
ದೆಹಲಿ (ಸೆ.08) ಭಾರತದಲ್ಲಿ ದ್ವಿಚಕ್ರ ವಾಹನ ಮಾರುಕಟ್ಟೆ ಪೈಪೋಟಿ ತೀವ್ರಗೊಳ್ಳುತ್ತಿದೆ. ದಶಗಳ ಹಿಂದೆ ಕೈನೆಟಿಕ್ ಭಾರತದಲ್ಲಿ ಅತ್ಯಂತ ಜನಪ್ರಿಯ ಸ್ಕೂಟರ್ ಆಗಿ ಹೊರಹೊಮ್ಮಿತ್ತು. ಇದೀಗ ಬ್ರೇಕ್ ಬಳಿಕ ಕೈನೆಟಿಕ್ ಹೊಸ ಅವಾತರದಲ್ಲಿ, ಹೊಸ ಮಾದರಿಯಲ್ಲಿ ಸ್ಕೂಟರ್ ಬಿಡುಗಡೆ ಮಾಡಿದೆ. ಕೈಗೆಟುಕುವ ಬೆಲೆಯಲ್ಲಿ ಕೈನೆಟಿಕ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಿದೆ. ಕೈನೆಟಿಕ್ DX+ ಸ್ಕೂಟರ್ ಬಿಡುಗಡೆ ಮಾಡಲಾಗಿದೆ. ಇದು DX ಸ್ಕೂಟರ್‌ನ ಅಪ್‌ಡೇಟೆಡ್ ವರ್ಶನ್ ಆಗಿದ್ದು ಒಂದು ಬಾರಿ ಚಾರ್ಜ್ ಮಾಡಿದರೆ 132 ಕಿಲೋಮೀಟರ್ ಮೈಲೇಜ್ ನೀಡಲಿದೆ.
ಹೊಸ ಕೈನೆಟಿಕ್ DX+ ಸ್ಕೂಟರ್ 3.1 kWh ಬ್ಯಾಟರಿ ಪ್ಯಾಕ್ ಹೊಂದಿದೆ. 5.09 ಹೆಚ್‌ಪಿ ಪವರ್ ಮೋಟಾರ್ ಹಾಗೂ ಎರಡು ರೈಡಿಂಗ್ ಮೂಡ್ ನೀಡಲಾಗಿದೆ. ವಿಶೇಷ ಅಂದರೆ ಈ ಸ್ಕೂಟರ್ ಪ್ರಾಯೋಗಿಕವಾಗಿ 105 ರಿಂದ 110 ಕಿಲೋಮೀಟರ್ ಮೈಲೇಜ್ ನೀಡಲಿದೆ. ಹೀಗಾಗಿ ಪ್ರತಿ ದಿನ ಬಳಕೆಗೆ ಈ ಸ್ಕೂಟರ್ ಉತ್ತಮ ಆಯ್ಕೆಯಾಗಿದೆ.
ಹೊಸ ಕೈನೆಟಿಕ್ DX+ ಸ್ಕೂಟರ್ ಎರಡು ವೇರಿಯೆಂಟ್ ಮೂಲಕ ಲಭ್ಯವಿದೆ. DX 3 kWh ಬ್ಯಾಟರಿ ಪ್ಯಾಕ್ ಸ್ಕೂಟರ್ ಬೆಲೆ 1.18 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಹಾಗೂ DX+ 3.1 kWh ಬ್ಯಾಟರಿ ಪ್ಯಾಕ್ ವೇರಿಯೆಂಟ್ ಸ್ಕೂಟರ್ ಬೆಲೆ 1.28 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಈ ಬೆಲೆಗೆ ಚಾರ್ಜಿಂಗ್ ಕೇಬಲ್ ಸೇರಿದಂತೆ ಇತರ ಚಾರ್ಜಿಂಗ್ ಸಲಕರಣೆ ನೀಡಲಾಗುತ್ತದೆ.
ಗಣೇಶ ಹಬ್ಬ ಸೇರಿದಂತೆ ಸಾಲು ಸಾಲು ಹಬ್ಬಗಳು ಆಗಮಿಸುತ್ತಿದೆ. ಇದರ ಪ್ರಯುಕ್ತ ಗ್ರಾಹಕರಿಗೆ DX+ ಸ್ಕೂಟರ್‌ಗೆ 3000 ರೂಪಾಯಿ ವಿಸ್ತರಣೆ ವಾರಂಟಿ ಹಾಗೂ DX ಸ್ಕೂಟರ್‌ಗೆ 2000 ರೂಪಾಯಿ ವಿಸ್ತರಣೆ ವಾರಂಟಿ ಆಫರ್ ಮೂಲಕ ನೀಡಲಾಗುತ್ತದೆ. ಬುಕಿಂಗ್ ಮಾಡಿದ ಗ್ರಾಹಕರಿಗೆ ತ್ವರಿತಗತಿಯಲ್ಲಿ ಸ್ಕೂಟರ್ ಲಭ್ಯವಾಗಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ.
DX+ ಸ್ಕೂಟರ್ ಶೇಕಡಾ 0-80ರಷ್ಟು ಚಾರ್ಜಿಂಗ್ ಮಾಡಲು 3 ಗಂಟೆ ಸಮಯ ತೆಗೆದುಕೊಳ್ಳಲಿದೆ. ಫಾಸ್ಟ್ ಚಾರ್ಜಿಂಗ್ ಮೂಲಕ ಕಡಿಮೆ ಸಮಯದಲ್ಲಿ ಚಾರ್ಜ್ ಮಾಡಿಕೊಳ್ಳಬಹುದು. ಇನ್ನು ಪಾರ್ಕ್ ಅಸಿಸ್ಟ್, ರಿವರ್ಸ್ ಸೇರಿದಂತೆ ಹಲವು ಫೀಚರ್ಸ್ ನೀಡಲಾಗಿದೆ. 165 mm ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. 12 ಇಂಚಿನ ಟ್ಯೂಬ್‌ಲೆಸ್ ಟೈಯರ್, 220 ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್, 130 ಎಂಎಂ ರೇರ್ ಬ್ರೇಕ್, 37 ಲೀಟರ್ ಅಂಡರ್ ಸೀಟರ್ ಸ್ಟೋರೇಜ್ ಸೇರಿದಂತೆ ಹಲವು ಫೀಚರ್ಸ್ ಇದರಲ್ಲಿದೆ.