ನಮ್ಮ ಮೆಟ್ರೋ ಕಾಮಗಾರಿಗೆ 265 ಮರಗಳ ಕಟಾವು

By Kannadaprabha News  |  First Published Nov 13, 2019, 8:05 AM IST

ನಮ್ಮ ಮೆಟ್ರೋ ಕಾಮಗಾರಿಗಾಗಿ ನೂರಾರು ಮರಗಳ ಮಾರಣಹೋಮ ನಡೆಯುತ್ತಿದೆ. ಎರಡನೇ ಹಂತರ ಕಾಮಗಾರಿಗಾಗಿ ಮರಗಳನ್ನು ಕಡಿಯಲಾಗುತ್ತಿದೆ.


ಬೆಂಗಳೂರು (ನ.13) : ನಮ್ಮ ಮೆಟ್ರೋ ಯೋಜನೆಯಲ್ಲಿ ಪ್ರಸ್ತುತ ನಡೆಯಲಿರುವ ಎರಡನೇ ಹಂತದ ಕಾಮಗಾರಿಗಾಗಿ ಮತ್ತೆ 265 ಮರಗಳು ಕಟಾವು ಮತ್ತು 57 ಮರಗಳ ಸ್ಥಳಾಂತರ ಪ್ರಕ್ರಿಯೆ ಶೀಘ್ರವೇ ಆರಂಭಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಡೇರಿ ವೃತ್ತದಿಂದ ಪಾಟರಿ ಟೌನ್ ವರೆಗಿನ ಸುರಂಗ ಮಾರ್ಗದ ಮೆಟ್ರೋ ನಿಲ್ದಾಣಗಳು ನಿರ್ಮಾಣವಾಗುವಕಡೆಗಳಲ್ಲಿ ಸುಮಾರು 324 ಮರಗಳ ತೆರವು ಮಾಡಬೇಕಿದೆ. ಇದರಲ್ಲಿ 265 ಮರಗಳು ಕಟಾವು ಅನಿವಾರ್ಯವಾಗಿದ್ದು, ಉಳಿದ 57 ಮರಗಳನ್ನು ಸ್ಥಳಾಂತರ ಮಾಡಲು ಸಿದ್ಧತೆ ನಡೆಸಲಾಗಿದೆ.

Latest Videos

ಕಂಟೋನ್ಮೆಂಟ್ ನಿಲ್ದಾಣ ಕಾಮಗಾರಿಗಾಗಿ ಶ್ರವಣದೋಷ ತರಬೇತಿ ಶಾಲೆ ಸಮೀಪ 39 ಮರಗಳ ಕಟಾವು ಹಾಗೂ 18 ಮರಗಳ ಸ್ಥಳಾಂತರ ನಡೆಯಲಿದೆ. ಪಾಟರಿ ಟೌನ್ ನಿಲ್ದಾಣ ಕಾಮಗಾರಿಗಾಗಿ ಟ್ರಯಾಂಗುಲರ್ ಪಾರ್ಕ್ ಪ್ರದೇಶದ ಆಸುಪಾಸು 21 ಮರಗಳ ಕಟಾವು ಹಾಗೂ 3 ಮರಗಳ ಸ್ಥಳಾಂತರಕ್ಕೆ ನಿರ್ಧರಿಸಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ದಕ್ಷಿಣ ರ‌್ಯಾಂಪ್ ಮತ್ತು ರಸ್ತೆ ವಿಸ್ತರಣೆ  ಕಾಮಗಾರಿ ನಡೆಯಲಿದ್ದು, ಅದಕ್ಕಾಗಿ ಜಯನಗರ ಅಗ್ನಿಶಾಮಕ ಠಾಣೆ ಸಮೀಪ 29 ಮರಗಳನ್ನು ತೆರವು ಮಾಡಬೇಕಿದ್ದು, ಈ ಪೈಕಿ 20 ಮರಗಳ ಕಟಾವು ಮತ್ತು ಮರಗಳ ಸ್ಥಳಾಂತರ ಮಾಡಬೇಕಿದೆ. ಬನ್ನೇರುಘಟ್ಟ ಕಾರ್ಮಿಕ ಭವನ ಸಮೀಪ, ಧರ್ಮವರಂ ಕಾಲೇಜು, ಬನ್ನೇರುಘಟ್ಟ ಪಾದಚಾರಿ ಮಾರ್ಗದಲ್ಲಿ ಒಟ್ಟು 73 ಮರಗಳಲ್ಲಿ 59 ಮರಗಳ ಕಟಾವು ಮತ್ತು 14 ಮರಗಳು ಸ್ಥಳಾಂತರಗೊಳ್ಳಲಿವೆ.

ವೆಲ್ಲಾರ ಜಂಕ್ಷನ್ ನಿಲ್ದಾಣ ಕಾಮಗಾರಿಗಾಗಿ ರಾಷ್ಟ್ರೀಯ ಮಿಲಿಟರಿ ಶಾಲೆ ಸಮೀಪ 35 ಮರಗಳು, ವೆಲ್ಲಾರ ಜಂಕ್ಷನ್ ರಸ್ತೆ ಬದಿ 7 ಮರಗಳು ಕಟಾವು ಮಾಡಲು ಸಿದ್ಧತೆ ನಡೆಸಲಾಗಿದೆ. ಎಂ.ಜಿ.ರಸ್ತೆ ನಿಲ್ದಾಣ ಕಾಮಗಾರಿಗಾಗಿ ಕಾಮರಾಜ ರಸ್ತೆಯಲ್ಲಿ73ಮರಗಳ ಕಟಾವು ಮತ್ತು 9ಮರಗಳ ಸ್ಥಳಾಂತರ, ಶಿವಾಜಿನಗರದಲ್ಲಿ ಮೆಟ್ರೋ ಕಾಮಗಾರಿಗಾಗಿ ಶಿವಾಜಿನಗರ ಮೈದಾನ ಸುತ್ತಮುತ್ತ 13  ಮರಗಳಲ್ಲಿ 9 ಕಟಾವು ಮತ್ತು 4 ಮರಗಳ ಸ್ಥಳಾಂತರ ನಡೆಯಲಿದೆ.

click me!