Union Budget ಹಲವು ಪ್ರಥಮಗಳು: ಮೊದಲ ಬಜೆಟ್ ಮಂಡಿಸಿದ್ದು ವಿದೇಶಿಗ!

By Kannadaprabha News  |  First Published Feb 1, 2022, 8:35 AM IST

ಬಹುನಿರೀಕ್ಷಿತ ಕೇಂದ್ರ ಬಜೆಟನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಫೆ.1ರಂದು ಸಂಸತ್ತಿನ ಲೋಕಸಭೆ ಕಲಾಪದಲ್ಲಿ ಮಂಡನೆ ಮಾಡಲಿದ್ದಾರೆ. ಈ ಬಜೆಟ್‌ ಹಲವು ಪ್ರಥಮಗಳು ಮತ್ತು ವೈಶಿಷ್ಟ್ಯಗಳನ್ನು ಒಳಗೊಂಡಿದೆ.


ನವದೆಹಲಿ (ಫೆ. 01): ಬಹುನಿರೀಕ್ಷಿತ ಕೇಂದ್ರ ಬಜೆಟನ್ನು (Union Budget) ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಫೆ.1ರಂದು ಸಂಸತ್ತಿನ ಲೋಕಸಭೆ ಕಲಾಪದಲ್ಲಿ ಮಂಡನೆ ಮಾಡಲಿದ್ದಾರೆ. ಈ ಬಜೆಟ್‌ ಹಲವು ಪ್ರಥಮಗಳು ಮತ್ತು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಭಾರತದಲ್ಲಿ ಮೊದಲ ಬಜೆಟ್‌ ಮಂಡನೆ ಆರಂಭವಾಗಿದ್ದು ಯಾವಾಗ? ಮತ್ತು ಅದರ ಸ್ವರೂಪ ಹೇಗಿತ್ತು? ಈಗ ಆಯವ್ಯಯ ಮಂಡನೆಯಲ್ಲಿ ಆಗಿರುವ ಬದಲಾವಣೆಗಳೇನು? ಭಾರತದ ಇತಿಹಾಸದಲ್ಲಿ ಯಾವೆಲ್ಲಾ ಪ್ರಮುಖ ನಾಯಕರು ಬಜೆಟ್‌ ಮಂಡಿಸಿದ್ದಾರೆ? ಎಂಬ ಸಂಕ್ಷಿಪ್ತ ವಿವರ ಇಲ್ಲಿದೆ.

ಭಾರತದ ಮೊದಲ ಬಜೆಟ್‌ ಮಂಡಿಸಿದ್ದು ವಿದೇಶಿಗ: ಭಾರತದ ಮೊದಲ ಬಜೆಟ್‌ ಮಂಡಿಸಿದ್ದು 1860ರ ಏ.7ರಂದು. ಆಗ ಭಾರತ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿತ್ತು. ಹೀಗಾಗಿ ಈಸ್ಟ್‌ ಇಂಡಿಯಾ ಕಂಪನಿಯ ರಾಜಕೀಯ ನಾಯಕ ಮತ್ತು ಆರ್ಥಿಕ ತಜ್ಞನಾಗಿದ್ದ ಸ್ಕಾಟ್ಲೆಂಡ್‌ ಮೂಲದ ಜೇಮ್ಸ್‌ ವಿಲ್ಸನ್‌ ಭಾರತದ ಮೊದಲ ಮಂಡಿಸಿದರು.

Tap to resize

Latest Videos

undefined

ಸ್ವತಂತ್ರ ಭಾರತದ ಮೊದಲ ಬಜೆಟ್‌: ಸ್ವತಂತ್ರ ಭಾರತದ ಮೊದಲ ಬಜೆಟ್‌ ಮಂಡನೆಯಾಗಿದ್ದು 1947ರ ನ.26ರಂದು. ಆಗಿನ ಹಣಕಾಸು ಸಚಿವರಾಗಿದ್ದ ಆರ್‌.ಕೆ.ಷಣ್ಮುಗಂ ಚೆಟ್ಟಿಅವರು ಈ ಬಜೆಟ್‌ ಮಂಡಿಸಿದ್ದರು.

ಸುದೀರ್ಘ ಬಜೆಟ್‌ ಭಾಷಣ: ದೇಶದಲ್ಲಿ ಸುದೀರ್ಘ ಬಜೆಟ್‌ ಭಾಷಣ ಮಂಡಿಸಿದ ದಾಖಲೆ, ಹಾಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಹೆಸರಿನಲ್ಲಿದೆ. 2020-21ನೇ ಬಜೆಟ್‌ ಅನ್ನು ಅವರು 2 ಗಂಟೆ 42 ನಿಮಿಷಗಳ ಕಾಲ ಮಂಡಿಸಿದ್ದರು. ಇನ್ನೂ 2 ಪುಟ ಬಾಕಿ ಇತ್ತಾದರೂ ಅಸೌಖ್ಯದ ಕಾರಣ ಅವರು ತಮ್ಮ ಭಾಷಣವನ್ನು ಮೊಟಕುಗೊಳಿಸಬೇಕಾಗಿ ಬಂದಿತ್ತು. ಇದರ ಹಿಂದಿನ ದಾಖಲೆ ಕೂಡಾ ನಿರ್ಮಲಾ ಹೆಸರಲ್ಲೇ ಇತ್ತು. 2019ರಲ್ಲಿ ಅವರು 2 ಗಂಟೆ 17 ನಿಮಿಷಗಳ ಕಾಲ ಬಜೆಟ್‌ ಮಂಡಿಸಿದ್ದರು.

ಇದನ್ನೂ ಓದಿ: Budget 2022 LIVE: ಮೋದಿ ಸರಕಾರದ ಲೆಕ್ಕ, ನಿರ್ಮಲಾ ಮಂಡಿಸ್ತಾರೆ ಪಕ್ಕಾ

ಅತಿ ಹೆಚ್ಚು ಪದದ ಬಜೆಟ್‌ ಸಿಂಗ್‌ ಹಿರಿಮೆ: ನರಸಿಂಹರಾವ್‌ ಪ್ರಧಾನಿಯಾಗಿದ್ದ ವೇಳೆ ಮನಮೋಹನ್‌ ಸಿಂಗ್‌ 1991ರಲ್ಲಿ ಮಂಡಿಸಿದ ಬಜೆಟ್‌ ಪ್ರತಿಯಲ್ಲಿ 18650 ಪದಗಳಿದ್ದವು. ಇದು ಅತಿ ಹೆಚ್ಚು ಪದ ಹೊಂದಿದ್ದ ಬಜೆಟ್‌ ಎಂಬ ದಾಖಲೆ ಹೊಂದಿದೆ. 2018ರಲ್ಲಿ ಅರುಣ್‌ ಜೇಟ್ಲಿ ಮಂಡಿಸಿದ ಬಜೆಟ್‌ನಲ್ಲಿ 18604 ಪದಗಳಿದ್ದವು.

ಅತಿ ಸಂಕ್ಷಿಪ್ತ ಬಜೆಟ್‌ ಮಂಡನೆ: 1977ರಲ್ಲಿ ಅಂದಿನ ಹಣಕಾಸು ಸಚಿವ ಹೀರುಭಾಯ್‌ ಮುಲ್ಲಿಜಿಭಾಯಿ ಕೇವಲ 800 ಪದಗಳನ್ನು ಹೊಂದಿದ್ದ ಬಜೆಟ್‌ ಅನ್ನು ಮಂಡಿಸಿದ್ದರು.

ಅತಿ ಹೆಚ್ಚು ಬಾರಿ ಬಜೆಟ್‌ ಮಂಡನೆ ದಾಖಲೆ: ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಅತಿ ಹೆಚ್ಚು (10) ಬಜೆಟ್‌ ಮಂಡಿಸಿದ ದಾಖಲೆ ಹೊಂದಿದ್ದಾರೆ. 1962-69ರ ಅವಧಿಯಲ್ಲಿ ಅವರು ಒಟ್ಟು 10 ಬಜೆಟ್‌ ಮಂಡಿಸಿದ್ದರು. ನಂತರದ ಸ್ಥಾನಗಳಲ್ಲಿ ಪಿ.ಚಿದಂಬರಂ(9), ಪ್ರಣಬ್‌ ಮುಖರ್ಜಿ (8), ಯಶವಂತ್‌ ಸಿನ್ಹಾ (8), ಮನಮೋಹನ್‌ಸಿಂಗ್‌ (6) ಇದ್ದಾರೆ.

ಸಂಜೆ ಬಜೆಟ್‌ ಬೆಳಗ್ಗೆಗೆ ಬದಲಾಯಿತು: 1999ರವರೆಗೂ ಭಾರತದಲ್ಲಿ ಬಜೆಟ್‌ ಅನ್ನು ಸಂಜೆ 5 ಗಂಟೆಗೆ ಮಂಡಿಸಲಾಗುತ್ತಿತ್ತು. ಹಿಂದೆ ಬ್ರಿಟೀಷರು ಭಾರತವನ್ನು ಆಳುತ್ತಿದ್ದ ವೇಳೆ ಅವರ ಸಮಯಕ್ಕೆ ಹೊಂದಾಣಿಕೆ ಮಾಡಲು ಭಾರತದಲ್ಲಿ ಸಂಜೆ ಬಜೆಟ್‌ ಮಂಡನೆ ಸಂಪ್ರದಾಯ ಇತ್ತು. ಬ್ರಿಟಿಷರ ಭಾರತ ಬಿಟ್ಟು ಹೋದ ಸುಮಾರು 5 ದಶಕ ಅಂದೇ ಸಂಪ್ರದಾಯ ಮುಂದುವರೆದಿತ್ತು. ಆದರೆ 1999ರಲ್ಲಿ ಈ ಸಂಪ್ರದಾಯ ಬದಲಿಸಿ ಬೆಳಗ್ಗೆ 11ಕ್ಕೆ ಮಂಡಿಸುವ ಸಂಪ್ರದಾಯ ಆರಂಭಗೊಂಡಿತು. ಜೊತೆಗೆ ಹಣಕಾಸು ವರ್ಷದ ಕಡೆಯ ದಿನ ಅಂದರೆ ಮಾ.31ರಂದು ಬಜೆಟ್‌ ಮಂಡನೆಗೂ ಎನ್‌ಡಿಎ ಸರ್ಕಾರ 2017ರಲ್ಲಿ ವಿದಾಯ ಹೇಳಿತು. ಆ ವರ್ಷ ಫೆ.1ರಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಬಜೆಟ್‌ ಮಂಡಿಸಿದರು.

ಇದನ್ನೂ ಓದಿ: Economic Survey 2022: ಕೋವಿಡ್‌ ನಡುವೆಯೂ ದೇಶದ ಆರ್ಥಿಕಾಭಿವೃದ್ಧಿ ದರ ದಾಖಲೆ ಬೆಳವಣಿಗೆ!

ಇಂಗ್ಲಿಷ್‌ನಿಂದ ಹಿಂದಿಗೂ ಬಂತು ಬಜೆಟ್‌: 1955ರವರೆಗೂ ಭಾರತದಲ್ಲಿ ಬಜೆಟ್‌ ಅನ್ನು ಕೇವಲ ಆಂಗ್ಲ ಭಾಷೆಯಲ್ಲಿ ಮಂಡಿಸಲಾಗುತ್ತಿತ್ತು. ಆದರೆ 1955ರಿಂದ ಬಜೆಟ್‌ ಪ್ರತಿಗಳನ್ನು ಇಂಗ್ಲಿಷ್‌ ಮತ್ತು ಹಿಂದಿ ಎರಡೂ ಭಾಷೆಗಳಲ್ಲಿ ಮುದ್ರಿಸಲು ಪ್ರಾರಂಭಿಸಲಾಯಿತು.

ಪೇಪರ್‌ ರಹಿತ ಬಜೆಟ್‌ ಮಂಡನೆ:  ಕೋವಿಡ್‌ ಹಿನ್ನೆಲೆಯಲ್ಲಿ 2021-22ರ ಬಜೆಟ್‌ ಅನ್ನು ಸಂಪೂರ್ಣ ಡಿಜಿಟಲ್‌ ಸ್ವರೂಪದಲ್ಲಿ ಮಂಡಿಸಲಾಯಿತು. ಇಂಥ ಬೆಳವಣಿಗೆ ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊದಲನೆಯದ್ದಾಗಿತ್ತು.

ಬಜೆಟ್‌ ಮಂಡಿಸಿದ ಎರಡನೇ ಮಹಿಳೆ: 1970-71ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ಬಜೆಟ್‌ ಮಂಡಿಸುವ ಮೂಲಕ ಮೊದಲ ಮಹಿಳೆ ಎಂಬ ಹಿರಿಮೆಗೆ ಪಾತ್ರರಾದರು. 2019ರಲ್ಲಿ ನಿರ್ಮಲಾ ಸೀತಾರಾಮನ್‌ ಬಜೆಟ್‌ ಮಂಡಿಸುವ ಮೂಲಕ, ಬಜೆಟ್‌ ಮಂಡಿಸಿದ 2ನೇ ಮಹಿಳೆ ಎಂಬ ದಾಖಲೆಗೆ ಪಾತ್ರರಾದರು. ಜೊತೆಗೆ ಬಜೆಟ್‌ ಪ್ರತಿಗಳನ್ನು ಸೂಟ್‌ಕೇಸ್‌ ಬದಲಿಗೆ ಸಾಂಪ್ರದಾಯಿಕ ಬಹಿ-ಖಾತಾ (ಖಾತಾ ಪುಸ್ತಕ) ಬ್ಯಾಗ್‌ನಲ್ಲಿ ಇಟ್ಟುಕೊಂಡು ಬಂದಿದ್ದರು.

ಸಾಮಾನ್ಯ ಬಜೆಟ್‌ನಲ್ಲಿ ರೈಲ್ವೆ ಬಜೆಟ್‌ ವಿಲೀನ: 2017ರವರೆಗೂ ರೈಲ್ವೆ ಬಜೆಟ್‌ ಮತ್ತು ಸಾಮಾನ್ಯ ಬಜೆಟ್‌ ಅನ್ನು ಪ್ರತ್ಯೇಕವಾಗಿ ಮಂಡಿಸಲಾಗುತ್ತಿತ್ತು. ಆದರೆ 92 ವರ್ಷಗಳ ಸಂಪ್ರದಾಯಕ್ಕೆ ವಿದಾಯ ಹೇಳಿದ ಸರ್ಕಾರ ಸಾಮಾನ್ಯ ಬಜೆಟ್‌ನಲ್ಲಿ ರೈಲ್ವೆ ಬಜೆಟ್‌ ಅನ್ನು ವಿಲೀನಗೊಳಿಸಿತು.

ಬಜೆಟ್‌ ಪ್ರತಿ ಮುದ್ರಣ: 1950ರವರೆಗೂ ಬಜೆಟ್‌ ಪ್ರತಿಗಳನ್ನು ರಾಷ್ಟ್ರಪತಿ ಭವನದಲ್ಲೇ ಮುದ್ರಿಸಲಾಗುತ್ತಿತ್ತು. ನಂತರ ಅದನ್ನು ನವದೆಹಲಿಯ ಮಿಂಟೋ ರಸ್ತೆಗೆ ವರ್ಗಾಯಿಸಲಾಯಿತು. 1980ರಲ್ಲಿ ಹಣಕಾಸು ಸಚಿವಾಲಯ ಇರುವ ನಾತ್‌ರ್‍ಬ್ಲಾಕ್‌ನಲ್ಲೇ ಪ್ರತ್ಯೇಕ ಮುದ್ರಣಾಲಯ ಸ್ಥಾಪಿಸಲಾಯಿತು.

ಐತಿಹಾಸಿಕ ಬಜೆಟ್‌ಗಳು

ಬ್ಲ್ಯಾಕ್‌ ಬಜೆಟ್‌: ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ವೇಳೆ ಹಣಕಾಸು ಸಚಿವ ಯಶವಂತ್‌ ಬಿ. ಚವ್ಹಾಣ್‌ 1973-74ರಲ್ಲಿ ಮಂಡಿಸಿದ ಬಜೆಟ್‌ ಅನ್ನು ಬ್ಲ್ಯಾಕ್‌ ಬಜೆಟ್‌ ಎಂದು ಟೀಕಿಸಲಾಗಿತ್ತು. ಕಾರಣ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟು, 550 ಕೋಟಿ ರು.ನ ಕೊರತೆ ಬಜೆಟ್‌ ಮಂಡಿಸಲಾಗಿತ್ತು.

ಕ್ಯಾರೆಟ್‌ ಆ್ಯಂಡ್‌ ಸ್ಟಿಕ್‌ ಬಜೆಟ್‌:1986ರಲ್ಲಿ ಅಂದಿನ ಹಣಕಾಸು ಸಚಿವ ವಿ.ಪಿ.ಸಿಂಗ್‌ ಮಂಡಿಸಿದ ಬಜೆಟ್‌, ದೇಶದಲ್ಲಿನ ಲೈಸೆನ್ಸ್‌ ರಾಜ್‌ ಸಂಪ್ರದಾಯಕ್ಕೆ ಕೊನೆ ಹಾಡಿತ್ತು. ಈ ಬಜೆಟ್‌ ಜನರಿಗೆ ಬಹುಮಾನ ಮತ್ತು ಶಿಕ್ಷೆ ಎರಡನ್ನೂ ಪ್ರಸ್ತಾಪಿಸಿದ್ದ ಕಾರಣ ಅದನ್ನು ಕ್ಯಾರೆಟ್‌ ಆ್ಯಂಡ್‌ ಸ್ಟಿಕ್‌ ಬಜೆಟ್‌ ಎಂದು ಬಣ್ಣಿಸಲಾಗಿತ್ತು.

ಇದನ್ನೂ ಓದಿ: Budget 2022: ಬಜೆಟ್‌ ನಿರೀಕ್ಷೆಗಳೇನು? ತೆರಿಗೆ ಪರಿಷ್ಕರಣೆ, ಆರೋಗ್ಯ ವಲಯಕ್ಕೆ ಒತ್ತು?

ಹೊಸ ಯುಗದ ಬಜೆಟ್‌: 1991ರಲ್ಲಿ ಮನಮೋಹನ್‌ ಸಿಂಗ್‌ ಮಂಡಿಸಿದ ಬಜೆಟ್‌ ಅನ್ನು ಹೊಸ ಯುಗದ ಬಜೆಟ್‌ ಎಂದೇ ಪರಿಗಣಿಸಲಾಗಿದೆ. ಇದು ಲೈಸೆನ್ಸ್‌ ರಾಜ್‌ಗೆ ಕೊನೆ ಹಾಡಿದ್ದರ ಜೊತೆಗೆ ಆರ್ಥಿಕ ಸುಧಾರಣೆಗೆ ದೇಶವನ್ನು ತೆರೆದಿಟ್ಟಿತ್ತು. ದೇಶ ಆರ್ಥಿಕವಾಗಿ ಪತನಗೊಳ್ಳುವ ಸ್ಥಿತಿಯಲ್ಲಿದ್ದ ವೇಳೆ ಪ್ರಧಾನಿ ನರಸಿಂಹ ರಾವ್‌ ಮತ್ತು ಮನಮೋಹನ್‌ ಜೋಡಿ ಮಂಡಿಸಿದ ಬಜೆಟ್‌ ದೇಶದ ಆರ್ಥಿಕತೆಗೆ ಹೊಸ ದಿಕ್ಕು ತೋರಿಸಿತ್ತು.

ಕನಸಿನ ಬಜೆಟ್‌: 1997-98ರಲ್ಲಿ ಹಣಕಾಸು ಸಚಿವ ಪಿ.ಚಿದಂಬರಂ ಮಂಡಿಸಿದ ಬಜೆಟ್‌ ಅನ್ನು ಕನಸಿನ ಬಜೆಟ್‌ ಎಂದೇ ಬಣ್ಣಿಸಲಾಗಿದೆ. ತೆರಿಗೆ ಸಂಗ್ರಹ ಪ್ರಮಾಣ ಹೆಚ್ಚಿಸಲು ತೆರಿಗೆ ಪ್ರಮಾಣ ಕಡಿತ ಮಾಡಲಾಯಿತು. ಗರಿಷ್ಠ ಆದಾಯ ತೆರಿಗೆಯನ್ನು ಶೇ.40ರಿಂದ ಶೇ.30ಕ್ಕೆ ಇಳಿಸಲಾಯ್ತು. ದೇಶೀಯ ಕಾರ್ಪೊರೆಟ್‌ ಕಂಪನಿಗಳಿಗೆ ವಿಧಿಸುವ ತೆರಿಗೆಯನ್ನು ಶೇ.35ಕ್ಕೆ ಇಳಿಸಿದ್ದರ ಜೊತೆಗೆ ಇತರೆ ಹಲವು ತೆರಿಗೆ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲಾಯಿತು. ಕಪ್ಪು ಹಣ ಹೊರತೆಗೆಯಲು ಸ್ವಯಂ ಆಸ್ತಿ ಘೋಷಣೆ ಯೋಜನೆ ಜಾರಿ ಮಾಡಲಾಯ್ತು.

ಸಸಹಸ್ರಮಾನದ ಬಜೆಟ್‌: 2000ನೇ ಇಸವಿಯಲ್ಲಿ ಯಶವಂತ್‌ ಸಿನ್ಹಾ ಮಂಡಿಸಿದ ಬಜೆಟ್‌ ಅನ್ನು ಸಹಸ್ರಮಾನದ ಬಜೆಟ್‌ ಎಂದು ಬಣ್ಣಿಸಲಾಗಿತ್ತು. ಭಾರತದ ಮಾಹಿತಿ ತಂತ್ರಜ್ಞಾನ ವಲಯದ ಬೆಳವಣಿಗೆಗೆ ಈ ಬಜೆಟ್‌ನಲ್ಲಿ ಹೊಸ ದಿಕ್ಕು ನೀಡಲಾಯಿತು.

ರೋಲ್‌ಬ್ಯಾಕ್‌ ಬಜೆಟ್‌: 2002-03ರಲ್ಲಿ ಯಶವಂತ್‌ ಸಿನ್ಹಾ ಮಂಡಿಸಿದ ಬಜೆಟ್‌ ಅನ್ನು ರೋಲ್‌ಬ್ಯಾಕ್‌ ಬಜೆಟ್‌ ಎಂದು ವಿಶ್ಲೇಷಿಸಲಾಯಿತು. ಕಾರಣ ಈ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದ ಹಲವು ಅಂಶಗಳನ್ನು ನಂತರದ ದಿನಗಳಲ್ಲಿ ಹಿಂದಕ್ಕೆ ಪಡೆಯಲಾಯಿತು.

ಶತಮಾನದಲ್ಲಿ ಒಂದು ಬಜೆಟ್‌: 2021ರಲ್ಲಿ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಬಜೆಟ್‌ ಅನ್ನು ಶತಮಾನದಲ್ಲಿ ಒಂದು ಬಜೆಟ್‌ ಎಂದು ಬಣ್ಣಿಸಲಾಯಿತು. ಏಷ್ಯಾದಲ್ಲೇ 3ನೇ ಅತಿದೊಡ್ಡ ಆರ್ಥಿಕತೆಯಾದ ಭಾರತವನ್ನು ಹೊಸ ದಿಕ್ಕಿನಲ್ಲಿ ಕೊಂಡೊಯ್ಯುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಮೂಲಸೌಕರ್ಯ ಕ್ಷೇತ್ರದಲ್ಲಿ ಭಾರೀ ಹೂಡಿಕೆಯನ್ನು ಸರ್ಕಾರ ಮಾಡಿತ್ತು.

click me!