ಸಿಜೆಐ ಸೂರ್ಯಕಾಂತ್‌, ಬಿಸಿಐ ಅಧ್ಯಕ್ಷ ಭಾಗವಹಿಸುವಿಕೆಗೆ ವಿರೋಧ; ಬೆಂಗಳೂರಿನ NLSIU 34ನೇ ವಾರ್ಷಿಕ ಘಟಿಕೋತ್ಸವ ರದ್ದು

Published : Aug 27, 2026, 05:04 PM IST
NLSIU and CJI

ಸಾರಾಂಶ

ಬೆಂಗಳೂರಿನ 'ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ' (NLSIU) ತನ್ನ 34ನೇ ವಾರ್ಷಿಕ ಘಟಿಕೋತ್ಸವವನ್ನು ರದ್ದುಗೊಳಿಸಿದೆ. ಸಿಜೆಐ ಸೂರ್ಯ ಕಾಂತ್ ಮತ್ತು ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರ ಭಾಗವಹಿಸುವಿಕೆಗೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಈ ನಿರ್ಧಾರ ಮಾಡಲಾಗಿದೆ.

ಬೆಂಗಳೂರು (ಆ.27): ದೇಶದ ಪ್ರಮುಖ ಕಾನೂನು ಶಿಕ್ಷಣ ಸಂಸ್ಥೆಯಾದ ಬೆಂಗಳೂರಿನ 'ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ' (NLSIU) ತನ್ನ 2026 ರ ಸಾಲಿನ ವಿದ್ಯಾರ್ಥಿಗಳ 34ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮವನ್ನು "ಅನಿವಾರ್ಯ ಕಾರಣಗಳಿಂದಾಗಿ" ರದ್ದುಗೊಳಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಹಾಗೂ ಭಾರತೀಯ ವಕೀಲರ ಪರಿಷತ್ (BCI) ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರ ಭಾಗವಹಿಸುವಿಕೆಗೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳಿಂದ ತೀವ್ರ ವಿರೋಧ ವ್ಯಕ್ತವಾದ ಕೆಲವೇ ವಾರಗಳಲ್ಲಿ ಈ ನಿರ್ಧಾರ ಹೊರಬಿದ್ದಿದೆ.

ಆಗಸ್ಟ್ 27 ರಂದು ವಿಶ್ವವಿದ್ಯಾಲಯ ಹೊರಡಿಸಿರುವ ಅಧಿಕೃತ ಸೂಚನೆಯಲ್ಲಿ, ಸೆಪ್ಟೆಂಬರ್ 12 ರಂದು ತಾತ್ಕಾಲಿಕವಾಗಿ ನಿಗದಿಯಾಗಿದ್ದ ಘಟಿಕೋತ್ಸವ ಕಾರ್ಯಕ್ರಮವು ನಡೆಯುವುದಿಲ್ಲ ಎಂದು ತಿಳಿಸಿದೆ. ಈ ಮೊದಲು ಆಗಸ್ಟ್ 3 ರಂದು ಶೈಕ್ಷಣಿಕ ಆಡಳಿತ ಮಂಡಳಿಯು ಪದವಿ ಪಡೆಯುವ ವಿದ್ಯಾರ್ಥಿಗಳಿಗೆ ಘಟಿಕೋತ್ಸವದ ಪ್ರಸ್ತಾವಿತ ದಿನಾಂಕವನ್ನು ತಿಳಿಸಿತ್ತು.

ಅನುಪಸ್ಥಿತಿಯಲ್ಲೇ ಪದವಿ ಪ್ರದಾನ: ಪೋಸ್ಟ್ ಮೂಲಕ ಸರ್ಟಿಫಿಕೇಟ್!

ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ನೀಡಿದ ನೋಟಿಸ್‌ನಲ್ಲಿ, "ನಮ್ಮ ಶ್ರಮದ ಹೊರತಾಗಿಯೂ, ಕೆಲವು ಅನಿವಾರ್ಯ ಕಾರಣಗಳಿಂದಾಗಿ ನಮಗೆ 34ನೇ ವಾರ್ಷಿಕ ಘಟಿಕೋತ್ಸವವನ್ನು ನಡೆಸುವುದು ಸಾಧ್ಯವಾಗುತ್ತಿಲ್ಲ" ಎಂದು ಹೇಳಿದ್ದಾರೆ.

ಘಟಿಕೋತ್ಸವ ರದ್ದಾಗಿರುವುದರಿಂದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಅಗತ್ಯ ಅನುಮೋದನೆಗೆ ಒಳಪಟ್ಟು 'ಅನುಪಸ್ಥಿತಿಯಲ್ಲೇ' (in absentia) ಪದವಿಗಳನ್ನು ಪ್ರದಾನ ಮಾಡಲು ನಿರ್ಧರಿಸಲಾಗಿದೆ. ಪದವೀಧರರು ತಮ್ಮ ಪದವಿ ಪ್ರಮಾಣಪತ್ರಗಳನ್ನು ಕೊರಿಯರ್ ಮೂಲಕ ತರಿಸಿಕೊಳ್ಳಬಹುದು ಅಥವಾ ನೇರವಾಗಿ ಕ್ಯಾಂಪಸ್‌ಗೆ ಬಂದು ಪಡೆದುಕೊಳ್ಳಬಹುದು. ಈ ಕುರಿತು ತಮ್ಮ ಆದ್ಯತೆಯನ್ನು ತಿಳಿಸಲು ವಿದ್ಯಾರ್ಥಿಗಳಿಗೆ ಹೊಸ ಅರ್ಜಿ ಹಾಗೂ ಪ್ರಕ್ರಿಯೆಯ ವಿವರಗಳನ್ನು ಒದಗಿಸುವುದಾಗಿ ಎನ್‌ಎಲ್‌ಎಸ್‌ಐಯು ತಿಳಿಸಿದೆ.

ವಿವಾದದ ಹಿನ್ನೆಲೆ: ನಲ್ಸಾರ್ ವಿಶ್ವವಿದ್ಯಾಲಯದಿಂದ ಆರಂಭವಾದ ಕಿಡಿ

ಈ ವಿವಾದದ ಮೂಲ ಹೈದರಾಬಾದ್‌ನ 'ನಲ್ಸಾರ್' (NALSAR) ಕಾನೂನು ವಿಶ್ವವಿದ್ಯಾಲಯದಲ್ಲಿ ನಡೆದ ಘಟನೆ. ಅಲ್ಲಿನ ಘಟಿಕೋತ್ಸವಕ್ಕೆ ಸಿಜೆಐ ಸೂರ್ಯ ಕಾಂತ್ ಅವರ ಭೇಟಿಯನ್ನು ವಿದ್ಯಾರ್ಥಿಗಳು ವಿರೋಧಿಸಿದ್ದರು. ಈ ಪ್ರತಿಭಟನೆಯಿಂದ ಕೆರಳಿದ್ದ ಬಿಸಿಐ (BCI), ನಲ್ಸಾರ್‌ನ 2026ರ ಸಾಲಿನ ಪದವೀಧರರನ್ನು ವಕೀಲರೆಂದು ನೋಂದಾಯಿಸದಂತೆ ರಾಜ್ಯ ವಕೀಲರ ಪರಿಷತ್ತುಗಳಿಗೆ ದಿಢೀರ್ ನಿರ್ದೇಶನ ನೀಡಿತ್ತು. ಆದರೆ, ಈ ನಿರ್ಧಾರಕ್ಕೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಕೆಲವೇ ಗಂಟೆಗಳಲ್ಲಿ ಆದೇಶವನ್ನು ಹಿಂಪಡೆಯಲಾಗಿತ್ತು.

ಈ ಘಟನೆಯು ಎನ್‌ಎಲ್‌ಎಸ್‌ಐಯು ಕ್ಯಾಂಪಸ್‌ನಲ್ಲೂ ಕಿಚ್ಚು ಹೊತ್ತಿಸಿತು. ನಲ್ಸಾರ್ ವಿದ್ಯಾರ್ಥಿಗಳ ವಿರುದ್ಧ ಬಿಸಿಐ ತೆಗೆದುಕೊಂಡಿದ್ದ ಏಕಪಕ್ಷೀಯ ಕ್ರಮವನ್ನು ಪ್ರಶ್ನಿಸಿದ ಎನ್‌ಎಲ್‌ಎಸ್‌ಐಯು ವಿದ್ಯಾರ್ಥಿಗಳು, ತಮ್ಮ ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೂ ಸಿಜೆಐ ಸೂರ್ಯ ಕಾಂತ್ ಹಾಗೂ ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರ ಭೇಟಿಗೆ ಕಟು ಆಕ್ಷೇಪ ವ್ಯಕ್ತಪಡಿಸಿದರು.

ಬಿಸಿಐ ವಿರುದ್ಧ ಬಹಿರಂಗ ಸಮರ

ಘಟಿಕೋತ್ಸವದಲ್ಲಿ ಸಿಜೆಐ ಸೂರ್ಯ ಕಾಂತ್ ಮತ್ತು ಮನನ್ ಕುಮಾರ್ ಮಿಶ್ರಾ ಭಾಗವಹಿಸುವುದನ್ನು ವಿರೋಧಿಸಿ ಎನ್‌ಎಲ್‌ಎಸ್‌ಐಯುವಿನ ಪದವಿ ಪಡೆಯುತ್ತಿರುವ 165 ವಿದ್ಯಾರ್ಥಿಗಳು, 409 ಪ್ರಸ್ತುತ ವಿದ್ಯಾರ್ಥಿಗಳು ಹಾಗೂ 128 ಹಳೆಯ ವಿದ್ಯಾರ್ಥಿಗಳು (Alumni) ಸಹಿ ಮಾಡಿದ ಬಹಿರಂಗ ಪತ್ರವನ್ನು ಆಡಳಿತ ಮಂಡಳಿಗೆ ಸಲ್ಲಿಸಿದ್ದರು. ನಲ್ಸಾರ್ ವಿದ್ಯಾರ್ಥಿಗಳ ವಿರುದ್ಧ ಕೈಗೊಂಡ ಕ್ರಮಕ್ಕೆ ಬಿಸಿಐ ಹೊಣೆಗಾರಿಕೆ ಹೊರಬೇಕು ಎಂದು ಅವರು ಪಟ್ಟು ಹಿಡಿದಿದ್ದರು.

ವಿಶೇಷವೆಂದರೆ, 2025 ರ ಎನ್‌ಎಲ್‌ಎಸ್‌ಐಯು ಘಟಿಕೋತ್ಸವದಲ್ಲಿ ಸಿಜೆಐ ಸೂರ್ಯ ಕಾಂತ್ ಹಾಗೂ ಮನನ್ ಕುಮಾರ್ ಮಿಶ್ರಾ ಇಬ್ಬರೂ ಪ್ರಮುಖ ಪಾತ್ರ ವಹಿಸಿದ್ದರು. ಸೂರ್ಯ ಕಾಂತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪದವಿ ಪ್ರದಾನ ಮಾಡಿದ್ದರೆ, ಮಿಶ್ರಾ ಸ್ವಾಗತ ಭಾಷಣ ಮಾಡಿದ್ದರು.

'ಜೆನ್-ಝಿ ಶೈಲಿಯಲ್ಲಿ ಪದವಿ ಆಚರಿಸಿ!': ಎಕ್ಸ್‌ನಲ್ಲಿ ದನಿ ಎತ್ತಿದ ಸೌರವ್ ದಾಸ್

ಈ ಬೆಳವಣಿಗೆಯ ಕುರಿತು ‘ಕಾಕ್ರೋಚ್ ಜನತಾ ಪಾರ್ಟಿ’ (CJP) ವಕ್ತಾರ ಸೌರವ್ ದಾಸ್ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿದ್ದು, "ಎನ್‌ಎಲ್‌ಎಸ್‌ಐಯುವಿನ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು ತಮಗಾಗಿ ಪ್ರತ್ಯೇಕ ಪದವಿ ಪ್ರದಾನ ಸಮಾರಂಭವನ್ನು ಆಯೋಜಿಸಿಕೊಂಡು, ತಮಗೆ ಅತ್ಯಂತ ಗೌರವಾನ್ವಿತ ಎನಿಸುವ ಅತಿಥಿಯನ್ನು ಕರೆಸಿ ಗೌರವ ಪಡೆದುಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ. ಇದನ್ನು ಜೆನ್-ಝಿ (Gen-Z) ಶೈಲಿಯಲ್ಲೇ ಮಾಡಿ ತೋರಿಸಿ!" ಎಂದು ಬರೆದುಕೊಂಡಿದ್ದಾರೆ.

PREV
Read more Articles on
click me!

Recommended Stories

'ಪೊಲೀಸ್ ರಾಜ್ಯವಾಗಲು ಬಿಡುವುದಿಲ್ಲ..' ವೈಟ್‌ಫೀಲ್ಡ್ ಪೊಲೀಸರಿಗೆ 3 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್‌
₹1.8 ಕೋಟಿಯ ಮನೆ ಮಾರಿ ಬೈಕ್ ಖರೀದಿಸಿದ ಸ್ಟಾರ್ಟ್‌ಅಪ್ ಉದ್ಯಮಿ! ಕಾರಣ ಕೇಳಿದರೆ ನೀವು ಶಾಕ್ ಆಗ್ತೀರಾ!