
ಬೆಂಗಳೂರು (ಜು.31): ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಜಾಲ ವಿಸ್ತರಣೆ, ವಾಹನ ಸಂಚಾರದ ತೀವ್ರ ಏರಿಕೆ ಹಾಗೂ ಹೊಸ ಟೋಲ್ ಪ್ಲಾಜಾಗಳ ಸೇರ್ಪಡೆಯಿಂದಾಗಿ ಕಳೆದ ಐದು ವರ್ಷಗಳಲ್ಲಿ ಕರ್ನಾಟಕದ ಟೋಲ್ ಸಂಗ್ರಹಣೆ ಶೇಕಡಾ 100 ಕ್ಕಿಂತಲೂ ಹೆಚ್ಚು ಅಂದರೆ ಎರಡಕ್ಕಿಂತ ಹೆಚ್ಚು ಪಟ್ಟು ಜಿಗಿತ ಕಂಡಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಸಂಸತ್ತಿನಲ್ಲಿ ಮಂಡಿಸಿದ ಅಧಿಕೃತ ಅಂಕಿಅಂಶಗಳ ಪ್ರಕಾರ, ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಆದಾಯವು 2021-22 ರಲ್ಲಿ ₹2,351.3 ಕೋಟಿಯಷ್ಟಿತ್ತು. ಅದು 2025-26 ರ ವೇಳೆಗೆ ₹4,779.4 ಕೋಟಿಗೆ ಏರಿಕೆಯಾಗಿದ್ದು, ಈ ಅವಧಿಯಲ್ಲಿ ಶೇಕಡಾ 103 ಕ್ಕೂ ಹೆಚ್ಚಿನ ಭರ್ಜರಿ ಪ್ರಗತಿ ದಾಖಲಿಸಿದೆ.
ರಾಜ್ಯದಲ್ಲಿ ಟೋಲ್ ಸಂಗ್ರಹಣೆ ಜಾಲವು ಗಮನಾರ್ಹವಾಗಿ ವಿಸ್ತರಣೆಗೊಂಡಿದೆ. 2021-22ರ ಹಣಕಾಸು ವರ್ಷದಲ್ಲಿ ರಾಜ್ಯದಲ್ಲಿ 46 ಟೋಲ್ ಪ್ಲಾಜಾಗಳು ಕಾರ್ಯಾಚರಣೆಯಲ್ಲಿದ್ದವು. 2025-26 ರ ವೇಳೆಗೆ ಈ ಸಂಖ್ಯೆ 68ಕ್ಕೆ ಏರಿಕೆಯಾಗಿದೆ. ಸಂಸತ್ತಿನಲ್ಲಿ ಮಂಡಿಸಲಾದ ಅಂಕಿಅಂಶಗಳ ಪ್ರಕಾರ, ವರ್ಷದಿಂದ ವರ್ಷಕ್ಕೆ ಟೋಲ್ ಆದಾಯದಲ್ಲಿ ತೀವ್ರ ಏರಿಕೆ ಕಂಡುಬಂದಿದೆ
2021-22ರಲ್ಲಿ ರಾಜ್ಯದಲ್ಲಿ ಟೋಲ್ ಆದಾಯ ₹2,351 ಕೋಟಿ ಇದ್ದರೆ, 2022-23ರಲ್ಲಿ ₹3,517 ಕೋಟಿಗೆ ಏರಿತ್ತು. ಆ ಬಳಿಕ 2023-24ರಲ್ಲಿ ₹4,086 ಕೋಟಿ ಹಾಗೂ 2024-25ರಲ್ಲಿ ₹4,320 ಕೋಟಿಗೆ ಏರಿಕೆಯಾಗಿತ್ತು. ಇನ್ನು 2025-26ರಲ್ಲಿ ₹4,779 ಕೋಟಿಗೆ ಏರಿಕೆ ಆಗುವ ಮೂಲಕ ಮುಂದಿನ ವರ್ಷ ಐದು ಸಾವಿರ ಕೋಟಿ ದಾಟುವ ಗುರಿ ಇರಿಸಿಕೊಳ್ಳಲಾಗಿದೆ. ವರದಿಯ ಪ್ರಕಾರ, ಅತ್ಯಂತ ಹೆಚ್ಚಿನ ವಾರ್ಷಿಕ ಏರಿಕೆ ದಾಖಲಾಗಿದ್ದು 2022-23 ರಲ್ಲಿ. ಈ ಅವಧಿಯಲ್ಲಿ ಮುಂಚಿನ ವರ್ಷಕ್ಕೆ ಹೋಲಿಸಿದರೆ ಟೋಲ್ ಆದಾಯವು ಸರಿಸುಮಾರು ಶೇಕಡಾ 50 ರಷ್ಟು ಭಾರಿ ಪ್ರಮಾಣದಲ್ಲಿ ಜಿಗಿದಿತ್ತು.
ಕಳೆದ ಐದು ವರ್ಷಗಳ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಮೂಲಸೌಕರ್ಯ ವಿಸ್ತರಣೆ ಮತ್ತು ವಾಹನ ದಟ್ಟಣೆ ಹೆಚ್ಚಿರುವುದು ಮಾತ್ರವಲ್ಲದೆ, ನಿಯತಕಾಲಿಕವಾಗಿ (ಸಮಯದಿಂದ ಸಮಯಕ್ಕೆ) ನಡೆಸಲಾದ ಟೋಲ್ ದರ ಏರಿಕೆ ಕೂಡ ಈ ಭಾರಿ ಪ್ರಮಾಣದ ಆದಾಯ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.