ಬೆಂಗಳೂರು ಮೆಜೆಸ್ಟಿಕ್ ಕೆಎಸ್‌ಆರ್ ರೈಲ್ವೆ ನಿಲ್ದಾಣದಲ್ಲಿ ಗರ್ಭಿಣಿ ಪೊಲೀಸ್ ಮೇಲೆ ಹಲ್ಲೆಗೈದ ತಮಿಳುನಾಡು ಪ್ರಯಾಣಿಕ!

Published : Aug 27, 2026, 12:13 PM IST
Bengaluru KSR Railway Station Police

ಸಾರಾಂಶ

ಬೆಂಗಳೂರಿನ KSR ರೈಲ್ವೆ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ, ಗಜೇಂದ್ರ ಎಂಬ ಪ್ರಯಾಣಿಕನು 2 ತಿಂಗಳ ಗರ್ಭಿಣಿ ಕಾನ್‌ಸ್ಟೇಬಲ್ ಶಿಲ್ಪಾ ಅವರ ಮೇಲೆ ಕಬ್ಬಿಣದ ರಾಡ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಶಿಲ್ಪಾ ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಬೆಂಗಳೂರು (ಆ.27): ರಾಜ್ಯ ರಾಜಧಾನಿ ಬೆಂಗಳೂರಿನ ಹೃದಯಭಾಗವಾದ ಮೆಜೆಸ್ಟಿಕ್‌ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (KSR) ರೈಲ್ವೆ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ 2 ತಿಂಗಳ ಗರ್ಭಿಣಿ ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್ ಮೇಲೆ ಪ್ರಯಾಣಿಕನೊಬ್ಬ ಕಬ್ಬಿಣದ ರಾಡ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಕಾನ್‌ಸ್ಟೇಬಲ್ ಶಿಲ್ಪಾ ಅವರಿಗೆ ಬರೋಬ್ಬರಿ 23 ಹೊಲಿಗೆಗಳು ಬಿದ್ದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇನ್ನು ಈ ಘಟನೆ ಸಂಬಂಧ ಹಲ್ಲೆ ನಡೆಸಿದ ಚೆನ್ನೈ ಮೂಲದ ಆರೋಪಿ ಗಜೇಂದ್ರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳಗಿನ ಜಾವ 3 ಗಂಟೆಗೆ ನಡೆದಿದ್ದೇನು?

ಪೊಲೀಸ್ ಮೂಲಗಳ ಪ್ರಕಾರ, ನಿನ್ನೆ ಬೆಳಗಿನ ಜಾವ ಸುಮಾರು 3 ಗಂಟೆಯ ಸಮಯದಲ್ಲಿ ಘಟನೆ ನಡೆದಿದೆ. ಆರೋಪಿ ಗಜೇಂದ್ರ ರೈಲ್ವೆ ನಿಲ್ದಾಣದಲ್ಲಿ ತನ್ನ ಮೊಬೈಲ್ ಫೋನ್ ಕಳೆದುಕೊಂಡಿದ್ದನು. ಈ ಬಗ್ಗೆ ದೂರು ನೀಡಲು ಮೆಜೆಸ್ಟಿಕ್ ರೈಲ್ವೆ ಪೊಲೀಸ್ ಠಾಣೆಗೆ ಬಂದಿದ್ದನು. ಆ ಸಮಯದಲ್ಲಿ ಠಾಣೆಯಲ್ಲಿ ಕಾನ್‌ಸ್ಟೇಬಲ್ ಶಿಲ್ಪಾ ಕರ್ತವ್ಯದಲ್ಲಿದ್ದರು. ತೀವ್ರವಾಗಿ ಮದ್ಯ ಸೇವಿಸಿ ತೂರಾಡುತ್ತಿದ್ದ ಆರೋಪಿ ಗಜೇಂದ್ರ, ಶಿಲ್ಪಾ ಅವರನ್ನು ಎಬ್ಬಿಸಿ ತಕ್ಷಣ ದೂರು ಸ್ವೀಕರಿಸುವಂತೆ ಪಟ್ಟು ಹಿಡಿದಿದ್ದಾನೆ. ಆ ವೇಳೆ ಠಾಣೆಯಲ್ಲಿ ಇನ್ಯಾರೂ ಅಧಿಕಾರಿಗಳಿಲ್ಲದ ಕಾರಣ ಮತ್ತು ಆರೋಪಿ ಸಂಪೂರ್ಣ ಕುಡಿದ ಮತ್ತಿನಲ್ಲಿದ್ದಿದ್ದರಿಂದ 'ಬೆಳಗ್ಗೆ ಬಂದು ದೂರು ನೀಡಿ' ಎಂದು ಶಿಲ್ಪಾ ತಿಳಿಸಿದ್ದಾರೆ. ಇದರಿಂದ ಕೆರಳಿದ ಆರೋಪಿ, ಠಾಣೆಯಲ್ಲೇ ಇದ್ದ ಕಬ್ಬಿಣದ ರಾಡ್ ತೆಗೆದುಕೊಂಡು ಶಿಲ್ಪಾ ಅವರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ.

ತಲೆಗೆ 23 ಹೊಲಿಗೆ: ಪ್ರಾಣಾಪಾಯದಿಂದ ಪಾರು

ರಾಡ್‌ನಿಂದ ತೀವ್ರ ಹಲ್ಲೆಗೊಳಗಾದ ಶಿಲ್ಪಾ ಅವರ ತಲೆ ಹಾಗೂ ದೇಹದ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಗಾಯದ ತೀವ್ರತೆಗೆ ವೈದ್ಯರು 23 ಹೊಲಿಗೆಗಳನ್ನು (Stitches) ಹಾಕಿದ್ದು, ಸದ್ಯ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಠಾಣಾಧಿಕಾರಿಗಳ ವಿರುದ್ಧ ಕಾನ್‌ಸ್ಟೇಬಲ್ ಸೋದರ ಗಂಭೀರ ಆರೋಪ!

ಈ ದುರ್ಘಟನೆಯ ಬೆನ್ನಲ್ಲೇ ರೈಲ್ವೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ವಿರುದ್ಧ ಗಾಯಾಳು ಶಿಲ್ಪಾ ಅವರ ಸಹೋದರ ಕೃಷ್ಣ ನಾಯಕ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ. 'ನನ್ನ ತಂಗಿ ಶಿಲ್ಪಾ 2 ತಿಂಗಳ ಗರ್ಭಿಣಿ. ಗರ್ಭಿಣಿಯಾಗಿರುವ ಕಾರಣ ಆಕೆಗೆ ಹಗಲು ಪಾಳಿಯ (Day Shift) ಕರ್ತವ್ಯ ನೀಡುವಂತೆ ಹಲವು ಬಾರಿ ಮನವಿ ಮಾಡಲಾಗಿತ್ತು. ಆದರೂ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಆಕೆಗೆ ರಾತ್ರಿ ವೇಳೆ ಸೆಂಟ್ರಿ ಡ್ಯೂಟಿ ಹಾಕಿದ್ದಾರೆ. ಈ ದುರ್ಘಟನೆಗೆ ಪಿಎಸ್‌ಐ ನಟರಾಜ್ ಹಾಗೂ ಸರ್ಕಲ್ ಇನ್‌ಸ್ಪೆಕ್ಟರ್ ಕಾಂತರಾಜು ಅವರೇ ನೇರ ಹೊಣೆ' ಎಂದು ಆಕ್ರೋಶ ಹೊರಹಾಕಿದ್ದಾರೆ.

'ಅಧಿಕಾರಿಗಳು ತಮ್ಮ ಆಪ್ತ ಸಿಬ್ಬಂದಿಗೆ ಮಾತ್ರ ಹಗಲು ಪಾಳಿ ನೀಡುತ್ತಾರೆ. ಉಳಿದ ಸಿಬ್ಬಂದಿಗೆ ಮಾನಸಿಕ ಕಿರುಕುಳ ಹಾಗೂ ಟಾರ್ಚರ್ ನೀಡುತ್ತಿದ್ದಾರೆ. 'ಆರಕ್ಷಕ' ಎಂದು ಬೋರ್ಡ್ ಹಾಕಿಕೊಳ್ಳುವ ಪೊಲೀಸ್ ಠಾಣೆಯಲ್ಲೇ ಕರ್ತವ್ಯದಲ್ಲಿರುವ ಮಹಿಳಾ ಸಿಬ್ಬಂದಿಗೆ ರಕ್ಷಣೆ ಇಲ್ಲದಂತಾಗಿದೆ' ಎಂದು ಕೃಷ್ಣ ನಾಯಕ್ ಕಣ್ಣೀರು ಹಾಕುತ್ತಾ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ರೈಲ್ವೆ ಪೊಲೀಸರು ಆರೋಪಿ ಗಜೇಂದ್ರನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇನ್ನೊಂದೆಡೆ ಗರ್ಭಿಣಿ ಸಿಬ್ಬಂದಿಗೆ ನೈಟ್ ಡ್ಯೂಟಿ ನಿಯೋಜನೆ ಮತ್ತು ಠಾಣೆಯಲ್ಲಿ ಭದ್ರತಾ ಲೋಪದ ಬಗ್ಗೆಯೂ ಇಲಾಖಾ ಮಟ್ಟದಲ್ಲಿ ಆಂತರಿಕ ತನಿಖೆ ನಡೆಸುವಂತೆ ಒತ್ತಾಯ ಕೇಳಿಬಂದಿದೆ.

PREV
Read more Articles on
click me!

Recommended Stories

Bengaluru: 'ಕಾಪಾಡಿ ಕಾಪಾಡಿ' ಎಂದು ಯುವತಿ ಕಿರುಚಾಟ, ಮದುಮಗಳ ಕಿಡ್ನ್ಯಾಪ್ ಮಾಡಿ ಸಿಕ್ಕ ಸಿಕ್ಕವರ ಮೇಲೆ ಕಾರು ಹತ್ತಿಸಿ ಹುಚ್ಚಾಟ
ದರ್ಶನ್‌ಗೆ ಡಬಲ್ ಶಾಕ್: ರೇಣುಕಾಸ್ವಾಮಿ ಕೇಸ್‌ನಲ್ಲಿ ಅಚ್ಚರಿಯ ತಿರುವು! ಪವಿತ್ರಾ ಗೌಡ ಸೇರಿ ಮೂವರಿಂದ ಜಾಮೀನು ಅರ್ಜಿ