
ಮುಂಬೈ(ಮೇ.04): ಅಕ್ಷಯ ತೃತೀಯ(Akshaya Tritiya) ದಿನದಂದು ಚಿನ್ನ(Gold) ಖರೀದಿಸಿದರೆ ಒಳ್ಳೆಯದು ಎಂಬ ನಂಬಿಕೆಯಲ್ಲಿ ಮಂಗಳವಾರ ದೇಶಾದ್ಯಂತ ಚಿನ್ನ ಪ್ರಿಯರು, ಆಭರಣಗಳ ಅಂಗಡಿಗೆ ಮುಗಿಬಿದ್ದು ಚಿನ್ನ ಖರೀದಿಸಿದ್ದು, ಒಂದೇ ದಿನ 15000 ಕೋಟಿ ರು.ಗೂ ಹೆಚ್ಚಿನ ಮೊತ್ತದ ಅಂದಾಜು 30 ಟನ್ ಚಿನ್ನ ಮಾರಾಟವಾಗಿದೆ.
ಕಳೆದ 2 ವರ್ಷಗಳಲ್ಲಿ ಕೋವಿಡ್(Covid-19) ಲಾಕ್‌ಡೌನ್(Lockdown) ಕಾರಣದಿಂದಾಗಿ ಜನರು ಚಿನ್ನ ಖರೀದಿಗೆ ಮುಂದಾಗಿದೇ ಚಿನ್ನದ ವ್ಯಾಪಾರ(Gold Trade) ಮಂಕಾಗಿತ್ತು. ಚಿನ್ನದ ಬೇಡಿಕೆಯಲ್ಲಿಯೇ ಶೇ.80 ರಷ್ಟು ಇಳಿಕೆ ಕಂಡುಬಂದಿತ್ತು. ಆದರೆ ಈ ವರ್ಷ ಕೋವಿಡ್ ಅಬ್ಬರ ಕಡಿಮೆಯಿರುವುದರೊಂದಿಗೆ ಸಾರ್ವತ್ರಿಕ ರಜೆ ಕೂಡಾ ಇರುವ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೂ ಭಾರೀ ಪ್ರಮಾಣದಲ್ಲಿ ಚಿನ್ನ ಮಾರಾಟವಾಗಿದೆ.
Akshaya Tritiya 2022: 30 ವರ್ಷಗಳ ಬಳಿಕ ಅಕ್ಷಯ ತೃತೀಯದಂದು ಬರುತ್ತಿದೆ ಈ ಶುಭಯೋಗ
2 ತಿಂಗಳ ಹಿಂದೆ ಚಿನ್ನದ ಬೆಲೆ 55000-58000 ರು.ವರೆಗೂ ತಲುಪಿತ್ತು. ಆದರೆ ಇದೀಗ ಚಿನ್ನದ ಬೆಲೆ 50000 ರು.ಗೆ ಇಳಿದಿರುವ ಕಾರಣ ಮತ್ತು ವಿವಾಹದ ಸಮಯವಾಗಿರುವ ಕಾರಣ ಜನರು ಭಾರೀ ಪ್ರಮಾಣದಲ್ಲಿ ಚಿನ್ನ ಮತ್ತು ಚಿನ್ನದ ಆಭರಣ ಖರೀದಿಸಿದ್ದಾರೆ. ವಿಶೇಷವಾಗಿ ಮದುವೆಯ ಆಭರಣಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (CAIT)ದ ಕಾರ್ಯದರ್ಶಿ ಪ್ರವೀಣ್ ಖಂಡೇಲ್‌ವಾಲ್ ತಿಳಿಸಿದ್ದಾರೆ.
2019ರಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಮ್‌ಗೆ 35000 ರು.ನಷ್ಟಿತ್ತು. ಆಗ 10000 ಕೋಟಿ ರು.ಮೌಲ್ಯದ ಚಿನ್ನ ಮಾರಾಟವಾಗಿತ್ತು. ಆದರೆ ನಂತರದ 2 ವರ್ಷಗಳಲ್ಲಿ ಚಿನ್ನದ ಮಾರಾಟ ಭಾರೀ ಕುಸಿತ ಕಂಡಿತ್ತು.
ಈ ದಿನ ಜನರು ಚಿನ್ನ ಖರೀದಿಗೆ ಮುಗಿ ಬೀಳುವುದೇಕೆ?
ಅತ್ಯಂತ ಮಂಗಳಕರವಾದ ಹಿಂದೂ ಹಬ್ಬಗಳಲ್ಲಿ ಒಂದಾದ ಅಕ್ಷಯ ತೃತೀಯ(Akshaya Tritiya)ವನ್ನು ಪ್ರತಿ ವರ್ಷ ಹಿಂದೂ ಕ್ಯಾಲೆಂಡರ್ ತಿಂಗಳ ವೈಶಾಖ ಶುಕ್ಲ ಪಕ್ಷದ ತೃತೀಯ ತಿಥಿಯಂದು ಆಚರಿಸಲಾಗುತ್ತದೆ. ಈ ವರ್ಷ ಮೇ 3ರಂದು ಭಾರತದಾದ್ಯಂತ ಅಕ್ಷಯ ತೃತೀಯ ಆಚರಿಸಲಾಗುತ್ತದೆ. ಸಮೃದ್ಧಿಯ ಹಬ್ಬವೆನಿಸಿಕೊಂಡಿರುವ ಅಕ್ಷಯ ತೃತೀಯವು ಮನೆಗೆ ಅದೃಷ್ಟ, ಐಶ್ವರ್ಯವನ್ನು ತರುತ್ತದೆ ಎಂಬ ನಂಬಿಕೆ ಇದೆ.
ಅಕ್ಷಯ್ ತೃತೀಯ: ಜಾಹೀರಾತಿನಲ್ಲಿ ಸಿಂಧೂರವಿಡದ ಕರೀನಾ ಕಪೂರ್ ಟ್ರೋಲ್!
ಅಕ್ಷಯ ಎಂಬುದು ಸಂಸ್ಕೃತ ಪದವಾಗಿದ್ದು, ಇದರ ಅರ್ಥ ಶಾಶ್ವತ ಎಂದಾಗಿದೆ. ತೃತೀಯ ಎಂದರೆ ಮೂರನೆಯದು. ವೈಶಾಖಾ ಮಾಸದ ಮೂರನೇ ದಿನವಾದ್ದರಿಂದ ತೃತೀಯ ಎನ್ನಲಾಗುತ್ತದೆ. ಅಕ್ಷಯ ತೃತೀಯ ಸಂದರ್ಭದಲ್ಲಿ ಏನನ್ನಾದರೂ ಖರೀದಿಸಿದರೆ ಅದು ನಮ್ಮೊಂದಿಗೆ ಶಾಶ್ವತವಾಗಿ ಉಳಿಯುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿಯೇ ಇಂದು ಚಿನ್ನ, ಬೆಳ್ಳಿ, ಮನೆಯಂಥ ದೊಡ್ಡ ವಸ್ತುಗಳನ್ನು ಖರೀದಿಸಲಾಗುತ್ತದೆ.
ಪೌರಾಣಿಕ ಹಿನ್ನೆಲೆ
ಈ ಹಬ್ಬಕ್ಕೆ ವಿಶೇಷ ಧಾರ್ಮಿಕ ಮಹತ್ವವಿದೆ. ಪೌರಾಣಿಕ ಕಥೆಯ ಪ್ರಕಾರ, ಇದೇ ದಿನ, ಬ್ರಹ್ಮ ದೇವನ ಮಗ ಅಕ್ಷಯ ಕುಮಾರ ಜನಿಸಿದರು. ಆದ್ದರಿಂದ ಈ ದಿನವನ್ನು ಅಕ್ಷಯ ತೃತೀಯ ಎಂದು ಕರೆಯಲಾಗುತ್ತದೆ. ಈ ದಿನಾಂಕದಂದು ಅಕ್ಷಯ ತೃತೀಯವನ್ನು ಹೊರತುಪಡಿಸಿ, ಗಂಗಾ ಅವತಾರ ಮತ್ತು ಪರಶುರಾಮ ಜಯಂತಿ(Parashuram Jayanti)ಯನ್ನು ಸಹ ಆಚರಿಸಲಾಗುತ್ತದೆ. ಅಕ್ಷಯ ತೃತೀಯದ ದಿನ ಯಾವುದೇ ತಪ್ಪು ಹೆಜ್ಜೆ ಇಡಬಾರದು ಹಾಗೂ ಯಾರ ಬಗ್ಗೆಯೂ ತಪ್ಪಾಗಿ ಯೋಚಿಸಬಾರದು. ಪದ್ಮ ಪುರಾಣದಲ್ಲಿ, ವಿಷ್ಣುವು ನಾರದನಿಗೆ ಈ ದಿನದಂದು ಮಾನವರು ಯಾವುದೇ ಕಾರ್ಯಗಳನ್ನು ಮಾಡಿದರೂ, ಮರಣಾನಂತರದ ಜೀವನದಲ್ಲಿ ಅವರು ತಮ್ಮ ಶ್ರಮದ ಫಲವನ್ನು ಪಡೆಯುತ್ತಾರೆ ಎಂದು ಹೇಳಿರುವುದಾಗಿ ಬರೆಯಲಾಗಿದೆ. ಈ ದಿನ ಖರೀದಿಸಿದ ವಸ್ತುಗಳು ಶಾಶ್ವತವಾಗಿರುವುದರ ಜೊತೆಗೆ ಅಕ್ಷಯವಾಗುತ್ತಾ ಅಂದರೆ ಹೆಚ್ಚುತ್ತಾ ಹೋಗುತ್ತವೆ ಎಂಬ ನಂಬಿಕೆ ಇದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.