Real Estate: ಸ್ಥಿರಾಸ್ತಿಗಳ ಮಾರ್ಗಸೂಚಿ ದರ 10% ಇಳಿಕೆ: ಸರ್ಕಾರದಿಂದ ಬಂಪರ್‌ ಗಿಫ್ಟ್‌

Kannadaprabha News   | Asianet News
Published : Jan 02, 2022, 04:48 AM ISTUpdated : Jan 02, 2022, 04:51 AM IST
Real Estate: ಸ್ಥಿರಾಸ್ತಿಗಳ ಮಾರ್ಗಸೂಚಿ ದರ 10% ಇಳಿಕೆ: ಸರ್ಕಾರದಿಂದ ಬಂಪರ್‌ ಗಿಫ್ಟ್‌

ಸಾರಾಂಶ

*  ಜ.1ರಿಂದ 3 ತಿಂಗಳು ಅನ್ವಯ: ಸರ್ಕಾರದ ಆದೇಶ *  ಸ್ಥಿರಾಸ್ತಿಗಳ ಖರೀದಿ, ಮಾರಾಟಕ್ಕೆ ಭಾರಿ ಪ್ರೋತ್ಸಾಹ *  ಮಾರ್ಗಸೂಚಿ ದರದ ಅನ್ವಯ ಖರೀದಿಗೆ ಮಾತ್ರ ಲಾಭ   

ಬೆಂಗಳೂರು(ಜ.02):  ತೆರಿಗೆ(Tax) ಸಂಗ್ರಹ ಕುಸಿತ ತಡೆಯಲು ಹಾಗೂ ರಾಜ್ಯದಲ್ಲಿ(Karnataka) ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ(Real Estate) ಪ್ರೋತ್ಸಾಹ ನೀಡಲು ಮುಂದಿನ ಮೂರು ತಿಂಗಳವರೆಗೆ ಎಲ್ಲ ರೀತಿಯ ಸ್ಥಿರಾಸ್ತಿಗಳ ಮೇಲಿನ ಮಾರ್ಗಸೂಚಿ ದರವನ್ನು ಶೇ.10ರಷ್ಟು ಕಡಿಮೆ ಮಾಡಿ ರಾಜ್ಯ ಸರ್ಕಾರ(Government of Karnataka) ಆದೇಶ ಹೊರಡಿಸಿದೆ.

ಜ.1ರಿಂದ ಮಾ.31ರವರೆಗೆ ಅನ್ವಯವಾಗುವಂತೆ ಕೃಷಿ ಜಮೀನು, ಕೃಷಿಯೇತರ ಜಮೀನು, ನಿವೇಶನ, ಕಟ್ಟಡ, ಅಪಾರ್ಟ್‌ಮೆಂಟ್‌ ಹಾಗೂ ಫ್ಲ್ಯಾಟ್‌ಗಳ ಮಾರ್ಗಸೂಚಿ(Guidelines) ದರವನ್ನು ಶೇ.10ರಷ್ಟು ಕಡಿಮೆ ಮಾಡಲಾಗಿದೆ.
ಕೊರೋನಾ(Coronavirus) ಹಿನ್ನೆಲೆಯಲ್ಲಿ ಆಸ್ತಿಗಳ ಖರೀದಿ ಹಾಗೂ ಮಾರಾಟ ವಹಿವಾಟು ತೀವ್ರ ಕುಸಿದಿದೆ. ಇದರಿಂದ 2019-20ನೇ ಸಾಲಿನಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕದ ಆದಾಯ ಸಂಗ್ರಹದಲ್ಲಿ 2,101 ಕೋಟಿ ರು.ನಷ್ಟು ಕೊರತೆ ಉಂಟಾಗಿತ್ತು. ದೆಹಲಿಯಲ್ಲಿ ಮಾರ್ಗಸೂಚಿ ದರ ಶೇ.20ರಷ್ಟು ಕಡಿಮೆ ಮಾಡಿರುವುದರಿಂದ ಆಸ್ತಿಗಳ ನೋಂದಣಿ ವೇಗ ಪಡೆದುಕೊಂಡಿದೆ. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರ ಸಲಹೆಯಂತೆ ರಾಜ್ಯದಲ್ಲೂ ಮೂರು ತಿಂಗಳ ಕಾಲ ಮಾರ್ಗಸೂಚಿ ದರವನ್ನು ಶೇ.10ರಷ್ಟು ಕಡಿಮೆ ಮಾಡಲಾಗುತ್ತಿದೆ ಎಂದು ಕೇಂದ್ರ ಮೌಲ್ಯಮಾಪನ ಸಮಿತಿ ಅಧ್ಯಕ್ಷ ಹಾಗೂ ನೋಂದಣಿ, ಮುದ್ರಾಂಕ ಆಯುಕ್ತರು ಶನಿವಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

ಬೆಂಗಳೂರು: ಜಾರಕಬಂಡೆ ಉದ್ಯಾನ ನಿರ್ಮಾಣದ ಹಿಂದೆ ರಿಯಲ್‌ ಎಸ್ಟೇಟ್‌ ಲಾಬಿ..!

ಹೊಸ ವರ್ಷದ ಉಡುಗೊರೆ:

ಈ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್‌.ಅಶೋಕ್‌(R Ashok), ರಾಜ್ಯದ ಲಕ್ಷಾಂತರ ಜನರಿಗೆ ಇದರಿಂದ ಲಾಭವಾಗಲಿದ್ದು, ಕಳೆದ ಎರಡು ವರ್ಷಗಳಿಂದ ಜಮೀನು ಮತ್ತು ಫ್ಲ್ಯಾಟ್‌ ಖರೀದಿಸಲು ಎದುರುನೋಡುತ್ತಿದ್ದ ಜನತೆಗೆ ಅನುಕೂಲವಾಗಲಿದೆ. ಆಯಾ ಪ್ರದೇಶಗಳಲ್ಲಿರುವ ಮಾರ್ಗಸೂಚಿ ದರದ ಪ್ರಕಾರ ಸರ್ಕಾರದ ಈ ನಿಯಮ ಅನ್ವಯವಾಗಲಿದ್ದು, ಎಲ್ಲ ರೀತಿಯ ನೋಂದಣಿಗೂ ಸಹ ಇದೇ ನಿಯಮ ಪಾಲಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಮಾರ್ಗಸೂಚಿ ದರದ ಅನ್ವಯ ಖರೀದಿಗೆ ಮಾತ್ರ ಲಾಭ:

ಮಾರ್ಗಸೂಚಿ ದರವನ್ನು ಶೇ.10ರಷ್ಟು ಕಡಿಮೆ ಮಾಡುತ್ತಿರುವುದರಿಂದ ಮಾರ್ಗಸೂಚಿ ದರ ಎಷ್ಟಿದೆಯೋ ಅಷ್ಟೇ ಮೊತ್ತಕ್ಕೆ ಆಸ್ತಿ ನೋಂದಣಿ ಮಾಡುವವರಿಗೆ ಮಾತ್ರ ನೋಂದಣಿ ಮತ್ತು ಮುದ್ರಾಂಕ ಶುಲ್ಕದಲ್ಲಿ ಶೇ.10ರಷ್ಟು ರಿಯಾಯಿತಿ ದೊರೆಯುತ್ತದೆ. ಮಾರ್ಗಸೂಚಿ ದರಕ್ಕಿಂತ ಹೆಚ್ಚಿರುವ ಮಾರುಕಟ್ಟೆ ದರದ ಆಧಾರದ ಮೇಲೆ ಆಸ್ತಿ ನೋಂದಣಿ ಮಾಡಿಕೊಳ್ಳುವವರಿಗೆ ರಿಯಾಯಿತಿಯ ಲಾಭ ದೊರೆಯುವುದಿಲ್ಲ ಎಂದು ಕಂದಾಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಿಯಲ್‌ ಎಸ್ಟೇಟ್‌ನಲ್ಲಿ ಹಣ ತೊಡಗಿಸೋ ಮುನ್ನ ಇವಿಷ್ಟು ವಿಚಾರ ಗಮನಿಸಿ

ಗ್ರಾಹಕರಿಗೆ ಏನು ಲಾಭ?

ಆಸ್ತಿ ಖರೀದಿ ವೇಳೆ ಆಸ್ತಿಯ ಮಾರ್ಗಸೂಚಿ ದರದ ಶೇ.6.5ರಷ್ಟು ಮೊತ್ತವನ್ನು ನೋಂದಣಿ ಮತ್ತು ಮುದ್ರಾಂಕ ಶುಲ್ಕವಾಗಿ ಪಾವತಿಸಬೇಕು. ಮಾರ್ಗಸೂಚಿ ದರ ಶೇ.10ರಷ್ಟು ಕಡಿಮೆಯಾಗುವುದರಿಂದ ಖರೀದಿದಾರರಿಗೆ ನೋಂದಣಿ ಶುಲ್ಕದ ಮೊತ್ತ ಶೇ.10ರಷ್ಟು ಕಡಿಮೆಯಾಗಲಿದೆ. ಉದಾ: 10 ಲಕ್ಷ ರು. ಮಾರ್ಗಸೂಚಿ ದರದ ಆಸ್ತಿಯ ಮಾರ್ಗಸೂಚಿ ದರ ಶೇ.10ರಷ್ಟು ಕಡಿಮೆಯಾಗಿ 9 ಲಕ್ಷ ರು.ಗೆ ಇಳಿಯಲಿದೆ. ಇದರಿಂದ 10 ಲಕ್ಷ ರು.ಗಳಿಗೆ 65 ಸಾವಿರ ರು. ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿಸಬೇಕಾಗಿದ್ದ ಖರೀದಿದಾರರು 58,500 ರು. (9 ಲಕ್ಷ ರು.ಗೆ) ಪಾವತಿಸಿದರೆ ಸಾಕು.

ಸರ್ಕಾರಕ್ಕೆ ಏನು ಲಾಭ?

ಕೃಷಿ, ಕೃಷಿಯೇತರ ಭೂಮಿ, ನಿವೇಶನ, ಕಟ್ಟಡ, ಅಪಾರ್ಟ್‌ಮೆಂಟ್‌, ಫ್ಲಾಟ್‌ಗಳಿಗೆ ಮಾರ್ಗಸೂಚಿ ದರ ಕಡಿಮೆ ಮಾಡುವುದರಿಂದ ಅವುಗಳ ಖರೀದಿ ಹಾಗೂ ಮಾರಾಟ ಹೆಚ್ಚಾಗಿ ನೋಂದಣಿ ಮತ್ತು ಮುದ್ರಾಂಕ ಶುಲ್ಕದ ಆದಾಯ ಹೆಚ್ಚುವ ನಿರೀಕ್ಷೆ ಸರ್ಕಾರದ್ದು.
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!