ಬೆಂಗಳೂರಲ್ಲಿ ಬಾಡಿಗೆ ಮನೆ ಪಡೆಯುವುದು ಸಾಹಸ. ಬೆಲೆ, ಮಾಲೀಕರ ಕಂಡೀಷನ್, ಬೇಡಿಕೆ ಊಹೆಗೂ ಮೀರಿದ್ದು. ಇದೀಗ ಮಹಿಳೆಯೊಬ್ಬರು ಮನೆ ಹುಡುಕಿ ಸುಸ್ತಾದ ಘಟನೆ ಹಂಚಿಕೊಂಡಿದ್ದಾರೆ. ಇದು 40 ಸಾವಿರ ತಿಂಗಳ ಬಾಡಿಗೆ ಆದರೆ 5 ಲಕ್ಷ ರೂ ಡೆಪಾಸಿಟ್ ಕೇಳಿದ ರೋಚಕ ಘಟನೆ ಇಲ್ಲಿದೆ.
ಬೆಂಗಳೂರು(ನ.12) ಮನೆ ಕಟ್ಟಿ ನೋಡು, ಮದ್ವೆ ಮಾಡಿ ನೋಡು ಅನ್ನೋ ಗಾದೆ ಮಾತು ಬೆಂಗಳೂರಿಗರಿಗೆ ಬಂದಾಗ ಬಾಡಿಗೆ ಮನೆ ಹುಡುಕಿ ನೋಡು ಎಂದಾಗುತ್ತೆ. ಕಾರಣ ಬೆಂಗಳೂರಲ್ಲಿ ಬಾಡಿಗೆ ಮನೆ ಹುಡುಕುವುದು ಅತೀ ದೊಡ್ಡ ಸವಾಲು. ನಿಮ್ಮ ಬೇಡಿಕೆಗೆ ತಕ್ಕಂತೆ ಮನೆ ಸಿಗುವುದಿಲ್ಲ, ಸಿಕ್ಕರೆ ದುಬಾರಿ, ಅದಕ್ಕೂ ತಯಾರಿದ್ದರೆ ಮಾಲೀಕರ ಒಂದಷ್ಟು ಕಂಡೀಷನ್ ಹೈರಾಣಾಗಿಸುತ್ತದೆ. ಇನ್ನು ಕಚೇರಿ ಅಥವಾ ಉದ್ಯೋಗ ಸ್ಥಳ ಸೇರಿದಂತೆ ಇತರ ಅನುಕೂಲಕ್ಕೆ ತಕ್ಕಂತೆ ಮನೆ ಸಿಗುವುದು ಕನಸಿನ ಮಾತು. ಹೀಗೆ ಬೆಂಗಳೂರಲ್ಲಿ ಮನೆ ಹುಡುಕಿ ಮಹಿಳೆಯೊಬ್ಬರು ಸುಸ್ತಾಗಿದ್ದಾರೆ. 40,000 ತಿಂಗಳ ಬಾಡಿಗೆ ಮನೆಗೆ ಮಾಲೀಕ ಬರೋಬ್ಬರಿ 5 ಲಕ್ಷ ರೂಪಾಯಿ ಡೆಪಾಸಿಟ್ ಮಾಡುವಂತೆ ಬೇಡಿಕೆ ಇಟ್ಟ ಘಟನೆಯನ್ನು ಮಹಿಳೆ ಹಂಚಿಕೊಂಡಿದ್ದಾರೆ.
ದೆಹಲಿ ಸೇರಿದಂತೆ ಇತರ ನಗರದಲ್ಲಿ ಡೆಪಾಸಿಟ್ ಮೊತ್ತ 2 ಅಥವಾ ಮೂರು ತಿಂಗಳ ಬಾಡಿಗೆಯನ್ನು ಕೇಳುತ್ತಾರೆ. ಆದರೆ ಬೆಂಗಳೂರಲ್ಲಿ ಕನಿಷ್ಠ 10 ತಿಂಗಳ ಬಾಡಿಗೆ ಎಷ್ಟಾಗುತ್ತೋ ಅಷ್ಟು ಡೆಪಾಸಿಟ್. ಇನ್ನು ಡೆಪಾಸಿಟ್ ಯಾವತ್ತೂ ಲಕ್ಷ ರೂಪಾಯಿಯಲ್ಲೇ ಇರಲಿದೆ. ಹೀಗೆ ಹರ್ನಿದ್ ಕೌರ್ ಅನ್ನೋ ಮಹಿಳೆ ಬೆಂಗಳೂರಿನಲ್ಲಿ ಮನೆ ಹುಡುಕಿ ಘಟನೆಯನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
ಮನೆ ಹುಡುಕಿ ನೋಡು, ಬಾಡಿಗೆ ಪಡೆದು ನೋಡು; ಯಾರಿಗೆ ಹೇಳೋಣ ಬ್ಯಾಚುಲರ್ಸ್ ಪ್ಲಾಬ್ಲಂ!
ಕೆಲಸದ ನಿಮಿತ್ತ ಬೆಂಗಳೂರಿಗೆ ಆಗಮಿಸಿದ ಹರ್ನಿದ್ ಕೌರ್ ಮನೆ ಹುಡುಕಲು ಆರಂಭಿಸಿದ್ದಾರೆ. ಎಲ್ಲರಂತೆ ಹರ್ನಿದ್ ಕೌರ್ ಕೂಡ ಮನೆ ಹುಡುಕುವಾಗ ಎದುರಿಸಿದ ಸವಾಲು ಒಂದೆರೆಡಲ್ಲ. ಮನೆ ಇದರೆ ಸರಿಯಾಗಿಲ್ಲ, ಏರಿಯಾ ಚೆನ್ನಾಗಿಲ್ಲ, ಸುರಕ್ಷತೆ ಕಡಿಮೆ, ಬೆಳಕಿಲ್ಲ, ನೀರು ಸಮಸ್ಯೆ, 3ನೇ ಮಹಡಿ, ನಾಲ್ಕನೇ ಮಹಡಿ ಸಮಸ್ಯೆ, ದುಬಾರಿಯಾದರೂ ಪರ್ವಾಗಿಲ್ಲ ಅಪಾರ್ಟ್‌ಮೆಂಟ್ ಮೊರೆ ಹೋಗೋಣ ಎಂದರೆ ದುಡ್ಡಿಗೆ ತಕ್ಕ ಸೌಲಭ್ಯವಿಲ್ಲ. ಹೀಗೆ ಸಾಲು ಸಾಲು ಸಮಸ್ಯೆಗಳನ್ನು ಹರ್ನಿದ್ ಕೌರ್ ಎದುರಿಸಿದ್ದಾರೆ.
ಹಲವು ಅಪಾರ್ಟ್‌ಮೆಂಟ್ ಹತ್ತಿ ಇಳಿದ ಹರ್ನಿದ್ ಕೌರ್ ಕೊನೆಗೆ ಒಂದು ಮನೆ ಒಕೆ ಮಾಡಿದ್ದಾರೆ. ಈ ಮನೆ ಒಕೆಯಾದ ಬಳಿಕ ಮಾಲೀಕರ ಜೊತೆ ಒಪ್ಪಂದ, ತಿಂಗಳ ಬಾಡಿಗೆ ಕುರಿತು ಮಾತುಕತೆ ಆರಂಭಗೊಂಡಿದೆ. ತಿಂಗಳ ಬಾಡಿಗೆ 40,000 ರೂಪಾಯಿ. ಆದರೆ ಸೆಕ್ಯೂರಿಟಿ ಡೆಪಾಸಿಟ್ ಮೊತ್ತ 5 ಲಕ್ಷ ರೂಪಾಯಿ ಬೇಕು ಎಂದು ಮಾಲೀಕ ಬೇಡಿಕೆ ಇಟ್ಟಿದ್ದಾರೆ. ಮೊದಲೇ 40,000 ರೂಪಾಯಿ ಬಾಡಿಗೆ ನೀಡುವಷ್ಟು ಮೌಲ್ಯದ ಫ್ಲ್ಯಾಟ್ ಅದಲ್ಲ. ಆದರೂ ಇರಲಿ ಎಂದು ನೋಡಿದರೆ 5 ಲಕ್ಷ ರೂಪಾಯಿ ಡೆಪಾಸಿಟ್‌ನಲ್ಲಿ ಯಾವುದೇ ರೀತಿ ಚೌಕಾಸಿ ಇಲ್ಲ ಎಂದಿದ್ದಾರೆ.
5 lakh deposit for a flat with 40k rent :)))))
I’m so tired :))))
ದುಬಾರಿ ಡೆಪಾಸಿಟ್ ಮೊತ್ತ ಹಾಗೂ ಅಪಾರ್ಟ್‌ಮೆಂಟ್ ಉತ್ತಮವಾಗಿಲ್ಲದ ಕಾರಣ ಹರ್ನಿದ್ ಕೌರ್ ಈ ಮನೆ ಒಕೆ ಮಾಡಲಿಲ್ಲ. ಆದರೆ ಈ ಕುರಿತು ಟ್ವೀಟ್ ಮೂಲಕ ಅಸಮಾಧಾನ ತೋಡಿಕೊಂಡಿದ್ದಾರೆ. ಇದು ಹರ್ನಿದ್ ಕೌರ್ ಒಬ್ಬರ ಕತೆಯಲ್ಲ, ಬೆಂಗಳೂರಿನಲ್ಲಿ ಮನೆ ಹುಡುಕವ ಎಲ್ಲದ್ದೂ ಇದೇ ಗೋಳು ಎಂದು ಹಲವರು ಕಮೆಂಟ್ ಮಾಡಿದ್ದರೆ. ಕನ್ನಡ ಕಲಿಯಿರಿ, ನಿಮಗೆ ಕಡಿಮೆಯಲ್ಲಿ ಮನೆ ಸಿಗಲಿದೆ ಎಂದು ಕೆಲವರು ಸಲಹೆ ನೀಡಿದ್ದಾರೆ. ಇದಕ್ಕೆ ಉತ್ತರಿಸಿರುವ ಹರ್ನಿದ್ ಕೌರ್, ಮನೆ ಮಾಲೀಕ ಕನ್ನಡಿಗನಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮನೆ ಪ್ರತಿಷ್ಠಿತ ಏರಿಯಾದಲ್ಲೂ ಇಲ್ಲ. ಆದರೆ ತಿಂಗಳ ಬಾಡಿಗೆ, ಡೆಪಾಸಿಟ್ ನೋಡಿದರೆ ಖಂಡಿತ ಅಚ್ಚರಿಯಾಗುತ್ತಿದೆ. ಕೆಲವೊಮ್ಮೆ ಈ ರೀತಿ ವ್ಯವಸ್ಥೆ ನೋಡು ನಗು ಬರುತ್ತಿದೆ ಎಂದು ಹರ್ನದ್ ಕೌರ್ ಕಮೆಂಟ್‌ಗೆ ನೀಡಿರುವ ಪ್ರತಿಕ್ರಿಯೆಲ್ಲಿ ಹೇಳಿದ್ದಾರೆ.
ಈ ಕಾರಣಕ್ಕೆ ಬೆಂಗಳೂರು ನಿವಾಸಿ ಮನೆ ಬಾಡಿಗೆ 80 ಸಾವಿರ ರೂ, ಕಣ್ತೆರೆದು ನೋಡಲು ಹೇಳಿದ ಜನ!