Economic Survey 2022: ಲಾಕ್ಡೌನ್‌ನ ವಲಸಿಗರಿಗೆ ಕೆಲಸ: ಕರ್ನಾಟಕ ದೇಶಕ್ಕೇ ಪ್ರಥಮ!

By Kannadaprabha NewsFirst Published Feb 1, 2022, 9:34 AM IST
Highlights

*ಕೇಂದ್ರದ ಆರ್ಥಿಕ ಸಮೀಕ್ಷಾ ವರದಿಯಲ್ಲಿ ಮಾಹಿತಿ
*ಲಾಕ್ಡೌನ್‌ನ ವಲಸಿಗರಿಗೆ ಕೆಲಸ: ಕರ್ನಾಟಕ ದೇಶಕ್ಕೇ ಪ್ರಥಮ

ಬೆಂಗಳೂರು (ಫೆ. 01): ಗ್ರಾಮೀಣ ಪ್ರದೇಶಗಳಿಗೆ ವಾಪಸಾದ ವಲಸೆ ಕಾರ್ಮಿಕರಿಗೆ 2020-21ನೇ (Labour Migration) ಸಾಲಿನಲ್ಲಿ ದೇಶದಲ್ಲೇ ಅತಿ ಹೆಚ್ಚು ಉದ್ಯೋಗ ಖಾತರಿ ಒದಗಿಸುವಲ್ಲಿ ಕರ್ನಾಟಕ ರಾಜ್ಯ (Karnataka) ದೇಶದಲ್ಲೇ ಪ್ರಥಮ ಸ್ಥಾನ ಪಡೆದಿದೆ ಎಂದು ಕೇಂದ್ರದ ಆರ್ಥಿಕ ಸಮೀಕ್ಷೆ ವರದಿ ತಿಳಿಸಿದೆ. ಕೊರೋನಾ ಸೋಂಕಿನ ಭೀತಿಯಿಂದ ಲಕ್ಷಾಂತರ ಜನ ವಲಸಿಗರು ತವರು ಜಿಲ್ಲೆಗಳಿಗೆ ವಾಪಸಾದರು. 

ಈ ವೇಳೆ ಉದ್ಯೋಗ, ಆದಾಯವಿಲ್ಲದೆ ಅತಂತ್ರರಾಗಿದ್ದ ವಲಸಿಗರಿಗೆ ಮಹಾತ್ಮಗಾಂಧಿ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಜಿ-ನರೇಗಾ) ಅಡಿ ಹಿಂದಿನ ವರ್ಷಕ್ಕಿಂತ ಹೆಚ್ಚು ಉದ್ಯೋಗ ಅವಕಾಶವನ್ನು ಕರ್ನಾಟಕ ನೀಡಿದೆ. ನಂತರದ ಸ್ಥಾನದಲ್ಲಿ ತಮಿಳುನಾಡು ಇದೆ ಎಂದು ಹೇಳಲಾಗಿದೆ.

Latest Videos

ಇನ್ನು ವಲಸೆ ಪ್ರಮಾಣ ಹೆಚ್ಚಿರುವ ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಒಡಿಶಾ ಹಾಗೂ ಬಿಹಾರ ರಾಜ್ಯದಲ್ಲಿ ಉದ್ಯೋಗ ಖಾತರಿ ನೀಡಿರುವ ಪ್ರಮಾಣ ಕಡಿಮೆ ಇದೆ ಎಂದು ವರದಿ ತಿಳಿಸಿದೆ. ಆರ್ಥಿಕ ಸಮೀಕ್ಷೆ 2021-22ರ ವರದಿ ಪ್ರಕಾರ, 2020ರಲ್ಲಿ ಕೊರೋನಾದಿಂದ ಉಂಟಾಗಿದ್ದ ಲಾಕ್ಡೌನ್‌ ಹಾಗೂ ನಗರದಲ್ಲಿದ್ದ ವಲಸಿಗರು ಗ್ರಾಮೀಣ ಭಾಗಗಳಿಗೆ ವಾಪಸಾಗಿದ್ದರು. ಇದರಿಂದ 2020ರಲ್ಲಿ ಉದ್ಯೋಗಕ್ಕಾಗಿ ತೀವ್ರ ಬೇಡಿಕೆ ಸೃಷ್ಟಿಯಾಗಿತ್ತು. ಈ ಸಮಯದಲ್ಲಿ ಎಂಜಿ-ನರೇಗಾ ಯೋಜನೆ ವಲಸಿಗರಿಗೆ ಆಸರೆಯಾಗಿತ್ತು.

ಇದನ್ನೂ ಓದಿ: Budget 2022 LIVE: ಮೋದಿ ಸರಕಾರದ ಲೆಕ್ಕ, ನಿರ್ಮಲಾ ಮಂಡಿಸ್ತಾರೆ ಪಕ್ಕಾ

2020-21ನೇ ಸಾಲಿನಲ್ಲಿ ಗ್ರಾಮೀಣ ಅಭಿವೃದ್ಧಿ ಇಲಾಖೆಯು 13 ಕೋಟಿ ಮಾನವ ದಿನಗಳ ಸೃಜನೆ ಗುರಿ ಹೊಂದಿತ್ತು. ಆದರೆ, ಗುರಿಗೂ ಮೀರಿದ ಸಾಧನೆ ತೋರಿ 15 ಕೋಟಿ ಮಾನವ ದಿನಗಳನ್ನು ಸೃಜನೆ ಮಾಡಿತ್ತು. ತನ್ಮೂಲಕ ರಾಜ್ಯದಲ್ಲಿ ವಲಸಿಗರಿಗೆ ಆಸರೆಯಾಗಿ 2019ನೇ ಸಾಲಿಗಿಂತ ಹೆಚ್ಚು ದಿನಗಳ ಉದ್ಯೋವಕಾಶವನ್ನು ಕಲ್ಪಿಸಿತ್ತು.

ದೇಶದ ಆರ್ಥಿಕಾಭಿವೃದ್ಧಿ ದರ ದಾಖಲೆ ಬೆಳವಣಿಗೆ: ಕೋವಿಡ್‌ ಸಾಂಕ್ರಾಮಿಕದಿಂದ (Covid 19) ನಲುಗಿದ್ದ ದೇಶದ ಆರ್ಥಿಕತೆ ಪೂರ್ಣ (Economy) ಪ್ರಮಾಣದಲ್ಲಿ ಪುಟಿದೆದ್ದಿದ್ದು, ಮುಂಬರುವ ಯಾವುದೇ ಸವಾಲುಗಳನ್ನು ಎದುರಿಸಲು ಸಂಪೂರ್ಣ ಸನ್ನದ್ಧವಾಗಿದೆ ಎಂದು ಕೇಂದ್ರ ಸರ್ಕಾರವು ಸೋಮವಾರ ಮಂಡಿಸಿದ ‘ಆರ್ಥಿಕ ಸಮೀಕ್ಷೆ’ಯಲ್ಲಿ ಘೋಷಿಸಿದೆ. ಜೊತೆಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಸಮಗ್ರ ಆರ್ಥಿಕ ಬೆಳವಣಿಗೆ ದರ (ಜಿಡಿಪಿ) ಶೇ.9.2ರಷ್ಟುಮತ್ತು 2022-23ನೇ ಸಾಲಿನಲ್ಲಿ ಶೇ.8ರಿಂದ ಶೇ.8.5ರಷ್ಟುಬೆಳವಣಿಗೆ ದಾಖಲಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ. ಇದರೊಂದಿಗೆ, ಈ ಹಿಂದಿನ ಕುಸಿತವನ್ನು ಮೆಟ್ಟಿನಿಂತು, ಮುಂದಿನ ಸತತ 2 ವರ್ಷಗಳ ಕಾಲ ಇಡೀ ವಿಶ್ವದ ಯಾವುದೇ ದೇಶಗಳಿಗಿಂತ ಭಾರತ ಹೆಚ್ಚಿನ ಜಿಡಿಪಿ ದರ ದಾಖಲಿಸುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: Economic Survey 2022: 2021ರಲ್ಲಿ ಅತ್ಯಧಿಕ ಸ್ಟಾರ್ಟ್ಅಪ್ ಗಳಿರೋ ನಗರ ಬೆಂಗಳೂರಲ್ಲ, ನವದೆಹಲಿ!

ಸೋಮವಾರ ಸಂಸತ್ತಿನಲ್ಲಿ 2021-22ನೇ ಸಾಲಿನ ಆರ್ಥಿಕ ಸಮೀಕ್ಷಾ ವರದಿ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ‘ಒಟ್ಟಾರೆ ಮತ್ತು ಬೃಹತ್‌- ಆರ್ಥಿಕತೆಯಲ್ಲಿನ ಸ್ಥಿರತೆ ಸೂಚ್ಯಂಕಗಳು ಭಾರತದ ಆರ್ಥಿಕತೆಯು 2022-23ರಲ್ಲಿ ಎದುರಾಗಬಹುದಾದ ಯಾವುದೇ ಸವಾಲುಗಳನ್ನು ಎದುರಿಸಲು ಸನ್ನದ್ಧವಾಗಿದೆ ಎಂಬುದನ್ನು ಸೂಚಿಸಿವೆ. ಭಾರತದ ಆರ್ಥಿಕತೆಯು ಹೀಗೆ ಉತ್ತಮ ಸ್ಥಿತಿಯನ್ನು ತಲುಪಿದ್ದಕ್ಕೆ ಮುಖ್ಯ ಕಾರಣ ಆರ್ಥಿಕತೆಯ ವಿಶಿಷ್ಟಪ್ರತಿಕ್ರಿಯೆ ಕಾರ್ಯತಂತ್ರ’ ಎಂದು ಹೇಳಿದ್ದಾರೆ.

‘ದೇಶದಲ್ಲಿ ಕೋವಿಡ್‌ ಲಸಿಕಾ ಅಭಿಯಾನ ಅತ್ಯಂತ ಯಶಸ್ವಿಯಾಗಿ ನಡೆದಿರುವುದು, ಪೂರೈಕೆ ವಲಯದಲ್ಲಿನ ಸುಧಾರಣೆ ಮತ್ತು ನಿಯಂತ್ರಣಾ ಕ್ರಮಗಳನ್ನು ಸುಧಾರಣೆ ಮಾಡಿದ್ದು ದೇಶದ ಆರ್ಥಿಕ ಪ್ರಗತಿಗೆ ದೊಡ್ಡ ನೆರವು ನೀಡಿದೆ’ ಎಂದು ಸಚಿವೆ ನಿರ್ಮಲಾ ಬಣ್ಣಿಸಿದ್ದಾರೆ.

click me!