹೊಂದಿದೆ. ಪೇಮೆಂಟ್ಸ್‌ ಬ್ಯಾಂಕ್‌ಗೆ 2 ಲಕ್ಷ ರೂಪಾಯಿ ತನಕ ಸಣ್ಣ ಠೇವಣಿಗಳನ್ನು ತೆಗೆದುಕೊಳ್ಳಲು ಅನುಮತಿಸಲಾಗಿದೆ. ಕೆಲವು ವರದಿಗಳ ಪ್ರಕಾರ ಈ ಘಟಕಗಳಿಗೆ ನೇರವಾಗಿ ಸಾಲ ನೀಡಲು ಅನುಮತಿಸಲಾಗುವುದಿಲ್ಲ, ಆದರೆ ಸಾಲದ ಉತ್ಪನ್ನಗಳನ್ನು ಸುಗಮಗೊಳಿಸಬಹುದು ಮತ್ತು ಮಾರಾಟ ಮಾಡಬಹುದು ಎಂದು ಹೇಳಲಾಗಿದೆ. 


 

click me!