ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ನಿರ್ಮಾಪಕ ಅರುಣ್ ರೈ ವಿರುದ್ಧ ಉದ್ಯಮಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ. ಬೆಂಗಳೂರಿನ ಹಲವು ಕಟ್ಟಡಗಳನ್ನು ತೋರಿಸಿ ಮತ್ತು ವ್ಯವಹಾರದಲ್ಲಿ ಲಾಭದಾಯಕ ಅವಕಾಶಗಳನ್ನು ನೀಡುವ ಭರವಸೆ ನೀಡಿ ವಂಚಿಸಿದ ಆರೋಪ ಹೊರಬಂದಿದೆ.
ಬೆಂಗಳೂರು: ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ನಿರ್ಮಾಪಕನ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ತುಳು ಸಿನಿಮಾ ಜೀಟಿಗೆ ಹಾಗೂ ಕನ್ನಡದ ವೀರಕಂಬಳ ಸಿನಿಮಾ ನಿರ್ಮಾಪಕ ಅರುಣ್ ರೈ ವಿರುದ್ದ ಎಫ್.ಐ.ಆರ್ ದಾಖಲಾಗಿದೆ. ಬಂಟ್ವಾಳ ಮೂಲದ ಉದ್ಯಮಿ ನೀಡಿದ ದೂರಿನನ್ವಯ ಬೆಂಗಳೂರಿನ ಆರ್.ಎಂ.ಸಿ ಯಾರ್ಡ್ ಠಾಣೆಯಲ್ಲಿ ವಂಚನೆ ಕೇಸ್ ದಾಖಲಾಗಿದೆ.
ಬೆಂಗಳೂರಿನ ಯಶವಂತಪುರ ತಾಜ್ ಹೋಟೆಲ್‌ನಲ್ಲಿ ಉದ್ಯಮಿಯೊಬ್ಬರನ್ನು ಪರಿಚಯಿಸಿಕೊಂಡಿದ್ದ ನಿರ್ಮಾಪಕ ಅರುಣ್ ರೈ, ತಮ್ಮ ಬಿಡುಗಡೆಗೆ ಸಿದ್ಧವಾಗಿರುವ ತುಳು ಸಿನಿಮಾ ಜೀಟಿಗೆ ಕನ್ನಡ ಸಿನಿಮಾ 'ವೀರ ಕಂಬಳ' ಲಾಭಾಂಶದಲ್ಲಿ 60 ಲಕ್ಷ ಕೊಡುವುದಾಗಿ ಆ ಉದ್ಯಮಿಯನ್ನು ನಂಬಿಸಿದ್ದರು. ಬಂಟ್ವಾಳ ಮೂಲದ ಈ ಉದ್ಯಮಿಗೆ ಕೋವಿಡ್ ವೇಳೆ ಗೇರು ಬೀಜಾ ಸಂಸ್ಕರಣಾ ಘಟಕದಲ್ಲಿ 25 ಕೋಟಿ ರೂ. ನಷ್ಟವಾಗಿತ್ತು. ಉದ್ಯಮಿಯ ಈ ನಷ್ಟದ ಕತೆಯನ್ನೇ ಬಂಡವಾಳ ಮಾಡಿಕೊಂಡ ನಿರ್ಮಾಪಕ ಅರುಣ್ ರೈಯವರು ನನ್ನ ಕಂಪನಿಗಳಲ್ಲಿ ಹೂಡಿಕೆ ಮಾಡಿ ಕೋವಿಡ್ ವೇಳೆ ಆದ ನಷ್ಟ ಸರಿದೂಗಿಸ್ತೇನೆ ಎಂದು ಉದ್ಯಮಿಗೆ ಭರವಸೆ ನೀಡಿದ್ದರು.
ಬರೀ ಇಷ್ಟೇ ಅಲ್ಲದೇ ದೆಹಲಿಯಲ್ಲಿ 400 ಕೋಟಿ ಹೂಡಿಕೆ ಮಾಡಿದ್ದೇನೆ, ತಮಿಳುನಾಡಿನ ದಿಂಡಿಗಲ್ ಕಾಳಿ ಸ್ವಾಮಿಯಿಂದ 50 ಕೋಟಿ ಹಣ ಬರಲಿಕ್ಕೆ ಇದೆ, ಪಳನಿ ದೇವಾಲಯದ ಟ್ರಸ್ಟ್ ನಿಂದಲೂ ಸಾಲ ಕೊಡಿಸ್ತೇನೆ, ಜಾರ್ಖಂಡ್ ಸರ್ಕಾರದಿಂದ 50 ಕೋಟಿ ಕೆಲಸದ ಬಿಲ್ ಬಾಕಿ ಇದೆ, ಮಂಗಳೂರಿನ ಗೋಡೌನ್ನಲ್ಲಿ 40 ಕೋಟಿ ಮೌಲ್ಯದ ಕ್ಯಾಶ್ಯೂ ನಟ್ಸ್ (ಗೋಡಂಬಿ )ಇದೆ ಅದನ್ನು 25 ಕೋಟಿಗೆ ನೀಡ್ತೇನೆ ಎಂದಿದ್ದ, ಅಲ್ಲದೇ ಬೆಂಗಳೂರಿನ ಹಲವು ಕಂಪನಿ ಹಾಗೂ ಕಟ್ಟಡಗಳನ್ನ ತೋರಿಸಿ ಇದು ತನ್ನದೆಂದು ಉದ್ಯಮಿಗೆ ನಿರ್ಮಾಪಕ ಅರುಣ್ ರೈ ಟೋಫಿ ಹಾಕಿದ್ದಾರೆನ್ನಲಾಗಿದೆ.
HSR ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ರಾಜಾಜಿನಗರ, ತುಮಕೂರು ಮೈಸೂರಿನ ಹಲವು ಕಡೆ ಕಚೇರಿಗಳಿಗೆ ಕರೆದೊಯ್ದಿದ್ದಲ್ಲದೇ ದುಬೈ, ಗಾಂಬಿಯಾ, ಘಾನ, ಉದುಬಿತ್ಥಾನ, ಮಲೇಷ್ಯಾಗಳಲ್ಲಿ ಅಂತರಾಷ್ಟ್ರೀಯ ವ್ಯವಹಾರ ಇದೆ, ಸ್ಪೇಸ್ ಎಕ್ಸ್( Space X) (ಈಗಿನ ಟ್ವಿಟರ್) ಕಂಪನಿ ಮಾಲೀಕ ಎಲಾನ್ ಮಸ್ಕ್ ಕೋ ಆರ್ಡಿನೇಟರ್ ಕೂಡ ನನ್ನ ಪಾಲುದಾರ ಎಂದಿದ್ದರು, ಅಲ್ಲದೇ ಬೆಂಗಳೂರಿನ ಸ್ಟಾರ್ ಹೋಟೆಲ್‌ಗಳಲ್ಲಿ ಹಲವರನ್ನ ತನ್ನ ಪಾರ್ಟ್ನರ್ಸ್ ಎಂದು ಉದ್ಯಮಿಗೆ ಪರಿಚಯಿಸಿದ್ದ ನಿರ್ಮಾಪಕ ಅರುಣ್ ರೈ.
ನಿರ್ಮಾಪಕ ಅರುಣ್ ರೈನ ಬಣ್ಣಬಣ್ಣದ ಮಾತನ್ನ ನಂಬಿದ ಬಂಟ್ವಾಳ ಮೂಲದ ಉದ್ಯಮಿ, ನಿರ್ಮಾಪಕ ಅರುಣ್ ರೈ ಕಂಪನಿಯಲ್ಲಿ ಷೇರು ಖರೀದಿ ಹೆಸರಲ್ಲಿ 9 ಕೋಟಿಗೂ ಅಧಿಕ ಹಣ ಹೂಡಿಕೆ ಮಾಡಿದ್ದರು. ಮಂಗಳೂರು ಬಂಟ್ವಾಳ ಸುತ್ತಮುತ್ತಲಿನ ಹಲವರಿಂದ ಸಾಲ ಪಡೆದು ಹೂಡಿಕೆ ಮಾಡಿದ್ದರು. ಆದರೆ ಈ ಒಪ್ಪಂದ ವೇಳೆ ನಕಲಿ ಕರಾರುಪತ್ರ ಸೃಷ್ಟಿಸಿ ಉದ್ಯಮಿಯಿಂದ ಹಣ ಪಡೆದು ವಂಚಿಸಿರುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ನಿರ್ಮಾಪಕ ಅರುಣ್ ರೈ, ಆತನ ಸಹೋದರ ಅರ್ಜುನ್ ರೈ, ಬನಶಂಕರಿ ರಘು, ಮುಳಬಾಗಿಲು ಗೋವಿಂದಪ್ಪ, ಕೆ.ಪಿ.ಶ್ರೀನಿವಾಸ್ ಎಂಬುವವರ ವಿರುದ್ದ ಉದ್ಯಮಿ ಆರ್‌ಎಂಸಿ ಯಾರ್ಡ್‌ನಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ವೆಡ್ಡಿಂಗ್ ಕಾರ್ಡ್ ಬಂತೆಂದು ಲಿಂಕ್ ಓಪನ್ ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆ ಖಾಲಿ! ಏನಿದು ಹೊಸ ವಂಚನೆ?
ಇದನ್ನೂ ಓದಿ: Digital Arrest Scam: ಜೀವಮಾನ ಪೂರ್ತಿ ದುಡಿದು ಉಳಿಸಿದ್ದ 1 ಕೋಟಿ ಕಳೆದುಕೊಂಡ 90ರ ವೃದ್ಧ!