ಬೈಕ್‌ಗೆ ಬೆಂಕಿಹಚ್ಚಿ ಹಣ ಕೇಳಿದವ್ರಿಗೆ ಬಿತ್ತು ಗುಂಡೇಟು..!

By Kannadaprabha News  |  First Published Nov 13, 2019, 8:17 AM IST

ಶುದ್ಧ ಕುಡಿಯುವ ನೀರು ಪೂರೈಕೆ ಘಟಕದ ಮಾಲಿಕನ ಪುತ್ರನ ಅಪಹರಣಕ್ಕೆ ವಿಫಲ ಯತ್ನ ನಡೆಸಿ ಅವರ ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಗಳಿಬ್ಬರನ್ನು ಸೋಲದೇವನ ಹಳ್ಳಿ ಠಾಣೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. 


ಬೆಂಗಳೂರು(ನ.13): ಶುದ್ಧ ಕುಡಿಯುವ ನೀರು ಪೂರೈಕೆ ಘಟಕದ ಮಾಲಿಕನ ಪುತ್ರನ ಅಪಹರಣಕ್ಕೆ ವಿಫಲ ಯತ್ನ ನಡೆಸಿ ಅವರ ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಗಳಿಬ್ಬರನ್ನು ಸೋಲದೇವನ ಹಳ್ಳಿ ಠಾಣೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

ತಮಿಳುನಾಡಿನ ತಿರುನೆಲ್ವೇಲಿ ಮೂಲದ ಮೊಹಮ್ಮದ್ ರಿಯಾಜ್ (21) ಮತ್ತು ಮೊಹಮ್ಮದ್ ಬಾಸಿತ್ (23) ಬಂಧಿತರು. ಘಟನೆಯಲ್ಲಿ ಹೆಡ್‌ಕಾನ್‌ಸ್ಟೇಬಲ್ ಶ್ರೀನಿವಾಸ್ ಮತ್ತು ಕಾನ್‌ಸ್ಟೇಬಲ್ ಮಲ್ಲಿಕಾರ್ಜುನ್ ಅವರಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Tap to resize

Latest Videos

undefined

ಹಾವೇರಿ: ಗಮನ ಸೆಳೆದ ಗುತ್ತಲದ ಹೋರಿ ಬೆದರಿಸುವ ಸ್ಪರ್ಧೆ

ಟಿ.ದಾಸರಹಳ್ಳಿಯ ನಿವಾಸಿ ಬಿಟಿವಿ ಶ್ರೀನಿವಾಸ್ ಅವರು ಮನೆಗೆ ಸಮೀಪದ ನೆಲಮಹೇಶ್ವರಿ ರಸ್ತೆಯಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಘಟಕ ಹೊಂದಿದ್ದಾರೆ. ಇವರ ಪುತ್ರ ಶರತ್ ರಾಜು ಪದವೀಧರನಾಗಿದ್ದು, ತಂದೆಯ ಜತೆ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ. ಆರೋಪಿ ರಿಯಾಜ್ ಒಂದೂವರೆ ವರ್ಷದ ಹಿಂದೆ ನಗರಕ್ಕೆ ಬಂದಿದ್ದ. ಹೋಟೆಲ್ ವೊಂದರಲ್ಲಿ ರಿಯಾಜ್ ಮತ್ತು ಬಾಸಿತ್ ಪರಿಚಯವಾಗಿದ್ದರು. ಆರೋಪಿಗಳಿಬ್ಬರ ಕುಟುಂಬ ಬಡತನದಲ್ಲಿದ್ದು, ಹಣ ಸಂಪಾದಿಸಲು ನಿರ್ಧರಿಸಿದ್ದರು.

ತಾವು ಕೆಲಸಕ್ಕಿದ್ದ ಅಂಗಡಿಯ ಸಮೀಪವೇ ಶುದ್ಧ ಕುಡಿಯುವ ನೀರು ಪೂರೈಕೆ ಘಟಕದ ಮಾಲಿಕ ಶ್ರೀನಿವಾಸ್ ಅವರ ಪುತ್ರ ಶರತ್ ರಾಜು ಐಷಾರಾಮಿ ಕಾರಿನಲ್ಲಿ ಓಡಾಡುವುದನ್ನು ನೋಡಿದ್ದರು. ಶರತ್‌ನನ್ನು ಅಪಹರಿಸಲು ಒಂದೆರೆಡು ಬಾರಿ ವಿಫಲ ಯತ್ನ ನಡೆಸಿದ್ದರು. ನ.9ರಂದು ಶರತ್‌ಗೆ ಕರೆ ಮಾಡಿದ್ದ ದುಷ್ಕರ್ಮಿಗಳು ‘ನಿನ್ನನ್ನು ಅಪಹರಣ ಮಾಡುತ್ತೇವೆ. ಕೇಳಿದಷ್ಟು ಹಣ ಕೊಡು’ ಎಂದು ಬೆದರಿಕೆ ಒಡ್ಡಿದ್ದರು. ಸ್ನೇಹಿತರು ತಮಾಷೆ ಮಾಡುತ್ತಿರಬಹುದೆಂದು ಶರತ್ ಸುಮ್ಮನಾಗಿದ್ದರು. ಆರೋಪಿಗಳು ರಾತ್ರಿ 1.30ರ ವೇಳೆ ಶ್ರೀನಿವಾಸ್ ಅವರ ಮನೆ ಬಳಿ ನಿಲ್ಲಿಸಲಾಗಿದ್ದ 4 ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿ ಪರಾರಿ ಯಾಗಿದ್ದರು. ಬೆಂಕಿಯ ಕೆನ್ನಾಲಿಗೆ ಶ್ರೀನಿವಾಸ್ ಅವರ ಮನೆಯ ಮುಂಭಾಗದ ಗೋಡೆಗೂ ಹಾನಿಯಾಗಿದೆ. ಕೂಡಲೇ ಹೊರ ಬಂದ ಶ್ರೀನಿವಾಸ್ ಅವರ ಕುಟುಂಬ ಬೆಂಕಿ ನಂದಿಸಿ, ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು.

ನಮ್ಮ ಮೆಟ್ರೋ ಕಾಮಗಾರಿಗೆ 265 ಮರಗಳ ಕಟಾವು

ಆರೋಪಿಗಳು ಸೋಲದೇವನಹಳ್ಳಿಯ ಆಚಾರ್ಯ ಕಾಲೇಜಿನ ಹಿಂಭಾಗದ ನೀಲಗಿರಿ ತೋಪಿನಲ್ಲಿ ಇರುವ ಬಗ್ಗೆ ಸೋಲದೇವನಹಳ್ಳಿ ಇನ್‌ಸ್ಪೆಕ್ಟರ್ ಶಿವಸ್ವಾಮಿ ಅವರಿಗೆ ಮಾಹಿತಿ ಲಭ್ಯವಾಗಿತ್ತು. ಪೊಲೀಸರನ್ನು ನೋಡಿದ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದರು. ಆರೋಪಿಗಳನ್ನು ಹಿಡಿಯಲು ಮುಂದಾದ ಹೆಡ್‌ಕಾನ್ಸ್‌ಟೇಬಲ್ ಶ್ರೀನಿವಾಸ್ ಮತ್ತು ಕಾನ್ಸ್‌ಟೇಬಲ್ ಮಲ್ಲಿಕಾರ್ಜುನ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಇನ್ಸ್‌ಪೆಕ್ಟರ್ ಶಿವಸ್ವಾಮಿ ಅವರು ಆತ್ಮರಕ್ಷಣೆಗಾಗಿ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

50 ಲಕ್ಷದಿಂದ 12ಲಕ್ಷಕ್ಕೆ ಬೇಡಿಕೆ:

ಬೆಂಕಿ ಹಚ್ಚಿದ ಬಳಿಕ ಆರೋಪಿಗಳು ಶರತ್ ಮೊಬೈಲ್‌ಗೆ ಸೋಮವಾರ 1.30ರ ಸುಮಾರಿಗೆ ಹತ್ತಾರು ಬಾರಿ ಕರೆ ಮಾಡಿದ್ದಾರೆ. ಬೆಂಕಿ ನಂದಿಸುವಲ್ಲಿ ಮಗ್ನರಾಗಿದ್ದ ಶರತ್ ಕರೆ ಸ್ವೀಕರಿಸಿರಲಿಲ್ಲ. ಇದಾದ ಬಳಿಕ ಕರೆ ಸ್ವೀಕರಿಸಿದಾಗ ಈಗ ಬೆಂಕಿ ಹಚ್ಚಿದ್ದೇವೆ, ಮುಂದೆ ನಿಮ್ಮ ಪೋಷಕರನ್ನು ಹತ್ಯೆ ಮಾಡುತ್ತೇವೆ. ನಿಮ್ಮ ಪೋಷಕರು ಉಳಿಯಬೇಕೆಂದರೆ 50 ಲಕ್ಷ ನೀಡಬೇಕೆಂದು ಹೆದರಿಸಿದ್ದರು. ಅಷ್ಟೊತ್ತಿಗೆ ಸ್ಥಳದಲ್ಲಿದ್ದ ಪೊಲೀಸರು 12 ಲಕ್ಷ ಕೊಡುತ್ತೇವೆ ಎಂದು ಆರೋಪಿಗಳನ್ನು ಒಪ್ಪಿಸಿದ್ದರು. ನಂತರ ಕರೆ ಬಂದಿದ್ದ ಸಿಡಿಆರ್ ಆಧಾರದ ಮೇಲೆ ಆರೋಪಿಗಳನ್ನು ಬಲೆಗೆ ಕೆಡವಿದ್ದಾರೆ.

ಶಾಲಾ ಆವರಣಕ್ಕೂ ಕೆರೆ ನೀರು, ತೇಲಿ ಹೋದ ಪುಸ್ತಕಗಳು..!

click me!