
ಕನ್ನಡಪ್ರಭ ವಾರ್ತೆ ಬೆಂಗಳೂರು (ಆ.1): ಯುನೈಟೆಡ್ ಕಿಂಗ್ಡಮ್ (ಯುಕೆ) ಮತ್ತು ಭಾರತ ನಡುವಿನ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದದ (ಸಿಇಟಿಎ) ಅಡಿಯಲ್ಲಿ ಯಾವುದೇ ಆಮದು ಸುಂಕವಿಲ್ಲದ ಸ್ಕಾಟಿಷ್ ಸಾಲ್ಮನ್ ಮೀನಿನ ಮೊದಲ ಲೋಡ್ ಶುಕ್ರವಾರ ಬೆಂಗಳೂರು ತಲುಪಿದೆ.
ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ನಗರದಲ್ಲಿರುವ ಬ್ರಿಟಿಷ್ ಡೆಪ್ಯುಟಿ ಹೈಕಮಿಷನ್‌ನ ಡೆಪ್ಯುಟಿ ಹೆಡ್ ಆಫ್ ಮಿಷನ್ ಓವನ್ ರಿಚರ್ಡ್ಸ್, ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದದ ಆರಂಭಿಕ ಯಶಸ್ಸಿಗೆ ಇದು ಸಾಕ್ಷಿಯಾಗಿದೆ. ಉಭಯ ದೇಶಗಳ ಉದ್ಯಮಿಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದರು.
ಬಾಕ್ಕಾಫ್ರಾಸ್ಟ್ ಸ್ಕಾಟ್‌ಲ್ಯಾಂಡ್ ಸಂಸ್ಥೆಯು ಉತ್ಪಾದಿಸಿರುವ ತಾಜಾ ಮೀನನ್ನು ನಗರದ ಸಾಶಿಮಿ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಆಮದು ಮಾಡಿಕೊಂಡಿದೆ. ಯುಕೆ-ಭಾರತ ಒಪ್ಪಂದ ಜಾರಿಗೆ ಬಂದ ಕೇವಲ ಎರಡೇ ವಾರಗಳಲ್ಲಿ ಸುಂಕರಹಿತ ಮೀನಿನ ಲೋಡ್ ಬೆಂಗಳೂರನ್ನು ತಲುಪಿದೆ. ಈ ನೂತನ ಒಪ್ಪಂದವು ಸ್ಕಾಟಿಷ್ ಸಾಲ್ಮನ್ ಮೀನುಗಳ ಮೇಲೆ ವಿಧಿಸಲಾಗುತ್ತಿದ್ದ ಶೇ.33 ರಷ್ಟು ಆಮದು ಸುಂಕವನ್ನು ಸಂಪೂರ್ಣವಾಗಿ ತೆಗೆದುಹಾಕಿದೆ.
ಈ ಒಪ್ಪಂದವು ಮುಂಬರುವ ದಶಕದಲ್ಲಿ ಸ್ಕಾಟ್‌ಲ್ಯಾಂಡ್‌ನ ಸಾಲ್ಮನ್ ಮೀನುಗಾರರಿಗೆ ಸುಮಾರು £130 ಮಿಲಿಯನ್ (ಅಂದಾಜು $175 ಮಿಲಿಯನ್ / €152 ಮಿಲಿಯನ್) ಮೌಲ್ಯದ ಲಾಭವನ್ನು ತಂದುಕೊಡಲಿದೆ. ಪತ್ರಿಕಾ ಪ್ರಕಟಣೆಯ ಪ್ರಕಾರ, ಭಾರತವು ಜಗತ್ತಿನ ಮೂರನೇ ಅತಿ ದೊಡ್ಡ ಮೀನು ಮಾರುಕಟ್ಟೆಯಾಗಿದ್ದು, 2021 ರಲ್ಲಿ ದೇಶೀಯ ಮೀನು ಬಳಕೆ ಸರಿಸುಮಾರು 12 ಮಿಲಿಯನ್ ಮೆಟ್ರಿಕ್ ಟನ್ ತಲುಪಿದೆ.
ಪ್ರಸ್ತುತ ಭಾರತದಲ್ಲಿ ಬಳಕೆಯಾಗುವ ಬಹುಪಾಲು ಮೀನು ಸ್ಥಳೀಯವಾಗಿಯೇ ಪೂರೈಕೆಯಾಗುತ್ತಿದೆಯಾದರೂ, ಪ್ರಮುಖ ನಗರಗಳಲ್ಲಿ ಪ್ರೀಮಿಯಂ (ಉತ್ತಮ ದರ್ಜೆಯ) ಸೀಫುಡ್‌ಗಳ ಆಮದಿಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ಹೀಗಾಗಿ 'ಸಲ್ಮಾನ್ ಸ್ಕಾಟ್‌ಲ್ಯಾಂಡ್' ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ (CEO) ಟಾವಿಶ್ ಸ್ಕಾಟ್, "ಸುಸ್ಥಿರ ಮತ್ತು ಅತ್ಯುನ್ನತ ದರ್ಜೆಯ ಸ್ಕಾಟಿಷ್ ಸಾಲ್ಮನ್ ಮೀನುಗಳಿಗೆ ಭಾರತವು ಬೆಳೆಯುತ್ತಿರುವ ಅತ್ಯಂತ ಭರವಸೆಯ ಮಾರುಕಟ್ಟೆಯಾಗಬಲ್ಲದು" ಎಂದು ನಂಬಿದ್ದಾರೆ.