₹2500 ಕೋಟಿ ವೆಚ್ಚದಲ್ಲಿ ಹೊಸಕೋಟೆಗೆ ಕಾವೇರಿ ನೀರು; ಇತ್ತ ಮೆಟ್ರೋ ಸಂಪರ್ಕಕ್ಕೆ ಡಿಪಿಆರ್

Published : Oct 30, 2026, 05:31 PM IST
Hosakote

ಸಾರಾಂಶ

ಹೊಸಕೋಟೆ ನಗರಕ್ಕೆ ಕಾವೇರಿ 6ನೇ ಹಂತದ ಯೋಜನೆಯಡಿ ₹2500 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಪೂರೈಸಲು ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದ್ದಾರೆ. ಜೊತೆಗೆ ಕೆ.ಆರ್. ಪುರಂನಿಂದ ಹೊಸಕೋಟೆಗೆ ಮೆಟ್ರೋ ಸಂಪರ್ಕ ಕಲ್ಪಿಸಲು ಡಿಪಿಆರ್ ಸಿದ್ಧಪಡಿಸಲಾಗುತ್ತಿದ್ದು, ನಗರದಲ್ಲಿ ₹93 ಕೋಟಿಗೂ ಹೆಚ್ಚು ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.

ಬೆಂಗಳೂರು: ಹೊಸಕೋಟೆ ನಗರಕ್ಕೆ ಕಾವೇರಿ ನೀರು ಪೂರೈಸಲು ಸುಮಾರು ₹2500 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದ್ದು, ಏಷ್ಯನ್ ಅಭಿವೃದ್ಧಿ ಬ್ಯಾಂಕ್‌ನಿಂದ ಯೋಜನೆಗೆ ಅನುಮೋದನೆ ದೊರೆತಿದೆ. ಯೋಜನೆಯ ಡಿಪಿಆರ್ ಸಿದ್ಧಪಡಿಸಿ ಟೆಂಡರ್ ಪ್ರಕ್ರಿಯೆಗೆ ಮುಂದಾಗಿದ್ದು ಕಾವೇರಿ ಆರನೇ ಹಂತದ ಯೋಜನೆಯಡಿ ಹೊಸಕೋಟೆ ನಗರಕ್ಕೆ ಕುಡಿಯುವ ನೀರು ತರುವ ಉದ್ದೇಶ ಹೊಂದಲಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ಕಾವೇರಿ 6ನೇ ಹಂತ ಹಾಗೂ ಎತ್ತಿನಹೊಳೆ ಯೋಜನೆಗಳ ಮೂಲಕ ನೀರು

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ನೈಸರ್ಗಿಕ ನೀರಿನ ಮೂಲಗಳ ಕೊರತೆಯಿರುವುದರಿಂದ ಪ್ರಸ್ತುತ ಕೊಳವೆಬಾವಿಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಜನರಿಗೆ ನಿರಂತರ ಶುದ್ಧ ಕುಡಿಯುವ ನೀರು ಒದಗಿಸಲು ಕಾವೇರಿ 6ನೇ ಹಂತ ಹಾಗೂ ಎತ್ತಿನಹೊಳೆ ಯೋಜನೆಗಳ ಮೂಲಕ ನೀರು ಪೂರೈಸುವ ಯೋಜನೆಗಳನ್ನು ರೂಪಿಸಲಾಗಿದೆ. ಕಾವೇರಿ ಯೋಜನೆಯಡಿ ಹೊಸಕೋಟೆ ನಗರಕ್ಕೆ ಸುಮಾರು ಒಂದು ಟಿಎಂಸಿ ಪ್ರಮಾಣದ ನೀರು ತರುವ ಉದ್ದೇಶವಿದೆ. ಇದರೊಂದಿಗೆ ಎತ್ತಿನಹೊಳೆ ಯೋಜನೆಯ ನೀರನ್ನು ಹೊಸಕೋಟೆಯ ಅಮಾನಿ ದೊಡ್ಡಕೆರೆಯಲ್ಲಿ ಸಂಗ್ರಹಿಸಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಪೂರೈಸಲು ಯೋಜನೆ ರೂಪಿಸಲಾಗಿದೆ. ಇದರಿಂದ ಬೆಂಗಳೂರು ಗ್ರಾಮಾಂತರ ಸೇರಿದಂತೆ ಬಯಲುಸೀಮೆ ಪ್ರದೇಶಗಳ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ನೆರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೊಸಕೋಟೆಗೆ ಮೆಟ್ರೋ ಸಂಪರ್ಕದ ಪ್ರಯತ್ನ:

ಬೆಂಗಳೂರು ವೇಗವಾಗಿ ವಿಸ್ತರಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೊಸಕೋಟೆಯೂ ಅದೇ ಮಾದರಿಯಲ್ಲಿ ಅಭಿವೃದ್ಧಿ ಹೊಂದಬೇಕಿದೆ. ಇಲ್ಲಿನ ಜನರಿಗೆ ಬೆಂಗಳೂರಿನ ಮಾದರಿಯ ಸಾರಿಗೆ ಹಾಗೂ ಮೂಲಸೌಕರ್ಯಗಳನ್ನು ಒದಗಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕೆ.ಆರ್. ಪುರಂನಿAದ ಹೊಸಕೋಟೆಗೆ ಸುಮಾರು 16.5 ಕಿ.ಮೀ. ಉದ್ದದ ಮೆಟ್ರೋ ಸಂಪರ್ಕ ಕಲ್ಪಿಸಲು ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಲಾಗಿದೆ. ಮೆಟ್ರೋ ಯೋಜನೆಯ ಡಿಪಿಆರ್ ಪ್ರಕ್ರಿಯೆ ಆರಂಭವಾಗಿದ್ದು, 2027-28ನೇ ಸಾಲಿನ ಬಜೆಟ್‌ನಲ್ಲಿ ಯೋಜನೆ ಘೋಷಣೆಯಾಗುವ ವಿಶ್ವಾಸವಿದೆ. ಹೊಸಕೋಟೆಗೆ ಮೆಟ್ರೋ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

₹93 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ:

ಹೊಸಕೋಟೆ ನಗರದಲ್ಲಿ ರಸ್ತೆ, ಚರಂಡಿ, ತಾಲೂಕು ಕಚೇರಿ, ಆಸ್ಪತ್ರೆ ಸೇರಿದಂತೆ ವಿವಿಧ ಮೂಲಸೌಕರ್ಯ ಅಭಿವೃದ್ಧಿಗೆ ಈಗಾಗಲೇ ಸುಮಾರು ₹93 ಕೋಟಿ ವೆಚ್ಚದ ಕಾಮಗಾರಿಗಳನ್ನು ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚುವರಿಯಾಗಿ ₹50 ಕೋಟಿ ವೆಚ್ಚದ ಕಾಮಗಾರಿಗಳನ್ನು ಕೈಗೆತ್ತಿಕೊಂಡು ನಗರದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ನಗರದಲ್ಲಿ ಭೂಗತ ವಿದ್ಯುತ್ ಕೇಬಲ್ ವ್ಯವಸ್ಥೆ ಅಳವಡಿಸಿರುವುದರಿಂದ ವಿದ್ಯುತ್ ಪೂರೈಕೆಯ ಗುಣಮಟ್ಟ ಸುಧಾರಿಸಿದೆ. ತೆರವುಗೊಳಿಸಿರುವ ವಿದ್ಯುತ್ ಕಂಬಗಳ ಹಿನ್ನೆಲೆಯಲ್ಲಿ ಬೀದಿ ದೀಪಗಳ ವ್ಯವಸ್ಥೆಯನ್ನು ಸುಧಾರಿಸಲು ಸುಮಾರು ₹5 ಕೋಟಿ ವೆಚ್ಚದಲ್ಲಿ ನಗರದ ವಿವಿಧ ರಸ್ತೆಗಳಲ್ಲಿ ಬೀದಿ ದೀಪಗಳನ್ನು ಅಳವಡಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ಇದನ್ನೂ ಓದಿ: ಬೆಂಗಳೂರಿನ ಭವಿಷ್ಯ ಬದಲಿಸಲು 13,500 ಎಕರೆಗಳ ಮೆಗಾ ಪ್ಲಾನ್! 9 ಕೈಗಾರಿಕಾ ಟೌನ್‌ಶಿಪ್, 1 ಟ್ರಿಲಿಯನ್ ಆರ್ಥಿಕತೆಯ ಗುರಿ

ಹೊಸಕೋಟೆ ನಗರವು ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಜನರಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸಲು ಸರ್ಕಾರದ ಮಟ್ಟದಲ್ಲಿ ನಿರಂತರ ಪ್ರಯತ್ನ ನಡೆಸಲಾಗುವುದು. ನಗರದ ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಇದನ್ನೂ ಓದಿ: Bengaluru STRR : ಹೊಸಕೋಟೆ-ಹೊಸೂರು ರಸ್ತೆ ಶೀಘ್ರದಲ್ಲೇ ಓಪನ್; ವಿಳಂಬಕ್ಕೆ ಕಾರಣವೇನು?

PREV
Read more Articles on
click me!

Recommended Stories

Arun Salanki: ಗೆಳೆಯನ ದುರ್ಮರಣದ 2 ತಿಂಗಳಲ್ಲೇ ಇನ್ಸ್ಪೆಕ್ಟರ್ ಸೋಲಂಕಿ ಸಾವು! ವೈರಲ್‌ ಆದ ಅರುಣ್‌ ಹಳೇ ಪೋಸ್ಟ್!
ಬೆಂಗಳೂರಿನ ಎರಡು ಪ್ರಮುಖ ಎಲಿವೇಟೆಡ್ ಕಾರಿಡಾರ್ ಯೋಜನೆಗಳಿಗೆ ಬಿ-ಸ್ಮೈಲ್ ಮರು ಟೆಂಡರ್, ಅಂದಾಜು ವೆಚ್ಚ ಭಾರಿ ಕಡಿತ!