
ಬೆಂಗಳೂರು: ಬೈಕ್ ರೈಡಿಂಗ್ ಮತ್ತು ವಿಡಿಯೋ ಗೇಮಿಂಗ್... ಇವೆರಡೂ ಇಂದಿನ ಯುವಜನತೆಯ ಅಚ್ಚುಮೆಚ್ಚಿನ ಹವ್ಯಾಸಗಳು. ಇದೀಗ ಈ ಎರಡು ವಿಭಿನ್ನ ಲೋಕಗಳನ್ನು ಒಂದೇ ವೇದಿಕೆಯಲ್ಲಿ ತರಲು 'ಕ್ಲಾಸಿಕ್ ಲೆಜೆಂಡ್ಸ್' ಸಂಸ್ಥೆ ಮುಂದಾಗಿದೆ.
ಪ್ರಖ್ಯಾತ ಜಾವಾ, ಯೆಜ್ಡಿ ಮತ್ತು ಬಿಎಸ್‌ಎ ಬೈಕ್‌ಗಳ ತಯಾರಕ ಕಂಪನಿಯಾದ ಕ್ಲಾಸಿಕ್ ಲೆಜೆಂಡ್ಸ್, ಯುವಕರ ಫೇವರಿಟ್ 'ಇಂಡಿಯನ್ ಸೂಪರ್ ಗೇಮಿಂಗ್ ಲೀಗ್ 2026' ಟೂರ್ನಿಯಲ್ಲಿ ಪಾಲ್ಗೊಳ್ಳುವುದಾಗಿ ಅಧಿಕೃತವಾಗಿ ಘೋಷಿಸಿದೆ.
'ಲೆಟ್ಸ್ ಗೇಮ್ ನೌ' ಸಂಸ್ಥೆಯು ಆಯೋಜಿಸುತ್ತಿರುವ ಐಎಸ್‌ಜಿಎಲ್, ಭಾರತದ ಮೊಟ್ಟಮೊದಲ ಫ್ರಾಂಚೈಸಿ ಆಧಾರಿತ ರಾಷ್ಟ್ರೀಯ ಇ-ಸ್ಪೋರ್ಟ್ಸ್ ಲೀಗ್ ಆಗಿದೆ. ಇದೊಂದು ನಗರ-ಆಧಾರಿತ ಗೇಮಿಂಗ್ ಟೂರ್ನಿಯಾಗಿದ್ದು, ಚೆನ್ನೈನಲ್ಲಿ ಮೊದಲಿಗೆ ಶುರುವಾಗಿ ದೇಶಾದ್ಯಂತ ನಡೆಯಲಿದೆ.
ಈ ಟೂರ್ನಿಯುದ್ದಕ್ಕೂ ನಡೆಯುವ ಈವೆಂಟ್‌ಗಳಲ್ಲಿ ಮತ್ತು ಎಕ್ಸ್‌ಪೀರಿಯೆನ್ಸ್ ಝೋನ್‌ಗಳಲ್ಲಿ ಜಾವಾ, ಯೆಜ್ಡಿ ಮತ್ತು ಬಿಎಸ್‌ಎ ಬೈಕ್‌ಗಳನ್ನು ಪ್ರದರ್ಶಿಸಲಾಗುತ್ತದೆ.
ಮೇಲ್ನೋಟಕ್ಕೆ ಬೈಕ್ ರೈಡಿಂಗ್ ಮತ್ತು ಗೇಮಿಂಗ್ ಬೇರೆ ಬೇರೆ ಎನಿಸಿದರೂ, ಇವೆರಡರ ಹಿಂದಿನ ಉದ್ದೇಶ ಒಂದೇ ಎನ್ನುತ್ತದೆ ಕಂಪನಿ. ಎರಡರಲ್ಲೂ ಕೌಶಲ್ಯ, ಏಕಾಗ್ರತೆ, ಆತ್ಮವಿಶ್ವಾಸ, ತಮ್ಮದೇ ಆದ ಸ್ಟೈಲ್ ಮತ್ತು ಸಮಾನ ಮನಸ್ಕರ ಗುಂಪು ಇರುತ್ತದೆ. ಈ ಗೇಮಿಂಗ್ ಟೂರ್ನಿಯ ಮೂಲಕ, ಕೇವಲ ಬೈಕ್ ಪ್ರಿಯರಿಗೆ ಮಾತ್ರವಲ್ಲದೆ ಹೊಸ ತಲೆಮಾರಿನ ಗೇಮರ್‌ಗಳಿಗೂ ತಮ್ಮ ಐಕಾನಿಕ್ ಬೈಕ್‌ಗಳನ್ನು ಪರಿಚಯಿಸಲು ಕಂಪನಿ ಮುಂದಾಗಿದೆ. ಇದಕ್ಕಾಗಿ ಗೇಮಿಂಗ್ ಕ್ರಿಯೇಟರ್‌ಗಳು ಹಾಗೂ ಗೇಮರ್‌ಗಳ ಜೊತೆ ಕಂಪನಿ ಒಪ್ಪಂದ ಮಾಡಿಕೊಳ್ಳಲಿದೆ.
ಈ ಹೊಸ ಒಪ್ಪಂದದ ಬಗ್ಗೆ ವಿವರಗಳನ್ನು ಹಂಚಿಕೊಂಡಿರುವ ಕ್ಲಾಸಿಕ್ ಲೆಜೆಂಡ್ಸ್‌ನ ಸಹ-ಸಂಸ್ಥಾಪಕ ಅನುಪಮ್ ಥರೇಜಾ, "ಬೈಕ್ ರೈಡಿಂಗ್ ಮತ್ತು ಗೇಮಿಂಗ್ ಪ್ರಪಂಚಗಳು ಭಿನ್ನವಾಗಿ ಕಾಣಬಹುದು. ಆದರೆ ಎರಡೂ ಕೌಶಲ್ಯ ಮತ್ತು ಬಲವಾದ ಸಮುದಾಯದ ತಳಹದಿಯ ಮೇಲೆ ನಿಂತಿವೆ. ಜಾವಾ, ಯೆಜ್ಡಿ ಮತ್ತು ಬಿಎಸ್‌ಎ ಬೈಕ್‌ಗಳು ಸದಾ ಯುವಕರ ಪ್ಯಾಷನ್ ಜೊತೆ ಬೆರೆತಿವೆ. ಐಎಸ್‌ಜಿಎಲ್ ಮೂಲಕ ನಾವು ಹೊಸ ತಲೆಮಾರಿನ ಯುವಕರನ್ನು ವಿಭಿನ್ನವಾಗಿ ತಲುಪಲು ಉತ್ಸುಕರಾಗಿದ್ದೇವೆ,” ಎಂದು ತಿಳಿಸಿದ್ದಾರೆ.
ಒಂದು ಕಾಲದಲ್ಲಿ ರಸ್ತೆಗಳ ರಾಜನಂತಿದ್ದ, ಬಳಿಕ ಮಾರುಕಟ್ಟೆಯಿಂದ ಕಣ್ಮರೆಯಾಗಿದ್ದ ಹಳೆಯ ಐಕಾನಿಕ್ ಬೈಕ್ ಬ್ರ್ಯಾಂಡ್‌ಗಳನ್ನು ಮರಳಿ ತರುವ ಉದ್ದೇಶದಿಂದ ಸ್ಥಾಪನೆಯಾದ ಸಂಸ್ಥೆಯೇ 'ಕ್ಲಾಸಿಕ್ ಲೆಜೆಂಡ್ಸ್'. ಪ್ರಸ್ತುತ ಜಾವಾ, ಯೆಜ್ಡಿ ಮತ್ತು ಬಿಎಸ್‌ಎ ಬೈಕ್‌ಗಳನ್ನು ಹೊಸ ರೂಪದಲ್ಲಿ ಪರಿಚಯಿಸಿರುವ ಈ ಸಂಸ್ಥೆ, ಇದೀಗ ಇ-ಸ್ಪೋರ್ಟ್ಸ್ ಮೂಲಕ ಗೇಮಿಂಗ್ ಲೋಕದ ಯುವಕರಿಗೂ ಹತ್ತಿರವಾಗುತ್ತಿದೆ.