ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ 393 ಕೋಟಿ ರು. ವೆಚ್ಚದ ಕಾರ್ಯಕ್ರಮ, ಕ್ರಿಶ್ಚಿಯನ್ ಅಭಿವೃದ್ಧಿಗೆ 200 ಕೋಟಿ ರು., ತ್ರಿಪಿಟಕಗಳು ಪಾಲಿ ಭಾಷೆಯಿಂದ ಕನ್ನಡಕ್ಕೆ ಅನುವಾದ, 150 ಹೊಸ ಶಾಲೆ, 100 ಹಾಸ್ಟೆಲ್, ರಾಜ್ಯದ ವಕ್ಫ್ ಆಸ್ತಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ 100 ಕೋಟಿ ರು.
ಬೆಂಗಳೂರು(ಫೆ.17): ಅಲ್ಪಸಂಖ್ಯಾತ ಸಮುದಾಯಗಳ ಮಕ್ಕಳ ಶಿಕ್ಷಣಕ್ಕೆ ಪ್ರಮುಖ್ಯತೆ ನೀಡುವ ಮೂಲಕ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಒತ್ತು ನೀಡಿದ್ದು, ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧ, ಸಿಖ್ಖ್ ಸೇರಿದಂತೆ ಎಲ್ಲಾ ಅಲ್ಪಸಂಖ್ಯಾತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಪ್ರಯತ್ನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದಾರೆ.
ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗಾಗಿ 200 ಕೋಟಿ ರು., ಮಂಗಳೂರಿನ ಹಜ್ ಭವನದ ನಿರ್ಮಾಣ ಕಾಮಗಾರಿಗೆ 10 ಕೋಟಿ ರು., ಜೈನರ ಪ್ರಮುಖ ಧಾರ್ಮಿಕ ಸ್ಥಳಗಳ ಅಭಿವೃದ್ಧಿಗಾಗಿ 50 ಕೋಟಿ ರು., ಬೌದ್ಧರ ಪವಿತ್ರ ಗ್ರಂಥಗಳಾದ ತ್ರಿಪಿಟಕಗಳನ್ನು ಪಾಲಿ ಭಾಷೆಯಿಂದ ಕನ್ನಡಕ್ಕೆ ಅನುವಾದಕ್ಕೆ ಸೂಕ್ತ ಅನುದಾನ ಒದಗಿಸುವುದು. ರಾಜ್ಯದಲ್ಲಿರುವ ಸಿಖ್ಖ್ ಲಿಗಾರ್ ಸಮುದಾಯದ ಜನರ ಆರ್ಥಿಕ ಸಬಲೀಕರಣಕ್ಕಾಗಿ 2 ಕೋಟಿ ರು. ಹಾಗೂ ಬೀದರ್‌ನ ಶ್ರೀ ನಾನಕ್ ಝೀರಾ ಸಾಹೇಬ್ ಗುರುದ್ವಾರದ ಅಭಿವೃದ್ಧಿಗಾಗಿ 1 ಕೋಟಿ ರು., ರಾಜ್ಯದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವಿವಿಧ ಧಾರ್ಮಿಕ ಸ್ಥಳ ಅಭಿವೃದ್ಧಿಗೆ 20 ಕೋಟಿ ರು. ಒಳಗೊಂಡಂತೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲಿ 393 ಕೋಟಿ ರು. ವೆಚ್ಚದ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುವುದು ಎಂದು ಘೋಷಿಸಲಾಗಿದೆ.
undefined
ಕರ್ನಾಟಕ ಬಜೆಟ್ 2024: ಗ್ಯಾರಂಟಿಗಳ ಜತೆಗೆ ಅಭಿವೃದ್ಧಿಯ ಕಸರತ್ತು
ವಕ್ಫ್ ಆಸ್ತಿಗಳ ಸಂರಕ್ಷಣೆಗೆ ಕ್ರಮ:
ವಕ್ಫ್ ಆಸ್ತಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ 100 ಕೋಟಿ ರು. ಹಾಗೂ ಭಾರತೀಯ ಪುರಾತತ್ವ ಇಲಾಖೆ ವ್ಯಾಪ್ತಿಯ ವಕ್ಫ್ ಆಸ್ತಿಗಳನ್ನು ಆದ್ಯತೆಯ ಮೇರೆಗೆ ಅಭಿವೃದ್ಧಿ ಪಡಿಸಲಾಗುವುದು. ವಕ್ಫ್ ಸಂಸ್ಥೆಯ ಧಾರ್ಮಿಕ ಗುರುಗಳಿಗೆ ಹಾಗೂ ಮುತವಲ್ಲಿಗಳಿಗೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವು ಮೂಡಿಸಲು ತರಬೇತಿ ಕಾರ್ಯಾಗಾರ ಏರ್ಪಡಿಸುವುದು ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.
ಶಾಲೆ ಮತ್ತು ಹಾಸ್ಟೆಲ್ ಆರಂಭ:
ಹೊಸದಾಗಿ 50 ಮೊರಾರ್ಜಿ ದೇಸಾಯಿ ವಸತಿ ಶಾಲೆ, 100 ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯ, 100 ಮೌಲಾನಾ ಆಜಾದ್ ಶಾಲೆ, ಸ್ವಂತ ಕಟ್ಟಡವನ್ನು ಹೊಂದಿರುವ 25 ಶಾಲೆಗಳಲ್ಲಿ ಪದವಿ ಪೂರ್ವ ಶಿಕ್ಷಣ ಆರಂಭಿಸಲಾಗುವುದು. ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಬಿ.ಎಸ್ಸಿ. ನರ್ಸಿಂಗ್, ಜಿಎನ್‌ಎಂ ನರ್ಸಿಂಗ್ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಶುಲ್ಕ ಭರಿಸುವ ಯೋಜನೆಯನ್ನು ಪುನರ್ ಪ್ರಾರಂಭಿವುದಾಗಿ ಘೋಷಿಸಲಾಗಿದೆ.
7 ಕೋಟಿ ಜನರ ಕಿವಿಗೆ ಹೂ ಇಟ್ಟ ಸಿದ್ದರಾಮಯ್ಯ ಬಜೆಟ್: ಎಚ್.ಡಿ.ಕುಮಾರಸ್ವಾಮಿ
ಆರ್ಥಿಕ ಉತ್ತೇಜನ:
ಅಲ್ಪಸಂಖ್ಯಾತರು ಸ್ಥಾಪಿಸುವ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಹೊಸ ಘಟಕ ಹಾಗೂ ಘಟಕಗಳ ಉನ್ನತೀಕರಣಕ್ಕೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ ಪಡೆಯುವ 10 ಕೋಟಿ ರು. ವರೆಗಿನ ಸಾಲಕ್ಕೆ ಶೇ.6 ರಷ್ಟು ಬಡ್ಡಿ ಸಹಾಯಧನ ನೀಡುವುದಾಗಿ ತಿಳಿಸಿದೆ. ಅಲ್ಪಸಂಖ್ಯಾತ ಸಮುದಾಯದ ಮಹಿಳಾ ಸ್ವ-ಸಹಾಯ ಗುಂಪುಗಳ ಸ್ವಯಂ ಉದ್ಯೋಗ ಚಟುವಟಿಕೆಗಳಿಗೆ ಉತ್ತೇಜನಕ್ಕೆ 10 ಕೋಟಿ ರು. ನೀಡುವುದಾಗಿ ಘೋಷಿಸಲಾಗಿದೆ.
₹10 ಸಾವಿರ ಕೋಟಿ ನೀಡದಿರುವುದು ಬೇಸರ
ಅಲ್ಪಸಂಖ್ಯಾತ ಸಮುದಾಯ ಮಕ್ಕಳ ಶಿಕ್ಷಣಕ್ಕೆ ಹಾಗೂ ಭಾರತೀಯ ಪುರಾತತ್ವ ಇಲಾಖೆಗೆ ಅಧೀನದಲ್ಲಿರುವ ವಕ್ಫ್ ಆಸ್ತಿಗಳ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಘೋಷಿಸಿರುವುದು ಸ್ವಾಗತಾರ್ಹ. ಆದರೆ, ಮುಖ್ಯಮಂತ್ರಿಗಳು ನೀಡಿದ ಭರವಸೆಯಂತೆ ಜನಸಂಖ್ಯೆ ಆಧಾರಿತವಾಗಿ 10 ಸಾವಿರ ಕೋಟಿ ರು. ನೀಡದಿರುವುದು ಬೇಸರ ತಂದಿದೆ. ಜತೆಗೆ, ಕೆಎಂಡಿಸಿಯ ಸಾಲ ಸೌಲಭ್ಯಗಳು ಪ್ರಭಾವಿಗಳ ಪಾಲಾಗದೆ ಗ್ರಾಮೀಣ ಮತ್ತು ಬಡವರಿಗೆ ಸಿಗುವಂತಾಗಬೇಕು ಎಂದು ರಾಜ್ಯ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಶಾಫಿ ಸಅದಿ ತಿಳಿಸಿದ್ದಾರೆ.