
ಬೆಂಗಳೂರು: ಎಚ್1ಎನ್1 ಸೋಂಕು ಉಂಟಾಗಿ ರಜೆ ಘೋಷಿಸಿರುವ ಕ್ಲಾರೆನ್ಸ್ ಶಾಲೆಯ ಫೋಷಕರಲ್ಲಿ ಆತಂಕ ಮುಂದುವರಿದಿದೆ. ಶಾಲೆಯ ಆಡಳಿತ ಮಂಡಳಿಯ ಸೂಚನೆಯಂತೆ ಬುಧವಾರ ಶಾಲೆ ತರಗತಿ ಆರಂಭವಾಗಲಿವೆ. ಆದರೆ, ನಗರದಲ್ಲಿ ಯಾವುದೇ ಕ್ಲಾರೆನ್ಸ್ ಶಾಲೆಯನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರದೇಶದ ಶಾಲೆಗಳಲ್ಲಿ ಈ ರೀತಿಯ ಸಮಸ್ಯೆ ಇರುವುದು ವರದಿಯಾಗಿಲ್ಲ ಎಂದು ಜಿಬಿಎ ಆಯುಕ್ತ ಮಹೇಶ್ವರರಾವ್ ಕನ್ನಡಪ್ರಭಕ್ಕೆ ತಿಳಿಸಿದರು.
ಈ ಮಧ್ಯೆ ನಗರಪಾಲಿಕೆಯ ವೈದ್ಯಾಧಿಕಾರಿಗಳ 2 ತಂಡಗಳು ಕ್ಲಾರೆನ್ಸ್ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿವೆ. ಮಕ್ಕಳಲ್ಲಿ ಜ್ವರ, ಕೆಮ್ಮು ಇದ್ದರೂ ಅದು ಸಾಮಾನ್ಯ ಸೋಂಕಾಗಿ ಇರಬಹುದು. ಆದರೆ, ಎರಡು ದಿನಗಳು ರಜೆ ಘೋಷಿಸಿರುವ ಶಾಲೆಯಲ್ಲಿ ಈಗಾಗಲೆ ಸ್ಯಾನಿಟೈಸೇಷನ್ ಮಾಡಲಾಗಿದ್ದು, ಬುಧವಾರ ಪರಿಸ್ಥಿತಿ ಸರಿಹೋಗಬಹುದು ಎಂದು ಆರೋಗ್ಯಾಧಿಕಾರಿ ಬಸಪ್ಪ ತಿಳಿಸಿದರು.
ಶಾಲೆಯಲ್ಲಿ ಎಚ್1ಎನ್1 ಸೋಂಕು ಇದೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿ ಸಮಾಜದಲ್ಲಿ ಆತಂಕ ಸೃಷ್ಟಿಗೆ ಕಾರಣವಾಗಿದೆ ಎಂದು ನಗರದ ಪಾಟರಿ ರಸ್ತೆಯ ಕ್ಲಾರೆನ್ಸ್ ಪ್ರೌಢಶಾಲೆಗೆ ಉತ್ತರ ಪಾಲಿಕೆ ಆಯುಕ್ತರು ನೋಟಿಸ್ ಜಾರಿ ಮಾಡಿದ್ದಾರೆ. ಶಾಲೆಯಲ್ಲಿ ಎಚ್1ಎನ್1 ಸೋಂಕಿನ ಕುರಿತು ಆಡಳಿತ ಮಂಡಳಿ ಸಮರ್ಪಕ ವೈದ್ಯಕೀಯ ದಾಖಲೆಗಳು ಹಾಗೂ ದೃಢೀಕೃತ ಮಾಹಿತಿ ಇಲ್ಲದೆ ಆ.15ರಂದು ಮಾಧ್ಯಮಗಳಿಗೆ ಮಾಹಿತಿ ನೀಡಿದೆ.
ಮಾಹಿತಿ ಆಧರಿಸಿ ಆಯುಕ್ತ ಪೊಮ್ಮಲ ಸುನಿಲ್ ಕುಮಾರ್ ಸಾರ್ವಜನಿಕ ಆರೋಗ್ಯ ಇಲಾಖೆಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭ ಇಬ್ಬರು ಶಿಕ್ಷಕರಿಗೆ ಮಾತ್ರ ಫ್ಲೂ ಸೋಂಕು ದೃಢಪಟ್ಟಿದ್ದು, ಅವರು ಹೊರರೋಗಿಗಳಾಗಿ ಚಿಕಿತ್ಸೆ ಪಡೆದಿರುವುದು ತಿಳಿದುಬಂತು. ಈ ಪೈಕಿ ಒಬ್ಬರು ಈಗಾಗಲೇ ಚಿಕಿತ್ಸೆ ಪಡೆದು ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ, ಶಾಲೆಯ ವಿದ್ಯಾರ್ಥಿಗಳಲ್ಲಿ ಎಚ್1ಎನ್1 ಸೋಂಕು ದೃಢಪಟ್ಟಿರುವ ಕುರಿತು ಯಾವುದೇ ವೈದ್ಯಕೀಯ ದಾಖಲೆಗಳು ಅಥವಾ ದೃಢೀಕೃತ ವರದಿಗಳು ಆರೋಗ್ಯ ಇಲಾಖೆಗೆ ಲಭ್ಯವಾಗಿಲ್ಲ.
ಸಾಕಷ್ಟು ವೈದ್ಯಕೀಯ ಸಾಕ್ಷ್ಯಾಧಾರಗಳಿಲ್ಲದೆ ಮಾಧ್ಯಮಗಳಿಗೆ ಮಾಹಿತಿ ನೀಡಿ ಸಾರ್ವಜನಿಕರಲ್ಲಿ ಆತಂಕ ಮತ್ತು ಭೀತಿ ವಾತಾವರಣ ಸೃಷ್ಟಿಸುವುದನ್ನು ಸಾಂಕ್ರಾಮಿಕ ರೋಗಗಳ ನಿಯಂತ್ರಣ ಸಂಬಂಧ ಕಾನೂನು ಮತ್ತು ನಿಯಮಗಳಡಿ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸಂಬಂಧಿತ ಕಾನೂನಿನ ಅಡಿಯಲ್ಲಿ ಶಾಲೆಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.