ಎಲ್ಐಸಿ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಬಂಪರ್ ಗಿಫ್ಟ್ ನೀಡಿದೆ. ಅವರ ವೇತನದಲ್ಲಿ ಶೇ.17ರಷ್ಟು ಹೆಚ್ಚಳ ಮಾಡಿದೆ.
ನವದೆಹಲಿ (ಮಾ.16): ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಶೇ.17ರಷ್ಟು ವೇತನ ಹೆಚ್ಚಳ ಮಾಡಿದೆ. ಇದರಿಂದ ಸುಮಾರು 1 ಲಕ್ಷ ಉದ್ಯೋಗಿಗಳಿಗೆ ಹಾಗೂ 30,000 ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ. ಈ ವೇತನ ಹೆಚ್ಚಳ 2002ರ ಆಗಸ್ಟ್ ನಿಂದಲೇ ಜಾರಿಗೆ ಬರಲಿದೆ. ಇದರಿಂದ ಎಲ್ಐಸಿಗೆ ಒಂದು ವರ್ಷಕ್ಕೆ 4,000 ಕೋಟಿ ರೂ. ವೆಚ್ಚವಾಗಲಿದೆ. ಈ ಬಗ್ಗೆ ಎಲ್ಐಸಿ ಪ್ರಕಟಣೆ ಕೂಡ ಹೊರಡಿಸಿದೆ. ಈ ಪರಿಷ್ಕರಣೆಯಲ್ಲಿ ಎನ್ ಪಿಎಸ್ ಕೊಡುಗೆಯನ್ನು ಶೇ.10ರಿಂದ ಶೇ.14ಕ್ಕೆ ಹೆಚ್ಚಿಸಿರೋದು ಕೂಡ ಸೇರಿದೆ. ಇದರಿಂದ 2010ರ ಏಪ್ರಿಲ್ 1ರ ಬಳಿಕ ಸೇರ್ಪಡೆಗೊಂಡ ಸುಮಾರು 24,000 ಉದ್ಯೋಗಿಗಳಿಗೆ ನೆರವಾಗಲಿದೆ. ಈ ಪರಿಷ್ಕರಣೆಯು ಎಲ್ಐಸಿ ಪಿಂಚಣಿದಾರರಿಗೆ ಒಂದು ಬಾರಿಯ ಎಕ್ಸ್ ಗ್ರೇಷಿಯಾ ಪಾವತಿಯನ್ನು ಕೂಡ ಒಳಗೊಂಡಿದೆ. ಇದನ್ನು ಎಲ್ಐಸಿ ಪಿಂಚಣಿದಾರರಿಗೆ ಅವರು ಸಂಸ್ಥೆಗೆ ನೀಡಿರುವ ಮೌಲ್ಯಯುತ ಕೊಡುಗೆಗೆ ಅಭಿನಂದನೆ ಮಾದರಿಯಲ್ಲಿ ನೀಡಲಾಗುತ್ತಿದೆ. ಇದರಿಂದ 30,000ಕ್ಕೂ ಅಧಿಕ ಪಿಂಚಣಿದಾರರಿಗೆ ಹಾಗೂ ಕುಟುಂಬ ಪಿಂಚಣಿದಾರರಿಗೆ ನೆರವಾಗಲಿದೆ.
ಕೇಂದ್ರ ಸರ್ಕಾರ ಈ ಹಿಂದೆ ಕುಟುಂಬ ಪಿಂಚಣಿ ಮೊತ್ತವನ್ನು ಹೆಚ್ಚಿಸಿತ್ತು. ಇದು 21,000ಕ್ಕೂ ಅಧಿಕ ಕುಟುಂಬ ಪಿಂಚಣಿದಾರರಿಗೆ ನೆರವು ನೀಡಿತ್ತು ಎಂದು ವಿಮಾ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಈ ಪರಿಷ್ಕರಣೆ ಈ ಹಿಂದಿನ ಹಾಗೂ ಈಗಿನ ಎಲ್ಐಸಿ ಉದ್ಯೋಗಿಗಳಿಗೆ ನೆರವು ನೀಡಲಿದೆ. ಹಾಗೆಯೇ ಮುಂದಿನ ಜನಾಂಗಕ್ಕೆ ಆಕರ್ಷಕ ಉದ್ಯೋಗದ ತಾಣವಾಗಲಿದೆ ಕೂಡ. ಈ ವೇತನ ಪರಿಷ್ಕರಣೆಗೆ ಎಲ್ ಐಸಿ ಭಾರತ ಸರ್ಕಾರಕ್ಕೆ ಚಿರಋಣಿಯಾಗಿದೆ. ಈ ವೇತನ ಪರಿಷ್ಕರಣೆಯಿಂದ ದೇಶಾದ್ಯಂತ ಇರುವ ಎಲ್ಐಸಿ ಉದ್ಯೋಗಿಗಳು ಹಾಗೂ ಅವರ ಕುಟುಂಬದವರಿಗೆ ನೆರವು ನೀಡಲಿದೆ' ಎಂದು ಎಲ್ಐಸಿ ಹೇಳಿಕೆಯಲ್ಲಿ ತಿಳಿಸಿದೆ.
ಈ ವರ್ಷ ಭಾರತದ ಬ್ಯಾಂಕರ್ ಗಳಿಗೆ ಬಂಪರ್; ಸಿಂಗಾಪುರದ ಉದ್ಯೋಗಿಗಳಿಗಿಂತಲೂ ಅಧಿಕ ವೇತನ ಹೆಚ್ಚಳ!
ವೇತನ ಪರಿಷ್ಕರಣೆಯಿಂದ ಎಲ್ಐಸಿಗೆ ವಾರ್ಷಿಕ 4000 ಕೋಟಿ ರೂಪಾಯಿ ಹೆಚ್ಚುವರಿ ವೆಚ್ಚ ಮಾಡಬೇಕಾಗಿದೆ. ಒಮ್ಮೆ ವೇತನ ಹೆಚ್ಚಳ ಅನುಷ್ಠಾನಗೊಂಡರೆ ವಾರ್ಷಿಕ 29,000 ಹೆಚ್ಚುವರಿ ವೆಚ್ಚವಾಗಲಿದೆ. ಈ ವರ್ಷ ಹಿಂದಿನ ವರ್ಷದ ವೇತನ ಬಾಕಿ ಎಲ್ಲವನ್ನು ಪಾವತಿಸಬೇಕಾಗಿರುವ ಕಾರಣ ಒಟ್ಟು ವೇತನ ವೆಚ್ಚ 32,000 ಕೋಟಿ ರೂ. ದಾಟಲಿದೆ ಎಂದು ಎಲ್ಐಸಿ ತಿಳಿಸಿದೆ.
ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ನೌಕರರಿಗೆ ಶೇ.4ರಷ್ಟು ತುಟ್ಟಿಭತ್ಯೆ (ಡಿಎ) ಹೆಚ್ಚಳ ಘೋಷಿಸಿತ್ತು. ಇದಾದ ಒಂದು ದಿನದ ಬಳಿಕ ಬ್ಯಾಂಕ್ ಉದ್ಯೋಗಿಗಳ ವೇತನವನ್ನು ಶೇ.17ರಷ್ಟು ಹೆಚ್ಚಳ ಮಾಡಲು ಭಾರತೀಯ ಬ್ಯಾಂಕ್‌ಗಳ ಸಂಘ ಮತ್ತು ಬ್ಯಾಂಕ್ ಉದ್ಯೋಗಿಗಳ ಒಕ್ಕೂಟಗಳು ನಿರ್ಧರಿಸಿದ್ದವು.
ಬ್ಯಾಂಕ್ ಉದ್ಯೋಗಿಗಳ ವೇತನ ಪರಿಷ್ಕರಣೆ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಅಂಗೀಕರಿಸಿತ್ತು. ಶೇಕಡ 17 ವೇತನ ಹೆಚ್ಚಳದ ಪ್ರಸ್ತಾವನೆ ಅದಾಗಿತ್ತು. ಇದು 2022ರ ನವೆಂಬರ್ 1ರಿಂದ ಪೂರ್ವಾನ್ವಯವಾಗುವಂತೆ ಜಾರಿಯಾಗಿತ್ತು. ಈ ಕ್ರಮದಿಂದ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ವಾರ್ಷಿಕವಾಗಿ ಸುಮಾರು 8,284 ಕೋಟಿ ರೂಪಾಯಿಯನ್ನು ಹೆಚ್ಚುವರಿಯಾಗಿ ನೀಡಬೇಕಿರುತ್ತದೆ. 8 ಲಕ್ಷ ಬ್ಯಾಂಕ್ ಉದ್ಯೋಗಿಗಳು ವೇತನ ಹೆಚ್ಚಳದಿಂದ ಪ್ರಯೋಜನ ಪಡೆಯಲಿದ್ದಾರೆ, ಇದು ನವೆಂಬರ್ 2022 ರಿಂದ ಅನ್ಚಯವಾಗುವಂತೆ ಜಾರಿಗೆ ಬರಲಿದೆ.
ಕೇಂದ್ರ ಸರ್ಕಾರಿ ನೌಕರಿಯಲ್ಲಿರುವ ವ್ಯಕ್ತಿಗಳ ತುಟ್ಟಿಭತ್ಯೆಯನ್ನು ಶೇ. 4ರಷ್ಟು ಏರಿಸಲು ಕ್ಯಾಬಿನೆಟ್ ಇತ್ತೀಚೆಗೆ ಅನುಮೋದನೆ ನೀಡಿತ್ತು. 2024ರ ಜನವರಿ 1 ರಿಂದ ಅನ್ವಯವಾಗುವಂತೆ ಇದು ಜಾರಿಗೆ ಬರಲಿದೆ. ಡಿಎ ಹೆಚ್ಚಳಕ್ಕೆ ಅನುಮೋದನೆ ಸಿಕ್ಕಿರುವ ಕಾರಣ, ಕೇಂದ್ರ ಸರ್ಕಾರಿ ನೌಕರರ ಡಿಎ ಶೇಕಡಾ 50ಕ್ಕೆ ಏರಿದಂತಾಗಲಿದೆ.