
ಬೆಂಗಳೂರು (ಅ.6): ರಾಜ್ಯ ಸರ್ಕಾರವು ಹಲವು ಬಾರಿ ಶೇ. 50 ರಷ್ಟು ಭಾರಿ ರಿಯಾಯಿತಿ (50% Discount) ಘೋಷಿಸಿದ್ದಾಗ್ಯೂ, ರಾಜ್ಯಾದ್ಯಂತ ವಾಹನ ಸವಾರರು ಸಂಚಾರಿ ಇ-ಚಲನ್ (E-challan) ದಂಡದ ಮೊತ್ತವನ್ನು ಪಾವತಿಸದೆ ನಿರ್ಲಕ್ಷಿಸುತ್ತಲೇ ಬಂದಿದ್ದಾರೆ. ಇದರಿಂದಾಗಿ ಸಂಚಾರಿ ನಿಯಮ ಉಲ್ಲಂಘನೆಯ ಪ್ರಕರಣಗಳ ವಿಲೇವಾರಿ ಪ್ರಮಾಣ ತೀರಾ ಕನಿಷ್ಠ ಮಟ್ಟದಲ್ಲೇ ಉಳಿದುಕೊಂಡಿದೆ. ಅಧಿಕೃತ ಡೇಟಾ ಪ್ರಕಾರ, 2019 ರಿಂದ 2026 ರ ಆಗಸ್ಟ್ ಅವಧಿಯಲ್ಲಿ ರಾಜ್ಯಾದ್ಯಂತ ಒಟ್ಟು 8.16 ಕೋಟಿ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಈ ಪೈಕಿ\ ಅಂದರೆ ಬರೋಬ್ಬರಿ 5.53 ಕೋಟಿ ಪ್ರಕರಣಗಳು (ಸುಮಾರು ಶೇ. 68 ರಷ್ಟು) ಇಂದಿಗೂ ಇತ್ಯರ್ಥವಾಗದೇ ಬಾಕಿಯುಳಿದಿದ್ದು, ಇದರಿಂದ ಸರ್ಕಾರಕ್ಕೆ ಬರಬೇಕಾದ ಒಟ್ಟು ₹3,006.70 ಕೋಟಿ ದಂಡದ ಮೊತ್ತ ಪಾವತಿಯಾಗದೇ ಉಳಿದಿದೆ.
ಈ ಬೃಹತ್ ಮೊತ್ತದ ಬಾಕಿ ದಂಡದ ಸಿಂಹಪಾಲು ರಾಜಧಾನಿ ಬೆಂಗಳೂರಿಗೇ ಸೇರಿದ್ದಾಗಿದೆ. ಬೆಂಗಳೂರಿನಲ್ಲಿ ಈವರೆಗೆ ದಾಖಲಾಗಿರುವ ಒಟ್ಟು 5.85 ಕೋಟಿ ಸಂಚಾರಿ ಉಲ್ಲಂಘನೆ ಪ್ರಕರಣಗಳ ಪೈಕಿ 3.72 ಕೋಟಿಗೂ ಅಧಿಕ ಪ್ರಕರಣಗಳು ಬಾಕಿಯುಳಿದಿವೆ. ಇದರಿಂದಾಗಿ ರಾಜಧಾನಿಯೊಂದರಲ್ಲೇ ವಸೂಲಾಗದೇ ಬಾಕಿಯಿರುವ ದಂಡದ ಮೊತ್ತ ಬರೋಬ್ಬರಿ ₹2,048.56 ಕೋಟಿ ತಲುಪಿದೆ.
ದೇಶಾದ್ಯಂತ ಕೋಟ್ಯಂತರ ರೂಪಾಯಿ ಸಂಚಾರಿ ದಂಡ ಬಾಕಿಯುಳಿಯುತ್ತಿರುವ ಕುರಿತು ಇತ್ತೀಚೆಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್, ರಾಜ್ಯ ಸರ್ಕಾರಗಳಿಗೆ ಖಡಕ್ ಸೂಚನೆ ನೀಡಿತ್ತು. ಸ್ಥಳದಲ್ಲೇ ತಪಾಸಣೆ ನಡೆಸುವಾಗ ಬಾಕಿ ಇ-ಚಲನ್ ಹೊಂದಿರುವ ವಾಹನಗಳನ್ನು ಜಪ್ತಿ ಮಾಡುವುದು (Impound) ಹಾಗೂ ವಾಹನಕ್ಕೆ ಸಂಬಂಧಿಸಿದ ಆನ್‌ಲೈನ್ ಸಾರಿಗೆ ಸೇವೆಗಳನ್ನು ತಡೆಹಿಡಿಯುವುದು ಸೇರಿದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ. ಸಲೀಂ, "ಸಾರ್ವಜನಿಕರು ಬಾಕಿ ದಂಡ ಪಾವತಿಸುವಂತೆ ಮಾಡಲು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಹಲವು ಬಿಗಿ ಕ್ರಮಗಳನ್ನು ಕೈಗೊಳ್ಳಲು ಯೋಜಿಸುತ್ತಿದೆ" ಎಂದು ತಿಳಿಸಿದ್ದಾರೆ.
ವಾಹನಗಳಿಗೆ ಫಿಟ್‌ನೆಸ್ ಸರ್ಟಿಫಿಕೇಟ್ (FC) ಪಡೆಯಲು ಸಂಚಾರಿ ದಂಡ ಪಾವತಿಯನ್ನು ಕಡ್ಡಾಯಗೊಳಿಸಲು ಇಲಾಖೆ ಚಿಂತಿಸುತ್ತಿದೆ. ಇದರ ಜೊತೆಗೆ, ಸಂಚಾರಿ ಉಲ್ಲಂಘನೆ ಚಲನ್ ಹೊಂದಿರುವ ವಾಹನಗಳಿಗೆ ಇನ್‌ಶೂರೆನ್ಸ್ ನವೀಕರಣವಾಗದಂತೆ ಮಾಡಲು ಕೆಲವು ಕಾಯ್ದೆಗಳಿಗೆ ತಿದ್ದುಪಡಿ ತರಲು ಪ್ರಯತ್ನಿಸಲಾಗುತ್ತಿದೆ.
"ಜನರು ತಮ್ಮ ಸಂಚಾರಿ ದಂಡದ ಬಾಕಿಯನ್ನು ತೀರಿಸುವಂತೆ ಮಾಡಲು ನಾವು ವಿವಿಧ ಕಾನೂನಾತ್ಮಕ ವ್ಯವಸ್ಥೆಗಳನ್ನು ರೂಪಿಸುತ್ತಿದ್ದೇವೆ. ದಂಡ ಬಾಕಿ ಇರುವ ವಾಹನಗಳಿಗೆ ಇನ್‌ಶೂರೆನ್ಸ್ ನವೀಕರಣಕ್ಕೆ ಅರ್ಹತೆ ಸಿಗದಂತೆ ಮಾಡಲು ಕೆಲ ಕಾನೂನುಗಳಿಗೆ ತಿದ್ದುಪಡಿ ತರಬೇಕಾಗಿದೆ, ಈ ಕುರಿತು ಕೆಲಸ ನಡೆಯುತ್ತಿದೆ. ಇದೀಗ ಸುಪ್ರೀಂ ಕೋರ್ಟ್ ಕೆಲವು ನಿರ್ದೇಶನಗಳನ್ನು ನೀಡಿದ್ದು, ದಂಡ ಬಾಕಿಯನ್ನು ವಿದ್ಯುತ್ ಬಿಲ್‌ಗಳೊಂದಿಗೆ ಲಿಂಕ್ ಮಾಡುವಂತೆ ಸಲಹೆ ನೀಡಿದೆ. ನಾವು ಈ ಎಲ್ಲಾ ಆಯ್ಕೆಗಳನ್ನು ಪರಿಶೀಲಿಸುತ್ತೇವೆ" ಎಂದು ಡಿಜಿ-ಐಜಿಪಿ ಎಂ.ಎ. ಸಲೀಂ ತಿಳಿಸಿದ್ದಾರೆ.
ದಂಡ ವಸೂಲಿಯಾಗದಿರಲು ವ್ಯವಸ್ಥೆಯಲ್ಲಿರುವ ಲೋಪದೋಷಗಳು ಹಾಗೂ 'ಸಂಪರ್ಕರಹಿತ ಜಾರಿ' (Contactless Enforcement) ವ್ಯವಸ್ಥೆಯೇ ಮುಖ್ಯ ಕಾರಣ ಎಂದು ಬೆಂಗಳೂರು ಸಂಚಾರಿ ಪೊಲೀಸ್ (BTP) ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಆಟೋಮ್ಯಾಟಿಕ್ ಕ್ಯಾಮೆರಾಗಳು: ಶೇಕಡಾ 80 ಕ್ಕಿಂತ ಹೆಚ್ಚು ಪ್ರಕರಣಗಳು ಸ್ವಯಂಚಾಲಿತ ಕಣ್ಗಾವಲು ಕ್ಯಾಮೆರಾಗಳ ಮೂಲಕವೇ ದಾಖಲಾಗುತ್ತವೆ. ಚಾಲಕರನ್ನು ಸ್ಥಳದಲ್ಲೇ ತಡೆದು ದಂಡ ವಿಧಿಸದಿರುವುದರಿಂದ, ಅವರು ಮೊಬೈಲ್‌ಗೆ ಬರುವ ಎಸ್‌ಎಮ್‌ಎಸ್ (SMS) ಸಂದೇಶಗಳನ್ನು ನಿರ್ಲಕ್ಷಿಸುತ್ತಾರೆ ಅಥವಾ ರಸ್ತೆಯಲ್ಲಿ ಪೊಲೀಸರು ತಪಾಸಣೆಗೆ ತಡೆಯುವವರೆಗೆ ದಂಡದ ಬಗ್ಗೆ ಅವರಿಗೆ ಮಾಹಿತಿಯೇ ಇದ್ದಿರುವುದಿಲ್ಲ
ವಾಹನ್ (VAHAN) ಡೇಟಾಬೇಸ್‌ನಲ್ಲಿ ತಪ್ಪಾದ ವಿಳಾಸ: ವಾಹನ ಮಾಲೀಕರು ತಮ್ಮ ವಿಳಾಸ ಬದಲಾಯಿಸಿದಾಗ ಅಥವಾ ವಾಹನಗಳನ್ನು ಬೇರೆಯವರಿಗೆ ಮಾರಾಟ ಮಾಡಿದಾಗ ವಾಹನ್ ಡೇಟಾಬೇಸ್‌ನಲ್ಲಿ ಮಾಹಿತಿ ಅಪ್‌ಡೇಟ್ ಮಾಡದಿರುವುದರಿಂದ, ಭಾರಿ ಪ್ರಮಾಣದ ನೋಟೀಸ್‌ಗಳು ಅಪರಾಧಿಗಳಿಗೆ ತಲುಪುವುದೇ ಇಲ್ಲ.
ರಿಯಾಯಿತಿ ಆಫರ್‌ಗಳಿಂದ ಸೃಷ್ಟಿಯಾದ ನಿರ್ಲಕ್ಷ್ಯ: ಸರ್ಕಾರ ಪದೇ ಪದೇ ನೀಡುವ ಶೇ. 50 ರಷ್ಟು ರಿಯಾಯಿತಿ ಯೋಜನೆಗಳು ವಾಹನ ಸವಾರರಲ್ಲಿ ತಪ್ಪು ಭಾವನೆಯನ್ನು (Moral hazard) ಮೂಡಿಸಿವೆ. ಸವಾರರು ತಕ್ಷಣ ದಂಡ ಕಟ್ಟದೆ, ಮುಂದಿನ ದಿನಗಳಲ್ಲಿ ಮತ್ತೆ ರಿಯಾಯಿತಿ ಯೋಜನೆ ಬರಬಹುದು ಎಂಬ ನಿರೀಕ್ಷೆಯಲ್ಲಿ ದಂಡ ಪಾವತಿಯನ್ನು ಮುಂದೂಡುತ್ತಲೇ ಹೋಗುತ್ತಿದ್ದಾರೆ.
ಕೆಲವು ನಿರ್ದಿಷ್ಟ ಸಂಚಾರಿ ಅಪರಾಧಗಳಿಗೆ ದಂಡದ ಮೊತ್ತವನ್ನು ₹5,000 ಕ್ಕೆ ಹೆಚ್ಚಿಸಲು ಸರ್ಕಾರ ಇತ್ತೀಚೆಗೆ ಯೋಜಿಸಿತ್ತು. ಆದರೆ, ಇಷ್ಟೊಂದು ಬೃಹತ್ ಸಂಖ್ಯೆಯ ಪ್ರಕರಣಗಳು ಬಾಕಿ ಇರುವಾಗ, ಕೇವಲ ದಂಡದ ಮೊತ್ತ ಹೆಚ್ಚಿಸುವುದರಿಂದ ಉಲ್ಲಂಘನೆಗಳಿಗೆ ಕಡಿವಾಣ ಬೀಳುತ್ತದೆಯೇ ಎಂಬ ಬಗ್ಗೆ ಕೆಲವು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. "ಕಠಿಣ ವಸೂಲಾತಿ ವ್ಯವಸ್ಥೆಯನ್ನು ಜಾರಿಗೆ ತರದೆ ಕೇವಲ ದಂಡದ ಮೊತ್ತವನ್ನು ಹೆಚ್ಚಿಸುವುದರಿಂದ ಕಾಗದದ ಮೇಲಿನ ಬಾಕಿ ದಂಡದ ಮೊತ್ತ ಹೆಚ್ಚಾಗುತ್ತದೆಯೇ ಹೊರತು ವಾಸ್ತವ ಬದಲಾಗುವುದಿಲ್ಲ," ಎಂದು ಹಿರಿಯ ಸಂಚಾರಿ ಪೊಲೀಸ್ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ. "ವಾಹನ ಸವಾರ ₹500 ದಂಡವನ್ನೇ ಪಾವತಿಸದೆ ನಿರ್ಲಕ್ಷಿಸುವಾಗ, ಕಡ್ಡಾಯ ಕಾನೂನು ಕ್ರಮದ ಭಯವಿಲ್ಲದಿದ್ದರೆ ಆತ ಸ್ವಯಂಪ್ರೇರಿತನಾಗಿ ₹5,000 ದಂಡ ಪಾವತಿಸುವ ಸಾಧ್ಯತೆ ತೀರಾ ಕಡಿಮೆ" ಎಂದು ಅವರು ವಿಶ್ಲೇಷಿಸಿದ್ದಾರೆ.