ಸಿದ್ದು ಬಜೆಟ್‌ 2024: ನೀರಾವರಿಗೆ ಭರಪೂರ 19,000 ಕೋಟಿ..!

By Kannadaprabha News  |  First Published Feb 17, 2024, 6:16 AM IST

ಕೃಷ್ಣಾ, ಭದ್ರಾ, ಮೇಕೆದಾಟು, ಎತ್ತಿನಹೊಳೆ ಯೋಜನೆ ಜಾರಿಗೆ ಅಗತ್ಯವಾದ ಎಲ್ಲ ಕ್ರಮ, ಏತ ನೀರಾವರಿ, ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳಿಗೆ 16 ಸಾವಿರ ಕೋಟಿ ರು., ನೀರಾವರಿ ಇಲಾಖೆಯ ಜಮೀನು, ಡ್ಯಾಂಗಳ ಹಿನ್ನೀರಲ್ಲಿ ಸೋಲಾರ್‌ ಪಾರ್ಕ್‌ ನಿರ್ಮಾಣ. 


ಬೆಂಗಳೂರು(ಫೆ.17):  ರಾಜ್ಯದಲ್ಲಿ ಬಜೆಟ್‌ನಲ್ಲಿ ರಾಜ್ಯದ ನೀರಾವರಿ ಕ್ಷೇತ್ರದ ಅಭಿವೃದ್ಧಿಗಾಗಿ ಭರಪೂರ ಯೋಜನೆಗಳನ್ನು ಘೋಷಿಸಿದ್ದು, ಪ್ರಸಕ್ತ ಸಾಲಿನಲ್ಲಿ ನೀರಾವರಿ ಕ್ಷೇತ್ರಕ್ಕಾಗಿ 19,179 ಕೋಟಿ ರು. ಅನುದಾನ ನಿಗದಿ ಮಾಡಲಾಗಿದೆ. ಕಳೆದ ಬಜೆಟ್‌ನಂತೆ ಈ ಬಾರಿಯ ಬಜೆಟ್‌ನಲ್ಲೂ ಮೇಕೆದಾಟು, ಎತ್ತಿನಹೊಳೆ ಸೇರಿದಂತೆ ಇನ್ನಿತರ ಬೃಹತ್‌ ನೀರಾವರಿ ಯೋಜನೆಗಳ ಅನುಷ್ಠಾನ ಕುರಿತಂತೆ ಘೋಷಣೆ ಮಾಡಲಾಗಿದೆ. ಆದರೆ, ಈ ಬಾರಿ ಆ ಯೋಜನೆಗಳ ಅನುಷ್ಠಾನಕ್ಕೆ ಯಾವೆಲ್ಲ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಲಾಗಿದೆ.

ಮೇಕೆದಾಟು, ಎತ್ತಿನಹೊಳೆ:

Tap to resize

Latest Videos

undefined

ಮೇಕೆದಾಟು ಯೋಜನೆ ಜಾರಿಗಾಗಿ ಕೇಂದ್ರ ಅರಣ್ಯ ಸಚಿವಾಲಯ ಸೇರಿದಂತೆ ಅಗತ್ಯವಿರುವ ಇಲಾಖೆ ಹಾಗೂ ಸಂಸ್ಥೆಗಳಿಂದ ಅನುಮತಿ ಪಡೆಯುವುದಾಗಿ ತಿಳಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದ ಎಲ್ಲ ಏತ ನೀರಾವರಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಗುರುತ್ವ ಕಾಲುವೆಗೆ ನೀರು ಹರಿಸುವುದು ಹಾಗೂ ಸಮತೋಲನಾ ಜಲಾಶಯ ಕಾಮಗಾರಿ ಪ್ರಾರಂಭಿಸುವುದಾಗಿ ಬಜೆಟ್‌ನಲ್ಲಿ ಹೇಳಲಾಗಿದೆ.

‘ಅನ್ನ-ಸುವಿಧಾ’ ಯೋಜನೆ ಜಾರಿ: ಹಿರಿಯ ನಾಗರಿಕರ ಮನೆ ಬಾಗಿಲಿಗೇ ರೇಷನ್‌

ಕೃಷ್ಣಾ ಮೇಲ್ದಂಡೆ:

ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3ರ ಅಡಿಯಲ್ಲಿನ ಉಪ ಯೋಜನೆಗಳನ್ನು ಪೂರ್ಣಗೊಳಿಸಲು ಹಾಗೂ ಅದಕ್ಕೆ ಬೇಕಾಗುವ ಭೂಸ್ವಾಧೀನ ಸೇರಿದಂತೆ ಇನ್ನಿತರ ಪೂರಕ ಕ್ರಮಗಳನ್ನು ಜಾರಿಗೊಳಿಸಲಾಗುವುದು. ಅದಕ್ಕಾಗಿ ಕೃಷ್ಣಾ ನ್ಯಾಯಾಧೀಕರಣ 2ರ ತೀರ್ಪಿನ ಗೆಜೆಟ್‌ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಕಾನೂನಾತ್ಮಕ ಕ್ರಮ ಮುಂದುವರಿಸುವುದಾಗಿ ತಿಳಿಸಲಾಗಿದೆ.

ಭದ್ರಾ ಮೇಲ್ದಂಡೆ:

ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆ ಅಡಿಯಲ್ಲಿನ 5,300 ಕೋಟಿ ರು. ಅನುದಾನ ಒದಗಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು.

ತುಂಗಭದ್ರಾ ಹೂಳು:

ತುಂಗಭದ್ರಾ ಜಲಾಶಯದಲ್ಲಿ ಶೇಖರಣೆಯಾಗಿರುವ ಹೂಳು ತೆರವು ಮಾಡಲು ಕೊಪ್ಪಳ ಜಿಲ್ಲೆಯ ನವಲಿ ಬಳಿ ಸಮತೋಲನಾ ಜಲಾಶಯ ನಿರ್ಮಾಣ ಯೋಜನೆ ಅನುಷ್ಠಾನಕ್ಕಾಗಿ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳೊಂದಿಗೆ ಸಮಾಲೋಚನೆ.

ಕೆಆರ್‌ಎಸ್‌ ಅಭಿವೃದ್ಧಿ:

ಕೆಆರ್‌ಎಸ್‌ ಅಣೆಕಟ್ಟಿನ ಬೃಂದಾವನ ಉದ್ಯಾನವನ್ನು ಪಿಪಿಪಿ ಅಡಿಯಲ್ಲಿ ವಿಶ್ವದರ್ಜೆ ಪ್ರವಾಸೋದ್ಯಮ ಕೇಂದ್ರವನ್ನಾಗಿ ಉನ್ನತೀಕರಿಸುವುದು ಹೀಗೆ ಹಳೇ ಯೋಜನೆಗಳನ್ನು ಮುಂದುವರಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಏತ ನೀರಾವರಿಗೆ ಯೋಜನೆಗಳಿಗೆ ಹೆಚ್ಚಿನ ಒತ್ತು

ಪ್ರಗತಿಯಲ್ಲಿರುವ ಏತ ನೀರಾವರಿ ಯೋಜನಗಳಾದ ಬೂದಿಹಾಳ್‌-ಪೀರಾಪುರ ಹಂತ 1, ಮುಂಡಗೋಡ, ತುಪರೀಹಳ್ಳ, ಸಾಸಿವೆಹಳ್ಳಿ, ದೇವದುರ್ಗ ಮತ್ತು ಗುರುಮಿಠಕಲ್‌ ಯೋಜನೆಗಳು, ಹೇಮಾವತಿ ಯೋಜನೆಯ ವೈ-ನಾಲೆಯಡಿ 5.45 ಕಿ.ಮೀ ಉದ್ದದ ಹಾಗೂ ತುಮಕೂರು ಶಾಖಾ ನಾಲೆಯಡಿ 166.90 ಕಿ.ಮೀ. ಉದ್ದದ ನಾಲೆಯ ಆಧುನೀಕರಣ ಕಾಮಗಾರಿಗಳನ್ನು ಪ್ರಸಕ್ತ ಸಾಲಿನಲ್ಲಿ ಪೂರ್ಣಗೊಳಿಸುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕರ್ನಾಟಕ ನೀರಾವರಿ ನಿಗಮದಿಂದ ಕೈಗೊಳ್ಳಲಾಗಿರುವ ಏತ ನೀರಾವರಿ ಹಾಗೂ ಕೆರೆ ತುಂಬಿಸುವ ಯೋಜನೆಗಳಿಗಾಗಿ 7,280 ಕೋಟಿ ರು. ಅನುದಾನ ಮೀಸಲಿಟ್ಟು, ಯೋಜನೆಗಳ ಮೂಲಕ97,698 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ನೀಡಲಾಗುವುದು ಎಂದು ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಕೃಷ್ಣಾ ಭಾಗ್ಯ ಜಲ ನಿಗಮದಿಂದ ಕೈಗೊಳ್ಳಲಾಗಿರುವ ಏತ ನೀರಾವರಿ ಯೋಜನೆಗಳಾದ ಬಾಗಲಕೋಟೆ ಜಿಲ್ಲೆಯ ಕೆರೂರು, ವಿಜಯಪುರ ಜಿಲ್ಲೆಯ ಹೊರ್ತಿ-ರೇವಣಸಿದ್ದೇಶ್ವರ, ಚಿಮ್ಮಲಗಿ, ಮುಳವಾಡ, ಯಾದಗಿರಿ ಜಿಲ್ಲೆಯ ಭೀಮಾ ಪ್ಲಾಂಕ್ ಯೋಜನೆಗಳಿಗೆ 3,779 ಕೋಟಿ ರೂ. ಮೊತ್ತದಲ್ಲಿ ಅನುಷ್ಠಾನಗೊಳಿಸಲಾಗುವುದು ಹಾಗೂ ಈ ಯೋಜನೆಗಳಿಂದ 1,09,350 ಹೆಕ್ಟರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವುದಾಗಿ ಹೇಳಲಾಗಿದೆ.

ಕಾವೇರಿ ನೀರಾವರಿ ನಿಗಮದ ಅಡಿಯಲ್ಲಿ ವಿಶ್ವೇಶ್ವರಯ್ಯ ನಾಲಾ, ಮಳವಳ್ಳಿ ತಾಲೂಕಿನ ಮಾದವಮಂತ್ರಿ ನಾಲೆ, ಮದ್ದೂರು ತಾಲೂಕಿನ ಕೆಮ್ಮಣ್ಣು ನಾಲೆಗಳನ್ನು ಆಧುನೀಕರಣಗೊಳಿಸುವುದು, ಹುಣಸೂರು ತಾಲೂಕಿನ ಮರದೂರು, ಕನಕಪುರದ ಹೆಗ್ಗನೂರು ಕೆರೆ ತುಂಬಿಸುವುದು, ಶ್ರೀರಂಗ ಕುಡಿಯುವ ನೀರು ಯೋಜನೆಗೆ ಪೈಪ್‌ಲೈನ್‌ ಮೂಲಕ ನೀರು ಒದಗಿಸುವುದು, ವರುಣಾ ವಿಧಾನಸಭಾ ಕ್ಷೇತ್ರದ ನಾಲೆಗಳ ಅಭಿವೃದ್ಧಿ, ಗುಬ್ಬಿಯ ಮಠದಹಳ್ಳಿ ಕುಡಿಯುವ ನೀರು ಯೋಜನೆ, ರಾಮನಗರದ ಬಳಿ ಅರ್ಕಾವತಿ ರೀವರ್‌ ಫ್ರಂಟ್‌ ಅಭಿವೃದ್ಧಿ ಯೋಜನೆಗಳಿಗಾಗಿ 2 ಸಾವಿರ ಕೋಟಿ ರು. ಮೀಸಲಿಡುವುದಾಗಿ ತಿಳಿಸಲಾಗಿದೆ.
ಹಾಗೆಯೇ, ಸಣ್ಣ ನೀರಾವರಿ ಇಲಾಖೆ ಮೂಲಕ ರಾಯಚೂರಿನ ಚಿಕ್ಕಲಪರ್ವಿ ಬಳಿ ತುಂಗಭದ್ರಾ ನದಿಗೆ ಬಿಸಿಬಿ ನಿರ್ಮಾಣ, ಮಾನ್ವಿ ತಾಲೂಕಿನ ಕುರ್ಡಿ ಕೆರೆ ತುಂಬಿಸುವುದು ಸೇರಿದಂತೆ ಇನ್ನಿತರ ಯೋಜನೆಗಳ ಅನುಷ್ಠಾನಕ್ಕಾಗಿ 850 ಕೋಟಿ ರೂ. ಮೀಸಲಿಡುವುದಾಗಿ ಘೋಷಿಸಲಾಗಿದೆ.

ಅಂತರ್ಜಲ ವೃದ್ಧಿಗೆ ಕ್ರಮ

ಕೊಪ್ಪಳ ಜಿಲ್ಲೆಯ ಯಲಬುರ್ಗಾ-ಕುಕನೂರು ತಾಲೂಕಿನ 38 ಕೆರೆಗಳನ್ನು ತುಂಬಿಸಿ, ಅಂತರ್ಜಲ ವೃದ್ಧಿ ಮಾಡುವುದಕ್ಕಾಗಿ 970 ಕೋಟಿ ರು. ಹಾಗೂ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಮತ್ತು ಇನ್ನಿತರ ಪ್ರದೇಶಗಳಿಗೆ ನಾರಾಯಣಪುರ ಬಲದಂಡೆ ಕಾಲುವೆಯಿಂದ ನೀರಾವರಿ ಸೌಲಭ್ಯ ಕಲ್ಪಿಸಲು 990 ಕೋಟಿ ರು. ಮೊತ್ತದಲ್ಲಿ ಯೋಜನೆ ಅನುಷ್ಠಾನಗೊಳಿಸುವುದಾಗಿ ಬಜೆಟ್‌ನಲ್ಲಿ ತಿಳಿಸಲಾಗಿದೆ.

ಅದೇ ರೀತಿ ಕಲಬುರಗಿ ನಗರಕ್ಕೆ ಕುಡಿಯುವ ನೀರು ಸರಬರಾಜಿಗಾಗಿ ಬೆಣ್ಣೆ ತೊರೆ ಜಲಾಶಯಕ್ಕೆ ಭೀಮಾ ಮತ್ತು ಕಾಗಿಣಾ ನದಿಗಳಿಂದ ನೀರು ತುಂಬಿಸಲು 365 ಕೋಟಿ ರು. ಮೀಸಲಿಡಲಾಗುವುದು ಹಾಗೂ ಧಾರವಾಡ ಜಿಲ್ಲೆಯ ಬೆಣ್ಣೆಹಳ್ಳದಿಂದ ಪ್ರವಾಹಕ್ಕೊಳಗಾಗುವ ಗ್ರಾಮಗಳಲ್ಲಿ ತಡೆಗೋಡೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು ಎಂದು ಹೇಳಲಾಗಿದೆ.

ಅಲ್ಪಸಂಖ್ಯಾತರಿಗೆ ಸಿಎಂ ಸಿದ್ದರಾಮಯ್ಯ ಬಂಪರ್‌ ಬಜೆಟ್‌..!

ರೈತರ ಸಾಮಾಜಿ, ಆರ್ಥಿಕ ಸ್ಥಿತಿಗತಿ ಮೌಲ್ಯಮಾಪನ

ಮಳೆ ಕೊರತೆಯಿಂದಾಗಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆಗಳಿಗೆ ಸಮೀಪದ ನದಿಗಳಿಂದ ನೀರು ಹರಿಸಲಾಗಿದ್ದು, ಅದರಿಂದ ಸ್ಥಳೀಯ ಅಂತರ್ಜಲ ಮಟ್ಟದ ವಸ್ತುಸ್ಥಿತಿ ಹಾಗೂ ಸುತ್ತಲಿನ ರೈತರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಕುರಿತಂತೆ ಮೌಲ್ಯಮಾಪನ ಮಾಡಲಾಗುವುದು. ಕುಡಿಯುವ ನೀರು, ಕೃಷಿ ಹಾಗೂ ಕೈಗಾರಿಕೆಗಳಿಗೆ ನೀರು ಪೂರೈಸಲು ಕೆರೆಗಳ ಅಭಿವೃದ್ಧಿ, ಚೆಕ್‌ ಡ್ಯಾಂ ಮತ್ತು ಬ್ರಿಡ್ಸ್ ಕಂ ಬ್ಯಾರೇಜ್‌ನಂತಹ 115 ಯೋಜನೆಗಳನ್ನು 200 ಕೋಟಿ ರು. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ. ಅದರ ಜತೆಗೆ ಪ್ರಗತಿಯಲ್ಲಿರುವ ಕೆಸಿ ವ್ಯಾಲಿ 2ನೇ ಹಂತದ ಯೋಜನೆ ಪೂರ್ಣಗೊಳಿಸಿ 272 ಕೆರೆ ಭರ್ತಿ ಮಾಡಲಾಗುವುದು ಎಂದು ಹೇಳಲಾಗಿದೆ.

ನೀರಾವರಿ ಕ್ಷೇತ್ರಕ್ಕಾಗಿ ಸರ್ಕಾರ ಹಲವು ಯೋಜನೆಗಳ ಅನುಷ್ಠಾನದ ಕುರಿತಂತೆ ಘೋಷಿಸಿದೆ. ಆದರೆ, ಅವುಗಳಲ್ಲಿ ಮೇಕೆದಾಟು, ಕೃಷ್ಣಾ ಮೇಲ್ದಂಡೆ, ಭದ್ರಾ ಮೇಲ್ದಂಡೆ ಯೋಜನೆಗಳು ಕೇಂದ್ರ ಸರ್ಕಾರದ ನೆರವಿಲ್ಲದಿದ್ದರೆ ಅನುಷ್ಠಾನ ಸಾಧ್ಯವಿಲ್ಲ. ಬಜೆಟ್‌ನಲ್ಲಿ ಘೋಷಿಸಿದಂತೆ ಕೇಂದ್ರದ ನೆರವು ಪಡೆಯಲು ಕ್ರಮ ಕೈಗೊಳ್ಳಬೇಕು. ಅದರ ಜತೆಗೆ ಏತ ನೀರಾವರಿ ಯೋಜನೆಗಳನ್ನು ಅನುದಾನ ಮೀಸಲಿಟ್ಟಂತೆಯೇ, ಯೋಜನೆ ಅನುಷ್ಠಾನಕ್ಕೂ ಹೆಚ್ಚಿನ ಗಮನಹರಿಸಿದರೆ ಉತ್ತಮ ಎಂದು ನೀರಾವರಿ ತಜ್ಞ ಕ್ಯಾ. ರಾಜಾರಾವ್‌ ತಿಳಿಸಿದ್ದಾರೆ. 

click me!